ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಎಚ್ಎಂಟಿ ಜಾಗದ ವಿಚಾರದಲ್ಲಿ ಈಶ್ವರ ಖಂಡ್ರೆ-ಎಚ್.ಡಿ. ಕುಮಾರಸ್ವಾಮಿ ವಾಕ್ಸಮರ; ರಾಜ್ಯ ಸರ್ಕಾರಕ್ಕೆ ಹಕ್ಕಿಲ್ಲ ಎಂದ ಎಚ್‌ಡಿಕೆ

HD Kumaraswamy vs Eshwara Khandre: ಎಚ್ಎಂಟಿ ಜಾಗದ ಬಗ್ಗೆ ಯಾವುದೇ ಗೊಂದಲಗಳಿಲ್ಲ. ಅದಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳು ನಮ್ಮ ಬಳಿ ಇವೆ. ಯಾವುದೇ ಕಾರಣಕ್ಕೂ ಎಚ್‌ಎಂಟಿ ಭೂಮಿಯನ್ನು ಮುಟ್ಟಲು ಆಗುವುದಿಲ್ಲ. ನ್ಯಾಯಾಲಯದ ತಡೆಯಾಜ್ಞೆ ಕೂಡ ನೀಡಿದೆ. ಇಷ್ಟೆಲ್ಲ ಮಾತನಾಡುವ ಈಶ್ವರ್ ಖಂಡ್ರೆ ಅರಣ್ಯ ಸಚಿವರಾಗಿದ್ದಾಗ ಎರಡು ವರ್ಷಗಳಿಂದ ಎಲ್ಲೆಲ್ಲಿ ಭೂಮಿ ಉಳಿಸಿದ್ದಾರೆ? ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಎಚ್‌.ಡಿ. ಕುಮಾರಸ್ವಾಮಿ ಮತ್ತು ಈಶ್ವರ್‌ ಖಂಡ್ರೆ (ಸಂಗ್ರಹ ಚಿತ್ರ)

ಬೆಂಗಳೂರು, ಜು. 9: ಎಚ್ಎಂಟಿ ಜಾಗಕ್ಕೂ ಅರಣ್ಯ ಇಲಾಖೆಗೂ ಯಾವುದೇ ಸಂಬಂಧ ಇಲ್ಲ. ಆ ಜಮೀನನ ಮೇಲೆ ಅರಣ್ಯ ಇಲಾಖೆಗೆ ಯಾವುದೇ ರೀತಿಯ ಹಕ್ಕು ಇರುವುದಿಲ್ಲ. ಬೇಕಿದ್ದರೆ ಈ ಬಗ್ಗೆ ಮಾತನಾಡುತ್ತಿರುವವರು ದಾಖಲೆಗಳನ್ನು ಪರಿಶೀಲನೆ ಮಾಡಲಿ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಹೇಳಿದರು. ಎಚ್ಎಂಟಿ ಭೂಮಿ ವಶಕ್ಕೆ ಸಂಬಂಧಿಸಿ ಅರಣ್ಯಾಧಿಕಾರಿಯೊಬ್ಬರು ನೀಡಿರುವ ನೋಟಿಸ್ ವಿಚಾರದಲ್ಲಿ ಸಚಿವ ಈಶ್ವರ ಖಂಡ್ರೆ ಅವರ ಹೇಳಿಕೆಯ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಕೇಂದ್ರ ಸಚಿವರು, ಎಚ್ಎಂಟಿ ಭೂಮಿಯ ಮೇಲೆ ಹಿಂದಿನ ಅರಣ್ಯ ಸಚಿವರಿಗೆ ಯಾಕೋ ವಿಪರೀತ ಆಸಕ್ತಿ ಇದೆ. ಯಾವ ಕಾರಣಕ್ಕೆ ಅವರು ಈ ಪರಿಯ ಆಸಕ್ತಿ ತೋರುತ್ತಿದ್ದಾರೆ ಎನ್ನುವುದು ನನಗೆ ಅರ್ಥವಾಗುತ್ತಿಲ್ಲ ಎಂದು ತಿಳಿಸಿದರು.

ಬೆಂಗಳೂರಿನಲ್ಲಿ ಗುರುವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಎಚ್‌ಡಿಕೆ, ಎಚ್‌ಎಂಟಿ ಭೂಮಿಗೆ ಸಂಬಂಧಿಸಿದಂತೆ ಹಿಂದಿನ ಅರಣ್ಯ ಸಚಿವ ಈಶ್ವರ್ ಖಂಡ್ರೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

1960ರಲ್ಲೇ ಕಾನೂನುಬದ್ಧವಾಗಿ 'ಡೀಫಾರೆಸ್ಟ್' ಮಾಡಿ, ಡಿಎಫ್‌ಒ ಅವರಿಂದ ನಿರಪೇಕ್ಷಣ ಪತ್ರ (NOC) ಪಡೆದು ಎಚ್ಎಂಟಿಗೆ ನೀಡಲಾದ ಭೂಮಿಯನ್ನು ʼಒತ್ತುವರಿʼ ಎಂದು ಬಿಂಬಿಸುತ್ತಿರುವ ಈಶ್ವರ್ ಖಂಡ್ರೆ ಅವರ ವರ್ತನೆ ಸರಿಯಲ್ಲ ಎಂದ ಅವರು, 1960ರ ನವೆಂಬರ್ 25ರ ಎಚ್‌ಎಂಟಿ ಸಂಸ್ಥೆಯ ಒಪ್ಪಂದ ಕುರಿತಂತೆ ಅಧಿಕೃತ ಸರ್ಕಾರಿ ಆದೇಶದ ದಾಖಲೆಗಳನ್ನೇ ಬಿಡುಗಡೆ ಮಾಡಿದ್ದಾರೆ. ಆರೋಪ ಮಾಡುವ ಮುನ್ನ ದಾಖಲೆ ಕೊಟ್ಟು ಮಾತನಾಡಿ ಎಂದು ಗುಡುಗಿದರು.

ಎಚ್‌ಎಂಟಿ ಭೂಮಿಯ ಬಗ್ಗೆ ಇಷ್ಟೆಲ್ಲ ಮಾತನಾಡುವ ಖಂಡ್ರೆ, ಎಚ್‌ಎಂಟಿ ಜಮೀನಿನ ಪಕ್ಕದಲ್ಲಿಯೇ ಜಕ್ಕೂರು ವಿಮಾನ ಚಾಲನಾ ತರಬೇತಿ ಕೇಂದ್ರವಿದೆ. ಅದರ ಎದುರಿಗೆ ಇರುವ ಜಕ್ಕೂರು ಪ್ಲಾಂಟೇಶನ್‌ನಲ್ಲಿ ಅನೇಕರು ಮನೆಗಳನ್ನು ಕಟ್ಟಿದ್ದಾರೆ. ಅಲ್ಲಿ ಸಾಕಷ್ಟು ಅರಣ್ಯ ಭೂಮಿ ಗುಳುಂ ಆಗಿದೆ. 444 ಎಕರೆ ಭೂಮಿಯಲ್ಲಿ ಜೈವಿಕ ಉದ್ಯಾನ ಮಾಡುವುದು ನಮ್ಮ ಗುರಿ ಎಂದು ಹೇಳಿದ್ದೀರಿ. ಅರಮನೆ ಜಾಗವನ್ನು ವಶಕ್ಕೆ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದೆ ಹೇಳಿದ್ದು. ಅಲ್ಲಿ ನೋಡಿದರೆ ಉದ್ದಕ್ಕೂ ಕಲ್ಯಾಣ ಮಂಟಪಗಳು ತಲೆ ಎತ್ತಿ ನಿಂತಿವೆ. ಆ ಕಲ್ಯಾಣ ಮಂಟಪಗಳಿಗೆ ಯಾವ ಆಧಾರದ ಮೇಲೆ ಅನುಮತಿ ಕೊಟ್ಟಿದ್ದೀರಿ? ಜೈವಿಕ ಉದ್ಯಾನವನ ಮಾಡುವುದು ಅಂದರೆ ಇದೇನಾ ಖಂಡ್ರೆ ಅವರೇ? ಇಂದು ಕೇಂದ್ರ ಸಚಿವರು ಕೇಳಿದರು.

