ಹಾಸನ, ಏ. 23: ಕೇವಲ 2,000 ರುಪಾಯಿ ಗ್ಯಾರಂಟಿ ಹಣದಿಂದ ಅಭಿವೃದ್ಧಿ ಸಾಧ್ಯವಿಲ್ಲ. ಮಹಿಳೆಯರು ಈ ಸಣ್ಣ ಮೊತ್ತಕ್ಕೆ ಮರುಳಾಗಬಾರದು. ಇದರಿಂದ ಜನರ ಕುಟುಂಬಗಳ ಉದ್ಧಾರವು ಅಸಾಧ್ಯ. ಇಂತಹ ಗ್ಯಾರಂಟಿಗಳಿಂದ ರಾಜ್ಯ ಸರ್ಕಾರಗಳಿಗೆ ಸಂಬಳ ಕೊಡಲಾಗದಂತ ದುಸ್ಥಿತಿ ಎದುರಾಗಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಕಳವಳ ವ್ಯಕ್ತಪಡಿಸಿದರು. ಹೊಳೆನರಸೀಪುರ ತಾಲೂಕಿನ ಉದ್ದನ ಹೊಸಹಳ್ಳಿ ಗ್ರಾಮದಲ್ಲಿ ಶ್ರೀ ವೀರಾಂಜನೇಯಸ್ವಾಮಿ ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವರು, ಕೇವಲ ಎರಡು ಸಾವಿರ ರೂಪಾಯಿಯಿಂದ ಅಭಿವೃದ್ಧಿ ಸಾಧ್ಯವಿಲ್ಲ. ಅದರಿಂದ ಆರೋಗ್ಯ, ಶಿಕ್ಷಣ ಸೇರಿದಂತೆ ಕುಟುಂಬಗಳ ಯಾವ ಅಗತ್ಯವು ಪೂರೈಕೆ ಆಗುವುದಿಲ್ಲ. ದೊಡ್ಡ ದೊಡ್ಡ ಕಾಯಿಲೆಗಳು ಬಂದಾಗ ಜನರಿಗೆ ಈ ಎರಡು ಸಾವಿರ ರೂಪಾಯಿಯಿಂದ ಚಿಕಿತ್ಸೆ ಪಡೆಯಲು ಸಾಧ್ಯವೇ? ಎಂದು ಪ್ರಶ್ನಿಸಿದರು.
ಕರ್ನಾಟಕದಲ್ಲಿ ಸರ್ಕಾರಿ ನೌಕರರ ಮಾರ್ಚ್ ವೇತನವನ್ನು ಇನ್ನು ಕೊಟ್ಟಿಲ್ಲ ಎನ್ನುವ ಮಾಹಿತಿ ಇದೆ. ಹಾಗೆಯೇ ಕಾಂಗ್ರೆಸ್ ಆಡಳಿತ ಇರುವ ಹಿಮಾಚಲ ಪ್ರದೇಶವೂ ಸರ್ಕಾರಿ ನೌಕರರ ಸಂಬಳ ನೀಡದೆ ಒದ್ದಾಡುತ್ತಿದೆ. ಆ ಸರ್ಕಾರವು ನೌಕರರ ಸಂಬಳವನ್ನು ಕಡಿತ ಮಾಡಿಕೊಂಡಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಹೀಗಾಗಿ ರಾಜ್ಯಗಳ ಅಭಿವೃದ್ಧಿ ಸಂಪೂರ್ಣವಾಗಿ ಹಳಿತಪ್ಪಿದೆ. ಇದಕ್ಕೆ ಕಾಂಗ್ರೆಸ್ ಕಾರಣವಾಗಿದೆ ಎಂದು ಕೇಂದ್ರ ಸಚಿವ ಹೇಳಿದರು.
ಸುಮಾರು 7,26,000 ಲಕ್ಷ ಕೋಟಿ ರುಪಾಯಿಗೂ ಹೆಚ್ಚು ಹಣವನ್ನು ಕರ್ನಾಟಕ ಸರ್ಕಾರ ಸಾಲ ಮಾಡಿದೆ. ಕಾಂಗ್ರೆಸ್ ಸರ್ಕಾರವೇ ಅತಿಹೆಚ್ಚು ಸಾಲ ಮಾಡಿದೆ. ರಾಜ್ಯದ ಪ್ರತಿಯೊಬ್ಬರ ತಲೆಯ ಮೇಲೆಯೂ ಕನಿಷ್ಠವೆಂದರೂ ಒಂದು ಲಕ್ಷ ರೂಪಾಯಿಗೂ ಅಧಿಕ ಸಾಲವಿದೆ. ಇದಕ್ಕೆ ಕಾರಣ ಯಾರು? ಇದನ್ನು ತೀರಿಸುವವರು ಯಾರು? ಇಷ್ಟು ಸಾಲವನ್ನು ಮಾಡಿದರೆ ರಾಜ್ಯ ಅಭಿವೃದ್ಧಿ ಹೊಂದಲು ಸಾಧ್ಯವೇ ಎಂದು ಸಚಿವ ಕುಮಾರಸ್ವಾಮಿ ಅವರು ಆತಂಕ ವ್ಯಕ್ತಪಡಿಸಿದರು.
