ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

BY Vijayendra: ಆದಾಯ ಸಂಗ್ರಹದಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ: ಬಿ.ವೈ. ವಿಜಯೇಂದ್ರ

BY Vijayendra: ಬಜೆಟ್‍ನಲ್ಲಿ ಮುಖ್ಯಮಂತ್ರಿಗಳು ತನ್ನ ವೈಫಲ್ಯಗಳನ್ನು ಮುಚ್ಚಿ ಹಾಕಿಕೊಳ್ಳುವ ಸಲುವಾಗಿ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡಿ ಕೈ ತೊಳೆದುಕೊಳ್ಳುವ ಕುತಂತ್ರಕ್ಕೆ ಈ ಬಜೆಟ್ಟನ್ನು ಸೀಮಿತ ಮಾಡಿದ್ದಾರೆ ಎಂದು ಮೇಲ್ನೋಟಕ್ಕೆ ಗೊತ್ತಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಟೀಕಿಸಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ (ಸಂಗ್ರಹ ಚಿತ್ರ)

ಬೆಂಗಳೂರು, ಮಾ.12: ಮುಖ್ಯಮಂತ್ರಿಗಳು ಮಂಡಿಸಿದ 2026-27ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಜನರ ನಿರೀಕ್ಷೆಗಳನ್ನು ಹುಸಿಗೊಳಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ (BY Vijayendra) ತಿಳಿಸಿದ್ದಾರೆ. ವಿಧಾನಸಭೆಯಲ್ಲಿ ಗುರುವಾರ ಈ ಕುರಿತು ಮಾತನಾಡಿದ ಅವರು, ಈ ಬಜೆಟ್ ಗಮನಿಸಿದರೆ ಈ ಸರ್ಕಾರದ ಆರ್ಥಿಕ- ಬೌದ್ಧಿಕ ದಿವಾಳಿತನವು ಕೂಡ ಪ್ರದರ್ಶನಗೊಂಡಿದೆ ಎಂದು ಟೀಕಿಸಿದ್ದಾರೆ.

ಹಣಕಾಸು ಸಚಿವರೂ ಆದ ಮುಖ್ಯಮಂತ್ರಿಗಳು ತಮ್ಮ ರಾಜಕೀಯ ಸಂಧ್ಯಾಕಾಲದಲ್ಲಿ 17ನೇ ಬಜೆಟ್ ಮಂಡಿಸಿದ್ದಾರೆ. ಅವರಿಗೆ ಒಂದು ಸುವರ್ಣಾವಕಾಶ ಇತ್ತು. ತಮ್ಮ ರಾಜಕೀಯ ಜೀವನದ ಸುದೀರ್ಘ ಅನುಭವದ ಆಧಾರದ ಮೇಲೆ ರಾಜ್ಯದ ಸಂಕಷ್ಟಗಳಿಗೆ ನಾಡಿನ ಜನರ ಅಪೇಕ್ಷೆಗೆ ತಕ್ಕಂತೆ ಉತ್ತರ ಕಂಡುಕೊಳ್ಳುವ ಅವಕಾಶ ಇತ್ತು. ಆದರೆ, ಈ ಬಜೆಟ್ ನೋಡಿದಾಗ ಅಸಹಾಯಕರಾಗಿ ಕೈಚೆಲ್ಲಿದ್ದಾರೆಂಬ ಭಾವನೆ ರಾಜ್ಯದ ಜನರಲ್ಲಿ ಮೂಡಿದೆ ಎಂದು ಆರೋಪಿಸಿದರು.

