ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ರಾಹುಲ್ ಗಾಂಧಿ ಸಂಪ್ರೀತಗೊಳಿಸಲು, ಸಿಎಂ ಕುರ್ಚಿ ಉಳಿಸಿಕೊಳ್ಳಲು ಧರಣಿ ಪ್ರಹಸನ: ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ವಾಗ್ದಾಳಿ

Pralhad Joshi: ಬೆಂಗಳೂರಿನಲ್ಲಿ ಫ್ರೀಡಂ ಪಾರ್ಕ್ ಹೊರತುಪಡಿಸಿ ಬೇರೆಡೆ ಪ್ರತಿಭಟನೆ ನಡೆಸುವಂತಿಲ್ಲ. ಅಲ್ಲದೆ, ಪೂರ್ವಾನುಮತಿ ಕಡ್ಡಾಯವೆಂದು ಈ ಸರ್ಕಾರವೇ ಆದೇಶ ಹೊರಡಿಸಿದೆ. ಹೀಗಿರುವಾಗ ಸಿಎಂ ಡಿಕೆ ಶಿವಕುಮಾರ್ ಮತ್ತವರ ತಂಡ ಹೇಗೆ ಬೆಂಗಳೂರಿನಲ್ಲಿ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಿತು? ಈ ಸಂಬಂಧ ಸಿಎಂ ಮತ್ತು ಸಚಿವರ ಮೇಲೆ ರಾಜ್ಯ ಪೊಲೀಸ್ ಮುಖ್ಯಸ್ಥರು ಎಫ್‌ಐಆರ್ ಹಾಕಲೇಬೇಕೆಂದು ಪ್ರಲ್ಹಾದ್‌ ಜೋಶಿ ಆಗ್ರಹಿಸಿದ್ದಾರೆ.

ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ (ಸಂಗ್ರಹ ಚಿತ್ರ)

ಹುಬ್ಬಳ್ಳಿ, ಅ.02: ರಾಹುಲ್ ಗಾಂಧಿಯನ್ನು ಸಂಪ್ರೀತಗೊಳಿಸಲು ಮತ್ತು ಸಿಎಂ ಕುರ್ಚಿ ಉಳಿಸಿಕೊಳ್ಳಲು ಡಿ.ಕೆ. ಶಿವಕುಮಾರ್ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಧರಣಿಯ ಪ್ರಹಸನ ನಡೆಸಿದ್ದಾರೆ ಎಂದು ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ಟೀಕಿಸಿದರು. ಹುಬ್ಬಳ್ಳಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ರಾಜ್ಯ ಸಚಿವ ಸಂಪುಟ ಸಭೆಯನ್ನೇ ಮುಂದೂಡಿ ಹೀಗೆ ಧರಣಿ ನಡೆಸಿರುವುದು ದೇಶದಲ್ಲೇ ಒಂದು ಕರಾಳ ಇತಿಹಾಸವಾಗಿದೆ ಎಂದರು.

ಸಿಎಂ ಡಿಕೆಶಿ ಮತ್ತವರ ಸಂಪುಟದ ಸಚಿವರು ಪೂರ್ವಾನುಮತಿ ಪಡೆಯದೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ಎದುರು ಧರಣಿ ನಡೆಸಿರುವುದನ್ನು ತೀವ್ರವಾಗಿ ಖಂಡಿಸುತ್ತೇನೆ. ಅರವಿಂದ ಕೇಜ್ರಿವಾಲ್ ಬಿಟ್ಟರೆ ಇದೀಗ ಒಬ್ಬ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಸಂವಿಧಾನ ಮತ್ತು ಕಾನೂನು ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿದರು.

ಚುನಾವಣಾ ಆಯೋಗ ಕಟ್ಟುನಿಟ್ಟಾಗಿ ನಡೆಸುತ್ತಿರುವ ಎಸ್‌ಐಆರ್ ಪ್ರಕ್ರಿಯೆ ವಿರೋಧಿಸಿ ದೇಶದ ಬಲಿಷ್ಠ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡಲು ಹೊರಟಿದ್ದಾರೆ ಕಾಂಗ್ರೆಸ್ಸಿಗರು ಎಂದು ಜೋಶಿ ಹರಿಹಾಯ್ದರು.

ಸಿಎಂ ಮೇಲೆ ಎಫ್‌ಐಆರ್ ಹಾಕಲೇಬೇಕು

ಬೆಂಗಳೂರಿನಲ್ಲಿ ಫ್ರೀಡಂ ಪಾರ್ಕ್ ಹೊರತುಪಡಿಸಿ ಬೇರೆಡೆ ಪ್ರತಿಭಟನೆ ನಡೆಸುವಂತಿಲ್ಲ. ಅಲ್ಲದೆ, ಪೂರ್ವಾನುಮತಿ ಕಡ್ಡಾಯವೆಂದು ಈ ಸರ್ಕಾರವೇ ಆದೇಶ ಹೊರಡಿಸಿದೆ. ಹೀಗಿರುವಾಗ ಸಿಎಂ ಡಿಕೆ ಶಿವಕುಮಾರ್ ಮತ್ತವರ ತಂಡ ಹೇಗೆ ಬೆಂಗಳೂರಿನಲ್ಲಿ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಿತು? ಈ ಸಂಬಂಧ ಸಿಎಂ ಮತ್ತು ಸಚಿವರ ಮೇಲೆ ರಾಜ್ಯ ಪೊಲೀಸ್ ಮುಖ್ಯಸ್ಥರು ಎಫ್‌ಐಆರ್ ಹಾಕಲೇಬೇಕೆಂದು ಪ್ರಲ್ಹಾದ್‌ ಜೋಶಿ ಆಗ್ರಹಿಸಿದರು.

Karnataka SIR: ಫಾರ್ಮ್‌ 7 ಯಾರು ಬೇಕಾದ್ರೂ ಸಲ್ಲಿಸಬಹುದು, ತಪ್ಪಿದ್ದರೆ ಕೋರ್ಟ್‌ ಮೊರೆ ಹೋಗಲಿ: ಕಾಂಗ್ರೆಸ್‌ ವಿರುದ್ಧ ಆರ್‌.ಅಶೋಕ್‌ ಕಿಡಿ

ಡಿಜಿಪಿ ಕಚೇರಿ ಮುಂದೆ ಬಿಜೆಪಿ ಧರಣಿ

ರಾಜ್ಯ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳದೇ ಹೋದರೆ ಡಿಜಿಪಿ ಕಚೇರಿ ಎದುರು ಬಿಜೆಪಿ ಸಹ ಯಾವುದೇ ಪೂರ್ವಾನುಮತಿ ಪಡೆಯದೆ ಪ್ರತಿಭಟನೆ ನಡೆಸಲಿದೆ ಎಂದು ಎಚ್ಚರಿಸಿದರು.

ತಮ್ಮವರು ಮಸೀದಿಯಲ್ಲಿ ಕುಳಿತು ಎಸ್‌ಐಆರ್ ತುಂಬಿಲ್ಲವೇ? ಎಂದು ಪ್ರಶ್ನಿಸಿದ ಜೋಶಿ, ಮತದಾರ ಅರ್ಹನಾಗಿದ್ದರೆ ಯಾರೂ ಕೂಡ ಮತ ಪಟ್ಟಿಯಿಂದ ಹೆಸರು ತೆಗೆದು ಹಾಕಲು ಸಾಧ್ಯವಿಲ್ಲ. ಮತಪಟ್ಟಿಯಲ್ಲಿ ಹೆಸರು ಸೇರ್ಪಡೆ ಸುಲಭ. ಆದರೆ, ರದ್ದುಪಡಿಸುವುದು ಅಷ್ಟು ಸರಳವಿಲ್ಲ ಎಂದು ಕಾಂಗ್ರೆಸ್ಸಿಗರಿಗೆ ತಿರುಗೇಟು ಕೊಟ್ಟರು.

