ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಬಿಡದಿ ರೈತ ಮಹಿಳೆಯರ ಪೊರಕೆ ಸೇವೆ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ಗಂಟೆ: ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ

Pralhad Joshi: ಬಿಡದಿ ಟೌನ್‌ಶಿಪ್ ನೆಪದಲ್ಲಿ ಅನ್ನದಾತರ ಜಮೀನು ಕಸಿದುಕೊಳ್ಳಲು ಮುಂದಾಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ನಡೆ ಅತಿರೇಕದ್ದಾಗಿದೆ. ಹಾಗಾಗಿ ರೈತ ಮಹಿಳೆಯರು ಪೊರಕೆ ಕೈಗೆ ತೆಗೆದುಕೊಂಡಿದ್ದಾರೆ. ಸರ್ಕಾರ ಇನ್ನಾದರೂ ಕಣ್ತೆರೆದುಕೊಳ್ಳಬೇಕಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಚಾಟಿ ಬೀಸಿದ್ದಾರೆ.

ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ (ಸಂಗ್ರಹ ಚಿತ್ರ)

ನವದೆಹಲಿ, ಜು.13: ಬಿಡದಿ ಟೌನ್‌ಶಿಪ್‌ಗೆಂದು ಜಂಟಿ ಮಾಪನ (JMC) ಸಮೀಕ್ಷೆಗೆ ಹೋದ ಅಧಿಕಾರಿಗಳಿಗೆ ರೈತ ಮಹಿಳೆಯರು ಪೊರಕೆಯಿಂದ ಥಳಿಸಿರುವ ಘಟನೆ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ಗಂಟೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ಎಚ್ಚರಿಕೆ ನೀಡಿದ್ದಾರೆ. ಬಿಡದಿ ರೈತರ ಹೋರಾಟ ಕೇವಲ ಒಂದು ಸಾಮಾನ್ಯ ಪ್ರತಿಭಟನೆಯಲ್ಲ; ಅದು ತುತ್ತು ಅನ್ನ ನೀಡುವ ಭೂಮಿ ತಾಯಿಯನ್ನು ಉಳಿಸಿಕೊಳ್ಳುವಲ್ಲಿ ರೈತರೊಡಲ ಆಕ್ರೋಶವಾಗಿದೆ ಎಂದು ಹೇಳಿದ್ದಾರೆ.

ಸರ್ಕಾರದ್ದು ಅತಿರೇಕದ ನಡೆ

ಬಿಡದಿ ಟೌನ್‌ಶಿಪ್ ನೆಪದಲ್ಲಿ ಅನ್ನದಾತರ ಜಮೀನು ಕಸಿದುಕೊಳ್ಳಲು ಮುಂದಾಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ನಡೆ ಅತಿರೇಕದ್ದಾಗಿದೆ. ಹಾಗಾಗಿ ರೈತ ಮಹಿಳೆಯರು ಪೊರಕೆ ಕೈಗೆ ತೆಗೆದುಕೊಂಡಿದ್ದಾರೆ. ಸರ್ಕಾರ ಇನ್ನಾದರೂ ಕಣ್ತೆರೆದುಕೊಳ್ಳಬೇಕಿದೆ ಎಂದು ಅವರು ಚಾಟಿ ಬೀಸಿದ್ದಾರೆ.

ದುರಾಡಳಿತದ ಪರಮಾವಧಿ

ರೈತರ ಬಗ್ಗೆ ಕಾಳಜಿಯೇ ಇಲ್ಲದ ರಾಜ್ಯ ಕಾಂಗ್ರೆಸ್ ಸರ್ಕಾರ ಸರ್ವಾಧಿಕಾರಿ ಧೋರಣೆಯಲ್ಲಿ ಮುನ್ನುಗ್ಗುತ್ತಿರುವುದು ದುರಾಡಳಿತದ ಪರಮಾವಧಿ ಎಂದು ಕಿಡಿಕಾರಿದ ಜೋಶಿ, ರೈತರ ಒಪ್ಪಿಗೆಯಿಲ್ಲದೆ ಅವರ ಜೀವನಾಧಾರವಾಗಿರುವ ಭೂಮಿಯನ್ನೇ ಕಿತ್ತುಕೊಂಡು ಮಾಡುವ 'ಟೌನ್‌ಶಿಪ್' ಅಭಿವೃದ್ಧಿ ಯಾರ ಉದ್ಧಾರಕ್ಕಾಗಿ? ಎಂದು ಪ್ರಶ್ನಿಸಿದ್ದಾರೆ.

ಪೊಲೀಸ್ ಬಲಪ್ರಯೋಗ ಸರಿಯಲ್ಲ

ಶಾಂತಿಯುತ ಬದುಕು ನೂಕುತ್ತಿರುವ ರೈತರನ್ನು ಹೆದರಿಸಿ, ಬೆದರಿಸಿ ಜಮೀನು ವಶಪಡಿಸಿಕೊಳ್ಳಲು ಯತ್ನಿಸುತ್ತಿರುವ ಸರ್ಕಾರದ ಧೋರಣೆ ಖಂಡನೀಯ. ಮುಗ್ಧ ರೈತರನ್ನು ಬೆದರಿಸಿ, ಪೊಲೀಸ್ ಬಲ ಬಳಸಿ ಜಮೀನು ಕಿತ್ತುಕೊಳ್ಳಬಹುದು ಎಂದುಕೊಂಡಿದ್ದರೆ ಅದು ಭ್ರಮೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.‌

ರಾಹುಲ್‌ ಗಾಂಧಿ 40 ದಿನದಿಂದ ಕಾಣೆ; ಡಿಕೆಶಿ ಹುಡುಕುತ್ತಿದ್ದಾರೆ ಎಂದು ಪ್ರಲ್ಹಾದ್‌ ಜೋಶಿ ಲೇವಡಿ

ರೈತರ ಹೋರಾಟಕ್ಕೆ ಸಂಪೂರ್ಣ ಬೆಂಬಲ

ಇದು ಕೇವಲ ಬಿಡದಿ ರೈತರ ಹೋರಾಟವಲ್ಲ, ರಾಜ್ಯದ ಸಮಸ್ತ ಜನತೆಯ ಆಕ್ರೋಶ. ರೈತರ ಭೂಮಿ ಅವರ ಹಕ್ಕು, ಅವರ ಬೆಂಬಲವಿಲ್ಲದೆ, ಅವರ ಭೂಮಿಯನ್ನು ಕಿತ್ತುಕೊಳ್ಳುವುದು ಸರಿಯಲ್ಲ. ರೈತರ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದೂ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ತಿಳಿಸಿದ್ದಾರೆ.