ನವದೆಹಲಿ, ಸೆ.29: ಕಬ್ಬು ಬೆಳೆಗಾರರೇ ಪ್ರತಿಭಟನೆ ಬೇಡ, ದೆಹಲಿಗೆ ಬನ್ನಿ ಅಧಿಕಾರಿಗಳ ಜತೆ ಕುಳಿತು ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಚರ್ಚಿಸೋಣ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಂಗಳವಾರ ಪ್ರತಿಭಟನೆಗೆ ಮುಂದಾಗಿರುವ ಕರ್ನಾಟಕದ ಕಬ್ಬು ಬೆಳೆಗಾರರಿಗೆ ಕರೆ ನೀಡಿರುವ ಸಚಿವ ಜೋಶಿ ಅವರು, ಕರ್ನಾಟಕದ ಕಬ್ಬು ಬೆಳೆಗಾರರು ಪ್ರತಿಭಟನೆ ನಡೆಸಬೇಕಿಲ್ಲ. ದೆಹಲಿಗೆ ಬಂದರೆ ಅಧಿಕಾರಿಗಳ ಜತೆ ಮಾತುಕತೆ ನಡೆಸಿ ಸಮಸ್ಯೆಗೆ ಸ್ಪಂದಿಸುವ ಭರವಸೆ ನೀಡಿದ್ದಾರೆ.
ತಮ್ಮ ʼಎಕ್ಸ್ʼ ಖಾತೆಯಲ್ಲಿ ಖುದ್ದು ವಿಡಿಯೋ ಸಂದೇಶ ಹಂಚಿಕೊಂಡಿರುವ ಸಚಿವರು, ರೈತರ ಸಮಸ್ಯೆ ಪರಿಹರಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಯಾವತ್ತೂ ಬದ್ಧವಿದೆ. ಕರ್ನಾಟಕದ ರೈತರನ್ನು ಮುಕ್ತವಾಗಿ ದೆಹಲಿಗೆ ಸ್ವಾಗತಿಸುತ್ತೇನೆ. ಅತ್ಯಂತ ಗೌರವದೊಂದಿಗೆ ರೈತರನ್ನು ಬರಮಾಡಿಕೊಂಡು ಸಮಸ್ಯೆ ಪರಿಹರಿಸಲು ಮುಕ್ತ ಮಾತುಕತೆ ನಡೆಸುವುದಾಗಿ ತಿಳಿಸಿದ್ದಾರೆ.
ರೈತ ಮುಖಂಡರನ್ನು ಅಧಿಕಾರಿಗಳ ಜತೆ ಕೂರಿಸಿ ಸಮಸ್ಯೆ ಪರಿಹರಿಸಲು ಸಮಾಲೋಚನೆ ನಡೆಸಲಾಗುವುದು. ತಮ್ಮ ಸರ್ಕಾರ ರೈತರ ಪರ ನಿಲ್ಲುತ್ತದೆ. ಹಾಗಾಗಿ ರೈತರು ರಸ್ತೆಯಲ್ಲಿ ಪ್ರತಿಭಟಿಸಬೇಕಿಲ್ಲ. ಬದಲಿಗೆ ಮಾತುಕತೆಗೆ ಬರಲಿ ಎಂದು ಕರ್ನಾಟಕದ ಕಬ್ಬು ಬೆಳೆಗಾರರನ್ನು ರಾಷ್ಟ್ರ ರಾಜಧಾನಿ, ಶಕ್ತಿ ಕೇಂದ್ರ ದೆಹಲಿಗೆ ಆಹ್ವಾನಿಸಿದ್ದಾರೆ ಸಚಿವ ಜೋಶಿ.
ಈ ಬಾರಿಯೂ ಬೆಲೆ ಹೆಚ್ಚಳ ಮಾಡಲಾಗುತ್ತದೆ
ʼಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಪ್ರತಿ ವರ್ಷ ಎಫ್‌ಆರ್‌ಪಿಯನ್ನು ಹೆಚ್ಚಿಸುತ್ತಿದೆ. ಮೇ ತಿಂಗಳಲ್ಲಷ್ಟೇ ₹365ಕ್ಕೆ ಹೆಚ್ಚಿಸಿ ಕಬ್ಬು ಬೆಳೆಗಾರರಿಗೆ ನೆರವಾಗಿದೆ. ಈ ಬಾರಿಯೂ ಕಬ್ಬಿಗೆ ಸೂಕ್ತ ಬೆಲೆ ನೀಡಲಾಗುವುದುʼ ಎಂದು ರೈತರಿಗೆ ಸಂದೇಶ ರವಾನಿಸಿದ್ದಾರೆ.
2026ರ ಫೆಬ್ರವರಿ ತಿಂಗಳಲ್ಲಿ ಕಾರ್ಯಕ್ರಮವೊಂದಕ್ಕೆ ಹೊರಟಿದ್ದ ವೇಳೆ ರೈತ ಮುಖಂಡರು ತಮ್ಮನ್ನು ಭೇಟಿಯಾಗಿ ಕಬ್ಬಿನ ಎಫ್‌ಆರ್‌ಪಿ ಬೆಲೆ ಹೆಚ್ಚಳಕ್ಕೆ ಮನವಿ ಮಾಡಿದ್ದರು. ಅಂತೆಯೇ ಕೇಂದ್ರ ಸರ್ಕಾರ ಮೇ ತಿಂಗಳಲ್ಲಷ್ಟೇ ₹365ಕ್ಕೆ ಹೆಚ್ಚಿಸಿದೆ. ಆ ಬಳಿಕ ರೈತರು ಯಾರೂ ತನ್ನನ್ನು ಭೇಟಿ ಮಾಡಿಲ್ಲ. ಈಗ ಕೆಲವರು ಮತ್ತೆ FRP ಹೆಚ್ಚಳಕ್ಕೆ ಒತ್ತಾಯಿಸಿ ಪ್ರತಿಭಟನೆಗೆ ಮುಂದಾಗಿದ್ದಾರೆ. ಆದರೆ, ಪ್ರತಿಭಟನೆ ನಡೆಸುವ ಅವಶ್ಯಕತೆಯಿಲ್ಲ. ರೈತರ ಸಮಸ್ಯೆಗೆ ಸ್ಪಂದಿಸಲು ಕೇಂದ್ರ ಸರ್ಕಾರ ಸಿದ್ಧವಿದೆ ಎಂದು ಹೇಳಿದ್ದಾರೆ.
ಕಬ್ಬಿನ ಎಫ್‌ಆರ್‌ಪಿ ದರ ಹೆಚ್ಚಳ ನಿರ್ಧಾರವನ್ನು ಬೆಲೆ ನಿಗದಿ ಸಮಿತಿ ಹಾಗೂ ರಾಜ್ಯ ಸರ್ಕಾರದ ಕಬ್ಬು ಆಯುಕ್ತರ (Cane Commissioner) ವರದಿ ಮತ್ತು ಶಿಫಾರಸುಗಳನ್ನು ಪರಿಗಣಿಸಿಯೇ ತೆಗೆದುಕೊಳ್ಳಲಾಗುತ್ತದೆ ಎಂದೂ ಸಚಿವ ಜೋಶಿ ಸ್ಪಷ್ಟಪಡಿಸಿದ್ದಾರೆ.
ರೈತರಲ್ಲಿ ಯಾವುದೇ ಅನ್ಯ ಭಾವನೆ ಬೇಡ. ಬೀದಿಯಲ್ಲಿ ಪ್ರತಿಭಟನೆ ನಡೆಸುವ ಔಚಿತ್ಯವೂ ಇಲ್ಲ. ನೇರವಾಗಿ ದೆಹಲಿಗೆ ದಾವಿಸಿದರೆ ಸಂಬಂಧಿತ ಅಧಿಕಾರಿಗಳ ಜತೆ ಚರ್ಚಿಸಿ ಸೂಕ್ತ ಬೆಲೆ ನೀಡಲು ಕ್ರಮ ಕೈಗೊಳ್ಳಲಾಗುವುದು. ಹಾಗಾಗಿ ರೈತ ಮುಖಂಡರಿಗೆ, ಹೋರಾಟಗಾರರಿಗೆ ಮುಕ್ತ ಆಹ್ವಾನ ನೀಡುತ್ತೇನೆ ಎಂದು ಪ್ರಲ್ಹಾದ್ ಜೋಶಿ ಕಬ್ಬು ಬೆಳೆಗಾರರನ್ನು ನೇರವಾಗಿ ದೆಹಲಿಗೆ ಆಹ್ವಾನಿಸಿದ್ದಾರೆ.
ಕೇಂದ್ರ ರೈತರ ಹಿತ ಕಾಪಾಡುತ್ತದೆ
ರೈತರ ಹಿತಾಸಕ್ತಿ ಕಾಪಾಡುವುದೇ ನಮ್ಮ ಸರ್ಕಾರದ ಪ್ರಮುಖ ಆದ್ಯತೆ. ಕಬ್ಬು ಬೆಳೆಗಾರರ ಹಿತಾಸಕ್ತಿಗಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಹಲವು ಪರಿಣಾಮಕಾರಿ ಬದಲಾವಣೆಗಳನ್ನು ತಂದಿದೆ. ಇದೀಗ ಕಬ್ಬು ಬೆಳೆಗಾರರಲ್ಲಿ ಉಂಟಾಗಿರುವ ಗೊಂದಲ, ಸಮಸ್ಯೆಗಳು, ಮತ್ಯಾವುದೇ ವಿಷಯ ಕುರಿತಂತೆ ಸುದೀರ್ಘವಾಗಿ ಚರ್ಚಿಸಿ ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ನಮ್ಮ ಸರ್ಕಾರ ಸಿದ್ಧವಿದೆ ಎಂದು ಜೋಶಿ ಮನವರಿಕೆ ಮಾಡಿಕೊಟ್ಟಿದ್ದಾರೆ.
ಫ್ರಾನ್ಸ್ ಶಿಕ್ಷಣ ಸಚಿವರಿಗೆ 'ಬಿದ್ರಿವೇರ್' ಉಡುಗೊರೆ; ಬೀದರ್‌ನ ಐತಿಹಾಸಿಕ ಕಲೆಯ ಹಿರಿಮೆ ಹೆಚ್ಚಿಸಿದ ಸಚಿವ ಜೋಶಿ
ರೈತರ ಅಹವಾಲುಗಳನ್ನು ಅತ್ಯಂತ ವಿನಮ್ರವಾಗಿ ಆಲಿಸಿ ಸೂಕ್ತ ಪರಿಹಾರಗಳನ್ನು ಕಂಡುಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಆದ್ದರಿಂದ ಸರ್ಕಾರದೊಂದಿಗೆ ಚರ್ಚೆಗೆ ಬನ್ನಿ ಎಂದು ಮನವಿ ಮಾಡಿದ್ದಾರೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ.