ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʼʼಕೆಪಿಎಸ್‌ಸಿ ಕರ್ಮಕಾಂಡದ ಬಗ್ಗೆ ರಾಹುಲ್ ಗಾಂಧಿ ಮಾತನಾಡುತ್ತಿಲ್ಲವೇಕೆ?ʼʼ ಪ್ರಲ್ಹಾದ್‌ ಜೋಶಿ ವಾಗ್ದಾಳಿ

Pralhad Joshi: ಕೇಂದ್ರದಲ್ಲಿ ಇಷ್ಟೊಂದು ರಾದ್ಧಾಂತ ಮಾಡುವ ವಿಪಕ್ಷ ನಾಯಕ ರಾಹುಲ್ ಗಾಂಧಿ, ತಮ್ಮದೇ ಆಡಳಿತವಿರುವ ಕರ್ನಾಟಕದಲ್ಲಿ ಕೆಪಿಎಸ್‌ಸಿ ಕರ್ಮಕಾಂಡ ಬಗ್ಗೆ ಏಕೆ ಧ್ವನಿ ಎತ್ತುತ್ತಿಲ್ಲ? ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಕಿಡಿಕಾರಿದ್ದಾರೆ.

ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ (ಸಂಗ್ರಹ ಚಿತ್ರ)

ನವದೆಹಲಿ, ಜು. 23: ನೀಟ್ ಅಕ್ರಮದ ಬಗ್ಗೆ ಧ್ವನಿ ಎತ್ತುತ್ತಿರುವ ರಾಹುಲ್ ಗಾಂಧಿ ಕರ್ನಾಟಕದ ಕೆಪಿಎಸ್‌ಸಿ ಕರ್ಮಕಾಂಡ ಬಗ್ಗೆ ಏಕೆ ಧ್ವನಿ ಅಡಗಿಸಿದ್ದಾರೆ? ಇದೆಂಥ ದ್ವಿಮುಖ ನೀತಿ? ಇಂಥಾ ಸೋಗು? ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ವಾಗ್ದಾಳಿ ನಡೆಸಿದರು. ದೆಹಲಿಯಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿ, ವಿಪಕ್ಷಗಳು ರಾಷ್ಟ್ರೀಯ ಪರೀಕ್ಷೆ ವಿಷಯದಲ್ಲಿ ರಾಜಕೀಯ ಮಾಡುತ್ತಿವೆ ಎಂದು ಆರೋಪಿಸಿದರು.

ನೀಟ್ ವಿವಾದ ಕುರಿತು ಸಂಸತ್ತಿನಲ್ಲಿ ಮುಕ್ತ ಹಾಗೂ ಸತ್ಯಾಧಾರಿತ ಚರ್ಚೆಗೆ ಕೇಂದ್ರ ಸರ್ಕಾರ ಸಿದ್ಧವಿದೆ. ಇದಕ್ಕೆ ಅಖಿಲೇಶ್ ಯಾದವ್ ಸೇರಿ ಹಲವು ವಿಪಕ್ಷ ನಾಯಕರೂ ಸಮ್ಮತಿಸಿದ್ದಾರೆ. ಆದರೆ ಒಬ್ಬರ ಅಹಂಕಾರದಿಂದಾಗಿ ಚರ್ಚೆ ಸಾಧ್ಯವಾಗುತ್ತಿಲ್ಲ ಎಂದು ದೂರಿದರು. ವಿಪಕ್ಷಗಳು ರಾಜಕೀಯ ಬದಿಗೊತ್ತಿ, ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಎಲ್ಲರೂ ಒಟ್ಟಾಗಿ ಚರ್ಚೆಯಲ್ಲಿ ಭಾಗವಹಿಸಬೇಕು ಎಂದು ಪ್ರಲ್ಹಾದ್‌ ಜೋಶಿ ಕೋರಿದರು.

