ನವದೆಹಲಿ, ನ.5: ಭಾರತ ಸರ್ಕಾರವು ಉತ್ಪಾದನಾ ಉತ್ತೇಜನಾ ಯೋಜನೆಯ (PLI) 3ನೇ ಸುತ್ತಿನ PLI 1.2 ಅನ್ನು ಆರಂಭಿಸಿದ್ದು, ಈ ಮಹತ್ವಾಕಾಂಕ್ಷೆಯ ಕಾರ್ಯಕ್ರಮಕ್ಕೆ ಕೇಂದ್ರದ ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ (HD Kumaraswamy), ಮಂಗಳವಾರ ನವದೆಹಲಿಯಲ್ಲಿ ಚಾಲನೆ ನೀಡಿದರು. ವಿಶೇಷ ಉಕ್ಕು (ಸ್ಪೆಷಾಲಿಟಿ ಸ್ಟೀಲ್) ಉತ್ಪಾದನೆಯಲ್ಲಿ ಭಾರತವನ್ನು ಜಾಗತಿಕ ನಾಯಕನನ್ನಾಗಿ ಮಾಡುವ ಬದ್ಧತೆಯನ್ನು ಈ ಉತ್ತೇಜಕ ಯೋಜನೆ ಮತ್ತಷ್ಟು ದೃಢಪಡಿಸಲಿದೆ. ಈ ಉಪಕ್ರಮವು ಭಾರತದ ಕೈಗಾರಿಕಾ ಸ್ವಾವಲಂಬನೆ ಮತ್ತು ಜಾಗತಿಕ ಸ್ಪರ್ಧಾತ್ಮಕತೆಯತ್ತ ಸಾಗುವ ಪ್ರಯಾಣದಲ್ಲಿ ಒಂದು ಪ್ರಮುಖ ಮೈಲಿಗಲ್ಲು ಎಂದು ಸಚಿವ ಎಚ್.ಡಿ. ಕುಮಾರಸ್ವಾಮಿ ಬಣ್ಣಿಸಿದರು.
ಆತ್ಮನಿರ್ಭರ ಭಾರತ ಸಾಕಾರದ ಪ್ರಮುಖ ಆಧಾರಸ್ತಂಭವಾಗಿ ಉಕ್ಕು ಕ್ಷೇತ್ರವು ನಿಂತಿದೆ. ಅಲ್ಲದೆ, ಭಾರತವನ್ನು ಸ್ವಾವಲಂಬಿ, ಜಾಗತಿಕವಾಗಿ ಸ್ಪರ್ಧಾತ್ಮಕ ಮತ್ತು ಕೈಗಾರಿಕಾ ಉತ್ಪಾದನೆಯ ಪ್ರತಿಯೊಂದು ಕ್ಷೇತ್ರದಲ್ಲಿ ತಾಂತ್ರಿಕವಾಗಿ ಮುಂದುವರಿದಂತೆ ಮಾಡುವ ಧ್ಯೇಯವನ್ನು ಈ ಯೋಜನೆ ಹೊಂದಿದೆ ಎಂದು ಸಚಿವರು ಹೇಳಿದರು.
ಈ ಸುದ್ದಿಯನ್ನೂ ಓದಿ | BY Vijayendra: ರಾಜ್ಯ ಸರ್ಕಾರಕ್ಕೆ ಮನುಷ್ಯತ್ವ ಇದ್ದರೆ ತಕ್ಷಣ ರೈತರ ಸಂಕಷ್ಟಕ್ಕೆ ಪರಿಹಾರ ನೀಡಲಿ: ಬಿ.ವೈ. ವಿಜಯೇಂದ್ರ ಆಗ್ರಹ
ಭಾರತದ ಉಕ್ಕು ವಲಯಕ್ಕೆ ಪರಿವರ್ತನಾ ನೀತಿ
ಜುಲೈ 2021ರಲ್ಲಿ ಕೇಂದ್ರ ಸಚಿವ ಸಂಪುಟವು ಅನುಮೋದಿಸಿದ ವಿಶೇಷ ಉಕ್ಕಿನ ಉತ್ತೇಜನಕ್ಕಾಗಿ ಒಟ್ಟು ₹6,322 ಕೋಟಿ ಮೊತ್ತದ PLI ಯೋಜನೆಯನ್ನು ಅನುಷ್ಠಾನಕ್ಕೆ ತರಲು ಅನುಮೋದನೆ ನೀಡಿತ್ತು. ಇದು ರಕ್ಷಣೆ, ಏರೋಸ್ಪೇಸ್, ಇಂಧನ, ಆಟೋಮೊಬೈಲ್ ಮತ್ತು ಮೂಲಸೌಕರ್ಯದಂತಹ ವಲಯಗಳಲ್ಲಿ ಬಳಸಲಾಗುವ ಹೆಚ್ಚಿನ ಮೌಲ್ಯದ, ಉನ್ನತ ದರ್ಜೆಯ ಉಕ್ಕಿನ ಉತ್ಪಾದನೆಯನ್ನು ಉತ್ತೇಜಿಸಲು ಉದ್ದೇಶಿಸಿದ ಯೋಜನೆಯಾಗಿದೆ ಎಂದು ಮಾಹಿತಿ ನೀಡಿದರು.