2.37 ಕೋಟಿ ಯುವಕರ ಸೇರ್ಪಡೆ

ದೇಶದಲ್ಲಿ ಎಸ್‌ಐಆರ್ ಪ್ರಕ್ರಿಯೆ ಶುರುವಾದ ಬಳಿಕ 18 ವರ್ಷ ತುಂಬಿದ 2.37 ಕೋಟಿ ಯುವ ಜನರ ಹೆಸರು ಸೇರ್ಪಡೆಯಾಗಿದೆ ಎಂದು ಮಾಹಿತಿ ನೀಡಿದ ಸಚಿವರು, ಕಾಂಗ್ರೆಸ್ ತನ್ನ ಅಕ್ರಮ ಮತ ಬ್ಯಾಂಕ್ ಗಟ್ಟಿ ಮಾಡಿಕೊಳ್ಳಲು ಎಸ್‌ಐಆರ್ ಗೆ ವಿರೋಧಿಸುತ್ತಿದೆ ಎಂದು ಆರೋಪಿಸಿದರು.

ವಿದೇಶಿ ಪ್ರಜೆಗಳ ಮತಬ್ಯಾಂಕ್‌ಗಾಗಿ ಕಾಂಗ್ರೆಸ್ ಈ ಹೋರಾಟ

ಬಾಂಗ್ಲಾ, ಪಾಕಿಸ್ತಾನದಂತಹ ವಿದೇಶಿ ಪ್ರಜೆಗಳ ತನ್ನ ಮತ ಬ್ಯಾಂಕ್ ಅನ್ನು ಗಟ್ಟಿ ಮಾಡಿಕೊಳ್ಳಲು ಕಾಂಗ್ರೆಸ್ ಇದನ್ನೆಲ್ಲ ಮಾಡುತ್ತಿದೆ. ದೇಶ ಹಾಳಾದರೂ ಚಿಂತೆಯಿಲ್ಲ. ಬಾಂಗ್ಲಾದಿಂದ ಬಂದವರು, ಪಾಕಿಸ್ತಾನಿ ಪ್ರಜೆಗಳು ತಮ್ಮ ಮತದಾರರಾಗಬೇಕು ಎಂಬುದು ಕಾಂಗ್ರೆಸ್ ಇಚ್ಛೆಯಾಗಿದೆ ಎಂದು ಜೋಶಿ ಆರೋಪಿಸಿದರು.

ಎಸ್ ಐ ಆರ್ ಪ್ರಕ್ರಿಯೆಯಲ್ಲಿ ಮತದಾರರ ಹೆಸರು ಕಡಿತ ಅಷ್ಟು ಸರಳವಿಲ್ಲ. ಬಿಎಲ್ ಒ, ಬಿಎಲ್ಎಗಳು ಪ್ರತಿ ಹಂತದಲ್ಲೂ ಸ್ಥಳ ಪರಿಶೀಲನೆ, ಮಹಜರು ನಡೆಸುತ್ತಾರೆ. ಚುನಾವಣಾಧಿಕಾರಿ ಬಳಿ ಫಾರಂ ನಂಬರ್ 7 ಹೋದರೂ ಸರಿ ಇಲ್ಲದಿದ್ದರೆ ಅಲ್ಲೇ ತಿರಸ್ಕರಿಸುತ್ತಾರೆ. ನೋಟಿಸ್ ನೀಡಿ, ಮತದಾರ ಹಾಜರಾದರೆ ಸ್ಥಳದಲ್ಲೇ ಮುಂದಿನ ಕ್ರಮ ಜರುಗುತ್ತದೆ ಎಂದು ಸ್ಪಷ್ಟಪಡಿಸಿದರು.

ಬಿಜೆಪಿ ಮೇಲೆ ವೃಥಾ ಆರೋಪ ಮಾಡುವುದು ಸರಿಯಲ್ಲ

ಇನ್ನು, ರಾಜ್ಯದಲ್ಲಿ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಇರುವ ಬಿಎಲ್‌ಒ, ಬಿಎಲ್‌ಎಗಳು, ತಹಶೀಲ್ದಾರರು, ಜಿಲ್ಲಾಧಿಕಾರಿಗಳು, ಆಹಾರ ಇಲಾಖೆ, ತೋಟಗಾರಿಕಾ ಇಲಾಖೆ ಅಧಿಕಾರಿಗಳು ಎಲ್ಲಾ ತಮ್ಮವರೇ, ತಮ್ಮ ಮಾತು ಕೇಳುವವರೇ ಇದ್ದಾರಲ್ಲ ಎಂದು ಸಿಎಂಗೆ ತಿರುಗೇಟು ನೀಡಿದ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ, ಬಿಜೆಪಿ ಮೇಲೆ ವೃಥಾ ಆರೋಪ ಮಾಡುವುದು ಸರಿಯಲ್ಲ ಎಂದು ಅವರು ಆಕ್ಷೇಪಿಸಿದರು.

ದಲಿತ, ಒಬಿಸಿ, ಎಸ್ಸಿಎಸ್ಟಿ ಸಮುದಾಯ ಬಿಜೆಪಿ ಪರ

ದೇಶದಲ್ಲಿ ದಲಿತ, ಎಸ್ಸಿಎಸ್ಟಿ ಮತ್ತು ಒಬಿಸಿ ವರ್ಗದವರು ಬಿಜೆಪಿ ಪರವೇ ಇದ್ದಾರೆ. ನಿಮ್ಮ ಪರವಲ್ಲ" ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದರು. ಬಿಜೆಪಿಯಲ್ಲಿ ಹಿಂದುಳಿದ ಸಮುದಾಯದ ನಾಯಕರು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ಅವರು ಹೇಳಿದರು.

ಪ್ರಧಾನಿ ಮೋದಿ ಅವರೇ ಒಬಿಸಿ

ಪ್ರಧಾನಿ ನರೇಂದ್ರ ಮೋದಿ ಅವರೇ ಒಬಿಸಿ ವರ್ಗಕ್ಕೆ ಸೇರಿದವರಿದ್ದಾರೆ. ದಲಿತ, ಒಬಿಸಿ, ಎಸ್ಸಿ, ಎಸ್ಟಿ ಸಮುದಾಯದವರು ಬಿಜೆಪಿ ಪರ ಇದ್ದಾರೇ ಹೊರತು ಕಾಂಗ್ರೆಸ್ ಪರವಲ್ಲ ಎಂದು ತಿಳಿಸಿದರು.

ಮೋದಿ ಸಂಪುಟದಲ್ಲಿ ಶೇ.66ರಷ್ಟು ಒಬಿಸಿ, ಎಸ್ಸಿಎಸ್ಟಿ ಸದಸ್ಯರಿದ್ದಾರೆ

ಪ್ರಧಾನಿ ನರೇಂದ್ರ ಮೋದಿ ಅವರ ಕೇಂದ್ರ ಸಚಿವ ಸಂಪುಟದಲ್ಲಿ ಶೇ.66ರಷ್ಟು ಒಬಿಸಿ, ಎಸ್ಸಿ,ಎಸ್ಟಿ ಸಮುದಾಯದ ಸದಸ್ಯರಿದ್ದಾರೆ. ದಲಿತರು ನಿಮ್ಮ ಪರವಾಗಿಯೇ ಇದ್ದಿದ್ದರೆ ಉತ್ತರ ಪ್ರದೇಶದಲ್ಲಿ ನೀವೇಕೆ ಸೋಲುತ್ತಿದ್ದೀರಿ? ಎಂದು ಪ್ರಶ್ನಿಸಿದರು ಜೋಶಿ.

ಹೈಕೋರ್ಟ್‌ ಆದೇಶ ಉಲ್ಲಂಘಿಸಿ ಮುಖ್ಯ ಚುನಾವಣಾಧಿಕಾರಿ ಕಚೇರಿ ಆವರಣದಲ್ಲಿ ಕಾಂಗ್ರೆಸ್‌ ಪ್ರತಿಭಟನೆ; ಸಿಎಂ, ಸಚಿವರ ವಿರುದ್ಧ ಕ್ರಮಕ್ಕೆ ಬಿಜೆಪಿ ಆಗ್ರಹ

60ರ ಸನಿಹದ ಯುವ ನಾಯಕ ರಾಹುಲ್ ಗಾಂಧಿ

ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಈಗ 60ರ ಸನಿಹದ ಯುವ ನಾಯಕ. ಕಾಂಗ್ರೆಸ್ಸಿಗರಲ್ಲಿ ಇನ್ನೂ ಆ ಬಾಲ ಬುದ್ಧಿಯೇ ಇದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಟೀಕಿಸಿದರು.