ನವದೆಹಲಿ: ರಾಜ್ಯದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಮ್ಮನ್ನು 'ಹಳ್ಳಿ ಗುಗ್ಗು' (Village Idiot) ಎಂದು ಕರೆದಿರುವ ಬಗ್ಗೆ, ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ (H.D. Kumaraswamy) ಅವರು, ಗೃಹ ಸಚಿವರು ಹಾಗೆ ಕರೆದಿದ್ದು ಅವರ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತದೆ. ನಮ್ಮ ತಂದೆಯವರು ಹಳ್ಳಿಯಿಂದಲೇ ಬಂದು ಪ್ರಧಾನಿಯಾದರು. ನಾನು ಹಳ್ಳಿಯಿಂದಲೇ ಬಂದು ಎರಡು ಬಾರಿ ರಾಜ್ಯದ ಮುಖ್ಯಮಂತ್ರಿ ಆಗಿದ್ದೇನೆ ಎಂದು ತಿರುಗೇಟು ನೀಡಿದ್ದಾರೆ.
ನವದೆಹಲಿಯ ತಮ್ಮ ನಿವಾಸದಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ಧೇಶಿಸಿ ಮಾತನಾಡಿದ ಅವರು, ನಾನು ಹಳ್ಳಿಯವನು ಎಂಬ ಬಗ್ಗೆ ನನಗೆ ಹೆಮ್ಮೆ ಇದೆ. ಅವರು ನನ್ನನ್ನು ಹಳ್ಳಿ ಗುಗ್ಗು ಎಂದು ಕರೆದಿದ್ದಾರೆ. ಅವರಿಗೆ ಸಂತೋಷ ಆಗುವುದಾದರೆ ಹಾಗೆಯೇ ಕರೆದುಕೊಳ್ಳಲಿ. ಅವರಿಗೆ ಜನರೇ ಉತ್ತರ ಕೊಡುತ್ತಾರೆ ಎಂದರು.
ನಾನು ಯಾವುದೇ ರೀತಿಯ ಮೂಲಸೌಕರ್ಯವೂ ಇಲ್ಲದ ಕುಗ್ರಾಮದ ಶಾಲೆಯಲ್ಲಿ ವಿದ್ಯೆ ಕಲಿತವನು. ಯಾವುದೇ ಆಕ್ಸ್ಫರ್ಡ್, ಬೋಸ್ಟನ್ ಅಥವಾ ಕೇಂಬ್ರಿಡ್ಜ್ನಂತಹ ವಿಶ್ವವಿದ್ಯಾಲಯಗಳಲ್ಲಿ ಓದಿ ಬಂದವನಲ್ಲ. ಬದಲಾಗಿ ಮೂಲಭೂತ ಸೌಕರ್ಯಗಳಿಲ್ಲದ ಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಓದಿದ ಸಾಮಾನ್ಯ ರೈತನ ಮಗ ಎಂಬ ಬಗ್ಗೆ ತಮಗೆ ಅಪಾರ ಹೆಮ್ಮೆಯಿದೆ ಎಂದು ಅವರು ತಿರುಗೇಟು ನೀಡಿದರು.
ತಮ್ಮನ್ನು ಹಳ್ಳಿ ಗುಗ್ಗು ಎಂದು ಕರೆದಿರುವುದು ಕೇವಲ ತಮಗಲ್ಲ, ನಾಡಿಗೆ ಅನ್ನ ನೀಡುವ ಸಮಸ್ತ ರೈತಕುಲಕ್ಕೆ ಮತ್ತು ಗ್ರಾಮೀಣ ಜನತೆಗೆ ಮಾಡಿದ ಘೋರ ಅವಮಾನವಾಗಿದೆ ಎಂದು ಕುಮಾರಸ್ವಾಮಿ ಅವರು ನೋವು ವ್ಯಕ್ತಪಡಿಸಿದರು.
'ಭಾರತದ ಆತ್ಮ ಹಳ್ಳಿಗಳಲ್ಲಿದೆ' ಎಂದು ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರು ಹೇಳಿದ್ದರು. ನಿಜ, ನಾನು ಹಳ್ಳಿಯವನು. ಅಲ್ಲೇ ಹುಟ್ಟಿ ಹಟ್ಟಿಯಲ್ಲಿ ಆಡಿ ಬೆಳೆದವನು. ಹಳ್ಳಿಯವನು ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆ ಇದೆ. ಹಳ್ಳಿಗರೆಂದರೆ ಗುಗ್ಗುಗಳಲ್ಲ ಎಂದು ಪ್ರಿಯಾಂಕ್ ಖರ್ಗೆ ಅವರಿಗೆ ವಿನಮ್ರವಾಗಿ ಹೇಳಬಯಸುತ್ತೇನೆ ಎಂದು ಸಚಿವರು ಹೇಳಿದರು.
ಗೃಹ ಸಚಿವರಿಗೆ ಒಂದು ಮಾತು ಹೇಳಲು ಬಯಸುತ್ತೇನೆ. ನೀವು ಪ್ರತಿಯೊಂದಕ್ಕೂ ದಾಖಲೆ ಕೇಳುತ್ತೀರಿ. ಸಿದ್ದರಾಮಯ್ಯ ಅವರ ಸಂಪುಟದಲ್ಲಿ ನೀವು ಮೂರುವರ್ಷಗಳ ನಿರ್ವಹಿಸಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಎಂಜಿನಿಯರುಗಳನ್ನು ತರಾತುರಿಯಲ್ಲಿ ಆಯ್ಕೆ ಮಾಡಿದ್ದಿರಿ ಎಂಬುದು ನಿಮಗೆ ನೆನಪಿದೆಯಾ? ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ನಾಡಿನ ಮುಂದೆ ಇಟ್ಟಿದ್ದು ಈ ಹಳ್ಳಿ ಗುಗ್ಗು ಎಂಬುದನ್ನು ಮರೆಯಬೇಡಿ ಪ್ರಿಯಾಂಕ್ ಖರ್ಗೆ ಅವರೇ ಎಂದು ಸಚಿವರು ಗೃಹ ಸಚಿವರಿಗೆ ಪ್ರತ್ಯುತ್ತರ ನೀಡಿದರು.
ಆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನು ಸಮಗ್ರ ದಾಖಲೆಗಳನ್ನು ಬಿಡುಗಡೆ ಮಾಡಿದ್ದೇನೆ. ನಿಮ್ಮ ಕಡೆಯಿಂದ ತ್ತು ಕೆಪಿಎಸ್ಸಿಯಿಂದ ಆಗಿರುವ ತಪ್ಪುಗಳು ಮತ್ತು ಅಕ್ರಮಗಳನ್ನು ನೈಜ ದಾಖಲೆಗಳ ಮೂಲಕ ಎತ್ತಿ ತೋರಿಸಿದ್ದೇನೆ. ಅದನ್ನು ಒಪ್ಪಲು ನೀವು ಸಿದ್ದರಿಲ್ಲ. ಕೇಂದ್ರ ಸಚಿವರಿಂದ ಒಳ್ಳೆಯ ಸಚಿವ ಎಂದು ಭೇಷ್ ಎನಿಸಿಕೊಂಡವರು ನೀವು. ನಾನು ಸಾಮಾನ್ಯ ವ್ಯಕ್ತಿ, ಹುಲುಮಾನವ, ಗೊತ್ತಿದ್ದನ್ನು ಮಾತ್ರ ತಮ್ಮ ಗಮನಕ್ಕೆ ತಂದಿದ್ದೇನೆ. ಅಷ್ಟಕ್ಕೆ ನೀವು ನನ್ನನ್ನು ಹಳ್ಳಿಗುಗ್ಗು ಎಂದು ಕರೆದಿದ್ದೇವೆ ಎಂದು ಸಚಿವರು ಪ್ರಿಯಾಂಕ್ ಖರ್ಗೆ ಅವರಿಗೆ ಟಾಂಗ್ ನೀಡಿದರು.
