ಬೆಂಗಳೂರು: ಕರ್ನಾಟಕದ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು ಕೇವಲ ರಾಜಕೀಯ ನಾಯಕ ಮಾತ್ರವಲ್ಲ ಒಬ್ಬ ಶ್ರೇಷ್ಠ ಮುತ್ಸದ್ದಿ, ರಾಷ್ಟ್ರವಾದಿ ಮತ್ತು ನಾಯಕರನ್ನು ಸೃಷ್ಟಿಸಿದ ಮಹಾನ್ ವ್ಯಕ್ತಿ. ಅವರ ನಾಯಕತ್ವದಲ್ಲಿ ಕರ್ನಾಟಕವು ಉತ್ತಮ ಆಡಳಿತಕ್ಕೆ ಮಾದರಿಯಾಗಿ ಹೊರಹೊಮ್ಮಿತು ಎಂದು ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ( Vice President C.P. Radhakrishnan) ಅವರು ಬಣ್ಣಿಸಿದರು.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಶನಿವಾರ ಆಯೋಜಿಸಿದ್ದ ರಾಮಕೃಷ್ಣ ಹೆಗಡೆ ಅವರ ಜನ್ಮ ಶತಮಾನೋತ್ಸವದಲ್ಲಿ ಅವರು ಮಾತನಾಡಿದರು.
ಹೆಗಡೆ ಜೀ ಅವರು ತಮ್ಮ ನಿಲುವುಗಳಲ್ಲಿ ದೃಢವಾಗಿ ನಿಂತು ಕರ್ನಾಟಕದಲ್ಲಿ ಹಲವು ಆಧುನಿಕ ಆಡಳಿತ ಸಂಸ್ಥೆಗಳಿಗೆ ಅಡಿಪಾಯ ಹಾಕಿದ ಧೈರ್ಯಶಾಲಿ ನಾಯಕರಾಗಿದ್ದರು. ಅವರ ಸಾರ್ವಜನಿಕ ಜೀವನವು ವಿಕೇಂದ್ರೀಕರಣ, ಹೊಣೆಗಾರಿಕೆ, ನಾಗರಿಕರ ಭಾಗವಹಿಸುವಿಕೆ, ಸಂಸದೀಯ ಒಕ್ಕೂಟ ವ್ಯವಸ್ಥೆ (ಫೆಡರಲಿಸಂ) ಮತ್ತು ಸಂಸ್ಥೆಗಳ ಮೇಲಿನ ನಂಬಿಕೆಯಿಂದ ಮಾರ್ಗದರ್ಶಿಸಲ್ಪಟ್ಟಿತ್ತು ಎಂದು ಅವರು ಹೇಳಿದರು.
ವಿಕೇಂದ್ರೀಕರಣಕ್ಕೆ ಅವರು ನೀಡಿದ ಕೊಡುಗೆಯನ್ನು ಸ್ಮರಿಸಿದ ಉಪರಾಷ್ಟ್ರಪತಿಯವರು, ಆಡಳಿತವನ್ನು ಜನರಿಗೆ ಹತ್ತಿರ ತಂದ 'ಕರ್ನಾಟಕ ಜಿಲ್ಲಾ ಪರಿಷತ್ತುಗಳು, ತಾಲೂಕು ಪಂಚಾಯತ್ ಸಮಿತಿಗಳು, ಮಂಡಲ ಪಂಚಾಯತ್‌ಗಳು ಮತ್ತು ನ್ಯಾಯ ಪಂಚಾಯತ್‌ಗಳ ಕಾಯಿದೆ, 1985' ಅನ್ನು ಎತ್ತಿಹಿಡಿದರು. ಈ ದೃಷ್ಟಿಕೋನವನ್ನು ನಂತರ 73 ನೇ ಸಾಂವಿಧಾನಿಕ ತಿದ್ದುಪಡಿಯ ಮೂಲಕ ಪಂಚಾಯತ್ ರಾಜ್ ಸಂಸ್ಥೆಗಳಿಗೆ ಸಾಂವಿಧಾನಿಕ ಸ್ಥಾನಮಾನ ನೀಡುವ ಮೂಲಕ ಬಲಪಡಿಸಲಾಯಿತು ಎಂದು ಅವರು ಉಲ್ಲೇಖಿಸಿದರು.

ವೈಯಕ್ತಿಕ ನೆನಪೊಂದನ್ನು ಹಂಚಿಕೊಂಡ ಸಿ. ಪಿ. ರಾಧಾಕೃಷ್ಣನ್ ಅವರು, ಹೆಗಡೆ ಜೀ ಅವರು ಹಣದ ಸರಳ ವ್ಯಾಖ್ಯಾನವನ್ನು ನೀಡಿದ್ದಾರೆ ಎಂದು ಹೇಳಿದರು: ಉತ್ತಮ ಮನೆ, ಉತ್ತಮ ಆರೋಗ್ಯ, ಉತ್ತಮ ಶಿಕ್ಷಣ ಮತ್ತು ಉತ್ತಮ ಕಾರನ್ನು ಹೊಂದಿರುವ ಆರಾಮದಾಯಕ ಜೀವನ — "ಅದಕ್ಕಿಂತ ಹೆಚ್ಚು ಹಣ ಅಂದರೆ ಏನು?" ಎಂದು ಕೇಳಿದ್ದರು. ಈ ಮಾತುಗಳು ಹೆಗಡೆ ಜೀ ಅವರ ಸರಳತೆ ಮತ್ತು ಜೀವನದ ಬಗೆಗಿನ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತವೆ ಎಂದು ಅವರು ಹೇಳಿದರು.
ಹೊಣೆಗಾರಿಕೆಗೆ ಅವರು ನೀಡುತ್ತಿದ್ದ ಮಹತ್ವವದ ಬಗ್ಗೆ ಒತ್ತಿ ಹೇಳಿದ ಉಪರಾಷ್ಟ್ರಪತಿಯವರು, ಕರ್ನಾಟಕದಲ್ಲಿ ಲೋಕಾಯುಕ್ತವನ್ನು ಬಲಪಡಿಸಿದ್ದನ್ನು ನೆನಪಿಸಿಕೊಂಡರು ಮತ್ತು ಸಾರ್ವಜನಿಕ ಹುದ್ದೆಯು ವಿಶ್ವಾಸದ ಹೊಣೆಗಾರಿಕೆಯಾಗಿದೆ ಎಂದು ಹೇಳಿದರು. ಬಲವಾದ ರಾಜ್ಯಗಳು ಭಾರತವನ್ನು ಬಲಪಡಿಸುತ್ತವೆ, ಬಲವಾದ ಸ್ಥಳೀಯ ಸರ್ಕಾರಗಳು ರಾಜ್ಯಗಳನ್ನು ಬಲಪಡಿಸುತ್ತವೆ ಮತ್ತು ಸಬಲಗೊಂಡ ನಾಗರಿಕರು ಸ್ಥಳೀಯ ಸರ್ಕಾರವನ್ನು ಬಲಪಡಿಸುತ್ತಾರೆ ಎಂಬ ಹೆಗಡೆ ಜೀ ಅವರ ನಂಬಿಕೆಯನ್ನು ಅವರು ಒತ್ತಿಹೇಳಿದರು.
ಹೆಗಡೆ ಅವರನ್ನು ಸಂಸ್ಥೆಗಳು ಮತ್ತು ನಾಯಕರ ನಿರ್ಮಾತೃ ಎಂದು ಬಣ್ಣಿಸಿದ ಸನ್ಮಾನ್ಯ ಶ್ರೀ ಸಿ. ಪಿ. ರಾಧಾಕೃಷ್ಣನ್, "ಮಹಾನ್ ನಾಯಕರು ಒಂದು ಕ್ಷಣವನ್ನು ಪರಿವರ್ತಿಸಬಹುದು. ಆದರೆ ಮಹಾನ್ ಸಂಸ್ಥೆಗಳ ನಿರ್ಮಾತೃಗಳು ಪೀಳಿಗೆಗಳನ್ನೇ ಪರಿವರ್ತಿಸುತ್ತಾರೆ" ಎಂದು ಹೇಳಿದರು. ಹೆಗಡೆ ಜೀ ಅವರ ಪ್ರಾಮಾಣಿಕತೆ, ಧೈರ್ಯ ಮತ್ತು ಸಾರ್ವಜನಿಕ ಸೇವೆಗೆ ಅವರ ಬದ್ಧತೆಯನ್ನು ಯುವ ಪೀಳಿಗೆಯು ಅಳವಡಿಸಿಕೊಳ್ಳಬೇಕು ಮತ್ತು 'ರಾಷ್ಟ್ರ ಪ್ರಥಮ' — ದೇಶವೇ ಮೊದಲು ಎಂಬುದನ್ನು ಎತ್ತಿಹಿಡಿಯಬೇಕು ಎಂದು ಅವರು ಕರೆ ನೀಡಿದರು. ಈ ಮೌಲ್ಯಗಳನ್ನು ಮುನ್ನಡೆಸುವುದೇ ಅವರ ಪರಂಪರೆಗೆ ಸಲ್ಲಿಸುವ ಅತ್ಯಂತ ಅರ್ಥಪೂರ್ಣ ಶ್ರದ್ಧಾಂಜಲಿಯಾಗುತ್ತದೆ ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಭಾರತದ ಮಾಜಿ ಉಪರಾಷ್ಟ್ರಪತಿಗಳಾದ ವೆಂಕಯ್ಯನಾಯ್ಡು, ಮಾಜಿ ಸಿಎಂ ಸಿದ್ದರಾಮಯ್ಯ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಸಚಿವರಾದ ಬಸವರಾಜ ರಾಯರೆಡ್ಡಿ, ಬಿ.ಎಲ್.ಶಂಕರ್ ಸೇರಿದಂತೆ ಹಲವು ಸಚಿವರು, ಶಾಸಕರು ಹಾಗೂ ಗಣ್ಯರು ಉಪಸ್ಥಿತರಿದ್ದರು.