ಬೆಂಗಳೂರು, ಮೇ 18: ಸಮೃದ್ಧವಾಗಿದ್ದ, ಶಕ್ತಿಯುತವಾಗಿದ್ದ ಇಡೀ ವಿಶ್ವದಲ್ಲೇ ಬಲಿಷ್ಠವಾದ ಆರ್ಥಿಕ ವ್ಯವಸ್ಥೆ ಹಾಳಾಗಿದೆ ಅಂದರೆ ಅದಕ್ಕೆ ಪ್ರಧಾನ ಮಂತ್ರಿಗಳೇ ಕಾರಣ. ಅವರು ಯಾವ ಅರ್ಥದಲ್ಲಿ ಮಾತನಾಡಿದ್ದಾರೆ ಎಂದು ಸ್ಪಷ್ಟನೆ ನೀಡಬೇಕು ಹಾಗೂ ಈ ದೇಶದ ಜನರ ಕ್ಷಮೆ ಯಾಚನೆ ಮಾಡಬೇಕು ಎಂದು ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್ (DK Suresh) ಆಗ್ರಹಿಸಿದರು. ಸದಾಶಿವನಗರದ ನಿವಾಸದಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಸೋಮವಾರ ಅವರು ಮಾತನಾಡಿದರು.
ನಿರಂತರ ಯುದ್ಧಗಳು ಮತ್ತು ಜಾಗತಿಕ ಅಸ್ಥಿರತೆಯು ದಶಕಗಳ ಅಭಿವೃದ್ಧಿಯನ್ನು ಹಿಮ್ಮೆಟ್ಟಿಸಬಹುದು ಮತ್ತು ದೊಡ್ಡ ಜನಸಂಖ್ಯೆಯನ್ನು ಮತ್ತೆ ಬಡತನಕ್ಕೆ ತಳ್ಳಬಹುದು ಎನ್ನುವ ಬಗ್ಗೆ ಪ್ರಧಾನಿ ನರೇಂದ್ರ ಅವರು ಸ್ಪಷ್ಟನೆ ನೀಡಬೇಕು. ಪ್ರಧಾನಮಂತ್ರಿಗಳು ಯಾವ ಅರ್ಥದಲ್ಲಿ ಬಡತನದ ಬಗ್ಗೆ ಹೇಳಿದ್ದಾರೆ. ಹಾಗೂ ಈ ಎಲ್ಲಾ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಜನರಿಗೆ ಮಾಹಿತಿ ಕೊಡಬೇಕು ಎಂದು ಒತ್ತಾಯಿಸುತ್ತೇನೆ ಎಂದರು.
ದೇಶದ ಚುಕ್ಕಾಣಿಯನ್ನು ಪ್ರಧಾನಿ ಮೋದಿಯವರು ಹಿಡಿದು ಹನ್ನೆರಡು ವರ್ಷವಾಗಿದೆ. ಈ ಹಿಂದಿನ ಆಡಳಿತಕ್ಕೆ ಹೋಲಿಸಿದಾಗ ಇಲ್ಲಿಯವರೆಗೆ ಹೆಚ್ಚುವರಿಯಾಗಿ ಸುಮಾರು 45 ಲಕ್ಷ ಕೋಟಿ ಹಣವನ್ನು ಪೆಟ್ರೋಲ್ ಮತ್ತು ಡೀಸೆಲ್, ಗ್ಯಾಸ್ ಬೆಲೆ ಏರಿಕೆಯಿಂದ ಪಡೆದಿದ್ದಾರೆ ಎಂದು ಆರೋಪಿಸಿದ ಅವರು, ಒಂದೆರಡು ಮೂರು ಕಂಪನಿಗಳಿಗೆ ರಕ್ಷಣೆ ಕೊಡಬೇಕು ಎಂದು ಬೆಲೆ ಏರಿಕೆ ಮಾಡಿದ್ದಾರೆ. ಜನರು ಎಚ್ಚೆತ್ತುಕೊಂಡಿಲ್ಲ. ನೀವು ಬಡತನದ ದವಡೆಗೆ ಸಿಲುಕುವಿರಿ ಎನ್ನುವ ಸಂದೇಶ ನೀಡಿರುವುದು ನೋಡಿದರೆ ನಾವೆಲ್ಲರೂ ಕೂಡ ತಲೆ ತಗ್ಗಿಸುವಂತಹ ವಿಚಾರ ಎಂದು ಹೇಳಿದರು.