ಕೆಪಿಎಸ್‌ಸಿ ಹಗರಣ ಬಗೆಗೇಕೆ ಚಕಾರವಿಲ್ಲ?

ಕೇಂದ್ರದಲ್ಲಿ ಇಷ್ಟೊಂದು ರಾದ್ಧಾಂತ ಮಾಡುವ ವಿಪಕ್ಷ ನಾಯಕ ರಾಹುಲ್ ಗಾಂಧಿ, ತಮ್ಮದೇ ಆಡಳಿತವಿರುವ ಕರ್ನಾಟಕದಲ್ಲಿ ಕೆಪಿಎಸ್‌ಸಿ ಕರ್ಮಕಾಂಡ ಬಗ್ಗೆ ಏಕೆ ಧ್ವನಿ ಎತ್ತುತ್ತಿಲ್ಲ? ಎಂದು ಜೋಶಿ ಕಿಡಿಕಾರಿದರು.

ಕರ್ನಾಟಕದಲ್ಲಿ 2.7 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿಯಿವೆ. ಕೆಪಿಎಸ್‌ಸಿ ಅಧ್ಯಕ್ಷರ ಮೇಲೆ ಭ್ರಷ್ಟಾಚಾರದ ಆರೋಪಗಳಿವೆ. ಅಲ್ಲಿಯೂ ಪ್ರತಿಭಟನೆಗಿಳಿದ ಪರೀಕ್ಷಾರ್ಥಿಗಳು ಹಾಗೂ ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್ ಮಾಡಲಾಗಿದೆ ಹಾಗಿದ್ದರೂ ರಾಹುಲ್ ಅದೇಕೆ ಮೌನ ವಹಿಸಿದ್ದರು. ಅಲ್ಲೇಕೆ ವಿದ್ಯಾರ್ಥಿಗಳ ಹೋರಾಟಕ್ಕೆ ಸಾಥ್ ಕೊಡಲಿಲ್ಲ? ಎಂದು ತೀಕ್ಷ್ಣವಾಗಿ ಪ್ರಶ್ನಿಸಿದ ಜೋಶಿ, ಇದು ಇವರ ದ್ವಿಮುಖ ನೀತಿಯನ್ನೇ ಅನಾವರಣಗೊಳಿಸಿದೆ ಎಂದು ಹರಿಹಾಯ್ದರು.

ಪರೀಕ್ಷಾ ಮಾಫಿಯಾ ವಿರುದ್ಧ ಕಠಿಣ ಕ್ರಮ

ನೀಟ್ ವಿಚಾರದಲ್ಲಿ ಕೇಂದ್ರ ಸರ್ಕಾರ ಯಾವತ್ತೂ ನೆಪ ಹೇಳಿ ಜಾರಿಕೊಂಡಿಲ್ಲ. ವ್ಯವಸ್ಥೆ ಸುಧಾರಿಸಲು ಆದ್ಯತೆ ನೀಡಿದೆ. ನೀಟ್ ಪ್ರಕರಣದಲ್ಲಿ ಈಗಾಗಲೇ 14 ಜನರನ್ನು ಬಂಧಿಸಲಾಗಿದೆ. ಪರೀಕ್ಷಾ ಮಾಫಿಯಾಗೆ 10 ವರ್ಷ ಜೈಲು ಮತ್ತು ಭಾರೀ ದಂಡ ವಿಧಿಸುವ ಕಟ್ಟುನಿಟ್ಟಿನ ಕಾನೂನನ್ನು ಜಾರಿಗೆ ತಂದಿದೆ ಎಂದು ಕೇಂದ್ರದ ಕ್ರಮವನ್ನು ಪ್ರಲ್ಹಾದ್‌ ಜೋಶಿ ಸಮರ್ಥಿಸಿಕೊಂಡರು.

ರಾಜಸ್ಥಾನದಲ್ಲಿ ಮಾತ್ರ ಗೆಹ್ಲೋಟ್ ಅವರ ಅಧಿಕಾರಾವಧಿಯಲ್ಲಿ 19 ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ. ಪ್ರಿಯಾಂಕಾ ವಾದ್ರಾ ಅಂದು 'ಅತ್ಯುತ್ತಮ ಪ್ರಯತ್ನದ ಹೊರತಾಗಿಯೂ ಪ್ರಶ್ನೆ ಪತ್ರಿಕೆ ಸೋರಿಕೆ ತಡೆಯಲು ಸಾಧ್ಯವಾಗಲಿಲ್ಲ' ಎಂಬುದನ್ನು ಸ್ವತಃ ಒಪ್ಪಿಕೊಂಡಿದ್ದರು ಎಂದರು.

ವೈದ್ಯಕೀಯ ಸೀಟು ಮೂರುಪಟ್ಟು ಹೆಚ್ಚಿದೆ

2014ರಿಂದ ನರೇಂದ್ರ ಮೋದಿ ಸರ್ಕಾರ, ಭಾರತದ ಯುವಕರು ಅರ್ಹತೆ ಆಧಾರದ ಮೇಲೆ ಮಾತ್ರ ಅವಕಾಶ ಪಡೆಯುವುದನ್ನು ಖಚಿತಪಡಿಸಿದೆ. ವೈದ್ಯಕೀಯ ಶಿಕ್ಷಣದಲ್ಲಿ ನಿರ್ವಹಣಾ ಕೋಟಾ ಸೀಟುಗಳ ವ್ಯವಸ್ಥೆ ರದ್ದುಗೊಳಿಸಿತು. ಆದರೆ, ವೈದ್ಯಕೀಯ ಸೀಟುಗಳ ಸಂಖ್ಯೆ 2014ರಲ್ಲಿ ಇದ್ದುದರ (51,000) ಮೂರು ಪಟ್ಟು ಇಂದು ಹೆಚ್ಚಾಗಿದೆ. AIIMS ಸಂಖ್ಯೆಯನ್ನು ಗಮನಾರ್ಹವಾಗಿ ವಿಸ್ತರಿಸಲಾಗಿದೆ ಎಂದು ಉದಾಹರಣೆ ಸಮೇತ ಸ್ಪಷ್ಟಪಡಿಸಿದರು.

ವಿದ್ಯಾರ್ಥಿ-ಯುವ ಸಮೂಹದಲ್ಲಿ ರಾಹುಲ್ ಗಾಂಧಿ ಅಪಪ್ರಚಾರ; ಪ್ರಲ್ಹಾದ್‌ ಜೋಶಿ ಆರೋಪ

ರಚನಾತ್ಮಕ ವ್ಯವಸ್ಥೆಗೆ ಕೇಂದ್ರ ಬದ್ಧ

ಪ್ರಸ್ತುತ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಸಂಭವಿಸಿದೆ ಎಂದು ಗೊತ್ತಾಗುತ್ತಲೇ ಸರ್ಕಾರ ಪರೀಕ್ಷೆಯನ್ನೇ ರದ್ದುಗೊಳಿಸಿತು. ನಂತರ ಅತ್ಯಂತ ಪಾರದರ್ಶಕ ರೀತಿಯಲ್ಲಿ ಮರು-ನೀಟ್ ಪರೀಕ್ಷೆ ನಡೆಸಿತು ಮತ್ತು ಫಲಿತಾಂಶ ಸಹ ತಕ್ಷಣವೇ ಘೋಷಿಸಲಾಯಿತು. ದೇಶದಲ್ಲಿ ಪರೀಕ್ಷಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು, ರಚನಾತ್ಮಕ ಸಲಹೆ ಕಾರ್ಯಗತಗೊಳಿಸಲು ತಮ್ಮ ಸರ್ಕಾರ ಬದ್ಧವಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಪುನರುಚ್ಚರಿಸಿದರು.