ಕಾನೂನುಬಾಹಿರ ಆದೇಶ

ಎಚ್‌ಎಂಟಿ ಜಾಗದ ಬಗ್ಗೆ ರಾಜ್ಯ ಸರ್ಕಾರದ ನಡುವೆ ವ್ಯಾಜ್ಯವಿದೆ. ಅದು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಅದರ ಜತೆಗೆ ರಾಷ್ಟ್ರದ ಹೆಮ್ಮೆಯಾಗಿದ್ದ ಎಚ್ಎಂಟಿ ಪುನಶ್ಚೇತನಕ್ಕೆ ಪ್ಯಾಕೇಜ್ ಘೋಷಣೆ ಆಗುವ ಪ್ರಕ್ರಿಯೆಗಳು ಅಂತಿಮ ಹಂತದಲ್ಲಿದೆ. ಇಂತಹ ಸಂದರ್ಭದಲ್ಲಿ ರಾಜ್ಯ ಅರಣ್ಯ ಇಲಾಖೆ ಭೂಮಿ ತೆರವು ಮಾಡಿ ಎಂದು ಆದೇಶ ನೀಡಿದೆ. ಸರ್ಕಾರಿ ಸೇವೆಯಿಂದ ನಿವೃತ್ತಿ ಆಗುವುದಕ್ಕೆ ಕೇವಲ 15 ದಿನಗಳ ಹಿಂದೆ ಭೂಮಿ ಬಿಟ್ಟುಕೊಡುವಂತೆ ಕಾನೂನುಬಾಹಿರವಾಗಿ ಆದೇಶ ಹೊರಡಿಸಿದ್ದಾರೆ ಎಂದು ಕೇಂದ್ರ ಸಚಿವರು ಆಕ್ರೋಶ ವ್ಯಕ್ತಪಡಿಸಿದರು.

ಹಾಗೆಯೇ ರಾಜ್ಯದಲ್ಲಿ ಉದ್ಯೋಗ ಸೃಷ್ಟಿಸುವ ಕುದುರೆಮುಖ ಕಬ್ಬಿಣ ಮತ್ತು ಅದಿರು ಸಂಸ್ಥೆ (KIOCL) ಸಂಸ್ಥೆಯಿಂದ ₹546 ಕೋಟಿಗೂ ಅಧಿಕ ಹಣ ಪಡೆದಿರುವ ರಾಜ್ಯ ಸರ್ಕಾರವು, ಕಳೆದ 2 ವರ್ಷಗಳಿಂದ ಅದಿರು ತೆಗೆಯಲು ಅನುಮತಿ ನೀಡದೆ ಸತಾಯಿಸುತ್ತಿರುವುದು ಯಾಕೆ? ಸಾವಿರಾರು ಕನ್ನಡಿಗರ ಉದ್ಯೋಗ ಕಸಿಯುವುದೇ ನಿಮ್ಮ ಸಾಧನೆಯೇ? ಈ ಕಂಪನಿ ಆರಂಭ ಆದಾಗಿನಿಂದ ಸಾವಿರಾರು ಕೋಟಿ ಹಣವನ್ನು ರಾಜ್ಯದ ಖಜಾನೆಗೆ ತುಂಬಿಸಿದೆ. ಅಲ್ಲದೆ ಸಾವಿರಾರು ಕುಟುಂಬಗಳಿಗೆ ಜೀವನೋಪಾಯ ಕಲ್ಪಿಸಿದೆ. ಇಂಥ ಸಂಸ್ಥೆಯ ಕತ್ತು ಕುಯ್ಯಲು ರಾಜ್ಯ ಸರ್ಕಾರ ಹೊರಟಿದೆ ಎಂದು ಎಚ್‌ಡಿಕೆ ಆರೋಪಿಸಿದರು.