ಒಂದು ಕೈಯಲ್ಲಿ ನಿಮಗೆ 2,000 ರುಪಾಯಿ ಕೊಡುತ್ತಾರೆ. ಇನ್ನೊಂದು ಕೈಯಲ್ಲಿ ತೆರಿಗೆ ಮೇಲೆ ತೆರಿಗೆ ವಿಧಿಸುತ್ತಾರೆ. ಬೆಲೆ ಏರಿಕೆಗಳ ಬಗ್ಗೆ ಹೇಳುವ ಹಾಗೆಯೇ ಇಲ್ಲ. ಇತ್ತೀಚೆಗೆ ವಿದ್ಯುತ್ ದರವನ್ನು ಹೆಚ್ಚಿಸಿದರು. ಹಾಗೆಯೇ ಮದ್ಯದ ದರವನ್ನು ಏರಿಸಿದರು. ಎಷ್ಟು ಸಾಧ್ಯವೊ ಅಷ್ಟು ಕಡೆ ಜನರನ್ನು ಕಿತ್ತು ತಿನ್ನುವ ಕೆಲಸವನ್ನು ಈ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ಸಚಿವ ಕಿಡಿಕಾರಿದರು.
ಚುನಾವಣೆ ಬಂದಾಗ ನಿಮ್ಮ ಭವಿಷ್ಯ ಮತ್ತು ನಿಮ್ಮ ಮಕ್ಕಳ ಉದ್ಧಾರಕ್ಕಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುವವರನ್ನು ನೋಡಿ ಆಯ್ಕೆ ಮಾಡಿ. ಜಾತಿ ನೋಡಿ ಮತ ಹಾಕಬೇಡಿ. ಹಾಸನ ಜಿಲ್ಲೆ ಸೇರಿ ಇಡೀ ರಾಜ್ಯದಲ್ಲಿ ಆರೋಗ್ಯ, ಶಿಕ್ಷಣ, ವಿದ್ಯುತ್ ಕ್ಷೇತ್ರಗಳಲ್ಲಿ ಆಗಿರುವ ಅಭಿವೃದ್ಧಿಯನ್ನು ಗಮನಿಸಿ. ನನಗೆ ದೊರೆತ ಸಣ್ಣ ಅವಧಿಯಲ್ಲಿ ಇಷ್ಟೆಲ್ಲ ಕೆಲಸಗಳನ್ನು ಮಾಡಿದ್ದೇನೆ. ಸಾವಿರಾರು ಶಿಕ್ಷಕರನ್ನು ನೇರವಾಗಿ ಮತ್ತು ಪಾರದರ್ಶಕವಾಗಿ ನೇಮಕ ಮಾಡಿದ್ದೆ. ಆದರೆ ಈಗಿನ ಸರ್ಕಾರಕ್ಕೆ ಒಂದೇ ಒಂದು ನೇಮಕಾತಿ ಮಾಡುವ ಶಕ್ತಿಯು ಇಲ್ಲವಾಗಿದೆ ಎಂದು ಕೇಂದ್ರ ಸಚಿವರು ದೂರಿದರು.
ನನಗೆ ಅವಕಾಶ ಕೊಡಿ ಕರ್ನಾಟಕದಲ್ಲಿ ರಾಮರಾಜ್ಯ ಸ್ಥಾಪಿಸುತ್ತೇನೆ
ಒಮ್ಮೆ ನನ್ನ ಕೈಗೆ ಸರ್ಕಾರ ಕೊಡಿ, ಕರ್ನಾಟಕದಲ್ಲಿ ರಾಮರಾಜ್ಯ ಸ್ಥಾಪನೆ ಮಾಡಿ ತೋರಿಸುತ್ತೇನೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಘೋಷಿಸಿದರು. ಹೊಳೆನರಸೀಪುರ ತಾಲೂಕಿನ ದೊಡ್ಡಬೀಕನಹಳ್ಳಿ ಗ್ರಾಮದಲ್ಲಿ ಶ್ರೀ ಆಂಜನೇಯ ಸ್ವಾಮಿ ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪವನ ಶಕ್ತಿ ಸಾಮರ್ಥ್ಯದಲ್ಲಿ ಜಾಗತಿಕವಾಗಿ 4ನೇ ಸ್ಥಾನದಲ್ಲಿದೆ ಭಾರತ: ಪ್ರಲ್ಹಾದ್ ಜೋಶಿ
ಕಾಂಗ್ರೆಸ್ ಸರ್ಕಾರ ಸಾಲ ಮಾಡಿ ನಿಮ್ಮ ತಲೆಯ ಮೇಲೆ ಹೊರೆ ಹೊರೆಸಿ 2,000 ರುಪಾಯಿ ಗ್ಯಾರಂಟಿ ಕೊಡುತ್ತಿದೆ. ದಿನ ಬೆಳಗ್ಗೆ ಬೆಲೆ ಏರಿಕೆ ಮಾಡಿ ತೆರಿಗೆ ಏರಿಸಿದರೆ 2,000 ರುಪಾಯಿ ಕೊಟ್ಟರೆ ಏನು ಬಂತು? ನಾನಾದರೆ 5,000 ರುಪಾಯಿ ಕೊಡುತ್ತಿದ್ದೆ. ನಿಮಗೆ ಗ್ಯಾರಂಟಿ ಬೇಕಾದರೆ ನಾನೇ 5,000 ರುಪಾಯಿ ಕೊಡುತ್ತೇನೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದರು.