ಹುಬ್ಬಳ್ಳಿ, ಜು.4: ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಅವರು ಹುಬ್ಬಳ್ಳಿಯ ತಮ್ಮ ನಿವಾಸದಲ್ಲಿ ಕುಟುಂಬ ಸಮೇತ ಭಾಗಿಯಾಗಿ ಅಗತ್ಯ ದಾಖಲೆ, ಮಾಹಿತಿ ಸಲ್ಲಿಸುವುದರೊಂದಿಗೆ ಪ್ರೇರಣೆಯಾದರು. ಶನಿವಾರ ಬೆಳಗ್ಗೆ ಸಚಿವರ ಹುಬ್ಬಳ್ಳಿ ನಿವಾಸಕ್ಕೆ ಆಗಮಿಸಿದ ಚುನಾವಣಾ ಆಯೋಗದಿಂದ ನಿಯೋಜಿತರಾಗಿದ್ದ ಬೂತ್ ಮಟ್ಟದ ಅಧಿಕಾರಿಗಳಿಗೆ (BLO) ಸಚಿವ ಪ್ರಲ್ಹಾದ್ ಜೋಶಿ ಮತ್ತವರ ಕುಟುಂಬದ ಸದಸ್ಯರು ಅಗತ್ಯ ದಾಖಲೆಗಳು ಹಾಗೂ ಮಾಹಿತಿಯನ್ನು ಸಲ್ಲಿಸಿ SIRಗೆ ಸಹಕರಿಸಿದರು.
ಈ ವೇಳೆ ಮಾತನಾಡಿದ ಸಚಿವರು, ರಾಜ್ಯಾದ್ಯಂತ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಅಂಗವಾಗಿ ಮನೆ-ಮನೆ ಸಮೀಕ್ಷೆ ನಡೆಯುತ್ತಿದೆ. ಸಾರ್ವಜನಿಕರು ತಮ್ಮ ಮನೆಗಳಿಗೆ ಬರುವ ಬೂತ್ ಮಟ್ಟದ ಅಧಿಕಾರಿಗಳಿಗೆ (BLO) ಅಗತ್ಯ ದಾಖಲೆ, ಮಾಹಿತಿ ಒದಗಿಸಿ ಸಂಪೂರ್ಣ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಪ್ರತಿಯೊಬ್ಬ ಮತದಾರರೂ ಅಗತ್ಯ ದಾಖಲೆ ಹಾಗೂ ಮಾಹಿತಿ ಒದಗಿಸುವ ಮೂಲಕ ಮತಪಟ್ಟಿಯಲ್ಲಿ ಹೆಸರು ಮತ್ತು ವಿವರಗಳನ್ನು ನಿಖರವಾಗಿ, ಸಮರ್ಪಕವಾಗಿ ದಾಖಲಾಗಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
SIR in Karnataka: ರಾಮನಗರ SIR ಪ್ರಕ್ರಿಯೆಯಲ್ಲಿ ಬೃಹತ್ ಅಕ್ರಮ; ಪ್ರಲ್ಹಾದ್ ಜೋಶಿ ಆರೋಪ
ದೇಶದ ಬಲಿಷ್ಠ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಪ್ರತಿ ನಾಗರಿಕರ ಸಹಭಾಗಿತ್ವ ಅತ್ಯಂತ ಮಹತ್ವದ್ದಾಗಿದೆ. ಹಾಗಾಗಿ ಸರ್ವರೂ ಈ SIR ಪ್ರಕ್ರಿಯೆಯಲ್ಲಿ ತಪ್ಪದೇ ಪಾಲ್ಗೊಳ್ಳಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕರೆ ನೀಡಿದರು.