ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Ramakrishna Hegde’s centenary: ರಾಮಕೃಷ್ಣ ಹೆಗಡೆ ಅತ್ಯಂತ ಪ್ರಾಮಾಣಿಕ ರಾಜಕಾರಣಿ, ಅವರಿಗೆ ಪ್ರಧಾನಿಯಾಗುವ ಸಾಮರ್ಥ್ಯವಿತ್ತು: ಸಿದ್ದರಾಮಯ್ಯ

ಬೆಂಗಳೂರಿನ ವಿಧಾನಸೌಧದ ಬ್ಯಾಕ್ವೆಂಟ್‌ ಹಾಲ್‌ನಲ್ಲಿ ಶನಿವಾರ ಆಯೋಜಿಸಿದ್ದ ʼರಾಮಕೃಷ್ಣ ಹೆಗಡೆ ಅವರ ಜನ್ಮ ಶತಮಾನೋತ್ಸವʼದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದಾರೆ. ಯಾರಿಗೆ ಸಾಮರ್ಥ್ಯವಿದೆ ಅಂತಹವನ್ನು ಗುರುತಿಸಿ ಮಂತ್ರಿ ಮಾಡುವ, ಬೆಳೆಸುವ ಕೆಲಸವನ್ನು ಹೆಗಡೆ ಅವರು ಮಾಡಿದ್ದರು. ನಾನು ನೋಡಿದ ಮುಖ್ಯಮಂತ್ರಿಗಳಲ್ಲಿ ರಾಮಕೃಷ್ಣ ಹೆಗ್ಗಡೆಯವರು ಬಹಳ ಎತ್ತರದ ವ್ಯಕ್ತಿ ಎಂದು ಮಾಜಿ ಸಿಎಂ ಸ್ಮರಿಸಿದ್ದಾರೆ.

ಬೆಂಗಳೂರು: ಮಾಜಿ ಸಿಎಂ ರಾಮಕೃಷ್ಣ ಹೆಗಡೆ (Ramakrishna Hegde) ಅವರು ರಾಜಕೀಯದಲ್ಲಿ ಅನೇಕ ಯುವಕರನ್ನು ಬೆಳೆಸಿದರು, ಅವರಲ್ಲಿ ನಾನೂ ಒಬ್ಬ. ರಾಯರೆಡ್ಡಿ, ಬಿ.ಎಲ್‌.ಶಂಕರ್‌, ಸಿಂಧ್ಯ, ದೇಶಪಾಂಡೆ ಇವರೆಲ್ಲವರನ್ನು ಬೆಳೆಸಿದ್ದರು. ಇವತ್ತು ಹಲವು ಮಂದಿ ಅನೇಕ ಕ್ಷೇತ್ರಗಳಲ್ಲಿ ದೊಡ್ಡ ದೊಡ್ಡ ಹುದ್ದೆಗೆ ಹೋಗಿದ್ದರೆ ಅದಕ್ಕೆ ಹೆಗಡೆಯವರು ಕಾರಣ. ಯಾರಿಗೆ ಸಾಮರ್ಥ್ಯವಿದೆ, ಶಕ್ತಿ ಇದೆ ಅಂತಹವನ್ನು ಪತ್ತೆ ಹಚ್ಚಿ ಬೆಳೆಸುವ ಗುಣ ಹೆಗಡೆಯವರಿಗೆ ಇತ್ತು ಎಂದು ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಅವರು ಸ್ಮರಿಸಿದರು.

ವಿಧಾನಸೌಧದ ಬ್ಯಾಕ್ವೆಂಟ್‌ ಹಾಲ್‌ನಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ʼರಾಮಕೃಷ್ಣ ಹೆಗಡೆ ಅವರ ಜನ್ಮ ಶತಮಾನೋತ್ಸವʼದಲ್ಲಿ (Ramakrishna Hegde’s centenary) ಮಾತನಾಡಿದರು.

ರಾಮಕೃಷ್ಣ ಹೆಗಡೆಯವರು ಈ ರಾಜ್ಯದ ಮೊದಲ ಕಾಂಗ್ರಸ್ಸೇತರ ಮುಖ್ಯಮಂತ್ರಿಗಳು. 1983ರಲ್ಲಿ ಅವರು ಸಿಎಂ ಆದರು. ಅಂದು ಜನತಾ ಪಕ್ಷಕ್ಕೆ ಬಹುಮತ ಬಂದಿರಲಿಲ್ಲ. ಜನತಾ ಪಾರ್ಟಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಕಮ್ಯುನಿಸ್ಟ್‌ ಪಕ್ಷ ಹಾಗೂ ಭಾರತೀಯ ಜನತಾ ಪಕ್ಷದ ಬೆಂಬಲದೊಂದಿಗೆ ಅವರು ಮುಖ್ಯಮಂತ್ರಿಯಾಗಿ, ಸುಮಾರು ಎರಡು ವರ್ಷ ಆಡಳಿತ ನಡೆಸಿದರು.

