ಬೆಂಗಳೂರು, ಆ.26: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಲೂಟಿ ಮಾಡಿದ ಹಗರಣದ ಪ್ರಮುಖ ಆರೋಪಿ ಸಚಿವ ನಾಗೇಂದ್ರ ಅವರು ತನಿಖೆಯ ಬಳಿಕ ನಿರಪರಾಧಿ ಎಂದು ಸಾಬೀತಾದರೆ ಅವರನ್ನು ಮುಖ್ಯಮಂತ್ರಿಯಾಗಿ ಮಾಡಿಕೊಳ್ಳಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ (BY Vijayendra) ಸವಾಲು ಹಾಕಿದ್ದಾರೆ. ಮಲ್ಲೇಶ್ವರದ ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಬುಧವಾರ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು.
ಇ.ಡಿ. ಚಾರ್ಜ್‍ಶೀಟಿನಲ್ಲೂ ಅವರ ಹೆಸರು ಉಲ್ಲೇಖವಾಗಿದೆ. ಶಿವಮೊಗ್ಗದಲ್ಲಿ ಪ್ರಾಮಾಣಿಕ ಅಧಿಕಾರಿ, ಬೋವಿ ಸಮಾಜದ ಚಂದ್ರಶೇಖರ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಡೆತ್ ನೋಟಿನಲ್ಲೂ ಅಂದಿನ ಸಚಿವ ನಾಗೇಂದ್ರರ ಮೌಖಿಕ ಆದೇಶದ ಮೇರೆಗೆ ಹಣವನ್ನು ತೆಲಂಗಾಣ ರಾಜ್ಯಕ್ಕೆ ವರ್ಗಾಯಿಸಿದ್ದಾಗಿ ತಿಳಿಸಿದ್ದರು ಎಂದು ಆರೋಪಿಸಿದರು.
ಬಿಜೆಪಿ ಎತ್ತಿದ ಪ್ರಶ್ನೆ ಗಂಭೀರವಾಗಿದೆ
ಬಿಜೆಪಿ ಎತ್ತಿದ ಪ್ರಶ್ನೆ ಗಂಭೀರವಾಗಿದೆ. ದಲಿತರ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಕಾಂಗ್ರೆಸ್ಸಿನವರು ಕೊಳ್ಳೆ ಹೊಡೆದಿದ್ದಾರೆ. ಯಾವುದೇ ಕಾರಣಕ್ಕೂ ಇಂಥ ಭ್ರಷ್ಟರನ್ನು ಮುಂದುವರೆಸಬಾರದು ಎಂದು ಆಗ್ರಹಿಸಿದ ಅವರು, ಸಚಿವ ಸ್ಥಾನದಿಂದ ತಕ್ಷಣ ಅವರನ್ನು ಕೈಬಿಡಿ ಎಂದು ಒತ್ತಾಯಿಸಿದರು.
ಅಧಿವೇಶನ ಆರಂಭಕ್ಕೂ ಮೊದಲೇ ಇದನ್ನು ಹೇಳಿದ್ದೇವೆ. ಉತ್ತರ ಕರ್ನಾಟಕದ ಸಮಸ್ಯೆಗಳು, ಬರಗಾಲ, ನೀರಾವರಿ ಯೋಜನೆಗಳು, ಕೆಪಿಎಸ್ಸಿ ಹಗರಣದ ಕುರಿತು ಅಧಿವೇಶನದಲ್ಲಿ ಚರ್ಚೆ ಆಗಬೇಕಿದೆ. ನಾಗೇಂದ್ರರ ರಾಜೀನಾಮೆ ಪಡೆಯಿರಿ ಎಂದು ಒತ್ತಾಯಿಸಿದರೆ ಅವರು ಭಂಡತನದಿಂದ ಮೆರೆಯುತ್ತಿದ್ದಾರೆ. ಅಧಿಕಾರದ ಮದದಿಂದ ಕಾಂಗ್ರೆಸ್ ಸರ್ಕಾರ ನಡೆದುಕೊಳ್ಳುತ್ತಿದೆ. ಈ ಮದವನ್ನು ಇಳಿಸುವ ಶಕ್ತಿ ಬಿಜೆಪಿಗೆ ಇದೆ ಎಂದು ಎಚ್ಚರಿಸಿದರು.
ಹೋರಾಟವನ್ನು ಹಗುರವಾಗಿ ತೆಗೆದುಕೊಳ್ಳದಿರಿ
ನಮ್ಮ ಹೋರಾಟವನ್ನು ಹಗುರವಾಗಿ ತೆಗೆದುಕೊಳ್ಳದಿರಿ. ಸದನದಲ್ಲಿ ಹೋರಾಟ ಮಾಡುತ್ತಿದ್ದರೆ ನಮಗೆ ಗೂಂಡಾಗಳೆಂದು ಹೇಳಿದ್ದಾರೆ. ದಲಿತರ ಪರವಾಗಿ ಧ್ವನಿ ಎತ್ತಿದ ಬಿಜೆಪಿ- ಜೆಡಿಎಸ್‍ನವರನ್ನು ಗೂಂಡಾಗಳೆಂದು ಹೇಳುತ್ತೀರಾ ಎಂದು ಪ್ರಶ್ನಿಸಿದರು. 187 ಕೋಟಿ ಹಣ ಲೂಟಿ ಆಗಿದೆ. ದಲಿತರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಆ ಹಣ ವಾಪಸ್ ಬರಬೇಕು. ಆ ಸಮುದಾಯದ ಅಭಿವೃದ್ಧಿಗೆ ಹಣ ಬಳಕೆ ಆಗಬೇಕು ಎಂದು ತಿಳಿಸಿದರು. ಎಲ್ಲಿವರೆಗೆ ಬೇಕೋ ಅಲ್ಲಿಯವರೆಗೆ ಹೋರಾಟಕ್ಕೆ ಸಿದ್ಧ ಎಂದು ಹೇಳಿದರು.
ಸಚಿವ ನಾಗೇಂದ್ರ ಬಹಳ ಸಣ್ಣ ಮೀನು ಮಾತ್ರ. ಬಹಳ ದೊಡ್ಡ ಮೀನುಗಳು, ತಿಮಿಂಗಿಲಗಳು ಇದರ ಹಿಂದಿವೆ. ಇವರೆಲ್ಲರನ್ನೂ ಹೇಗೆ ಬೀದಿಗೆ ತರಬೇಕು? ಹೇಗೆ ಹೋರಾಟ ಮಾಡಬೇಕೆಂಬ ನಿಟ್ಟಿನಲ್ಲಿ ಬಿಜೆಪಿ ಸಿದ್ಧವಾಗಿದೆ. ಧ್ವನಿ ಇಲ್ಲದ ದಲಿತರ ಪರವಾಗಿ ಎಲ್ಲಿಯವರೆಗೂ ಅಗತ್ಯವೋ ಅಲ್ಲಿನವರೆಗೆ ಹೋರಾಟ ಮಾಡಲಿದ್ದೇವೆ. ಆ ಸಮುದಾಯಕ್ಕೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಬಿಜೆಪಿ ಕಟಿಬದ್ಧವಾಗಿದೆ. ಬಿಜೆಪಿ, ಸತ್ಯ ಬಿಚ್ಚಿಡುವ ಕೆಲಸ ಮಾಡಲಿದೆ ಎಂದರು.
ಭ್ರಷ್ಟರನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ರಕ್ಷಿಸುತ್ತಿದೆ: ಬಿ.ವೈ. ವಿಜಯೇಂದ್ರ ಆರೋಪ
ನಮ್ಮ ಉದ್ದೇಶ ನಾಗೇಂದ್ರ ಅವರ ತೇಜೋವಧೆ ಮಾಡುವುದಲ್ಲ. ದಲಿತ ಸಮುದಾಯಕ್ಕೆ ನ್ಯಾಯ ಕೊಡಿಸುವುದೇ ನಮ್ಮ ಉದ್ದೇಶ. ನಾಗೇಂದ್ರ ಅವರು ರಾಜೀನಾಮೆ ಕೊಡುವವರೆಗೆ ಹೋರಾಟ ಮುಂದುವರಿಯಲಿದೆ ಎಂದು ಬಿ.ವೈ. ವಿಜಯೇಂದ್ರ ಸ್ಪಷ್ಟಪಡಿಸಿದರು.