ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

SIR in Karnataka: ಬಿಎಲ್‍ಎ-2ಗಳು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಿ: ಬಿ.ವೈ. ವಿಜಯೇಂದ್ರ

BY Vijayendra: ಬೆಂಗಳೂರಿನ ಬನಶಂಕರಿಯ ಆರ್.ಬಿ.ಐ. ಲೇಔಟ್‍ನ ಸೋಮೇಶ್ವರ ಭವನದಲ್ಲಿ ಶನಿವಾರ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಎಸ್‍ಐಆರ್ ಸಂಬಂಧಿತ ಬಿಎಲ್‍ಎ-2ಗಳ ಸಭೆಯ ಜರುಗಿತು. ಸಭೆಯಲ್ಲಿ ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿದ್ದಾರೆ.

ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಎಸ್‍ಐಆರ್ ಸಂಬಂಧಿತ ಬಿಎಲ್‍ಒ 2 ಗಳ ಸಭೆಯಲ್ಲಿ ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿದರು.

ಬೆಂಗಳೂರು, ಜು.4: ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಎಸ್‍ಐಆರ್ (SIR in Karnataka) ಸಂಬಂಧಿತ ಬಿಎಲ್‍ಒ-2ಗಳ ಸಭೆಯು ಬೆಂಗಳೂರಿನ ಬನಶಂಕರಿಯ ಆರ್.ಬಿ.ಐ. ಲೇಔಟ್‍ನ ಸೋಮೇಶ್ವರ ಭವನದಲ್ಲಿ ಶನಿವಾರ ಜರುಗಿತು. ಸಭೆಯಲ್ಲಿ ಮಾತನಾಡಿದ ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra) ಮಾತನಾಡಿ, ಬಿಎಲ್‍ಎ 2 ಆಗಿ ನೇಮಕಗೊಂಡವರು ಎಸ್‍ಐಆರ್ ವಿಚಾರದಲ್ಲಿ ಮಹತ್ವದ ಪಾತ್ರ ವಹಿಸಬೇಕಿದೆ. ಜವಾಬ್ದಾರಿಯೊಂದಿಗೆ ನಿರಂತರ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಸಭೆಯಲ್ಲಿ ಶಾಸಕ ಕೃಷ್ಣಪ್ಪ, ಜಿಲ್ಲಾಧ್ಯಕ್ಷ ಮತ್ತು ಶಾಸಕ ಕೆ.ಆರ್.ರಾಮಮೂರ್ತಿ, ಎಸ್‍ಐಆರ್ ಬೆಂಗಳೂರು ಸಂಚಾಲಕ ಪ್ರಶಾಂತ್ ಕುಮಾರ್ ಜಿ, ರಾಜ್ಯ ಮಾಧ್ಯಮ ಪ್ರಕೋಷ್ಠದ ಸಂಚಾಲಕ ಕರುಣಾಕರ ಖಾಸಲೆ ಭಾಗವಹಿಸಿದ್ದರು. ಈ ವೇಳೆ ದಕ್ಷಿಣ ಮಂಡಲ ಅಧ್ಯಕ್ಷರಾದ ಕೇಶವರಾಜು, ಆಂಜನೇಯ ರೆಡ್ಡಿ ಮತ್ತು ಪಕ್ಷದ ಪ್ರಮುಖರು ಪಾಲ್ಗೊಂಡಿದ್ದರು.

ಸರ್ಕಾರ ರೈತರ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸ ಮಾಡುತ್ತಿದೆ: ಬಿ.ವೈ.ವಿಜಯೇಂದ್ರ ಕಿಡಿ

ಬೆಂಗಳೂರು: ಬೆಳೆ ಬೆಳೆಯದಿರಿ ಎಂದು ಮುಖ್ಯಮಂತ್ರಿಗಳು ನೀಡಿದ ಹೇಳಿಕೆಯು ರೈತರ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸ ಮಾಡಿದೆ ಎಂದು ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ (B.Y. Vijayendra) ಅವರು ಟೀಕಿಸಿದ್ದಾರೆ. ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು.

ನಿನ್ನೆ ಈ ನಾಡಿನ ದೊರೆ, ಮುಖ್ಯಮಂತ್ರಿಗಳು ಒಂದು ಹೇಳಿಕೆ ಕೊಟ್ಟಿದ್ದಾರೆ. ನೀರಿಲ್ಲ; ಬೆಳೆ ಬೆಳೆಯುವುದು ಬೇಡ. ಭೀಕರ ಬರಗಾಲದ ಮುನ್ಸೂಚನೆ ವಿಚಾರವನ್ನು ಸಂಪುಟದಲ್ಲಿ ಚರ್ಚಿಸಿ ರಾಜ್ಯದ ಜಲಾಶಯಗಳಲ್ಲಿ ನೀರಿಲ್ಲದ ಕಾರಣ ರೈತರು ಬೆಳೆ ಬೆಳೆಯದಿರಿ ಎಂದು ಸ್ವತಃ ಮುಖ್ಯಮಂತ್ರಿಗಳು ಹೇಳಿದ್ದು ಬಹಳ ಆಶ್ಚರ್ಯ ಮಾತ್ರವಲ್ಲದೇ ಅತ್ಯಂತ ನೋವನ್ನು ತಂದಿದೆ ಎಂದು ನುಡಿದರು.

ನಾವೇನೇ ಹೇಳಿಕೆ ನೀಡಿದರೂ ಪ್ರಬುದ್ಧತೆಯಿಂದ ಮಾತನಾಡಬೇಕು ಎಂದು ವಿನಂತಿಸಿದರು. ಇಡೀ ದೇಶದಲ್ಲಿ ಬರಗಾಲದ ಛಾಯೆ ಮೂಡಿದೆ. ಪ್ರಕೃತಿ ಮುನಿಸಿಕೊಂಡ ಸಂದರ್ಭದಲ್ಲಿ ರಾಜ್ಯದ ರೈತರಿಗೆ ಅಭಯ, ಭರವಸೆಯನ್ನು ಸರಕಾರ ನೀಡಬೇಕಿತ್ತು. ಮುಂದಿನ 15- 20 ದಿನ ಮಳೆ ಬೀಳುವ ಆಶಾಭಾವ ಇದೆ. ಮುಖ್ಯಮಂತ್ರಿಗಳು ಹೇಳಿದರೆಂದು ಬಿತ್ತನೆಯೇ ಮಾಡದೇ ಇದ್ದರೆ ಯಾರು ಹೊಣೆಗಾರರು ಎಂದು ಕೇಳಿದರು.

ಶೇ 50- 60 ಮಳೆ ಕಡಿಮೆ ಇರುವಾಗ ರಾಜ್ಯ ಸರಕಾರದ ಆದ್ಯತೆ ಏನು? ಇವರೇನಾದರೂ ಜಿಲ್ಲಾಧಿಕಾರಿಗಳಿಗೆ ಹಣ ಬಿಡುಗಡೆ ಮಾಡಿದ್ದಾರಾ ಎಂದು ಪ್ರಶ್ನಿಸಿದರು. ರೈತರಿಗೆ ಸ್ಪಂದಿಸುವ ನಿಟ್ಟಿನಲ್ಲಿ ಜಾನುವಾರುಗಳಿಗೆ ಸಂಬಂಧಿಸಿ ಅನುದಾನ ಬಿಡುಗಡೆ ಮಾಡಿದ್ದಾರಾ? ಬರಗಾಲದ ಮುನ್ಸೂಚನೆ ವಿಚಾರ ರಾತ್ರೋರಾತ್ರಿ ಜ್ಞಾನೋದಯ ಆಗಿದೆಯೇ? ಯಾಕೆ ಈ ರೀತಿ ಕಪಟ ನಾಟಕ ಆಡುತ್ತಿದ್ದೀರಿ? ಎಂದು ಕೇಳಿದರು. ಮುಖ್ಯಮಂತ್ರಿ ರೈತಪರವಾಗಿಲ್ಲದೇ ರಿಯಲ್ ಎಸ್ಟೇಟ್ ಪರ ಆದರೆ ರಾಜ್ಯದ ಹಣೆಬರಹ ಇದೇ ಆಗುತ್ತದೆ ಎಂದು ಆಕ್ಷೇಪಿಸಿದರು. ನಮ್ಮ ಜಲಾಶಯದಿಂದ ತಮಿಳುನಾಡಿಗೆ ನೀರು ಬಿಡುವ ದುಸ್ಸಾಹಸಕ್ಕೆ ಯಾಕೆ ಕೈ ಹಾಕಿದ್ದೀರಿ ಎಂದು ಪ್ರಶ್ನಿಸಿದರು.

