ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Urdu language: ತುಳು ಬಳಿಕ ಉರ್ದುಗೆ ಅಧಿಕೃತ ಭಾಷೆ ಮಾನ್ಯತೆ ನೀಡಲು ಎಸ್‌ಡಿಪಿಐ ಒತ್ತಾಯ; ಸಿಎಂಗೆ ಪತ್ರ

Official language status for Urdu: ತುಳು ಭಾಷೆಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಹೆಚ್ಚುವರಿ ಅಧಿಕೃತ ಭಾಷೆಯ ಸ್ಥಾನಮಾನ ನೀಡಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸ್ವಾಗತಿಸುತ್ತದೆ. ಅದೇ ರೀತಿ ಲಕ್ಷಾಂತರ ಜನರ ದೈನಂದಿನ ಜೀವನದ ಭಾಗವಾಗಿರುವ ಉರ್ದು ಭಾಷೆಯ ಬಗ್ಗೆ ರಾಜ್ಯ ಸರ್ಕಾರವು ಸಮಾನ ದೃಷ್ಟಿಕೋನವನ್ನು ಅನುಸರಿಸಬೇಕು SDPI ಆಗ್ರಹಿಸಿದೆ.

ಬೆಂಗಳೂರು: ರಾಜ್ಯದಲ್ಲಿ ತುಳು ಭಾಷೆಗೆ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯ ಮಾನ್ಯತೆ ನೀಡಿದ ಬೆನ್ನಲ್ಲೇ ಇದೀಗ ಉರ್ದು ಭಾಷೆಗೂ (Official language status for Urdu) ಅಧಿಕೃತ ಭಾಷೆ ಸ್ಥಾನಮಾನ ನೀಡಬೇಕು ಎಂಬ ಕೂಗು ಕೇಳಿಬಂದಿದೆ. ಈ ಸಂಬಂಧ ಸೋಶಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾ (ಎಸ್‌ಡಿಪಿಐ) ವತಿಯಿಂದ ಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರ ಬರೆಯಲಾಗಿದೆ.

ಈ ಬಗ್ಗೆ SDPI ಕರ್ನಾಟಕ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಪ್ರತಿಕ್ರಿಯಿಸಿ, ಕರ್ನಾಟಕದ ಕರಾವಳಿ ಭಾಗದ ಜನರ ಬಹುಕಾಲದ ಬೇಡಿಕೆಯಾಗಿದ್ದ ತುಳು ಭಾಷೆಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಹೆಚ್ಚುವರಿ ಅಧಿಕೃತ ಭಾಷೆಯ ಸ್ಥಾನಮಾನ ನೀಡಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಕರ್ನಾಟಕ ಸ್ವಾಗತಿಸುತ್ತದೆ.

ತಮ್ಮ ಮಾತೃಭಾಷೆ, ಸಂಸ್ಕೃತಿ, ಪರಂಪರೆ ಮತ್ತು ಭಾಷಾ ಅಸ್ಮಿತೆಯನ್ನು ಉಳಿಸಿಕೊಳ್ಳಲು ದಶಕಗಳಿಂದ ಹೋರಾಟ ನಡೆಸಿದ ತುಳು ಭಾಷಾ ಹೋರಾಟಗಾರರು, ಭಾಷಾ ಪ್ರೇಮಿಗಳು, ಜನಪ್ರತಿನಿಧಿಗಳು ಹಾಗೂ ಕರಾವಳಿಯ ಜನತೆಗೆ ಈ ಸಂದರ್ಭದಲ್ಲಿ ಅಭಿನಂದನೆಗಳನ್ನು ಸಲ್ಲಿಸುತ್ತೇವೆ.