ಹೆಗಡೆಯವರು ಬಹಳ ಸೂಕ್ಷ್ಮಮತಿಗಳು

ಅವತ್ತು ಆಡಳಿತ ನಡೆಸುವುದು ಕಷ್ಟದ ಕೆಲಸವಾಗಿತ್ತು. ಆದರೆ, ರಾಮಕೃಷ್ಣ ಹೆಗಡೆಯವರು ಚಾಣಾಕ್ಷತನದಿಂದ ಎಡ, ಬಲ ಪಕ್ಷಗಳನ್ನು ಒಟ್ಟುಗೂಡಿಸಿ ಸರ್ಕಾರ ನಡೆಸುವ ಕೆಲಸ ಮಾಡಿದರು. ಹೆಗಡೆ ಅವರು ಬಹಳ ಸೂಕ್ಷ್ಮಮತಿಗಳು. 1984ರ ಸಂಸತ್‌ ಚುನಾವಣೆಯಲ್ಲಿ ಪಕ್ಷಕ್ಕೆ ಸೋಲಾಯಿತು. ಲೋಕಸಭಾ ಚುನಾವಣೆಯಲ್ಲಿ ಸೋತ ಹಿನ್ನೆಲೆ ವಿಧಾನಸಭೆ ವಿಸರ್ಜಿಸಿ, ರಾಜ್ಯದಲ್ಲಿ ಮರುಚುನಾವಣೆಗೆ ಹೋದರು. 1985ರ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಬಹುಮತದೊಂದಿಗೆ ಮತ್ತೆ ಸಿಎಂ ಆಗಿ ಅಧಿಕಾರಕ್ಕೆ ಬಂದರು.

ನಾನು ಪಕ್ಷೇತರ ಶಾಸಕನಾಗಿ ಎಸ್‌.ಆರ್‌.ಬೊಮ್ಮಾಯಿ ಅವರ ಮೂಲಕ ಹೆಗಡೆ ಅವರಿಗೆ ಬೆಂಬಲ ಘೋಷಣೆ ಮಾಡಿದ್ದೆ. ನಂತರ ನನ್ನನ್ನು ಅವರೇ ಕರೆದು, ಕನ್ನಡ ಕಾವಲು ಸಮಿತಿ ಅಧ್ಯಕ್ಷರನ್ನಾಗಿ ಮಾಡಿದ್ದರು. ಮತ್ತೆ ನಾನು ಸಚಿವನಾಗಬೇಕು ಎಂದು ಕೇಳಿರಲಿಲ್ಲ. ಆದರೆ ರಾಮಕೃಷ್ಣ ಹೆಗಡೆ ಅವರು 1984ರಲ್ಲಿ ನನ್ನನ್ನು ಮಂತ್ರಿ ಮಾಡಿದ್ದರು. ಆಗ ರೇಷ್ಮೆ ಇಲಾಖೆ ಖಾತೆ ನೀಡಿದ್ದರು. ಮೊದಲ ಬಾರಿ ಗೆದ್ದಿದ್ದರೂ ಕೂಡ ಸಚಿವ ಸ್ಥಾನ ನೀಡಿದ್ದರು ಎಂದು ಹೇಳಿದರು.

ಸಾಮರ್ಥ್ಯ ಉಳ್ಳವರನ್ನು ಬೆಳೆಸುವ ಕೆಲಸ ಮಾಡಿದ್ದರು

ಯಾರಿಗೆ ಸಾಮರ್ಥ್ಯವಿದೆ ಅಂತಹವನ್ನು ಗುರುತಿಸಿ ಮಂತ್ರಿ ಮಾಡುವ, ಬೆಳೆಸುವ ಕೆಲಸವನ್ನು ಹೆಗಡೆ ಅವರು ಮಾಡಿದ್ದರು. 1985ರಲ್ಲಿ ಜನತಾ ಪಕ್ಷ ಸೇರಿ, ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದೆ. ಹೆಗಡೆ ಅವರು ಎಷ್ಟು ಸೂಕ್ಷ್ಮಮತಿಗಳು ಆಗಿದ್ದರು ಎಂದರೆ, ಸರ್ಕಾರದ ವಿರುದ್ಧ ಸಾರಾಯಿ ಬಾಟ್ಲಿಂಗ್ ಗುತ್ತಿಗೆ ಹಗರಣ ಆರೋಪ ಕೇಳಿಬಂದಿತ್ತು. ಇದರಿಂದ ರಾಜೀನಾಮೆ ನೀಡಿದ್ದರು. ಬಳಿಕ ಶಾಸಕರ ಒತ್ತಡಕ್ಕೆ ಮಣಿದು ರಾಜೀನಾಮೆ ವಾಪಸ್‌ ಪಡೆದಿದ್ದರು.