ಮುಖ್ಯಮಂತ್ರಿಗಳು ಇದರ ಬಗ್ಗೆ ಗಂಭೀರವಾಗಿ ಚಿಂತಿಸಬೇಕು ಎಂದ ಅವರು, ರೈತರಿಗೆ ಕೊಡಬೇಕಾದ ಯೋಜನೆ, ಆಡಳಿತ ಸನ್ನದ್ಧತೆ ಕಡೆಗೆ ಗಮನಿಸದೇ ಮುಖ್ಯಮಂತ್ರಿಗಳು ಕೈಚೆಲ್ಲಿ ಕೂತರೆ ಹೇಗೆ ಎಂದು ಟೀಕಿಸಿದರು. ಎಸ್‍ಐಆರ್ ಇರುವ ಕಾರಣ ಆಗಸ್ಟ್ ಮಧ್ಯದಲ್ಲಿ ಮುಂಗಾರು ಅಧಿವೇಶನ ಮಾಡುವುದಾಗಿ ಹೇಳಿದ್ದಾರೆ. ಶಾಸಕರು ಮನೆ ಮನೆಗೆ ತೆರಳಿ ಎಸ್‍ಐಆರ್ ಮಾಡುತ್ತಾರಾ ಎಂದು ಪ್ರಶ್ನೆ ಹಾಕಿದರು.

ಕಾಂಗ್ರೆಸ್ ಪಕ್ಷದಲ್ಲಿ ರೇಟ್ ಫಿಕ್ಸ್ ಆಗಿದೆ. ಸಂಪುಟ ವಿಸ್ತರಣೆಗೆ ಡೇಟ್ ಫಿಕ್ಸ್ ಆಗುತ್ತಿಲ್ಲ ಎಂದು ತಿಳಿಸಿದರು. ಇದೇ ಕಾರಣಕ್ಕೆ ಅಧಿವೇಶನ ಮುಂದೂಡುತ್ತಿದ್ದಾರೆ ಎಂದು ಆರೋಪಿಸಿದರು. ಸಿದ್ದರಾಮಯ್ಯನವರ ಪೂರ್ಣ ಸಂಪುಟ ಇದ್ದರೂ ನೆರೆ ಬಂದಾಗ ರೈತರ ಸಂಕಷ್ಟಕ್ಕೆ ಸ್ಪಂದಿಸಿರಲಿಲ್ಲ ಎಂದು ದೂರಿದರು.

ಹಾನಗಲ್ ತಾಲ್ಲೂಕಿನ ನರೇಗಲ್‍ನಲ್ಲಿ ಹಾಲುಮತ ಸಮಾಜದ ಒಂದೇ ಕುಟುಂಬದ ಆರು ಜನರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಮತ್ತೊಂದೆಡೆ ಹಾಸನದ ರಟ್ಟೇಹಳ್ಳಿಯಲ್ಲಿ ಮರಾಠಾ ಸಮಾಜದ ಬಡ ಕುಟುಂಬದ ಶಿವಾಜಿ ರಾವ್ ಅವರನ್ನು ಹಾಡಹಗಲೇ ಒದ್ದು ಪ್ರಾಣ ತೆಗೆಯುವ ಕೆಲಸ ಆಗಿದೆ. ಚಿಕ್ಕಬಳ್ಳಾಪುರದಲ್ಲಿ ಲವ್ ಜಿಹಾದ್‍ಗೆ ಒಳಗಾಗಿ ಫಿಸಿಯೋಥೆರಪಿಸ್ಟ್ ಕೊಲೆಯಾಗಿದೆ. ಮುಖ್ಯಮಂತ್ರಿ ಡಿಕೆ ಸಾಫ್ಟ್ ಹಿಂದುತ್ವವಾದ, ಗೃಹಸಚಿವ ಪಿಕೆ ಮತ್ತು ಕೆಪಿಸಿಸಿ ಅಧ್ಯಕ್ಷ ಬಿಕೆ ಅವರ ಹಿಂದೂ ವಿರೋಧಿ ನೀತಿ- ಇವರ ಹೇಳಿಕೆಗಳು ಮತೀಯ ಶಕ್ತಿಗಳಿಗೆ ಧೈರ್ಯ ನೀಡುತ್ತಿದೆ ಎಂದು ಟೀಕಿಸಿದರು. ಕಾಂಗ್ರೆಸ್ ಸರಕಾರದ ಅಲ್ಪಸಂಖ್ಯಾತರ ಓಲೈಕೆಯೇ ಇದಕ್ಕೆ ಕಾರಣ ಎಂದು ಆಕ್ಷೇಪಿಸಿದರು.

