ಮೈಸೂರು, ನ.26: ಭಾರತದ ಸಂವಿಧಾನವನ್ನು ಅಂಗೀಕರಿಸಿ 77 ವರ್ಷಗಳು ಕಳೆದಿವೆ. ಈ ಅವಧಿಯಲ್ಲಿ ನಮ್ಮ ಸಮಾಜದಲ್ಲಿ ಹಲವು ಬದಲಾವಣೆಗಳಾಗಿವೆ ಎಂಬುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಆದರೆ ಸಂವಿಧಾನದ ಆಶಯಗಳು ಇನ್ನೂ ಸಂಪೂರ್ಣವಾಗಿ ಈಡೇರಿಲ್ಲ ಎಂಬ ವಾಸ್ತವ ನಮ್ಮ ಕಣ್ಣ ಮುಂದಿದೆ. ಸಂವಿಧಾನದ ಆಶಯಗಳು ಪ್ರತಿಯೊಬ್ಬರಿಗೂ ಅರ್ಥವಾಗಬೇಕು, ಸಂವಿಧಾನದ ಧ್ವನಿ ಜನರ ಧ್ವನಿಯಾಗಬೇಕು. ಈ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ನಿರಂತರವಾಗಿ ನಡೆಯಬೇಕಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ (Former CM Siddaramaiah) ಹೇಳಿದರು.
ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಘಟಿಕೋತ್ಸವ ಭವನದಲ್ಲಿ ಸಂವಿಧಾನ ದಿನಾಚರಣೆಯ ಅಂಗವಾಗಿ ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿ ಆಯೋಜಿಸಿದ್ದ ‘ಸಂವಿಧಾನ ಧ್ವನಿ – ಜನರ ಧ್ವನಿ’ ಜನಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಎರಡು ವರ್ಷ, ಹನ್ನೊಂದು ತಿಂಗಳು, ಹದಿನೆಂಟು ದಿನಗಳ ಸುದೀರ್ಘ ಪ್ರಕ್ರಿಯೆಯ ಮೂಲಕ ಭಾರತದ ಸಂವಿಧಾನವನ್ನು ರಚಿಸಲಾಯಿತು. ಸಂವಿಧಾನದ ಕರಡು ರಚನಾ ಸಮಿತಿಯ ಅಧ್ಯಕ್ಷರಾಗಿದ್ದ ಬಾಬಾಸಾಹೇಬ್ ಅಂಬೇಡ್ಕರ್ ಅವರ ಮೇಲೆ ಸಂವಿಧಾನ ರಚನೆಯ ಬಹುದೊಡ್ಡ ಜವಾಬ್ದಾರಿ ಬಿದ್ದಿತ್ತು. ತಮ್ಮ ಅಪಾರ ಪಾಂಡಿತ್ಯ, ಅನುಭವ ಹಾಗೂ ವಿಶ್ವದ ವಿವಿಧ ದೇಶಗಳ ಸಂವಿಧಾನಗಳ ಅಧ್ಯಯನದ ಮೂಲಕ ಜಗತ್ತಿನ ಅತ್ಯುತ್ತಮ ಸಂವಿಧಾನಗಳಲ್ಲಿ ಒಂದನ್ನು ಅವರು ಭಾರತಕ್ಕೆ ನೀಡಿದರು. ಮೂಲ ಸಂವಿಧಾನದಲ್ಲಿ 395 ವಿಧಿಗಳಿದ್ದವು. ಕಾಲಕಾಲಕ್ಕೆ ಸಮಾಜದ ಅಗತ್ಯಗಳಿಗೆ ಅನುಗುಣವಾಗಿ ಸಂವಿಧಾನಕ್ಕೆ ಹಲವು ತಿದ್ದುಪಡಿಗಳನ್ನು ತರಲಾಗಿದೆ. ಬದಲಾದ ಕಾಲಘಟ್ಟಕ್ಕೆ ಅನುಗುಣವಾಗಿ ತಿದ್ದುಪಡಿಗೆ ಅವಕಾಶ ಕಲ್ಪಿಸಿರುವುದು ನಮ್ಮ ಸಂವಿಧಾನದ ಪ್ರಮುಖ ಗುಣವಾಗಿದೆ ಎಂದರು.