ಮತ್ತೊಂದು ಬಾರಿ ಫೋನ್‌ ಕದ್ದಾಲಿಕೆ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಆಗಲೂ ರಾಜೀನಾಮೆ ನೀಡಿದ್ದರು. ಇದನ್ನು ನೋಡಿದಾಗ ರಾಮಕೃಷ್ಣ ಹೆಗಡೆ ಅವರು ಮೌಲ್ಯಾಧಾರಿತ ರಾಜಕಾರಣದ ಬಗ್ಗೆ ಎಷ್ಟು ಬದ್ಧತೆ ಇಟ್ಟುಕೊಂಡಿದ್ದರು ಎಂಬುವುದು ತಿಳಿಯುತ್ತದೆ. ರಾಜಕಾರಣ ಎಂದರೆ ಬರೀ ಕಾರ್ಯಕ್ರಮ, ಜನಸೇವೆ ಮಾಡುವುದು ಮಾತ್ರವಲ್ಲ ಉತ್ತರದಾಯಿತ್ವ ಕೂಡ ಇರಬೇಕು ಎಂದು ಅವರು ಹೇಳುತ್ತಿದ್ದರು.

ಅವರ ಕಾಲದಲ್ಲಿ ಬಹಳ ಪ್ರಮುಖ, ಜನಪರ ನಿರ್ಧಾರಗಳನ್ನು ತೆಗೆದುಕೊಂಡಿದ್ದರು. ಅಧಿಕಾರ ವಿಕೇಂದ್ರೀಕರಣ, ಪಂಚಾಯತ್‌ ರಾಜ್‌ ವ್ಯವಸ್ಥೆಗೆ ಶಕ್ತಿ ತುಂಬುವ ಕೆಲಸ ಮಾಡಿದರು. ನಂತರ ಲೋಕಾಯುಕ್ತ ಕಾನೂನು ಜಾರಿಗೆ ತಂದಿದ್ದರು. ಸಾರ್ವಜನಿಕ ಜೀವನದಲ್ಲಿ ಇರುವವರು ಯಾವತ್ತೂ ಭ್ರಷ್ಟಾಚಾರಮುಕ್ತರಾಗಿ ಇರಬೇಕು ಎಂದು ಲೋಕಾಯುಕ್ತ ಕಾಯ್ದೆ ಜಾರಿ ಮಾಡಿದ್ದರು ಎಂದು ತಿಳಿಸಿದರು.

ನಾನು ನೋಡಿದ ಮುಖ್ಯಮಂತ್ರಿಗಳಲ್ಲಿ ಬಹಳ ಎತ್ತರದ ವ್ಯಕ್ತಿ

ನಾನು ನೋಡಿದ ಮುಖ್ಯಮಂತ್ರಿಗಳಲ್ಲಿ ರಾಮಕೃಷ್ಣ ಹೆಗ್ಗಡೆಯವರು ಬಹಳ ಎತ್ತರದ ವ್ಯಕ್ತಿ. ಅವರಿಗೆ ಪ್ರಧಾನಮಂತ್ರಿಯಾಗುವ ಸಾಮರ್ಥ್ಯವಿತ್ತು. ಒಂದು ಬಾರಿ ಅವಕಾಶವೂ ಬಂದಿತ್ತು. ಕೇಂದ್ರದಲ್ಲಿ ಯೋಜನಾ ಉಪಾಧ್ಯಕ್ಷ, ಮಂತ್ರಿಯಾಗಿದ್ದರು. ಆದರೆ, ಅವರಿಗೆ ಪ್ರಧಾನಿ ಪಟ್ಟ ಸಿಕ್ಕಿಲ್ಲ ಎಂಬುವ ಕೊರಗು ನಮ್ಮಂತಹವರಿಗೆ ಇದೆ. ಅವರು ಅತ್ಯಂತ ಪ್ರಾಮಾಣಿಕ ರಾಜಕಾರಣಿಯಾಗಿದ್ದರು. ಎಲ್ಲರಿಗೂ ಬೆಂಬಲ ನೀಡುವ ಜತೆಗೆ ಸ್ವಾತಂತ್ರ್ಯ ನೀಡಿದ್ದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.