ತುಮಕೂರು, ಅ.13: ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿ ಶಶಿ ಹುಲಿಕುಂಟೆ ಮಠ್ ಅವರು ಜಯಗಳಿಸುವುದು ನಿಶ್ಚಿತ ಎಂದು ತುಮಕೂರು ಗ್ರಾಮಾಂತರದ ಮಾಜಿ ಶಾಸಕ ಡಿ.ಸಿ. ಗೌರಿಶಂಕರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ಹಿರಿಯ ನಾಯಕರ ತೀರ್ಮಾನದಂತೆ 9 ತಿಂಗಳ ಹಿಂದೆಯೇ ಶಶಿ ಹುಲಿಕುಂಟೆ ಮಠ್ (Shashi Hulikuntemutt) ಅವರನ್ನು ಅಭ್ಯರ್ಥಿ ಎಂದು ಘೋಷಿಸಿ ಪ್ರಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಕಾಂಗ್ರೆಸ್ ಸರ್ಕಾರವು ಯುವನಿಧಿ, ಉಚಿತ ಬಸ್ ಪಾಸ್ ಹಾಗೂ ಪಂಚ ಗ್ಯಾರಂಟಿಗಳ ಮೂಲಕ ಯುವಜನರು ಮತ್ತು ವಿದ್ಯಾರ್ಥಿಗಳ ನೆರವಿಗೆ ನಿಂತಿದೆ. ಆದ್ದರಿಂದ ಈ ಬಾರಿ ಪದವೀಧರ ಮತದಾರರು ಕಾಂಗ್ರೆಸ್ ಬೆಂಬಲಿಸಲಿದ್ದಾರೆ ಎಂದರು.
ಇತರ ಪಕ್ಷಗಳಂತೆ ಕಾಂಗ್ರೆಸ್ ಯಾವುದೇ ಉದ್ಯಮಿಗೆ ಟಿಕೆಟ್ ನೀಡದೆ, ಯುವ ಕಾಂಗ್ರೆಸ್‌ನಲ್ಲಿ ಸಕ್ರಿಯವಾಗಿ ದುಡಿದ ಸಾಮಾನ್ಯ ಕಾರ್ಯಕರ್ತನಿಗೆ ಎಂಎಲ್‌ಸಿ ಟಿಕೆಟ್ ನೀಡಿದೆ. ಕಳೆದ 9 ಚುನಾವಣೆಗಳಿಂದ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಾ ಬಂದಿರುವ ಬಿಜೆಪಿ ಅಭ್ಯರ್ಥಿಯ ಸಾಧನೆ ಶೂನ್ಯ ಎಂದು ಗೌರಿಶಂಕರ್ ಟೀಕಿಸಿದರು.
ಇಡೀ ಕ್ಷೇತ್ರದಲ್ಲಿ 1.30 ಲಕ್ಷ ಮತದಾರರಿದ್ದು, ಅದರಲ್ಲಿ 49 ಸಾವಿರ ಮತಗಳು ತುಮಕೂರು ಜಿಲ್ಲೆಯಲ್ಲೇ ಇವೆ. ನಮ್ಮ ಅಭ್ಯರ್ಥಿ ಈಗಾಗಲೇ ಶೇಕಡಾ 90 ರಷ್ಟು ಮತದಾರರನ್ನು ನೇರವಾಗಿ ಭೇಟಿಯಾಗಿದ್ದಾರೆ ಎಂದು ತಿಳಿಸಿದರು.
ಮಾಜಿ ಶಾಸಕ ಡಾ. ರಫೀಕ್ ಅಹಮದ್ ಮಾತನಾಡಿ, ಪಕ್ಷವು ಯುವ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಐದು ಜಿಲ್ಲೆಗಳು ಹಾಗೂ 33 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡ ಈ ಕ್ಷೇತ್ರದಲ್ಲಿ ಪಕ್ಷದ ಎಲ್ಲಾ ನಾಯಕರು ಒಗ್ಗೂಡಿ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುತ್ತಿದ್ದೇವೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ. ಚಂದ್ರಶೇಖರಗೌಡ ಮಾತನಾಡಿ, ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ಡಿ.ಟಿ. ಶ್ರೀನಿವಾಸ್ ಗೆಲುವು ಸಾಧಿಸಿದಂತೆ, ಪದವೀಧರ ಕ್ಷೇತ್ರದಲ್ಲೂ ಅಭ್ಯರ್ಥಿ ಶಶಿ ಹುಲಿಕುಂಟೆ ಮಠ್ ಗೆಲುವು ಸಾಧಿಸಲಿದ್ದಾರೆ ಎಂದರು.
ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಇಕ್ಬಾಲ್ ಅಹಮದ್ ಮಾತನಾಡಿ, ನಮ್ಮ ಅಭ್ಯರ್ಥಿ ಪ್ರಚಲಿತ ವಿದ್ಯಮಾನಗಳನ್ನು ಬಲ್ಲ ಯುವಕರಾಗಿದ್ದಾರೆ. ಯುವಜನರು ಹಾಗೂ ಪದವೀಧರರ ಪರವಾಗಿ ಅವರು ವಿಧಾನಪರಿಷತ್ತಿನಲ್ಲಿ ಧ್ವನಿಯೆತ್ತಲಿದ್ದಾರೆ ಎಂದು ತಿಳಿಸಿದರು.
ಸೇವಾ ಮನೋಭಾವದಿಂದ ಸ್ಪರ್ಧಿಸಿದ್ದೇನೆ: ಶಶಿ ಹುಲಿಕುಂಟೆ ಮಠ್
ಕಾಂಗ್ರೆಸ್ ಅಭ್ಯರ್ಥಿ ಶಶಿ ಹುಲಿಕುಂಟೆ ಮಠ್ ಮಾತನಾಡಿ, ʼನಾನು ರಾಜಕೀಯ ಅಧಿಕಾರಕ್ಕಾಗಿ ಅಥವಾ ವ್ಯಾಪಾರಕ್ಕಾಗಿ ಸ್ಪರ್ಧಿಸಿಲ್ಲ, ಸೇವಾ ಮನೋಭಾವದಿಂದ ಸ್ಪರ್ಧಿಸಿದ್ದೇನೆ. ಯುವಜನರು ಮತ್ತು ಪದವೀಧರರ ಸಮಸ್ಯೆಗಳಿಗೆ ಸ್ಪಂದಿಸಲು ಮತದಾರರು ನನಗೆ ಮೊದಲ ಪ್ರಾಶಸ್ತ್ಯದ ಮತ ನೀಡಿ ಆಶೀರ್ವದಿಸಬೇಕುʼ ಎಂದು ಮನವಿ ಮಾಡಿದರು.
ಗ್ರಾಮೀಣ ಜನತೆಗೆ ಅತ್ಯಾಧುನಿಕ ಆರೋಗ್ಯ ಸೇವೆ ಒದಗಿಸಲು ಸರ್ಕಾರ ಬದ್ಧ: ಯು.ಟಿ. ಖಾದರ್
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಆರ್. ರಾಮಕೃಷ್ಣಪ್ಪ, ಷಣ್ಮುಗಪ್ಪ, ಅನಿಲ್, ಸುರೇಶ್‌ರಾಜ್, ಪುಟ್ಟರಾಜು, ಇರ್ಫಾನ್ ಅಹಮದ್, ಪಂಡಿತ್ ನಾರಾಯಣಪ್ಪ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.