ಈ ಯೋಜನೆಯು ₹43,874 ಕೋಟಿ ಮೌಲ್ಯದ ಹೂಡಿಕೆ ಆಕರ್ಷಿಸಿ, 30,760 ನೇರ ಉದ್ಯೋಗಗಳನ್ನು ಸೃಷ್ಟಿಸಿದೆ ಮತ್ತು ಭಾರತದಲ್ಲಿ ಹೊಸದಾಗಿ 14.3 ಮಿಲಿಯನ್ ಟನ್ ವಿಶೇಷ ಉಕ್ಕಿನ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸುವ ಬೃಹತ್ ಉದೇಶ ಹೊಂದಿದೆ. ಇತ್ತೀಚಿನ ಮಾಹಿತಿಯ ಪ್ರಕಾರ ಸೆಪ್ಟೆಂಬರ್ 2025ರಂತೆ ಮೊದಲ ಎರಡು ಸುತ್ತುಗಳಲ್ಲಿ ಭಾಗವಹಿಸುವ ಕಂಪನಿಗಳು ಈಗಾಗಲೇ ₹22,973 ಕೋಟಿ ಹೂಡಿಕೆ ಮಾಡಿ 13,284 ಉದ್ಯೋಗಗಳನ್ನು ಸೃಷ್ಟಿಸಿವೆ ಎಂದು ಸುದ್ದಿಗಾರರ ಪ್ರಶ್ನೆಗೆ ಸಚಿವ ಕುಮಾರಸ್ವಾಮಿ ಉತ್ತರಿಸಿದರು.
ಮೊದಲ ಎರಡು ಸುತ್ತುಗಳಿಗೆ ಬಂದಿರುವ ಪ್ರತಿಕ್ರಿಯೆ ಹೆಚ್ಚು ಉತ್ತೇಜನಕಾರಿಯಾಗಿದೆ. ಈ ಯಶಸ್ಸು ಭಾರತದ ಸುಧಾರಣಾ ಆಧರಿತ ಮತ್ತು ಉದ್ಯಮ ಚಾಲಿತ ನೀತಿ ಚೌಕಟ್ಟಿನ ಬಲವನ್ನು ಧೃಢವಾಗಿ ತೋರುತ್ತದೆ ಎಂದು ಅವರು ಹೇಳಿದರು.
PLI 1.2: ಸುಧಾರಿತ ಉಕ್ಕಿನ ವರ್ಗಗಳಿಗೆ ಒಂದು ಉತ್ತೇಜನ
ಹೊಸದಾಗಿ ಪ್ರಾರಂಭಿಸಲಾದ PLI 1.2 ಸುತ್ತಿನ ಉತ್ತೇಜನ ಯೋಜನೆಯು ಮುಂದಿನ ಪೀಳಿಗೆಯ ಕೈಗಾರಿಕಾ ಮತ್ತು ರಕ್ಷಣಾ ಅನ್ವಯಿಕೆಗಳಿಗೆ ಅಗತ್ಯವಾದ ವಸ್ತುಗಳಾದ ಸೂಪರ್ ಮಿಶ್ರಲೋಹಗಳು, CRGO ಉಕ್ಕು, ಸ್ಟೇನ್‌ಲೆಸ್ ಸ್ಟೀಲ್ ಉದ್ದ ಮತ್ತು ಸಮತಟ್ಟಾದ ಉತ್ಪನ್ನಗಳು, ಟೈಟಾನಿಯಂ ಮಿಶ್ರಲೋಹಗಳು ಮತ್ತು ಲೇಪಿತ ಉಕ್ಕುನಂತಹ ಮುಂದುವರಿದ ಮತ್ತು ಉದಯೋನ್ಮುಖ ವರ್ಗಗಳಲ್ಲಿ ಹೊಸ ಹೂಡಿಕೆಗಳನ್ನು ಆಕರ್ಷಿಸುವ ಗುರಿಯನ್ನು ಹೊಂದಿದೆ.
