ಬೆಂಗಳೂರು: ಭಾರತೀಯ ಜನತಾ ಪಕ್ಷವು ರಾಜ್ಯದಲ್ಲಿ ಹೆಮ್ಮರವಾಗಿ ಬೆಳೆಯಲು ಪಕ್ಷದ ಹಿರಿಯ ನಾಯಕರು ಮತ್ತು ಮಾಜಿ ಸಚಿವರಾದ ರಾಮಚಂದ್ರಗೌಡ (Ramachandra gowda) ಅವರ ಕೊಡುಗೆ ಸಾಕಷ್ಟು ಇದೆ. ಅವರನ್ನು ಬಿಜೆಪಿಯ ಭೀಷ್ಮ ಎಂದೇ ಕರೆಯಲಾಗುತ್ತಿತ್ತು ಎಂದು ಮಾಜಿ ಮುಖ್ಯಮಂತ್ರಿ ಮತ್ತು ಪಕ್ಷದ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ (B.S. Yediyurappa) ಹೇಳಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಹಮ್ಮಿಕೊಂಡಿದ್ದ ಮಾಜಿ ಸಚಿವರಾದ ರಾಮಚಂದ್ರಗೌಡ ಅವರ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದ ಉದ್ದಗಲಕ್ಕೂ ಓಡಾಡಿ ಪಕ್ಷ ಕಟ್ಟುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದರು ಎಂದರು. ರಾಮಚಂದ್ರಗೌಡ ಅವರು, ಐದು ದಶಕಗಳಿಂದ ಒಡಹುಟ್ಟಿದ ಸಹೋದರನಂತೆ ನನ್ನೊಂದಿಗೆ ಕೆಲಸ ಮಾಡಿದರು. 1970 ರಲ್ಲಿ ಬೆಂಗಳೂರು ಕಾರ್ಪೊರೇಷನ್‍ನಲ್ಲಿ ಜನಸಂಘದ ಧ್ವಜ ಹಾರಿಸಿದ ಕೀರ್ತಿ ಅವರದ್ದು ಎಂದು ಸ್ಮರಿಸಿದರು.
ತುರ್ತು ಪರಿಸ್ಥಿತಿಯ ಕರಾಳ ದಿನಗಳಲ್ಲಿ ಪ್ರಜಾಪ್ರಭುತ್ವದ ಉಳಿವಿಗೆ ಹೋರಾಡಿದ್ದರು. ವಿಧಾನ ಪರಿಷತ್ ಗೆ ಐದು ಬಾರಿ ಆಯ್ಕೆಯಾಗಿ ಮೂವತ್ತು ವರ್ಷಗಳ ಕಾಲ ಮೇಲ್ಮನೆಯಲ್ಲಿ ಜನರ ಕಷ್ಟಕ್ಕೆ ಸ್ಪಂದಿಸಿದ್ದರು. ವೈದ್ಯಕೀಯ ಶಿಕ್ಷಣ ಸಚಿವರಾಗಿ ಅತ್ಯಂತ ದಕ್ಷತೆಯಿಂದ ಕೆಲಸ ಮಾಡಿದವರು ಎಂದು ತಿಳಿಸಿದರು.
ಲಾಟರಿ ನಿಷೇಧಕ್ಕೆ ಹೋರಾಟ
ರಾಜ್ಯದಲ್ಲಿ ಲಾಟರಿ ನಿಷೇಧ ಆಗಲು ಹೋರಾಟ ಮಾಡಿ ಯಶಸ್ವಿಯಾದವರಲ್ಲಿ ಗೌಡರು ಪ್ರಮುಖರು. ಯಾವುದೇ ಕ್ಲಿಷ್ಟಕರ ಸ್ಥಿತಿಯಲ್ಲೂ ಸಮಾಧಾನದಲ್ಲಿ ಇದ್ದು ಕೆಲಸ ಮಾಡುತ್ತಿದ್ದರು. ಅವರ ಸೌಮ್ಯ ಸ್ವಭಾವ, ಸರಳತೆ, ಉದಾರತೆ ಮರೆಯಲು ಸಾಧ್ಯವಿಲ್ಲ. ಇಡೀ ಪಕ್ಷ ಅವರ ಕುಟುಂಬದ ದುಃಖದಲ್ಲಿ ಭಾಗಿಯಾಗಿದೆ. ಅವರ ಸಿದ್ದಾಂತ, ಆದರ್ಶಗಳು ನಮ್ಮನ್ನು ಮುನ್ನೆಡಸಲಿ ಎಂದರು.