ಭಾಷೆಯ ವೈವಿಧ್ಯತೆಯನ್ನು ಗೌರವಿಸುವುದು ಪ್ರಜಾಪ್ರಭುತ್ವದ ಸೌಂದರ್ಯ. ಒಂದು ಭಾಷೆಗೆ ಅದರ ಜನಸಂಖ್ಯೆ, ಬಳಕೆ, ಐತಿಹಾಸಿಕ ಹಿನ್ನೆಲೆ ಮತ್ತು ಜನರ ಭಾವನೆಗಳನ್ನು ಪರಿಗಣಿಸಿ ಅಧಿಕೃತ ಮಾನ್ಯತೆ ನೀಡುವುದು ಸ್ವಾಗತಾರ್ಹವಾದ ಕ್ರಮವಾಗಿದೆ. ಆದರೆ, ಇದೇ ಸಂದರ್ಭದಲ್ಲಿ ಕರ್ನಾಟಕದಲ್ಲಿ ದೀರ್ಘಕಾಲದಿಂದ ಮಾತನಾಡಲ್ಪಡುತ್ತಿರುವ ಮತ್ತು ಲಕ್ಷಾಂತರ ಜನರ ದೈನಂದಿನ ಜೀವನದ ಭಾಗವಾಗಿರುವ ಉರ್ದು ಭಾಷೆಯ ಬಗ್ಗೆ ರಾಜ್ಯ ಸರ್ಕಾರವು ಸಮಾನ ದೃಷ್ಟಿಕೋನವನ್ನು ಅನುಸರಿಸಬೇಕೆಂದು SDPI ಕರ್ನಾಟಕ ಒತ್ತಾಯಿಸುತ್ತದೆ ಎಂದು ಪತ್ರದ ಮೂಲಕ ಸಿಎಂಗೆ ತಿಳಿಸಲಾಗಿದೆ ಎಂದು ಹೇಳಿದ್ದಾರೆ.

2011ರ ಜನಗಣತಿ ದತ್ತಾಂಶದಲ್ಲಿ ಉರ್ದು ಕೂಡ ಕರ್ನಾಟಕದ ಮಾತೃಭಾಷೆಗಳ ಪಟ್ಟಿಯಲ್ಲಿದೆ. ಉರ್ದು ಕೇವಲ ಮಾತಾಡುವ ಭಾಷೆ ಅಲ್ಲ, ಕಲೆ ಸಾಹಿತ್ಯ ಪತ್ರಿಕೋದ್ಯಮ ಶಿಕ್ಷಣ ಸೇರಿದ ಶತಮಾನದ ಸಾಂಸ್ಕೃತಿಕ ಪರಂಪರೆ ಇದೆ. ರಾಜ್ಯದಲ್ಲಿ ಒಟ್ಟು 4,236 ಉರ್ದು ಸರ್ಕಾರಿ ಅನುದಾನಿತ ಹಾಗೂ ಸರ್ಕಾರಿ ಶಾಲೆಗಳಿವೆ. ಹೀಗಾಗಿ ಉರ್ದು ಭಾಷೆಗೂ ಕರ್ನಾಟಕದಲ್ಲಿ ಅಧಿಕೃತ ಹಾಗೂ ವ್ಯವಹಾರಿಕ ಸ್ಥಾನ ನೀಡುವಂತೆ ಆಗ್ರಹಿಸಲಾಗಿದೆ.

ಎಸ್‌ಡಿಪಿಐ ಬೇಡಿಕೆಗಳೇನು?

  • ಉರ್ದು ಭಾಷೆಗೂ ರಾಜ್ಯದ ಅಧಿಕೃತ ಭಾಷೆ ಸ್ಥಾನ ನೀಡಬೇಕು.
  • ಉರ್ದುವನ್ನು ರಾಜ್ಯದ ಆಡಳಿತ ಭಾಷೆಯಾಗಿ ಹಂತ ಹಂತವಾಗಿ ವ್ಯವಸ್ಥೆ ರೂಪಿಸಬೇಕು.
  • ಸರ್ಕಾರಿ ಕಚೇರಿಗಳಲ್ಲಿ ಉರ್ದು ಭಾಷೆಯ ಮೂಲಕ ಅರ್ಜಿ, ಸೇವಾ ಮಾಹಿತಿ ಸೇರಿದ ಇತರೆ ಸೌಲಭ್ಯ ನೀಡಬೇಕ.
  • ಉರ್ದು ಶಾಲೆಯಲ್ಲಿ ಖಾಲಿ ಇರುವ ಶಿಕ್ಷಕ ಹುದ್ದೆ ಶೀಘ್ರವೇ ಭರ್ತಿ ಮಾಡಬೇಕು.
  • ಉರ್ದು ಭಾಷೆಯ ಸಾಹಿತ್ಯ, ಸಂಸ್ಕೃತಿಗೆ ಕೊಡುವ ಅನುದಾನ ಪ್ರೋತ್ಸಾಹ ಹೆಚ್ಚಿಸಬೇಕು.
  • ಸರ್ಕಾರಿ ನೇಮಕಾತಿ, ಸ್ಪರ್ಧಾತ್ಮಕ ಪರೀಕ್ಷೆಯ ಸೇವೆಗಳ ಮಾಹಿತಿಯನ್ನು ಉರ್ದುವಿನಲ್ಲೂ ನೀಡಬೇಕು.

ಬೇಡಿಕೆ ಇಡುವುದರಲ್ಲಿ ತಪ್ಪಿಲ್ಲ: ಸಚಿವ ಯು.ಟಿ.ಖಾದರ್

ತುಳು ಭಾಷೆಯಂತೆ ಉರ್ದು ಭಾಷೆಗೆ ರಾಜ್ಯ ಮಾನ್ಯತೆಗೆ ಆಗ್ರಹಿಸಿರುವ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಯು.ಟಿ.ಖಾದರ್ ಅವರು, ಪ್ರತಿಯೊಂದು ಭಾಷೆ ಈ ರಾಜ್ಯದಲ್ಲಿ ತನ್ನದೇ ಆದ ಕೊಡುಗೆ ಕೊಟ್ಟಿದೆ. ಬೇಡಿಕೆ ಇಡುವುದರಲ್ಲಿ ತಪ್ಪಿಲ್ಲ. ಸರ್ಕಾರ ನೋಡಿಕೊಂಡು ತೀರ್ಮಾನ ತೆಗೆದುಕೊಳ್ಳುತ್ತೆ ಎಂದಿದ್ದಾರೆ.

ತುಳು ಭಾಷೆಗೆ ಬಹಳಷ್ಟು ಹಿಂದೆಯಿಂದಲೂ ನಮ್ಮ ಬೇಡಿಕೆ ಇತ್ತು. ಭಾಷೆ ಅಂದ್ರೆ ನಾವು ಮಾತನಾಡುವ ಮಾತು ಮಾತ್ರ ಅಲ್ಲ, ಭಾಷೆ ಅಂದ್ರೆ ಅದು ಒಂದು ಊರಿನ ಸಂಸ್ಕೃತಿ, ಪರಂಪರೆ ನಾವು ಹಾಕುವ ಬಟ್ಟೆ ಊಟ ಮಾಡುವ ವ್ಯವಸ್ಥೆ, ಜಾನಪದ ಕ್ರೀಡೆ, ಸಂಸ್ಕೃತಿ, ಸಾಹಿತ್ಯ ಎಲ್ಲವೂ ಸೇರಿದ್ರೆ ಭಾಷೆ. ಅವೆಲ್ಲ ಉಳಿಯಬೇಕು ಅಂದ್ರೆ ಭಾಷೆ ಉಳಿಯಬೇಕು. ಭಾಷೆ ಉಳಿದ್ರೆ ಇವೆಲ್ಲಾ ಉಳಿಯುತ್ತೇವೆ. ತುಳು ಭಾಷೆಯನ್ನ ಎರಡನೇ ಭಾಷೆಯನ್ನಾಗಿ ಘೋಷಿಸಿದ್ದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದಿದ್ದಾರೆ.

Cabinet Meeting: ತುಳು ಭಾಷೆಗೆ ರಾಜ್ಯದ 2ನೇ ಅಧಿಕೃತ ಭಾಷೆಯಾಗಿ ಮಾನ್ಯತೆ ನೀಡಲು ಸಚಿವ ಸಂಪುಟ ತೀರ್ಮಾನ

ಉರ್ದು ಭಾಷೆ ಸೇರಿದಂತೆ ಬೇರೆ ಬೇರೆ ಭಾಷೆಗಳ ಬೇಡಿಕೆ ಇದೆ. ಆ ಬೇಡಿಕೆ ತಪ್ಪಿಲ್ಲ. ಈ ಬಗ್ಗೆ ಸರ್ಕಾರದ ಗಮನಕ್ಕೆ ತರುತ್ತೇನೆ. ಸರ್ಕಾರ ಕೂಡ ಅದಕ್ಕೆ ಸ್ಪಂದಿಸುತ್ತೆ ಅನ್ನೋ ವಿಶ್ವಾಸ ಇದೆ ಎಂದಿದ್ದಾರೆ.