ಸಂವಿಧಾನದ ಕುರಿತು ಪ್ರತಿಯೊಬ್ಬರಿಗೂ ಅರಿವು ಮೂಡಿಸಬೇಕು ಎಂಬ ಉದ್ದೇಶದಿಂದ ನಾನು ಮುಖ್ಯಮಂತ್ರಿಯಾಗಿದ್ದಾಗ ಹಾಗೂ ಡಾ. ಎಚ್.ಸಿ. ಮಹದೇವಪ್ಪ ಅವರು ಸಮಾಜ ಕಲ್ಯಾಣ ಸಚಿವರಾಗಿದ್ದ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮತ್ತು ಯುವಜನರು ಸಂವಿಧಾನದ ಪೀಠಿಕೆಯನ್ನು ಓದುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೆವು. ಸಂವಿಧಾನದ ಅರಿವು ಮೂಡಿಸುವ ಮೂಲಕವೇ ಜನರು ತಮ್ಮ ಹಕ್ಕುಗಳನ್ನು ಹಾಗೂ ಸಾಮಾಜಿಕ ವ್ಯವಸ್ಥೆಯಲ್ಲಿರುವ ಅನ್ಯಾಯಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯ ಎಂದು ಹೇಳಿದರು.
ನಮ್ಮ ಮನೆಯಲ್ಲಿ ನಾವು ಆರು ಜನ ಮಕ್ಕಳು. ಅವರಲ್ಲಿ ನಾನು ಮಾತ್ರ ಶಿಕ್ಷಣ ಪಡೆದು ವಕೀಲನಾದೆ, ಮುಂದೆ ಸಚಿವನಾಗಿ, ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸುವ ಅವಕಾಶವೂ ನನಗೆ ದೊರೆಯಿತು. ನಾನು ಮಾತ್ರ ಶಿಕ್ಷಣ ಪಡೆಯಬೇಕು, ಉಳಿದ ಐವರು ಶಿಕ್ಷಣದಿಂದ ವಂಚಿತರಾಗಬೇಕು ಎಂದು ಯಾರಾದರೂ ನಮ್ಮ ಹಣೆಬರಹ ಬರೆದಿದ್ದರೇ? ಮನುಷ್ಯನ ಬದುಕಿನ ಏಳುಬೀಳುಗಳನ್ನು ಹಣೆಬರಹ ಅಥವಾ ಕರ್ಮಸಿದ್ಧಾಂತದ ಮೂಲಕ ಅರ್ಥೈಸಿಕೊಳ್ಳುವ ಮನಸ್ಥಿತಿಯಿಂದ ನಾವು ಹೊರಬರಬೇಕಿದೆ ಎಂದರು.
ಸಂವಿಧಾನದ ಪರವಾಗಿರುವವರು ಯಾರು, ಮನುಸ್ಮೃತಿಯ ಪರವಾಗಿರುವವರು ಯಾರು ಎಂಬುದನ್ನು ಜನರು ಗುರುತಿಸಿಕೊಳ್ಳಬೇಕು. ಸಂವಿಧಾನ ಮತ್ತು ಅಂಬೇಡ್ಕರ್ ಅವರ ವಿಚಾರಧಾರೆಗೆ ಬದ್ಧರಾಗಿರುವುದು ಕೇವಲ ಮಾತುಗಳಿಗೆ ಸೀಮಿತವಾಗಬಾರದು. ನಮ್ಮ ನಡೆ ಮತ್ತು ನಿಲುವುಗಳಲ್ಲಿಯೂ ಆ ಬದ್ಧತೆ ಪ್ರತಿಫಲಿಸಬೇಕು. ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಹಾಗೂ ದಲಿತರು ಸೇರಿದಂತೆ ಅವಕಾಶವಂಚಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ದೊರಕಿಸಿಕೊಡುವ ಉದ್ದೇಶದಿಂದ ನಾವು ಅಹಿಂದ ಚಳವಳಿಯನ್ನು ರೂಪಿಸಿದ್ದೆವು. ಸಂವಿಧಾನದ 17ನೇ ವಿಧಿಯಡಿ ಅಸ್ಪೃಶ್ಯತೆಯನ್ನು ನಿಷೇಧಿಸಲಾಗಿದೆ. ಆದರೆ ವಾಸ್ತವದಲ್ಲಿ ಅಸ್ಪೃಶ್ಯತೆ ಸಂಪೂರ್ಣವಾಗಿ ನಿರ್ಮೂಲನೆಯಾಗಿದೆಯೇ? ಅಸ್ಪೃಶ್ಯತೆ ನಿವಾರಣೆಯಾಗದೆ ಸಮಸಮಾಜ ನಿರ್ಮಾಣ ಸಾಧ್ಯವೇ? ಸಂವಿಧಾನದ ಆಶಯಗಳಿಗೂ ಸಾಮಾಜಿಕ ವಾಸ್ತವಕ್ಕೂ ಇರುವ ಅಂತರವನ್ನು ನಾವು ನಿವಾರಿಸಬೇಕಿದೆ ಎಂದರು.
ಸಂವಿಧಾನದ 14ನೇ ವಿಧಿಯು ಕಾನೂನಿನ ಮುಂದೆ ಎಲ್ಲರಿಗೂ ಸಮಾನತೆಯನ್ನು ಖಾತರಿಪಡಿಸುತ್ತದೆ. ಈ ಸಮಾನತೆಯ ಆಶಯವನ್ನು ಸಮಾಜದಲ್ಲಿ ಸಾಕಾರಗೊಳಿಸಬೇಕಾದರೆ ನಮ್ಮಲ್ಲಿ ಮಾನವೀಯತೆ ಬೆಳೆಯಬೇಕು. ಸಮಾಜದಲ್ಲಿ ದ್ವೇಷ ಹುಟ್ಟುಹಾಕುವ ಪ್ರಯತ್ನಗಳ ಬಗ್ಗೆ ಎಚ್ಚರಿಕೆಯಿಂದಿರಬೇಕು. ಪರಸ್ಪರ ದ್ವೇಷಿಸುವ ಬದಲು ಪ್ರೀತಿಸುವುದನ್ನು ಕಲಿಯಬೇಕು. ಆಗ ಮಾತ್ರ ಬಾಬಾಸಾಹೇಬ್ ಅಂಬೇಡ್ಕರ್ ಅವರು ಕನಸು ಕಂಡಿದ್ದ ಸಮಸಮಾಜವನ್ನು ನಿರ್ಮಿಸಲು ಸಾಧ್ಯ ಎಂದು ತಿಳಿಸಿದರು.
ಸಂವಿಧಾನದ ಆಶಯಗಳು ಸಾಕಾರಗೊಳ್ಳಬೇಕಾದರೆ ಜನರು ಜಾಗೃತರಾಗಬೇಕು. ಕಳೆದ ಒಂದು ವರ್ಷದಿಂದ ಸಂವಿಧಾನದ ಕುರಿತು ಜನಜಾಗೃತಿ ಮೂಡಿಸುವ ಕೆಲಸದಲ್ಲಿ ನಿರತರಾಗಿರುವ ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಸಮಿತಿಯ ಕಾರ್ಯ ಶ್ಲಾಘನೀಯವಾದುದು. ಇಂತಹ ಜನಜಾಗೃತಿ ಕಾರ್ಯಕ್ರಮಗಳಿಗೆ ನನ್ನ ಸಹಕಾರ ಸದಾ ಇರಲಿದೆ. ಸಾಧ್ಯವಾದ ಕಡೆಯಲ್ಲೆಲ್ಲ ನಾನೂ ಭಾಗವಹಿಸುತ್ತೇನೆ ಎಂದರು. ಸಂವಿಧಾನದ ಧ್ವನಿಯನ್ನು ಜನರ ಧ್ವನಿಯಾಗಿಸುವ ಮಹತ್ತರ ಉದ್ದೇಶದಿಂದ ಜನಜಾಗೃತಿ ಆಂದೋಲನ ನಡೆಸುತ್ತಿರುವ ಎಲ್ಲ ಸಂಘಟನೆಗಳಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಈ ಜನಜಾಗೃತಿ ಆಂದೋಲನ ಯಶಸ್ವಿಯಾಗಲಿ, ಸಂವಿಧಾನದ ಆಶಯಗಳು ಮನೆಮನೆಗೂ ತಲುಪಲಿ ಎಂದು ಹಾರೈಸುತ್ತೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.