ಬಿಜೆಪಿಯವರು ಏನನ್ನೂ ಬೇಕಾದ್ರೂ ತಿರುಗಿಸ್ತಾರೆ
ದೇಶದ ಆರ್ಥಿಕ ಶಕ್ತಿ ಆರನೇ ಸ್ಥಾನಕ್ಕೆ ಕುಸಿದಿದೆ. ಇದಕ್ಕೆ ಬಿಜೆಪಿಯವರ ಮೌನದ ಬಗ್ಗೆ ಕೇಳಿದಾಗ, ʼಬಿಜೆಪಿಯವರು ಹೀಗೆಯೇ. ಏನನ್ನೂ ಬೇಕಾದರೂ ತಿರುಗಿಸ್ತಾರೆ. ಏನನ್ನು ಬೇಕಾದರೂ ಹೇಳುತ್ತಾರೆ. ಬಿಜೆಪಿಯವರು ಏನೇ ಮಾಡಿದ್ರು ಅಪಚಾರ ಅನಾಚಾರ ಆಗುವುದಿಲ್ಲ. ಕಾಂಗ್ರೆಸ್ ಅವರು ಮಾಡಿದ್ರೆ ಮಾತ್ರ ಅದು ಅನಾಚಾರ ಆಗುತ್ತೆ. ಕಾಂಗ್ರೆಸ್ ಅವರು ಏನೇ ಹೇಳಿಕೆ ಕೊಡಲಿ, ಏನೇ ಮಾಡಲಿ, ಕಾಂಗ್ರೆಸ್ ನಾಯಕರು ಏನೇ ಮಾಡಿದ್ರೂ ಕೂಡ ಅದು ತಪ್ಪು. ಭಾರತೀಯ ಜನತಾ ಪಕ್ಷದ ನಾಯಕರುಗಳು ಏನೇ ಮಾಡಿದ್ರೂ ಕೂಡ ಅದು ಚಿನ್ನಕ್ಕಿನ್ನ ಶುದ್ದತೆ ಜಾಸ್ತಿ. ಸುವೆಂದು ಅಧಿಕಾರಿ ಮೇಲೆ ಇವರೇ ಆರೋಪ ಮಾಡಿದ್ದರು. ವಾಷಿಂಗ್ ಮೆಷಿನ್‌ಗೆ ಹಾಕಿ ಶುದ್ದ ಮಾಡಿದರು. ಈಗ ಅಧಿಕಾರ ಕೊಟ್ಟಿದ್ದಾರೆ. ಜನರು ಇದನ್ನೆಲ್ಲಾ ಅರ್ಥ ಮಾಡಿಕೊಳ್ಳುತ್ತಾರೆʼ ಎಂದರು.
2029 ಬಿಜೆಪಿ ಆಡಳಿತಕ್ಕೆ ಕೊನೆಯೇ ಎಂದು ಕೇಳಿದಾಗ, ʼಜನಕ್ಕೆ ಇನ್ನು ಸಮಯ ಇದೆ. ಇನ್ನ ನಾಲ್ಕು ವರ್ಷ ಇದೆ, ಕಾದು ನೋಡೋಣʼ ಎಂದರು.
ನೀಟ್ ಬಗ್ಗೆಯೂ ಪ್ರಧಾನಿ ಭಾಷಣ ಮಾಡಬೇಕಿತ್ತು
ನೀಟ್ ಪರೀಕ್ಷೆಯ ಗೊಂದಲದ ಬಗ್ಗೆ ಕೇಳಿದಾಗ, ʼನೀಟ್ ಜಾರಿಗೆ ತಂದ ಸಂದರ್ಭದಲ್ಲೇ ನಾವು ವಿರೋಧ ಮಾಡಿದ್ದೆವು. ಕರ್ನಾಟಕದ ಕನ್ನಡಿಗರಿಗೆ ಆಗುವಂತ ಅನ್ಯಾಯದ ಬಗ್ಗೆ ಕೂಡ ನಾನು ಮಾತನಾಡಿದ್ದೆ. ಕನ್ನಡಿಗ ವಿದ್ಯಾರ್ಥಿಗಳಿಗೆ ಯಾವ ರೀತಿಯಾಗಿ ಸೀಟ್‌ನಲ್ಲಿ ಸಮಸ್ಯೆಯಾಗುತ್ತದೆ ಎಂದು ಹೇಳಿದ್ದೆ. ನೀಟ್ ಒಂದು ದೊಡ್ಡ ಹಗರಣ. ಇಷ್ಟು ವರ್ಷ ನಡೆದ ಪರೀಕ್ಷೆಗಳ ಬಗ್ಗೆಯೂ ತನಿಖೆ ಆಗಬೇಕು. ಅನೇಕ ಪ್ರತಿಭಾನ್ವಿತ ವಿದ್ಯಾರ್ಥಿಗಳ ಸಾವು-ನೋವು ಅವರ ದುಃಖವನ್ನು ನೋಡಿದರೆ ಪ್ರಧಾನಮಂತ್ರಿಗಳು ಇದಕ್ಕೆ ಉತ್ತರ ಕೊಡಬೇಕು. ಯಾವುದ್ಯಾವುದಕ್ಕೋ ಬಂದು ಭಾಷಣ ಮಾಡುತ್ತಾರೆ. ಇದಕ್ಕೂ ಬಂದು ಭಾಷಣ ಮಾಡಬೇಕಿತ್ತುʼ ಎಂದರು.
ಮುಖ್ಯಮಂತ್ರಿಯವರು ಸಮರ್ಥರಿದ್ದಾರೆ
ರಾಜ ಸರ್ಕಾರಕ್ಕೆ ಮೂರು ವರ್ಷ ತುಂಬಿದೆ. ಸಾಕಷ್ಟು ಭರವಸೆಗಳು ಕೊಟ್ಟಿದ್ದೀರಿ ಇನ್ನು ಒಂದಷ್ಟು ಭರವಸೆಗಳು ಈಡೇರಿಲ್ಲ ಎನ್ನುವುದರ ಬಗ್ಗೆ ಕೇಳಿದಾಗ, ʼಮುಖ್ಯಮಂತ್ರಿಯವರು ಸಮರ್ಥರಿದ್ದಾರೆ ಅವರು ಈಡೇರಿಸುತ್ತಾರೆ. ಎಲ್ಲಾ ಗ್ಯಾರಂಟಿಗಳು ಹಾಗೂ ಏನೇನು ಭರವಸೆಗಳನ್ನು ಕೊಟ್ಟಿದ್ದರೋ ಅದನ್ನು ಈಡೇರಿಸುವ ಶಕ್ತಿ ಹಾಗೂ ಅಗಾಧ ಅನುಭವ ಇದೆ ಅವರಿಗೆ ಆರ್ಥಿಕ ಸಚಿವರಾಗಿ ಸುಮಾರು ಹದಿನೆಂಟು ಬಜೆಟ್ ಮಂಡಿಸಿದ್ದಾರೆʼ ಎಂದು ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್ ಹೇಳಿದರು.