ಈಶ್ವರ ಖಂಡ್ರೆ ಎಷ್ಟು ಅರಣ್ಯ ಭೂಮಿಯನ್ನು ಉಳಿಸಿದ್ದಾರೆ?

ಎಚ್ಎಂಟಿ ಜಾಗದ ಬಗ್ಗೆ ಯಾವುದೇ ಗೊಂದಲಗಳಿಲ್ಲ. ಅದಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳು ನಮ್ಮ ಬಳಿ ಇವೆ. ಯಾವುದೇ ಕಾರಣಕ್ಕೂ ಎಚ್‌ಎಂಟಿ ಭೂಮಿಯನ್ನು ಮುಟ್ಟಲು ಆಗುವುದಿಲ್ಲ. ನ್ಯಾಯಾಲಯದ ತಡೆಯಾಜ್ಞೆ ಕೂಡ ನೀಡಿದೆ. ಇಷ್ಟೆಲ್ಲಾ ಮಾತನಾಡುವ ಈಶ್ವರ್ ಖಂಡ್ರೆ ಅವರು ಅರಣ್ಯ ಸಚಿವರಾಗಿದ್ದಾಗ ಎರಡು ವರ್ಷಗಳಿಂದ ಎಲ್ಲೆಲ್ಲಿ ಭೂಮಿ ಉಳಿಸಿದ್ದಾರೆ? ದೊಡ್ಡ ಮಟ್ಟದಲ್ಲಿ ಅರಣ್ಯ ಭೂಮಿಯನ್ನು ಲೂಟಿ ಮಾಡಿದ್ದಾರೆ. ಅದನ್ನೆಲ್ಲಾ ವಾಪಸ್ ಪಡೆಯುವುದು ಯಾವಾಗ ಎಂದು ಸ್ವಲ್ಪ ಹೇಳುವಿರಾ ಖಂಡ್ರೆ ಅವರೇ? ಎಂದು ಎಚ್‌.ಡಿ. ಕುಮಾರಸ್ವಾಮಿ ಪ್ರಶ್ನಿಸಿದರು.

ಒಕ್ಕೂಟ ವ್ಯವಸ್ಥೆ ಬಗ್ಗೆ ಕಿಂಚಿತ್ತೂ ಪರಿಜ್ಞಾನ ಇಲ್ಲದ ಇವರು ಕೇವಲ ಎಚ್‌ಎಂಟಿ ಮತ್ತು ಕುದುರೆಮುಖ ಬಗ್ಗೆ ಮಾತ್ರ ಯಾಕೆ ಮಾತನಾಡುತ್ತಿದ್ದಾರೆ? ಬೇರೆಯವರಿಗೆ ಕೊಟ್ಟ ಜಮೀನನ್ನು ವಾಪಸ್ ಪಡೆಯುವ ಕೆಲಸವನ್ನು ಮೊದಲು ರಾಜ್ಯ ಸರ್ಕಾರ ಮಾಡಲಿ ಎಂದು ಸವಾಲು ಹಾಕಿದರು.

ಪದೇ ಪದೆ ಈಗಿನ ಪಂಚಾಯತ್ ರಾಜ್ ಸಚಿವರು ನನಗೆ ಸಲಹೆ ಕೊಡುತ್ತಿದ್ದಾರೆ. ಅವರು ಸಲಹೆ ಕೊಡುತ್ತಾರೆ. ಆದರೆ, ಎಚ್ಎಂಟಿ ಉಳಿಸಲು ನನಗೆ ಸಹಕಾರ ಕೊಡಲಿಲ್ಲ. ಆದರೆ ಮಾಧ್ಯಮಗಳ ಮೂಲಕ ಪುಕ್ಕಟೆ ಸಲಹೆಗಳನ್ನು ಕೊಡುತ್ತಿದ್ದಾರೆ. ಉಕ್ಕಿನ ಕಾರ್ಖಾನೆ ಪುನಶ್ಚೇತನ ಮಾಡಲು ಹೇಳಿದ್ದಾರೆ. ರಾಜ್ಯ, ದೇಶಕ್ಕೆ ಕುಮಾರಸ್ವಾಮಿ ಕೊಡುಗೆ ಏನು ಎಂದು ಕೇಳಿದ್ದಾರೆ. ನನ್ನ ಪ್ರವಾಸದ ವೇಳಾಪಟ್ಟಿ, ದೆಹಲಿಯಲ್ಲಿ ನಾನು ಮಾಡಿರುವ ಸಭೆಗಳ ಬಗ್ಗೆ ಮಾಹಿತಿ ಪಡೆದುಕೊಂಡರೆ ಎಚ್ಎಂಟಿ ಮತ್ತು ಭದ್ರಾವತಿ ಉಕ್ಕು ಕಾರ್ಖಾನೆ ಪುನಶ್ಚೇನಕ್ಕೆ ನಾನು ಮಾಡಿರುವ ಪ್ರಯತ್ನಗಳು ಏನೇನು ಎಂಬುದು ಅರ್ಥವಾಗುತ್ತದೆ. ಮಾತೆತ್ತಿದರೆ ಎಚ್ಎಂಟಿ ಕಾರ್ಖಾನೆ ಬಗ್ಗೆ ಮಾತನಾಡುತ್ತಾರೆ. ಅದು ಕನ್ನಡಿಗರ ಆಸ್ತಿ ಎನ್ನುತ್ತಾರೆ. ಅದು ನನ್ನ ಆಸ್ತಿಯೂ ಅಲ್ಲ. ಖಂಡ್ರೆ ಆಸ್ತಿಯೂ ಇಲ್ಲ. ಅದು ಕನ್ನಡಿಗರ ಆಸ್ತಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಅದೇ ಕನ್ನಡಿಗರ ಆಸ್ತಿಯಲ್ಲಿ ಸುಮಾರು 175 ಎಕರೆ ನುಂಗಿದ್ದಾರೆ. ಅದನ್ನು ವಾಪಸ್ ಪಡೆಯೋದಕ್ಕೆ ಮೂರು ವರ್ಷ ಅರಣ್ಯ ಸಚಿವರಾಗಿ ನೀವು ಮಾಡಿದ ಕೆಲಸವೇನು ಖಂಡ್ರೆ ಅವರೇ? ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ತೀಕ್ಷ್ಣವಾಗಿ ಪ್ರಶ್ನಿಸಿದರು.

ಈಶ್ವರ ಖಂಡ್ರೆ ಅವರೇ, ನಿಮ್ಮಿಂದ ನಾನು ಕಲಿಯಬೇಕಿಲ್ಲ. ಎಚ್ಎಂಟಿಯ ಜಾಗದಲ್ಲಿ ದೊಡ್ಡ ದೊಡ್ಡ ಕಟ್ಟಡಗಳು ಅಪಾರ್ಟ್ಮೆಂಟ್‌ಗಳು ತಲೆಯೆತ್ತಿ ನಿಂತಿವೆ. ಅಪಾರ್ಟ್ಮೆಂಟ್‌ಗಳಲ್ಲಿ ಯಾರು ಯಾರು ವಾಸ ಮಾಡುತ್ತಿದ್ದಾರೆ ಎನ್ನುವುದು ಗೊತ್ತಿದೆ. ಇದರ ಬಗ್ಗೆ ಮೂರು ವರ್ಷಗಳಲ್ಲಿ ಏನೇನು ಪರಿಶೀಲನೆ ಮಾಡಿದ್ದೀರಿ ಎಂದು ಎಚ್‌.ಡಿ. ಕುಮಾರಸ್ವಾಮಿ ಕೇಳಿದರು.‌

ಈ ಕಾರ್ಖಾನೆಯನ್ನು ಉಳಿಸಲು ನಾನು ಎಷ್ಟೆಲ್ಲ ಪ್ರಯತ್ನ ಮಾಡಿದ್ದೇನೆ ಎನ್ನುವುದು ನನಗೇ ಗೊತ್ತು. ಪ್ರಧಾನಿಯ ಮನವೊಲಿಕೆ ಮಾಡಿ ಪುನಶ್ಚೇತನಕ್ಕಾಗಿ ಕೆಲಸ ಮಾಡುತ್ತಿದ್ದೇನೆ. ರಾಜ್ಯಕ್ಕೆ ಒಳ್ಳೆಯದು ಮಾಡುತ್ತಿರುವ ನನಗೆ ಬೆಂಬಲ ಕೊಡುವುದು ಬಿಟ್ಟು, ಈ ರೀತಿ ಬೀದಿಯಲ್ಲಿ ಟೀಕೆ ಟಿಪ್ಪಣಿ ಮಾಡಿಕೊಂಡು ಅಡ್ಡಿ ಮಾಡುವುದು ಸರಿಯೇ? ಎಂದು ಕೇಂದ್ರ ಸಚಿವರು ಕೇಳಿದರು.

ಸ್ಥಳಕ್ಕೆ ಬನ್ನಿ ಖಂಡ್ರೆ

ಎಚ್ಎಂಟಿ ಜಾಗದಲ್ಲಿ 280 ಎಕರೆ ನೆಡುತೋಪು ಇದೆ ಎಂದು ಖಂಡ್ರೆ ಹೇಳಿದ್ದಾರೆ. ಬನ್ನಿ, ನೆಡುತೋಪು ಎಲ್ಲಿದೆ ಎಂದು ಹೋಗಿ ನೋಡೋಣ. ರಾಜ್ಯದ ಎಲ್ಲ ಮಾಧ್ಯಮಗಳನ್ನು ಕರೆದುಕೊಂಡು ಅವರ ಸಮಕ್ಷಮದಲ್ಲಿಯೇ ವೀಕ್ಷಣೆ ಮಾಡೋಣ. ಅಲ್ಲಿ ಏನಾದರೂ ಎಚ್ಎಂಟಿ ದುರ್ಬಳಕೆ ಮಾಡುತ್ತಿದ್ದೀಯಾ ಅಥವಾ ಬೇರೆ ಪಟ್ಟಭದ್ರರು ಅಲ್ಲಿನ ಜಾಗವನ್ನು ಕಬ್ಬಳಿಸಿದ್ದಾರಾ? ಎನ್ನುವುದು ತಿಳಿಯುತ್ತದೆ. ಕಬಳಿಕೆಯಲ್ಲಿ ಯಾರ ಯಾರ ಪಾಲು ಎಷ್ಟು ಇದೆ ಎನ್ನುವುದು ಆಗ ಬಯಲಿಗೆ ಬರುತ್ತದೆ. ಈಗ ರಾಜ್ಯದಲ್ಲಿ ಈಶ್ವರ ಖಂಡ್ರೆ ಅವರ ಪಕ್ಷದ್ದೇ ಸರ್ಕಾರ ಇದೆಯಲ್ಲ, ತನಿಖೆ ಮಾಡಲಿ. ನಮಗೇನು ಆಕ್ಷೇಪ ಇಲ್ಲ. 130 ಎಕರೆ ಪರಭಾರೆ ಮಾಡಿದ್ದೀರಲ್ಲ, ಅದರಿಂದ ಯಾವ ಯಾವ ಕೈ ತನ್ನ ಚಳಕವನ್ನು ತೋರಿಸಿದೆ ಎಂಬುದು ಅಲ್ಲಿಯೇ ಆಚೆಗೆ ಬರುತ್ತದೆ. ಬನ್ನಿ ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡೋಣ ಎಂದು ಖಂಡ್ರೆ ಅವರಿಗೆ ಸವಾಲು ಹಾಕಿದರು.

ಎಚ್ಎಂಟಿ ಒಟ್ಟು ಜಾಗದಲ್ಲಿ ಸ್ವಲ್ಪ ಜಾಗವನ್ನು ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋಗೆ ಕೊಡಲಾಗಿದೆ. ರಾಷ್ಟ್ರಕ್ಕೆ ದೊಡ್ಡ ಪ್ರಮಾಣದಲ್ಲಿ ಕೊಡುಗೆ ನೀಡುತ್ತಿರುವ ಇಸ್ರೋಗೆ ಜಾಗ ನೀಡಿರುವುದರಲ್ಲಿ ಅರ್ಥವಿದೆ. ರಾಷ್ಟ್ರಕ್ಕೆ ಒಳ್ಳೆಯದಾಗುವ ರೀತಿಯಲ್ಲಿ ಏನೇ ಕಾರ್ಯಕ್ರಮ ಇದ್ದರೂ ನಾನು ಸ್ವಾಗತಿಸುತ್ತೇನೆ. ಆದರೆ ಸರ್ಕಾರವೇ ರಿಯಲ್ ಎಸ್ಟೇಟ್ ಮಾಡಲು ಬಂದರೆ ಸಹಿಸುವ ಪ್ರಶ್ನೆಯೇ ಇಲ್ಲ ಎಂದು ಸಚಿವ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ಬೆಂಗಳೂರು ನಗರಕ್ಕೆ 1.5 ಲಕ್ಷ ಕೋಟಿ ರುಪಾಯಿ ಎಲ್ಲಿಂದ ಬರುತ್ತೆ?

ಬೆಂಗಳೂರು ಅಭಿವೃದ್ಧಿಗೆ ₹1.5 ಲಕ್ಷ ಕೋಟಿ ಹಂಚಿಕೆ ಮಾಡುತ್ತೇವೆ ಎಂದು ಸಿಎಂ ಡಿಕೆಶಿ ಘೋಷಣೆ ಮಾಡಿದ್ದಾರೆ. ಆದರೆ, ಈ ಸರ್ಕಾರದಲ್ಲಿ ಹಣ ಎಲ್ಲಿದೆ? ಯಾರ ತಲೆ ಮೇಲೆ ಸಾಲ ಹೇರುತ್ತೀರಿ? ಜನರ ಮೇಲೆ ಸಾಲದ ಹೊರೆ ಹಾಕಿ ಬೆಂಗಳೂರು ಉದ್ದಾರ ಮಾಡುತ್ತೀರಾ? 15 ಲಕ್ಷ ಸಸಿ ನೆಟ್ಟು ಗಿನ್ನೆಸ್ ದಾಖಲೆ ಮಾಡಿದ್ದೇವೆ ಎಂದು ಹೇಳುತ್ತಿದ್ದಾರೆ. 15 ಲಕ್ಷ ಸಸಿ ನೆಟ್ಟು ಚೊಂಬಿನಲ್ಲಿ ನೀರು ಬಿಡುತ್ತಿದ್ದಾರೆ. ಗಿನ್ನೆಸ್ ದಾಖಲೆ ಮಾಡುವುದಕ್ಕೆ ಭತ್ತ ನಾಟಿ ಮಾಡುವವರನ್ನು ಕರೆದುಕೊಂಡು ಬಂದು ಸಸಿಗಳನ್ನು ನೆಡಿಸಿದ್ದಾರೆ ಎಂದು ಕೇಂದ್ರ ಸಚಿವರು ಲೇವಡಿ ಮಾಡಿದರು.

ರಾಜ್ಯ ರಾಜಕಾರಣದಲ್ಲಿಯೇ ಇದ್ದೇನೆ

ನಾನು ನಮ್ಮ ಪಕ್ಷದ ರಾಜ್ಯಾಧ್ಯಕ್ಷ. ಹೀಗಾಗಿ ಪಕ್ಷದ ಸಂಘಟನೆಯ ಜವಾಬ್ದಾರಿ ನನಗಿದೆ. ರಾಜ್ಯಕ್ಕೆ ವಾಪಸ್ ಬಂದೇ ಬರುತ್ತೇನೆ. ಆದರೆ ಈಗಲೇ ಅಲ್ಲ ಎಂದ ಅವರು; ನಾನು ರಾಜ್ಯಕ್ಕೆ ವಾಪಸ್ ಬರುತ್ತೇನೆ ಎಂದರೆ ಅದು ಈಗಲೇ ಎಂದಲ್ಲ. ಸದ್ಯಕ್ಕೆ ನಾನು ಕೇಂದ್ರ ಸಚಿವನಾಗಿದ್ದೇನೆ, ಇನ್ನೂ ಮೂರು ವರ್ಷ ಸಂಸದನಾಗಿ ಅಧಿಕಾರಾವಧಿ ಇದೆ. ಹಾಗಾಗಿ ಇವತ್ತೇ, ನಾಳೆ ದಿನವೇ ಬರುತ್ತೇನೆ ಎಂದಲ್ಲ. ಕೇಂದ್ರದಲ್ಲಿ ನನಗೆ ಜವಾಬ್ದಾರಿ ನೀಡಲಾಗಿದೆ, ಅದನ್ನು ನಿಭಾಯಿಸುತ್ತಲೇ ರಾಜ್ಯದಲ್ಲಿ ಪಕ್ಷ ಸಂಘಟನೆಯನ್ನೂ ಮಾಡುತ್ತೇನೆ. ಕೇಂದ್ರ ಮತ್ತು ರಾಜ್ಯ ಎರಡೂ ಕಡೆಗಳಲ್ಲಿ ನಾನು ಸಕ್ರಿಯವಾಗಿ ಕೆಲಸ ಮಾಡುತ್ತೇನೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮಧುಸೂದನ್ ನಾಯಕ್ ಸಮೀಕ್ಷಾ ವರದಿ ಅಧಿವೇಶನದಲ್ಲಿ ಮಂಡಿಸಿ: ವಿ. ಸುನಿಲ್ ಕುಮಾರ್ ಆಗ್ರಹ

ಹಿರಿಯೂರು ಉಪ ಚುನಾವಣೆಗೆ ಜೆಡಿಎಸ್ ಸಿದ್ಧತೆ

ಹಿರಿಯೂರು ವಿಧಾನಸಭೆ ಕ್ಷೇತ್ರದ ಉಪ ಚುನಾವಣೆ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಹಿರಿಯೂರು ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು ಎಂದು ನಮ್ಮ ಪಕ್ಷದಲ್ಲಿ ಒತ್ತಡ ಇದೆ. ಈ ಬಗ್ಗೆ ಬಿಜೆಪಿ ಉನ್ನತ ನಾಯಕರ ಜತೆ ಚರ್ಚೆ ನಡೆಸಿದ್ದೇನೆ. ಹಿರಿಯೂರು ಕ್ಷೇತ್ರದ ಮುಖಂಡರ ಜತೆ ಎರಡು ಮೂರು ಸಭೆಗಳನ್ನು ನಡೆಸಿದ್ದೇನೆ. ಸಮಯ ಇದೆ, ನೋಡೋಣ ಎಂದರು.

ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಕೋರ್ ಕಮಿಟಿ ಅಧ್ಯಕ್ಷ ಕೃಷ್ಣಾರೆಡ್ಡಿ, ಶಾಸಕ ಎಂ.ಟಿ. ಕೃಷ್ಣಪ್ಪ, ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ರಶ್ಮಿ ರಾಮೇಗೌಡ, ಮಾಜಿ ಶಾಸಕ ಚೌಡರೆಡ್ಡಿ ತೂಪಲ್ಲಿ, ಮುಖಂಡ ಶಾಂತಕುಮಾರ್ ಹಾಗೂ ಉಪಸ್ಥಿತರಿದ್ದರು.