ನವದೆಹಲಿ, ಸೆ.05: ಶಿಕ್ಷಣ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ತೋರಿದ ಶಿಕ್ಷಕರಿಗೆ ರಾಷ್ಟ್ರೀಯ ಪ್ರಶಸ್ತಿ ಜತೆಗೆ ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ್ ಜೋಶಿ ಅವರು (Pralhad Joshi) ಕರುನಾಡಿನ ಹೆಮ್ಮೆ, ಅಸ್ಮಿತೆಯ ಪ್ರತೀಕವಾಗಿ "ಎಚ್ಎಂಟಿ" ವಾಚ್ ಉಡುಗೊರೆ ನೀಡಿ ಗೌರವಿಸಿದರು. ನವದೆಹಲಿಯಲ್ಲಿ ಜರುಗಿದ ರಾಷ್ಟ್ರೀಯ ಶಿಕ್ಷಕರ ದಿನಾಚರಣೆ ಹಾಗೂ ರಾಷ್ಟ್ರ ಪ್ರಶಸ್ತಿ ಪುರಸ್ಕಾರ, ಸನ್ಮಾನ ಸಮಾರಂಭದಲ್ಲಿ ಅತ್ಯುತ್ತಮ ಶಿಕ್ಷಕರಿಗೆ ಎಚ್ಎಂಟಿ ವಾಚ್ ಉಡುಗೊರೆ ಹಾಗೂ ಹೃದಯಸ್ಪರ್ಶಿ ಸುಮ್ಮಾನದೊಂದಿಗೆ ವಿಶೇಷ ಅಭಿನಂದನೆ ಸಲ್ಲಿಸಿದರು.
ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ 82 ಶಿಕ್ಷಕರಿಗೆ ಎಚ್ಎಂಟಿ ವಾಚ್ ಗಿಫ್ಟ್ ಮೂಲಕ "ಆತ್ಮನಿರ್ಭರ ಭಾರತ" ಹಾಗೂ ಕನ್ನಡ ನಾಡಿನ ಅಸ್ಮಿತಿಗೆ ಮತ್ತಷ್ಟು ಮೆರುಗು ನೀಡಿದರು ಶಿಕ್ಷಣ ಸಚಿವರು.
ಶಿಕ್ಷಕರ ಸೇವೆಯನ್ನು ಸ್ಮರಿಸುತ್ತಲೇ, ಕನ್ನಡ ನಾಡಿನ ಎಚ್ಎಂಟಿ ವಾಚ್ ಬಗ್ಗೆ ವಿಶ್ಲೇಷಿಸಿ, ಕರ್ನಾಟಕದ ಹೆಮ್ಮೆಯನ್ನು ರಾಷ್ಟ್ರ ಮಟ್ಟದಲ್ಲಿ ಎತ್ತಿ ತೋರಿಸಿದರು. ಈ ಮೂಲಕ ಪ್ರಧಾನಿ ಮೋದಿ ಅವರ 'ವೋಕಲ್ ಫಾರ್ ಲೋಕಲ್' ಮತ್ತು 'ಆತ್ಮನಿರ್ಭರ ಭಾರತ' ದ ಸಂದೇಶಕ್ಕೂ ಪ್ರೇರಣೆ ನೀಡಿದರು.
"ಟೈಮ್ ಕೀಪರ್ ಆಫ್ ದಿ ನೇಷನ್"ಗೆ ಪ್ರಸಿದ್ಧಿಯಾದ HMT ಕೇವಲ ಬ್ರ್ಯಾಂಡ್ ಅಲ್ಲ; ಅದು ಕನ್ನಡಿಗರ ಸಾಂಸ್ಕೃತಿಕ ಅಸ್ಮಿತೆ ಮತ್ತು ಸ್ವದೇಶಿ ಹೆಮ್ಮೆಯಾಗಿದೆ ಎನ್ನುತ್ತಲೇ ಶಿಸ್ತು-ಸಮಯ ಪರಿಪಾಲನೆ ಪ್ರತಿರೂಪವಾಗಿರುವ ಶಿಕ್ಷಕರಿಗೆ ರಾಷ್ಟ್ರೀಯ ಪುರಸ್ಕಾರದ ಜತೆಗೆ ಅರ್ಥಪೂರ್ಣ ಮತ್ತು ವಿಶಿಷ್ಠ ಉಡುಗೊರೆಯಾಗಿ ಈ ವಾಚ್ ನೀಡಿದ್ದಾಗಿ ವಿಶ್ಲೇಷಿಸಿದರು.
ವಿದ್ಯಾರ್ಥಿ-ಯುವ ಪೀಳಿಗೆ ಹಾಗೂ ದೇಶದ ಭವಿಷ್ಯ ರೂಪಿಸುವ ಶಿಕ್ಷಕರಿಗೆ ನಾವೆಷ್ಟು ಗೌರವ ಸಲ್ಲಿಸಿದರೂ ಕಡಿಮೆಯೇ ಎಂದು ಅಭಿಪ್ರಾಯಿಸಿದ ಶಿಕ್ಷಣ ಸಚಿವರು, ಬಾಲ್ಯದಿಂದಲೇ ಉತ್ತಮ ಶಿಕ್ಷಣ, ಸಂಸ್ಕೃತಿ, ಕೌಶಲ್ಯದೊಂದಿಗೆ ರಾಷ್ಟ್ರದ ನವ ನಿರ್ಮಾತೃರನ್ನು ನಿರ್ಮಿಸುವ ಶಿಲ್ಪಿಗಳಂತಿರುವ ಶಿಕ್ಷಕರ ಸೇವೆ ಅವಿಸ್ಮರಣೀಯ ಎಂದು ಬಣ್ಣಿಸಿದರು.
ಬೆಂಗಳೂರು ಏರ್‌ಪೋರ್ಟ್ ಪ್ರಯಾಣಿಕರಿಗೆ ಸಿಗಲಿದೆ ವಿಐಪಿ ಅನುಭವ; ಕೇರ್ ಬೈ ಬಿಎಲ್‌ಆರ್ ಪ್ರೀಮಿಯಂ ಸೇವೆ ಆರಂಭ
ಸಮಾರಂಭದಲ್ಲಿ ಪ್ರಸ್ತುತವಾಗಿ 82 ಶಿಕ್ಷಕರಿಗೆ "ರಾಷ್ಟ್ರೀಯ ಅತ್ಯುತ್ತಮ ಶಿಕ್ಷಕ" ಪುರಸ್ಕಾರ ನೀಡಿ ಗೌರವಿಸಲಾಯಿತು. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ 48 ಶಿಕ್ಷಕರು, ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ಪಾಲಿಟೆಕ್ನಿಕ್‌ಗಳ 21 ಶಿಕ್ಷಕರು ಹಾಗೂ ಅಧ್ಯಾಪಕ ಸದಸ್ಯರು ಮತ್ತು ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದ 13 ಕೌಶಲ್ಯ ತರಬೇತುದಾರರು ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾದರು. ಪ್ರಶಸ್ತಿ ಪುರಸ್ಕೃತ ಸಾಧಕ ಶಿಕ್ಷಕರು, ತಮ್ಮ ಬೋಧನಾ ವೃತ್ತಿ ಪಯಣದ ಅನುಭವ ಮತ್ತು ನಾವೀನ್ಯತೆಯನ್ನು ಪ್ರಸ್ತುತಪಡಿಸುತ್ತ, ಕಲಿಕೆಯ ಸೃಜನಶೀಲ ವಿಧಾನಗಳನ್ನು ಹಂಚಿಕೊಂಡರು.