ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸಕ್ಕರೆ ದಾಸ್ತಾನು 1,000 ಕ್ವಿಂಟಲ್‌ ಮೀರುವಂತಿಲ್ಲ; ಬೆಲೆ ಏರಿಕೆ ತಡೆಗೆ ಕೇಂದ್ರ ಸರ್ಕಾರ ಕ್ರಮ

Pralhad Joshi: ಸಕ್ಕರೆ ವ್ಯಾಪಾರಿಗಳಲ್ಲಿ ದಾಸ್ತಾನು ಸ್ವೀಕರಿಸಿದ ದಿನಾಂಕದಿಂದ 15 ದಿನ ಮೀರಿದ ಅವಧಿಗೆ ದಾಸ್ತಾನು ಇಡುವಂತಿಲ್ಲ. ದೇಶಾದ್ಯಂತ ಯಾವುದೇ ಸಮಯ-ಸ್ಥಳದಲ್ಲಿ ಸಾವಿರ ಕ್ವಿಂಟಲ್‌ಗಿಂತ ಹೆಚ್ಚಿನ ಸಕ್ಕರೆ ದಾಸ್ತಾನು ಹೊಂದಿರಬಾರದು ಎಂದು ಗ್ರಾಹಕ ವ್ಯವಹಾರ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್‌ ಜೋಶಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಸಾಂದರ್ಭಿಕ ಚಿತ್ರ.

ನವದೆಹಲಿ, ಅ.1: ಹಬ್ಬದ ಋತುವಿನಲ್ಲಿ ಗ್ರಾಹಕರಿಗೆ ಸಕ್ಕರೆ ಸುಗಮ ಲಭ್ಯತೆಗಾಗಿ ಕೇಂದ್ರ ಸರ್ಕಾರ (Central Government) ಸಕ್ಕರೆ ದಾಸ್ತಾನು ಮತ್ತು ಸಂಗ್ರಹಣೆ ಮಾನದಂಡವನ್ನು ಪರಿಷ್ಕರಿಸಿದ್ದು, ದಾಸ್ತಾನು ಅವಧಿಯನ್ನು 15 ದಿನಗಳಿಗೆ ಮತ್ತು ಪ್ರಮಾಣವನ್ನು 1000 ಕ್ವಿಂಟಲ್‌ಗೆ ನಿಗದಿಪಡಿಸಿದೆ. ಹಬ್ಬದ ಋತು ಹಾಗೂ ಹೊಸ ಸಕ್ಕರೆ ಋತುವಿನ ಆರಂಭದಲ್ಲಿ ಅಕ್ರಮವಾಗಿ ಹೆಚ್ಚಿನ ಸಂಗ್ರಹಣೆ ಹಾಗೂ ಬೆಲೆ ಏರಿಕೆ ತಡೆಗಟ್ಟುವ ನಿಟ್ಟಿನಲ್ಲಿ ಸಮಯೋಚಿತ ಹೆಜ್ಜೆಯಿರಿಸುತ್ತಿರುವ ಕೇಂದ್ರ ಸರ್ಕಾರ, ಇದೀಗ ಸಕ್ಕರೆ ದಾಸ್ತಾನು-ಸಂಗ್ರಹಣೆ ಮಾನದಂಡವನ್ನು ಅಕ್ಟೋಬರ್‌ 1ರಿಂದಲೇ ಅನ್ವಯಿಸುವಂತೆ ಪರಿಷ್ಕರಿಸಿದೆ.

ಸಕ್ಕರೆ ವಿತರಕರ ದಾಸ್ತಾನು ಅವಧಿಯನ್ನು 15 ದಿನಗಳಿಗೆ ಮಿತಿಗೊಳಿಸಿದ್ದು, 1,000 ಕ್ವಿಂಟಲ್‌ಗಳಿಗೆ ದಾಸ್ತಾನು ಮಿತಿ ನಿಗದಿಪಡಿಸಿದೆ. ಕೋಲ್ಕತಾ ಮತ್ತದರ ವಿಸ್ತೃತ ಮಹಾನಗರ ಪ್ರದೇಶಗಳು ಹಾಗೂ ಅಸ್ಸಾಂ ರಾಜ್ಯವನ್ನು ಹೊರತುಪಡಿಸಿ ದೇಶದ ಉಳಿದೆಡೆ ಅ.15ರಿಂದ ನ.30ರವರೆಗೆ ಈ ಪರಿಷ್ಕೃತ ಮಾನದಂಡವನ್ನು ಜಾರಿಗೊಳಿಸಿದೆ. ಸಕ್ಕರೆ ಅಕ್ರಮ ದಾಸ್ತಾನು ಮತ್ತು ಬೆಲೆ ಸ್ಥಿರತೆ ಕಾಪಾಡುವ ಸದುದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.

ಸಕ್ಕರೆ ವ್ಯಾಪಾರಿಗಳಲ್ಲಿ ದಾಸ್ತಾನು ಸ್ವೀಕರಿಸಿದ ದಿನಾಂಕದಿಂದ 15 ದಿನ ಮೀರಿದ ಅವಧಿಗೆ ದಾಸ್ತಾನು ಇಡುವಂತಿಲ್ಲ. ದೇಶಾದ್ಯಂತ ಯಾವುದೇ ಸಮಯ-ಸ್ಥಳದಲ್ಲಿ ಸಾವಿರ ಕ್ವಿಂಟಲ್‌ಗಿಂತ ಹೆಚ್ಚಿನ ಸಕ್ಕರೆ ದಾಸ್ತಾನು ಹೊಂದಿರಬಾರದು ಎಂದೂ ಗ್ರಾಹಕ ವ್ಯವಹಾರ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್‌ ಜೋಶಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಕೋಲ್ಕತಾ ಮತ್ತದರ ವಿಸ್ತೃತ ಮಹಾನಗರ ಪ್ರದೇಶಗಳು ಮತ್ತು ಅಸ್ಸಾಂ ರಾಜ್ಯಕ್ಕೆ ಮಾತ್ರ ಸಕ್ಕರೆ ದಾಸ್ತಾನು ಮಿತಿ 2,000 ಕ್ವಿಂಟಲ್‌ಗೇ ಇದೆ. ಕೋಲ್ಕತಾ ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ಕರ್ನಾಟಕದಿಂದ ಸಕ್ಕರೆ ಪಡೆಯುತ್ತಿದ್ದು, ಈಶಾನ್ಯ ಪ್ರದೇಶ ಸೇರಿದಂತೆ ದೇಶದ ಪೂರ್ವ ಭಾಗಕ್ಕೆ ಪೂರೈಸುತ್ತದೆ. ಭೌಗೋಳಿಕ ನಿರ್ಬಂಧ, ಸಾರಿಗೆ ಮತ್ತು ಈಶಾನ್ಯ ಪ್ರದೇಶದ ಗ್ರಾಹಕರ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಅಸ್ಸಾಂಗೆ ಹೆಚ್ಚಿನ ಮಿತಿ ನಿಗದಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

ಚಿಲ್ಲರೆ ಸಕ್ಕರೆ ಬೆಲೆ ಶೇ.15 ಇಳಿಕೆ

ಕೇಂದ್ರ ಸರ್ಕಾರ ಸಮಯೋಚಿತವಾಗಿ ಸಕ್ಕರೆ ಸುಗಮ ವಹಿವಾಟು ದೃಷ್ಟಿಯಿಂದ ಕೈಗೊಂಡ ಕ್ರಮದಿಂದಾಗಿ ಸಕ್ಕರೆಯ ಸರಾಸರಿ ಚಿಲ್ಲರೆ ಬೆಲೆ ಶೇ.15ರಷ್ಟು ಇಳಿಕೆ ಕಂಡಿದೆ. X-ಮಿಲ್ ಸಕ್ಕರೆ ಬೆಲೆ ಸಹ ಶೇ.28ರಷ್ಟು ಇಳಿದಿದೆಯಾದರೂ ಕಳೆದ ಮೂರು ವಾರಗಳಲ್ಲಿ ಸಕ್ಕರೆ ಬೆಲೆ ಸ್ಥಿರವಾಗಿದೆ.

ಸಕ್ಕರೆ ಕಾರ್ಖಾನೆಗಳು, ಡೀಲರ್‌ಗಳು, ಸಗಟು ವ್ಯಾಪಾರಿಗಳು ಹಾಗೂ ಮಾರುಕಟ್ಟೆಗಳಲ್ಲಿ ಇತರೆ ವರ್ತಕರು ಹೆಚ್ಚಿನ ಸಕ್ಕರೆ ದಾಸ್ತಾನು, ಕೃತಕ ಅಭಾವ ಹಾಗೂ ಊಹಾತ್ಮಕ ವಹಿವಾಟನ್ನು ತಡೆಯಬೇಕೆಂದು ಸಚಿವ ಪ್ರಲ್ಹಾದ್‌ ಜೋಶಿ ಅವರು ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.

ಸಕ್ಕರೆ ಉತ್ಪಾದನೆ ಆರಂಭಿಸಲು ಸೂಚನೆ

ಸಕ್ಕರೆ ಕಾರ್ಖಾನೆಗಳು ತಮ್ಮ ವ್ಯಾಪ್ತಿಯಲ್ಲಿ ಕೃಷಿ-ಹವಾಮಾನ ಪರಿಸ್ಥಿತಿಗೆ ಅನುಗುಣವಾಗಿ ಉತ್ಪಾದನೆ ಪ್ರಾರಂಭಿಸಲು ಈಗಾಗಲೇ ಸೂಚಿಸಲಾಗಿದೆ. ಅಲ್ಲದೆ, ಆಯಾ ರಾಜ್ಯ ಸರ್ಕಾರಗಳು ಸಹ ಕ್ಷೇತ್ರದ ಪರಿಸ್ಥಿತಿಗಳ ಆಧಾರದ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದಿದ್ದಾರೆ.

ಎಲ್‌ ನಿನೊ ಪರಿಣಾಮ ಮೇಲ್ವಿಚಾರಣೆ

ಕೆಲವು ಸಕ್ಕರೆ ಉತ್ಪಾದಿತ ಪ್ರದೇಶಗಳಲ್ಲಿ ʼಎಲ್ ನಿನೊʼ ಪರಿಣಾಮವನ್ನು ಕೇಂದ್ರ ಸರ್ಕಾರ ಮೇಲ್ವಿಚಾರಣೆ ಮಾಡುತ್ತಿದೆ ಮತ್ತು ಸಕ್ಕರೆ ದೇಶೀಯ ಲಭ್ಯತೆ, ಗ್ರಾಹಕರ ಹಿತಾಸಕ್ತಿ ಹಾಗೂ ಕಬ್ಬು ಬೆಳೆಗಾರರ ಹಿತ ಕಾಯುವಲ್ಲಿ ಸಮತೋಲನ ಕಾಯ್ದುಕೊಳ್ಳಲು ಸಕಾಲಿಕವಾಗಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಸಚಿವ ಪ್ರಲ್ಹಾದ್‌ ಜೋಶಿ ಸ್ಪಷ್ಟಪಡಿಸಿದ್ದಾರೆ.‌

ಫ್ರಾನ್ಸ್ ಶಿಕ್ಷಣ ಸಚಿವರಿಗೆ 'ಬಿದ್ರಿವೇರ್' ಉಡುಗೊರೆ; ಬೀದರ್‌ನ ಐತಿಹಾಸಿಕ ಕಲೆಯ ಹಿರಿಮೆ ಹೆಚ್ಚಿಸಿದ ಸಚಿವ ಜೋಶಿ

ದೇಶದ ಕಬ್ಬು ಬೆಳೆಗಾರರು ಮತ್ತು ಗ್ರಾಹಕರು ಭಾರತದ ಸಕ್ಕರೆ ನೀತಿಯ ಎರಡು ಕೇಂದ್ರ ಸ್ತಂಭಗಳು. ಕಬ್ಬು ಬೆಳೆಗಾರರಿಗೆ ಲಾಭದಾಯಕ ಆದಾಯ ದೊರೆಕಿಸಿಕೊಡುವಲ್ಲಿ ಕೇಂದ್ರ ಸರ್ಕಾರ ಬದ್ಧವಾಗಿದೆ. ಅಂತೆಯೇ ಬೆಲೆ ಏರಿಕೆಯಿಂದ ಗ್ರಾಹಕರನ್ನು ರಕ್ಷಿಸಲು ಮತ್ತು ದೇಶಾದ್ಯಂತ ಸಾಕಷ್ಟು ಸಕ್ಕರೆ ಲಭ್ಯತೆ ಇರಿಸಲೂ ಬದ್ಧವಾಗಿದೆ ಎಂದು ಸಚಿವ ಪ್ರಲ್ಹಾದ ಜೋಶಿ ಪುನರುಚ್ಚರಿಸಿದ್ದಾರೆ.