ಅಲ್ಲದೆ, ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕೆ (MSME) ಗಳು ಮತ್ತು ಹಿಂದಿನ ಹಂತಗಳನ್ನು ಅನುಸರಿಸಿ ತಮ್ಮ ಸಾಮರ್ಥ್ಯವನ್ನು ವಿಸ್ತರಿಸಿದ ಅಥವಾ ನವೀಕರಿಸಿದ ಅಸ್ತಿತ್ವದಲ್ಲಿರುವ ಉತ್ಪಾದಕರಿಗೆ ಹೊಸ ಅವಕಾಶ ಮಾತು ಮಾರ್ಗಗಳನ್ನು ಈ ಯೋಜನೆ ತೆರೆಯುತ್ತದೆ ಎಂದು ತಿಳಿಸಿದರು. PLI 1.2 ಅನ್ನು ಉನ್ನತ ದರ್ಜೆಯ ಉಕ್ಕಿನ ಉತ್ಪಾದನೆಗೆ ಜಾಗತಿಕ ಕೇಂದ್ರವಾಗುವತ್ತ ಭಾರತದ ಪ್ರಯಾಣವನ್ನು ವೇಗಗೊಳಿಸಲು ರೂಪಿಸಲಾಗಿದೆ. ಹೊಸ ಹಂತವು ಭಾರತೀಯ ಉಕ್ಕು ತಯಾರಕರನ್ನು ಜಾಗತಿಕ ವೇದಿಕೆಯಲ್ಲಿ ಹೆಚ್ಚು ಸ್ಪರ್ಧಾತ್ಮಕವಾಗಿಸುತ್ತದೆ ಎಂದು ಹೇಳಿದರು.
ಜಾಗತಿಕ ಉತ್ಪಾದನಾ ಕೇಂದ್ರ ನಿರ್ಮಾಣ
ಭಾರತವು ಜಾಗತಿಕ ಅಗ್ರ ಉಕ್ಕು ಉತ್ಪಾದಕರಲ್ಲಿ ಒಂದಾಗಿ ಸ್ಥಿರವಾಗಿ ಹೊರ ಹೊಮ್ಮುತ್ತಿರುವುದರಿಂದ, PLI ಯೋಜನೆಯು ಜಾಗತಿಕ ಮೌಲ್ಯ ಸರಪಳಿಯಲ್ಲಿ ರಾಷ್ಟ್ರದ ಪಾತ್ರವನ್ನು ಕ್ರೋಢೀಕರಿಸುವ ನಿರೀಕ್ಷೆಯಿದೆ. ರಫ್ತು-ನೇತೃತ್ವದ ಬೆಳವಣಿಗೆ, ತಾಂತ್ರಿಕ ನಾವೀನ್ಯತೆ ಮತ್ತು ಉತ್ಪಾದನೆಯಲ್ಲಿ ಸುಸ್ಥಿರತೆಯ ಮೇಲೆ ಗಮನ ಕೇಂದ್ರೀಕರಿಸಲಾಗುವುದು ಎಂದು ಒತ್ತಿ ಹೇಳಿದರು.
ಈ ಉಪಕ್ರಮದ ಮೂಲಕ ನಾವು ಭಾರತಕ್ಕೆ ಉಕ್ಕನ್ನು ಉತ್ಪಾದಿಸುವುದಲ್ಲದೆ, ಭಾರತದಿಂದ ಜಗತ್ತಿಗೆ ಸರಬರಾಜು ಮಾಡುವ ಗುರಿಯನ್ನು ಹೊಂದಿದ್ದೇವೆ ಎಂದು ಸಚಿವರು ಹೇಳಿದರಲ್ಲದೆ, ಈ ಯೋಜನೆಯು ಶುದ್ಧ ತಂತ್ರಜ್ಞಾನ ಮತ್ತು ಹೆಚ್ಚಿನ ಮೌಲ್ಯವರ್ಧನೆಯ ಮೂಲಕ ಪರಿಸರ ಸುಸ್ಥಿರತೆಯನ್ನು ಖಚಿತಪಡಿಸಿಕೊಳ್ಳುವಾಗ ಭಾರತವನ್ನು ಉತ್ಪಾದನಾ ಶಕ್ತಿ ಕೇಂದ್ರವನ್ನಾಗಿ ಮಾಡುವ ಸರ್ಕಾರದ ವಿಶಾಲ, ಧೀರ್ಘ ದೃಷ್ಟಿಕೋನಕ್ಕೆ ಹೊಂದಿಕೆಯಾಗುತ್ತದೆ ಎಂದರು.
2047ರ ವೇಳೆಗೆ ವಿಕಸಿತ ಭಾರತ ಕಡೆಗೆ
ಸ್ಥಿತಿಸ್ಥಾಪಕ, ಸ್ವಾವಲಂಬಿ ಮತ್ತು ಜಾಗತಿಕವಾಗಿ ಸ್ಪರ್ಧಾತ್ಮಕ ಉಕ್ಕಿನ ಉದ್ಯಮವನ್ನು ನಿರ್ಮಿಸಲು ಸರ್ಕಾರ ಬದ್ಧವಾಗಿದೆ ಎಂದು ಅವರು ಪುನರುಚ್ಚರಿಸಿದರು. ಪಿಎಲ್ಐ 1.2 ಸುತ್ತು, ಆತ್ಮನಿರ್ಭರ ಭಾರತ, 2047ರ ವೇಳೆಗೆ ವಿಕಸಿತ ಭಾರತ ಸಾಕಾರ ಮತ್ತು 2070ರ ವೇಳೆಗೆ ಇಂಗಾಲ ಹೊರಸೂಸುವಿಕೆಯಲ್ಲಿ ಭಾರತದ ನಿವ್ವಳ ಶೂನ್ಯ ಸಾಧನೆ ಗುರಿಯನ್ನು ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.
ಈ ಸುದ್ದಿಯನ್ನೂ ಓದಿ | RRB Recruitment 2025: ರೈಲ್ವೆ ನೇಮಕಾತಿ ಮಂಡಳಿಯಿಂದ 5,810 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ; ಪದವಿ ಪೂರೈಸಿದವರು ಅಪ್ಲೈ ಮಾಡಿ
ಭಾರತೀಯ ಉಕ್ಕಿನ ಕಥೆ ಭಾರತದ ಪ್ರಗತಿಯ ಕಥೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯಿಂದ, ಅವರಿಂದ ಮಾರ್ಗದರ್ಶಿಸಲ್ಪಟ್ಟ ಗುರಿಯಿಂದ ಸಾಧನೆಯತ್ತ ಪ್ರಯಾಣ ಮಾಡುತ್ತಿದ್ದೇವೆ. ನಿರಂತರ ಹೂಡಿಕೆಯ ಒಳಹರಿವು, ತಂತ್ರಜ್ಞಾನ ಪಾಲುದಾರಿಕೆ ಮತ್ತು ರಫ್ತು ವಿಸ್ತರಣೆಯೊಂದಿಗೆ ಭಾರತವು ತನ್ನ ದೇಶಿಯ ಉಕ್ಕಿನ ಬೇಡಿಕೆ ಪೂರೈಸುವುದಲ್ಲದೆ, ಮುಂಬರುವ ವರ್ಷಗಳಲ್ಲಿ ಅತ್ಯಾಧುನಿಕ ಉಕ್ಕಿನ ಉತ್ಪನ್ನಗಳ ಜಾಗತಿಕ ಪೂರೈಕೆದಾರ ದೇಶವಾಗುತ್ತದೆ ಎಂದಿದ್ದಾರೆ.