24 ಜನ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಎಂಜಿನಿಯರ್ಗಳ (AEE) ಅಕ್ರಮ ನೇಮಕಾತಿಯ ಬಗ್ಗೆ ನಾನು ಕೊಟ್ಟಿರುವ ಎಲ್ಲಾ ದಾಖಲೆಗಳನ್ನು ತಮ್ಮ ಕುರ್ಚಿಯಡಿಯಲ್ಲೇ ಇಟ್ಟುಕೊಂಡು ಕಣ್ಣುಮುಚ್ಚಿ ಕೂತಿದ್ದೀರಿ. ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರಿಂದ ಸರ್ಟಿಫಿಕೇಟ್ ಪಡೆದಿದ್ದೇವೆ ಎಂದು ಬೆನ್ನು ತಟ್ಟಿಕೊಳ್ಳುವ ನೀವು, ಇಲಾಖೆಯ ಭ್ರಷ್ಟಾಚಾರವನ್ನು ಮುಚ್ಚಿಡುತ್ತಿದ್ದೀರಿ. 40% ಕಮಿಷನ್ ಅನ್ನು 60% ಗೆ ಏರಿಸಿದ್ದೇ ನಿಮ್ಮ ಸಾಧನೆಯಾಗಿದೆ ಎಂದು ಅವರು ಕಟುವಾಗಿ ಟೀಕಿಸಿದರು.
2018ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ತಾವು ಏನು ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿರುವ ಸಚಿವರಿಗೆ ತಿರುಗೇಟು ಕೊಟ್ಟ ಕುಮಾರಸ್ವಾಮಿ ಅವರು; ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ನಿಮ್ಮ ಪಕ್ಷದ ನಾಯಕಿಯನ್ನು ಮಕ್ಕಳ ರಕ್ಷಣಾ ಆಯೋಗದ ಅಧ್ಯಕ್ಷರನ್ನಾಗಿ ಮಾಡಿದ್ದನ್ನು ಮರೆಯಬೇಡಿ. ಸ್ಟಿಂಗ್ ಆಪರೇಷನ್ ನಡೆದಿರುವುದು 2023ರಲ್ಲಿ, ಆಗ ಇದ್ದಿದ್ದು ಕಾಂಗ್ರೆಸ್ ಸರಕಾರವೇ ಹೊರತು ಬೇರೆ ಪಕ್ಷದ ಸರಕಾರ ಅಲ್ಲ. ತಪ್ಪಿತಸ್ಥರ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳುವ ಬದಲು ಈ ವಿಷಯವನ್ನು ಮುಚ್ಚಿಹಾಕುವ ಯತ್ನ ನಡೆದಿದೆ ಎಂದು ಆರೋಪಿಸಿದರು.
ಸಂವಿಧಾನವನ್ನು ಸದಾ ಕೈಯಲ್ಲಿ ಹಿಡಿದುಕೊಂಡು ಓಡಾಡುವ ಸಚಿವರು, ಕುಡಿಯಲು ನೀರಿಲ್ಲದ ಹಳ್ಳಿಯಿಂದ ಬಂದ ಡಾ. ಬಿ.ಆರ್.ಅಂಬೇಡ್ಕರ್ ಅವರು ಗ್ರಾಮೀಣ ಜನತೆಗೆ ದನಿಯಾಗಿದ್ದನ್ನು ಪ್ರಿಯಾಂಕ್ ಖರ್ಗೆ ಮರೆತಿದ್ದಾರೆ. ಮಹಾತ್ಮ ಗಾಂಧೀಜಿ ಅವರು 'ರೈತರ ಆತ್ಮ ಹಳ್ಳಿಗಳಲ್ಲಿದೆ' ಎಂದಿದ್ದರು, ಆದರೆ ಕಾಂಗ್ರೆಸ್ ನಾಯಕರು ರೈತರನ್ನು ಕೀಳಾಗಿ ಕಾಣುತ್ತಿದ್ದಾರೆ, ಗಾಂಧೀಜಿ ಅವರ ಸಂದೇಶವನ್ನು ಅಣಕ ಮಾಡುತ್ತಿದ್ದಾರೆ ಎಂದು ಸಚಿವರು ಬೇಸರ ವ್ಯಕ್ತಪಡಿಸಿದರು.
ತಮ್ಮ ತಂದೆ ಹೆಚ್.ಡಿ.ದೇವೇಗೌಡರು ಸಾಮಾನ್ಯ ಹಳ್ಳಿಯ ರೈತನ ಮಗನಾಗಿ ದೇಶದ ಪ್ರಧಾನಿಯಾಗಿ ನೀಡಿದ ಕೊಡುಗೆಯನ್ನು ಸ್ಮರಿಸಿದ ಸಚಿವರು; ಗ್ರಾಮ ವಾಸ್ತವ್ಯದ ಮೂಲಕ ರೈತರ ಕಷ್ಟಸುಖಗಳಲ್ಲಿ ಭಾಗಿಯಾಗಿದ್ದನ್ನು ಅವರು ನೆನಪು ಮಾಡಿಕೊಳ್ಳಲಿ. ಸತತ 40 ವರ್ಷಗಳ ಕಾಲ ಅಂದರೆ, ಸತತ ಎಂಟು ಅವಧಿಗೆ ಗುರುಮಿಟ್ಕಲ್ ಕ್ಷೇತ್ರವನ್ನು ಪ್ರತಿನಿಧಿಸಿದ ಖರ್ಗೆ ಕುಟುಂಬ, ಆ ಭಾಗದ ದಲಿತರು ಮತ್ತು ರೈತರಿಗೆ ಮಾಡಿದ ಒಳ್ಳೆಯ ಕೆಲಸಗಳನ್ನು ಪಟ್ಟಿ ಮಾಡಿ ರಾಜ್ಯದ ಮುಂದೆ ಇಡಲಿ ಎಂದು ಸಚಿವರು ಸವಾಲು ಹಾಕಿದರು.
ರಾಷ್ಟ್ರ ಮಟ್ಟದಲ್ಲಿ ರಾಹುಲ್ ಗಾಂಧಿಯವರನ್ನು ಜನರು 'ಇಡಿಯಟ್' (ಮೂರ್ಖ) ಎಂದು ಕರೆಯುತ್ತಾರೆ. ಆ ಪದಕ್ಕೆ ಪ್ರಿಯಾಂಕ್ ಖರ್ಗೆ ಅವರು 'ವಿಲೇಜ್' (ಹಳ್ಳಿ) ಎಂಬ ಪದವನ್ನು ಸೇರಿಸಿ ನನ್ನನ್ನು 'ವಿಲೇಜ್ ಇಡಿಯಟ್' ಎಂದು ಕರೆದು ಅಪಮಾನಿಸಿದ್ದಾರೆ. ಹಳ್ಳಿಯ ರೈತರನ್ನು ಹಗುರವಾಗಿ ಪರಿಗಣಿಸಿರುವ ಈ ಕಾಂಗ್ರೆಸ್ ನಾಯಕರ ದುರಹಂಕಾರದ ಮಾತುಗಳಿಗೆ ಮುಂದಿನ ದಿನಗಳಲ್ಲಿ ನಾಡಿನ ಜನತೆಯೇ ತಕ್ಕ ಉತ್ತರ ನೀಡಲಿದ್ದಾರೆ ಎಂದು ಅವರು ಎಚ್ಚರಿಸಿದರು.
ಬೆಲೆ ಏರಿಕೆ ಗ್ಯಾರಂಟಿ ಕೊಟ್ಟು ಸುಲಿಗೆ ಮಾಡುತ್ತಿರುವ ಸರಕಾರ:
ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ರಾಜ್ಯ ಸರಕಾರವು ಜನಸಾಮಾನ್ಯರ ಮೇಲೆ ವಿಪರೀತ ಆರ್ಥಿಕ ಹೊರೆ ಹೇರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಸಚಿವ ಕುಮಾರಸ್ವಾಮಿ ಅವರು; ನಂದಿನಿ ಹಾಲಿನ ದರವನ್ನು ಹೆಚ್ಚಿಸಿದೆ. ಅಮೂಲ್ ಹಾಲಿನ ದರ ಲೀಟರಿಗೆ ₹70 ರೂ. ಇದ್ದರೆ, ನಂದಿನಿ ಹಾಲಿನ ದರ ₹72 ಆಗಿದೆ. ಹಾಲಿನ ಉಪ ಉತ್ಪನ್ನಗಳ ಬೆಲೆಯನ್ನೂ ಏರಿಕೆ ಮಾಡಲಾಗಿದೆ. ಸಾರಿಗೆ ನಿಗಮಗಳ ಬಸ್ ಪ್ರಯಾಣ ದರವನ್ನು ಶೇ.35ರಿಂದ 40ರಷ್ಟು ಏರಿಕೆ ಮಾಡಲಾಗಿದ್ದು, ಸಾರ್ವಜನಿಕರಿಗೆ ದೊಡ್ಡ ಹೊರೆಯಾಗಿದೆ. ಸಾರಿಗೆ ಸಿಬ್ಬಂದಿಗೆ ನೀಡಬೇಕಾದ ₹9,000 ಕೋಟಿ ಬಾಕಿ ಉಳಿಸಿಕೊಳ್ಳಲಾಗಿದೆ ಹಾಗೂ ರೈತರಿಗೆ ಪಶು ಆಹಾರವನ್ನು ಒದಗಿಸುವುದರಲ್ಲೂ ಸರಕಾರ ವಿಫಲವಾಗಿದೆ ಎಂದು ಸಚಿವರು ಅಂಕಿ-ಅಂಶಗಳ ಸಮೇತ ತರಾಟೆಗೆ ತೆಗೆದುಕೊಂಡರು.
ಕಾಂಗ್ರೆಸ್ ವೋಟ್ ಚೋರಿ ಹೋರಾಟ ಹಾಸ್ಯಾಸ್ಪದ:
ರಾಷ್ಟ್ರದಲ್ಲಿ ಅನೇಕ ವಿಷಯಗಳಲ್ಲಿ ಚೋರಿ ಮಾಡಿರುವ ಕಾಂಗ್ರೆಸ್ ಪಕ್ಷವು ಈಗ ವೋಟ್ ಚೋರಿ ಬಗ್ಗೆ ಹೋರಾಟ ಹಾಸ್ಯಸ್ಪದ ಎಂದು ಕಟುವಾಗಿ ಟೀಕಿಸಿದ ಕೇಂದ್ರ ಸಚಿವರು; ಕಾಂಗ್ರೆಸ್ ಪಕ್ಷವು ಕೇವಲ 'ವೋಟ್ ಚೋರಿ' ಅಷ್ಟೇ ಮಾಡಿಲ್ಲ, ವೋಟ್ ಲೂಟಿ ಮಾಡಿದೆ. ದೇಶದಲ್ಲಿ ಹಲವಾರು ಲೂಟಿ ಕೆಲಸಗಳನ್ನು ನಡೆಸಿದೆ ಎಂದು ಕಿಡಿಕಾರಿದರು.
ಮಾಜಿ ಮಂತ್ರಿಗಳಾದ ಬಂಡೆಪ್ಪ ಕಾಶೆಂಪುರ್, ವೆಂಕಟರಾವ್ ನಾಡಗೌಡ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.