ಒಟ್ಟಾರೆಯಾಗಿ ಬಜೆಟ್‍ನಲ್ಲಿ ಮುಖ್ಯಮಂತ್ರಿಗಳು ತನ್ನ ವೈಫಲ್ಯಗಳನ್ನು ಮುಚ್ಚಿ ಹಾಕಿಕೊಳ್ಳುವ ಸಲುವಾಗಿ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡಿ ಕೈ ತೊಳೆದುಕೊಳ್ಳುವ ಕುತಂತ್ರಕ್ಕೆ ಈ ಬಜೆಟ್ಟನ್ನು ಸೀಮಿತ ಮಾಡಿದ್ದಾರೆ ಎಂದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಆದಾಯ ಸಂಗ್ರಹದಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಅತಿ ಹೆಚ್ಚು ಸಾಲ ಮಾಡುವ ಮೂಲಕ ಈ ನಾಡಿನ ಜನರನ್ನು ಸಾಲದ ಸುಳಿಗೆ ಸಿಲುಕಿ ಹಾಕಿಸಿರುವುದು ಸುಳ್ಳಲ್ಲ ಎಂದು ದೂರಿದರು.

ದಿಢೀರ್ ಯುದ್ಧದಿಂದ ಅಡುಗೆ ಅನಿಲ ಸಮಸ್ಯೆ: ಸಿಲಿಂಡರ್ ಪೂರೈಕೆಗೆ ಕೇಂದ್ರದಿಂದ ಅಗತ್ಯ ಕ್ರಮ ಎಂದ ವಿಜಯೇಂದ್ರ

ಪದೇ ಪದೇ ಬೆಲೆ ಏರಿಕೆಯ ಬ್ರಹ್ಮಾಸ್ತ್ರ

ಸಾಲದ ಭಾರ ಒಂದು ಕಡೆಯಾದರೆ, ಅಸಲು, ಬಡ್ಡಿ ಕಟ್ಟುವುದೇ ರಾಜ್ಯಕ್ಕೆ ದೊಡ್ಡ ಹೊರೆ ಆಗಿದೆ. ವಿತ್ತೀಯ ಕೊರತೆ ಹೆಚ್ಚಾಗಿ ರಾಜ್ಯದ ಜನರ ಮೇಲೆ ಪದೇಪದೇ ಬೆಲೆ ಏರಿಕೆಯ ಬ್ರಹ್ಮಾಸ್ತ್ರವನ್ನು ರಾಜ್ಯ ಸರ್ಕಾರ ಪ್ರಯೋಗ ಮಾಡುತ್ತಿರುವುದು ಈ ನಾಡಿನ ದುರಂತ ಎಂದು ಬಿ.ವೈ. ವಿಜಯೇಂದ್ರ ಹೇಳಿದರು.

ಮುಖ್ಯಮಂತ್ರಿಗಳು ಬಜೆಟ್ ಅನ್ನು ಸುದೀರ್ಘವಾಗಿ ಓದುತ್ತಿರುವಾಗ ಆಡಳಿತ ಪಕ್ಷದ ಸದಸ್ಯರನ್ನು ಗಮನಿಸುತ್ತಿದ್ದೆ. ಆಡಳಿತ ಪಕ್ಷದ ಸದಸ್ಯರಿಗೂ ಈ ಬಜೆಟ್ ಬಗ್ಗೆ ಆಸಕ್ತಿ ಇರಲಿಲ್ಲ, ಅವರು ಅಸಹಾಯಕರಾಗಿ ಸದನದಿಂದ ಹೊರಹೋದ ಘಟನೆಯನ್ನೂ ನಾನು ಗಮನಿಸಿದ್ದೇನೆ ಎಂದು ತಿಳಿಸಿದರು.

ಈ ಬಜೆಟ್ ಹಸಿ ಸುಳ್ಳಿನಿಂದ ಕೂಡಿದೆ

ಈ ಬಜೆಟ್ ಹಸಿ ಸುಳ್ಳಿನಿಂದ ಕೂಡಿದೆ. ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುವುದರ ಜತೆಯಲ್ಲಿ ರಾಜ್ಯದ ರಸ್ತೆ, ಸೇತುವೆ, ಕಟ್ಟಡ ನಿರ್ಮಾಣಕ್ಕೂ ನಮ್ಮ ಸರ್ಕಾರ ಆದ್ಯತೆ ನೀಡಿದೆ ಎಂದಿದ್ದಾರೆ. ಹಾಗಿದ್ದರೆ, ಕಳೆದ 3 ವರ್ಷದಲ್ಲಿ ಈ ಸರ್ಕಾರ ಎಷ್ಟು ರಸ್ತೆಗಳನ್ನು ಮಾಡಿದೆ? ಎಷ್ಟು ಸೇತುವೆಗಳನ್ನು ಕಟ್ಟಿದೆ? ಎಷ್ಟು ಸರಕಾರಿ ಹುದ್ದೆಗಳನ್ನು ನೇಮಕ ಮಾಡಿದ್ದಾರೆ ಎಂದು ಪ್ರಶ್ನಿಸಿದರು. ಇವುಗಳನ್ನು ಎಲ್ಲೂ ಉಲ್ಲೇಖ ಮಾಡಿಲ್ಲ ಎಂದು ತಿಳಿಸಿದರು.

ಒಂದು ರೀತಿ ಕಟ್ಟುಕಥೆ, ಸುಳ್ಳಿನ ಅಂಶಗಳಿಂದ ಇದು ಕೂಡಿದೆ

ವಸತಿರಹಿತರಿಗೆ ಮನೆಗಳು, ನಿರುದ್ಯೋಗಿ ಯುವಕರಿಗೆ ಸ್ವಯಂ ಉದ್ಯೋಗಗಳನ್ನು ಕಲ್ಪಿಸಿಕೊಡಲು ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದೇವೆ ಎಂದು ಇನ್ನೊಂದು ಸುಳ್ಳು ಹೇಳುತ್ತಾರೆ. ಬಜೆಟ್‌ ಅನ್ನು ಸಂಪೂರ್ಣವಾಗಿ ನೋಡುತ್ತ ಹೋದರೆ ಒಂದು ರೀತಿ ಕಟ್ಟುಕಥೆ, ಸುಳ್ಳಿನ ಅಂಶಗಳಿಂದ ಇದು ಕೂಡಿದೆ ಎಂದು ಟೀಕಿಸಿದರು.

ಕರ್ನಾಟಕ ರಾಜ್ಯ ಕೇಂದ್ರ ಸರ್ಕಾರಕ್ಕೆ 100 ರೂ. ಕೊಟ್ಟರೆ ಕೇವಲ 15 ರೂಪಾಯಿ ಮಾತ್ರ ನಮ್ಮ ರಾಜ್ಯಕ್ಕೆ ಕೊಡುತ್ತಿದ್ದಾರೆ, ಅನ್ಯಾಯ ಮಾಡುತ್ತಿದ್ದಾರೆ ಎಂದು ವಿಶ್ಲೇಷಣೆ ನಡೆಯುತ್ತಿದೆ. ನಾನು ಈ ಸದನದ ಮೂಲಕ ಕೆಲವು ಅಂಕಿ ಅಂಶಗಳ ಮೂಲಕ ಇವತ್ತು ಬೆಳಕನ್ನು ಚೆಲ್ಲುವ ಪ್ರಯತ್ನ ಮಾಡುತ್ತೇನೆ. ಈ ಸರ್ಕಾರವು 4.3 ಲಕ್ಷ ಕೋಟಿಯನ್ನು ಕೇಂದ್ರ ಸರ್ಕಾರಕ್ಕೆ ಕಳಿಸಿಕೊಡುವುದಾಗಿ ಹೇಳುತ್ತಿದ್ದಾರೆ. ಆದಾಯ ತೆರಿಗೆ, ಜಿಎಸ್‍ಟಿ ಮತ್ತಿತರ ಮೂಲದಿಂದ ಇದು ಸಂಗ್ರಹ ಆಗುತ್ತಿದೆ. ಆದರೆ, ಇದರಲ್ಲಿ ನೇರ ತೆರಿಗೆ, ಪರೋಕ್ಷ ತೆರಿಗೆ ಎಲ್ಲವನ್ನೂ ಪರಿಗಣಿಸಲಾಗುತ್ತದೆ.

ಮಹಾರಾಷ್ಟ್ರದ ನಂತರದಲ್ಲಿ ಅತಿ ಹೆಚ್ಚು ತೆರಿಗೆ ಕೊಡುವ ರಾಜ್ಯ ನಮ್ಮದೆಂದು ಒಪ್ಪಿಕೊಳ್ಳುತ್ತೇನೆ. ಆದರೆ, ಇವತ್ತು ಪ್ರತಿಷ್ಠಿತ ಸಂಸ್ಥೆಗಳಾದ ಇನ್ಫೋಸಿಸ್, ವಿಪ್ರೋ ಮೊದಲಾದ ಸಂಸ್ಥೆಗಳಿರುವ ಬೆಂಗಳೂರು ಮಹಾನಗರ ಹೆಡ್ ಕ್ವಾರ್ಟರ್ಸ್ ಮಾತ್ರ. ಆದರೆ, ಈ ಕಂಪನಿಗಳು ಇಡೀ ದೇಶದಲ್ಲಿ ವ್ಯವಹಾರ ಮಾಡುತ್ತವೆ. ಅಂತಾರಾಷ್ಟ್ರೀಯ ಮಟ್ಟದಲ್ಲೂ ಮಾಡುತ್ತಾರೆ. ನಮ್ಮ ದೇಶದಲ್ಲಿ ವ್ಯವಹರಿಸುವಾಗ ದೇಶದ ಬೇರೆ ಬೇರೆ ರಾಜ್ಯಗಳಲ್ಲೂ ಗ್ರಾಹಕರು ಹೆಚ್ಚಾಗಿದ್ದಾರೆ. ಕಂಪನಿಗಳ ಹೆಡ್ ಕ್ವಾರ್ಟರ್ಸ್ ಇಲ್ಲಿದ್ದರೂ ದೇಶಕ್ಕೇ ಸೇವೆಗಳನ್ನು ಕೊಡುತ್ತಾರೆ. ನಾನಾ ರಾಜ್ಯದಲ್ಲಿ ಅವರಿಗೆ ಗ್ರಾಹಕರಿದ್ದಾರೆ. ಈ ಅಂಶವನ್ನು ಕೂಡ ಗಮನಿಸಬೇಕಿದೆ. ದೇಶದ ಎಲ್ಲ ರಾಜ್ಯಗಳು ಸೇವೆ ಪಡೆಯುವ ಸಂದರ್ಭದಲ್ಲಿ ಇಲ್ಲಿಂದಲೇ ಎಲ್ಲವೂ ಉತ್ಪತ್ತಿ ಆಗುವುದಿಲ್ಲ. ಹೆಡ್ ಕ್ವಾರ್ಟರ್ಸ್‍ನಲ್ಲಿ ಇರುವ ಕಾರಣಕ್ಕಾಗಿ ನಮ್ಮ ರಾಜ್ಯದಿಂದ ಆ ತೆರಿಗೆ ಮೂಲಕ ಹೋಗುವುದನ್ನು ನಾವು ಗಮನಿಸಬೇಕು ಎಂದು ಹೇಳಿದರು.

ನಮ್ಮ ತೆರಿಗೆ ನಮ್ಮ ಹಕ್ಕು ಮತ್ತು 100 ರೂ. ಕೊಟ್ಟರೆ ಕೇವಲ 15 ರೂಪಾಯಿ ಮಾತ್ರ ನಮ್ಮ ರಾಜ್ಯಕ್ಕೆ ಬರುತ್ತಿದೆ ಎಂದು ಚರ್ಚೆ ಮಾಡುತ್ತಿದ್ದೇವೆ. ರಕ್ಷಣಾ ಕ್ಷೇತ್ರದಲ್ಲಿ ಕೇಂದ್ರ ಸರ್ಕಾರ ಎಷ್ಟು ವ್ಯಯ ಮಾಡುತ್ತಿದೆ? ನಮ್ಮ ರಾಜ್ಯದಲ್ಲೂ ರಾಷ್ಟ್ರೀಯ ಹೆದ್ದಾರಿ, ರೈಲ್ವೆ ಕುರಿತ ಅಂಕಿ ಅಂಶಗಳು ಹಲವಾರು ಬಾರಿ ಸದನದಲ್ಲಿ ಚರ್ಚೆ ಆಗಿದೆ. 100ಕ್ಕೆ 15 ರೂ. ಎಂದಾಗ ಇವ್ಯಾವುದನ್ನೂ ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎಂದು ಹೇಳಿದರು.

ಒಕ್ಕೂಟದ ವ್ಯವಸ್ಥೆ ಬಗ್ಗೆ ಸಾಕಷ್ಟು ಬಾರಿ ಚರ್ಚೆ ಆಗಿದೆ. ಒಕ್ಕೂಟದ ವ್ಯವಸ್ಥೆ ಬಗ್ಗೆ ಚರ್ಚೆ ಆಗಬೇಕಾದರೆ, ಸಾಂವಿಧಾನಿಕವಾಗಿ ಈ ರಾಜ್ಯ ಸರ್ಕಾರವು ಅರ್ಧ ಸತ್ಯವನ್ನು ಮಾತ್ರ ಹೇಳುತ್ತಿದೆ ಎಂದು ವಿವರಿಸಿದರು. ಒಕ್ಕೂಟ ವ್ಯವಸ್ಥೆಯ ಅಡಿಯಲ್ಲಿ ಮರು ಹಂಚಿಕೆಯ ತತ್ವದ ಅಡಿಯಲ್ಲಿ ವಿನ್ಯಾಸಗೊಳಿಸಿದ್ದು ಪ್ರತಿಯೊಬ್ಬರಿಗೂ ಗೊತ್ತಿದೆ. ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು ಅತಿ ಹೆಚ್ಚು ಆದಾಯ ನೀಡುವ ರಾಜ್ಯಗಳಾಗಿದ್ದರೂ ಇಲ್ಲಿ ಬರುವ ಆದಾಯವನ್ನು ಕೇಂದ್ರ ಸರ್ಕಾರದ ಮೂಲಕ ಇತರ ರಾಜ್ಯಗಳು ಅತಿ ಹೆಚ್ಚು ಜನಸಂಖ್ಯೆ ಇರುವ- ಅತಿ ಹೆಚ್ಚು ಹಿಂದುಳಿದ ರಾಜ್ಯಗಳಿಗೆ ಇದರ ಹಣವನ್ನು ಸದ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಭಾರತ ಮುಂಚೂಣಿಯಲ್ಲಿ ಬರಲು ಎಲ್ಲ ರಾಜ್ಯಗಳು ಕೂಡ ಅಭಿವೃದ್ಧಿಯ ಪಥದಲ್ಲಿ ಮುಂದೆ ಸಾಗಬೇಕಿದೆ ಎಂದರು.

ರೈತರ ಸಬಲೀಕರಣಕ್ಕಾಗಿ ಕೇಂದ್ರ ಸರ್ಕಾರದಿಂದ ಪಿಎಂ ಕುಸುಮ್ 2.0 ಯೋಜನೆ

ಜಿಎಸ್‍ಟಿ ಸಂಗ್ರಹದಲ್ಲಿ ಈ ಸರ್ಕಾರದ ಸಾಧನೆ ಏನು? ನಮ್ಮ ರಾಜ್ಯದ ಆರ್ಥಿಕತೆಯ ಜಿಎಸ್‍ಟಿಯ ಶೇ. 60 ಭಾಗ ಸೇವಾ ಕ್ಷೇತ್ರ, ಕಾರ್ಪೊರೇಟ್ ಕಂಪೆನಿಗಳಿಂದ ಬರುತ್ತಿದೆ. ಇವರ ಸಾಧನೆ ಏನಿದೆ ಇದರಲ್ಲಿ? ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಕೇಳಿದರು.