ಬೆಂಗಳೂರು: ಶಾಸಕ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಟಿ.ಬಿ. ಜಯಚಂದ್ರ (TB Jayachandra) ಅವರನ್ನು ವಿಧಾನಸಭೆಯ ಹಂಗಾಮಿ ಸಭಾಧ್ಯಕ್ಷರಾಗಿ (Pro-tem Speaker) ನೇಮಕ ಮಾಡಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಅಧಿಕೃತ ಆದೇಶ ಹೊರಡಿಸಿದ್ದಾರೆ. ಸದನವು ನೂತನ ಸಭಾಧ್ಯಕ್ಷರನ್ನು ಸಂವಿಧಾನಬದ್ಧವಾಗಿ ಚುನಾಯಿಸುವವರೆಗೂ ಟಿ.ಬಿ. ಜಯಚಂದ್ರ ಅವರು ಸ್ಪೀಕರ್ ಹುದ್ದೆಯ ಕರ್ತವ್ಯಗಳನ್ನು ನಿರ್ವಹಿಸಲಿದ್ದಾರೆ.
ಭಾರತ ಸಂವಿಧಾನದ 180ನೇ ಅನುಚ್ಛೇದದ (1)ನೇ ಖಂಡವು ನೀಡಿರುವ ಅಧಿಕಾರವನ್ನು ಚಲಾಯಿಸಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಈ ಪ್ರಮುಖ ನೇಮಕವನ್ನು ಮಾಡಿದ್ದಾರೆ. ಹಂಗಾಮಿ ಸಭಾಧ್ಯಕ್ಷರ ನೇಮಕಕ್ಕೆ ಸಂಬಂಧಿಸಿ ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವಾಲಯದ ಸರ್ಕಾರದ ಕಾರ್ಯದರ್ಶಿ ಜಿ. ಶ್ರೀಧರ್ ಅವರು ವಿಶೇಷ ರಾಜ್ಯಪತ್ರದ ಮೂಲಕ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದ್ದಾರೆ.
ಮುಂದಿನ ದಿನಗಳಲ್ಲಿ ಸಭಾಧ್ಯಕ್ಷರ ಚುನಾವಣೆ ನಡೆಯಲಿದ್ದು, ಅಲ್ಲಿಯವರೆಗೆ ವಿಧಾನಸಭೆಯ ಅಧ್ಯಕ್ಷರ ಸ್ಥಾನಕ್ಕೆ ಸಂಬಂಧಿಸಿದ ಎಲ್ಲಾ ಕರ್ತವ್ಯಗಳನ್ನು ಹಿರಿಯ ಶಾಸಕ ಟಿ.ಬಿ. ಜಯಚಂದ್ರ ಅವರೇ ನಿರ್ವಹಿಸಲಿದ್ದಾರೆ.
ಸಚಿವ ಸ್ಥಾನ ಸಿಗದಿದ್ದಕ್ಕೆ ಟಿ.ಬಿ.ಜಯಚಂದ್ರ ಅಸಮಾಧಾನ
ಸಚಿವ ಸ್ಥಾನ ಸಿಗದ ಬಗ್ಗೆ ಟಿ.ಬಿ.ಜಯಚಂದ್ರ ಅಸಮಾಧಾನ ಹೊರಹಾಕದ್ದಾರೆ. ಈ ಬಾರಿ ನಾನು ಸಚಿವನಾಗುತ್ತೇನೆ, ಅಭಿವೃದ್ಧಿ ಕೆಲಸಗಳು ಆಗುತ್ತವೆ ಎಂದು ನಮ್ಮ ಕ್ಷೇತ್ರದ ಜನರಿಗೆ ನಿರೀಕ್ಷೆ ಇತ್ತು. ಇದೀಗ ಅವರಿಗೆ ಭ್ರಮನಿರಸನ ಆಗಿದ್ದು, ರಾಜೀನಾಮೆ ಕೊಟ್ಟು ಬನ್ನಿ ಎಂದು ಹೇಳುತ್ತಿದ್ದಾರೆ. ಹೀಗಾಗಿ ಅವರನ್ನು ಸಂತೈಸಬೇಕಾಗುತ್ತದೆ, ಅವರ ಭಾವನೆಗೆ ತಕ್ಕಂತೆ ನಾವು ನಡೆಯಬೇಕಾಗುತ್ತದೆ. ಮುಂದಿನ ನಿರ್ಧಾರದ ಬಗ್ಗೆ ಯೋಚನೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಇನ್ನು ಹಲವು ಹಿರಿಯ ಶಾಸಕರು ರಾಜೀನಾಮೆಗೆ ಮುಂದಾಗಿರುವ ಬಗ್ಗೆ ಪ್ರತಿಕ್ರಿಯಿಸಿ, ಮತದಾರರ ಆಣತಿಯಂತೆ ನಾವು ನಡೆಯಬೇಕಾಗುತ್ತದೆ. ಸಚಿವ ಸ್ಥಾನ ಕೈತಪ್ಪಿರುವ ಹಿನ್ನೆಲೆ ಶಾಸಕರಿಗೂ ಭ್ರಮನಿರಸನ ಆಗಿದೆ ಎಂದು ಹೇಳಿದ್ದಾರೆ.