ಮಸೀದಿಯಲ್ಲಿ ಕೂರಿಸಿ ಎಸ್‍ಐಆರ್ ಪ್ರಕ್ರಿಯೆ

ಎಸ್‍ಐಆರ್ ಅಡಿ ಬಿಎಲ್‍ಒಗಳ ದುರುಪಯೋಗ ಆಗುತ್ತಿದೆ. ಅಧಿಕಾರಿಗಳನ್ನು ಮಸೀದಿಯಲ್ಲಿ ಕೂರಿಸಿ ಎಸ್‍ಐಆರ್ ಪ್ರಕ್ರಿಯೆ ಪೂರ್ಣಗೊಳಿಸುತ್ತಿದೆ. ರಾಜ್ಯ ಸರಕಾರದಿಂದ ಹಿಂದೂಗಳ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ. ಸಾಗರದಲ್ಲಿ ಬಿಎಲ್‍ಒಗಳನ್ನು ಕಾಂಗ್ರೆಸ್ ಪರ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ದೂರಿದರು. ಮುಖ್ಯಮಂತ್ರಿಗಳು ಇದನ್ನು ಸರಿಪಡಿಸಬೇಕೆಂದು ಆಗ್ರಹಿಸಿದರು.

ಪ್ರಶ್ನೆಗೆ ಉತ್ತರಿಸಿದ ಅವರು, ಎಸ್‍ಐಆರ್ ವಿಚಾರದಲ್ಲಿ ಚಾಮರಾಜಪೇಟೆ ಮೊದಲಾದ ಕಡೆ ಆಗುತ್ತಿರುವ ಗೊಂದಲದ ಸಂಬಂಧ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ. ಇದನ್ನು ಚುನಾವಣಾ ಅಧಿಕಾರಿಗಳು ಸರಿಪಡಿಸಲಿ ಎಂದು ಒತ್ತಾಯಿಸಿದರು.

ಬಾಂಗ್ಲಾ ನಿವಾಸಿಗಳನ್ನು ಮತದಾರರ ಪಟ್ಟಿಗೆ ಸೇರಿಸುವ ಷಡ್ಯಂತ್ರ; ಕಾಂಗ್ರೆಸ್‌ ವಿರುದ್ಧ ಆರ್‌. ಅಶೋಕ್‌ ಆರೋಪ

ಕ್ಯಾಬಿನೆಟ್ ವಿಸ್ತರಿಸಿದರೆ ಈ ಸರಕಾರದ ಬುಡ ಅಲ್ಲಾಡುವ ವಾಸ್ತವಿಕ ಸತ್ಯ ಸಿಎಂಗೆ ಗೊತ್ತಿದೆ. ಹಾಗಾಗಿ ಎಸ್‍ಐಆರ್ ನೆಪ ಒಡ್ಡಿದ್ದಾರೆ. ರಾಹುಲ್ ಗಾಂಧಿಯವರು 12 ತಿಂಗಳಲ್ಲಿ 8 ತಿಂಗಳು ವಿದೇಶದಲ್ಲೇ ಇರುತ್ತಾರೆ. ಸ್ವದೇಶದಲ್ಲಿ ಯಾವಾಗ ಇರುತ್ತಾರೆ ಎಂದು ಪ್ರಶ್ನಿಸಿದರು. ಒಂದು ಮ್ಯಾನೇಜ್‍ಮೆಂಟ್ ಕೋಟಾ, ಇನ್ನೊಂದು ಪೇಮೆಂಟ್ ಕೋಟಾ ಇರುವುದಾಗಿ ಹಿಂದೆಯೂ ಹೇಳಿದ್ದೆ ಎಂದು ಪ್ರಶ್ನೆಗೆ ಉತ್ತರವಾಗಿ ಗಮನ ಸೆಳೆದರು.