ದೂರದರ್ಶಿತ್ವದ ನಾಯಕ- ಸುರೇಶ್ ಕುಮಾರ್
ರಾಮಚಂದ್ರಗೌಡರು ದೂರದರ್ಶಿತ್ವದ ನಾಯಕ. ಮಹಾನಗರ ಪಾಲಿಕೆಯಲ್ಲಿ ಸ್ವಯಂ ಘೋಷಿತ ಆಸ್ತಿ ಪದ್ಧತಿ ಜಾರಿ ಆಗುವುದರಲ್ಲಿ ಅವರ ಪಾತ್ರ ಮಹತ್ವದ್ದು ಎಂದು ಮಾಜಿ ಸಚಿವ ಹಾಗೂ ಶಾಸಕ ಎಸ್ ಸುರೇಶ್ ಕುಮಾರ್ ಬಣ್ಣಿಸಿದರು. ನಮ್ಮ ಪಕ್ಷದ ಫ್ರೆಂಡ್, ಫಿಲಾಸಪರ್ ಅಂಡ್ ಗೈಡ್ ರೀತಿ ಇದ್ದರು. ಅನೇಕ ವಿಚಾರ ಬಲ್ಲ ತತ್ವಜ್ಞಾನಿಯಾಗಿದ್ದರು. ಹಲವರಿಗೆ ಮಾರ್ಗದರ್ಶಕರಾಗಿದ್ದರು ಎಂದು ಅವರೊಂದಿಗಿನ ದಿನಗಳನ್ನು ನೆನಪಿಸಿಕೊಂಡರು.
80ರಲ್ಲಿ ನಗರಸಭೆ ಚುನಾವಣೆಗೆ ನಿಂತಾಗ ಮೈಕ್ ನಲ್ಲಿ ಕ್ಯಾಂಪೇನ್ ಮಾಡಿದ ಮೊದಲಿಗರು. ಪದವೀಧರರ ಸಮಸ್ಯೆಗೆ ಸ್ಪಂದಿಸುತ್ತಿದ್ದ ವಿಧಾನ ಪರಿಷತ ಸದಸ್ಯರಲ್ಲಿ ಗೌಡರು ಅಗ್ರಗಣ್ಯರು ಎಂದರು. ಏಕ ಅಂಕಿ ಲಾಟರಿ ವಿರುದ್ಧ ಹೋರಾಡಿ ಗೆಲುವು ಸಾಧಿಸಿದವರು. ಅನೇಕ ಕುಟುಂಬಗಳನ್ನು ಉಳಿಸಿದ ಶ್ರೇಯಸ್ಸು ಗೌಡರು ಹಾಗೂ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ. ರಾಮಚಂದ್ರಗೌಡರದ್ದು ವಿಶಿಷ್ಟ ವ್ಯಕ್ತಿತ್ವ. ಗೋವಾ ವಿಮೋಚನಾ ಚಳವಳಿಯಲ್ಲಿ ಜಗನ್ನಾಥ ರಾವ್ ಅವರೊಂದಿಗೆ ಸೇರಿ ಕೆಲಸ ಮಾಡಿದವರು ರಾಮಚಂದ್ರಗೌಡ ಅವರು ಎಂದು ಹೇಳಿದರು.
ಚೆನ್ನಮ್ಮ ಅಂತ್ಯಕ್ರಿಯೆ; ಕೇಂದ್ರ ಸರ್ಕಾರದ ಪ್ರತಿನಿಧಿಯಾಗಿ ಸಚಿವ ಪ್ರಲ್ಹಾದ್ ಜೋಶಿ ಗೌರವ ಸಮರ್ಪಣೆ
ಒಬ್ಬ ಆದರ್ಶ ಕಾರ್ಯಕರ್ತ ಹಾಗೂ ಜನಪ್ರತಿನಿಧಿ ಹೇಗಿರಬೇಕು ಎಂಬುದಕ್ಕೆ ಗೌಡರು ಶ್ರೇಷ್ಠ ಉದಾಹರಣೆ. ಇಂತಹ ಧೀಮಂತ ನಾಯಕನನ್ನು ನಾವು ಕಳೆದುಕೊಂಡಿದ್ದೇವೆ. ಜನಸಂಘದ ಕೊಂಡಿ ಕಳಚಿದೆ. ಅವರ ನಡೆ ಮತ್ತು ನುಡಿ ಮಾರ್ಗದರ್ಶಕವಾಗಿರಲಿ ಎಂದು ಆಶಿಸಿದರು.
ಮಿಥಿಕ್ ಸೊಸೈಟಿಯ ಅಧ್ಯಕ್ಷ ವಿ.ನಾಗರಾಜ್, ಪಕ್ಷದ ಪ್ರಮುಖರು, ಜನಪ್ರತಿನಿಧಿಗಳು, ಗಣ್ಯಮಾನ್ಯರು, ಕಾರ್ಯಕರ್ತರು ಹಾಗೂ ರಾಮಚಂದ್ರಗೌಡರ ಅಭಿಮಾನಿಗಳು ಉಪಸ್ಥಿತರಿದ್ದರು.