ಬೆಂಗಳೂರು, ಜು.8: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ್ ನಾಯಕ್ ಅವರ ನೇತೃತ್ವದಲ್ಲಿ ತಯಾರಾದ ‘ಕರ್ನಾಟಕ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆʼ (ಜಾತಿ ಗಣತಿ) ವರದಿಯ ಕುರಿತು ರಾಜ್ಯ ಸರ್ಕಾರ ತನ್ನ ನಿಲುವು ಪ್ರಕಟ ಮಾಡಬೇಕು ಹಾಗೂ ಮುಂದಿನ ವಿಧಾನ ಮಂಡಲ ಅಧಿವೇಶನದಲ್ಲಿ ಮಂಡಿಸಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಶಾಸಕ ವಿ. ಸುನೀಲ್ ಕುಮಾರ್ (V Sunil Kumar) ಆಗ್ರಹಿಸಿದ್ದಾರೆ. ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರೂ. 450 ಕೋಟಿಗೂ ಹೆಚ್ಚು ಜನರ ತೆರಿಗೆ ಹಣವನ್ನು ವೆಚ್ಚ ಮಾಡಿ ನಡೆಸಲಾದ ಸಮೀಕ್ಷೆಯ ಬಗ್ಗೆ ಚರ್ಚೆಗೆ ಸಿದ್ಧರಿದ್ದೇವೆ. ಅಧಿವೇಶನದಲ್ಲಿ ಅದಕ್ಕಾಗಿ ಪ್ರತ್ಯೇಕ ಸಮಯ ನಿಗದಿಪಡಿಸಬೇಕು. ವರದಿಯಲ್ಲಿ ಏನಿದೆ ಎಂದು ತಿಳಿಯಲು ನಾವು ಬಯಸಿದ್ದೇವೆ ಎಂದರು.
ಒಬಿಸಿ ಪರವಾಗಿ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡುತ್ತಾರೆ. ಆದರೆ ರಾಜ್ಯಪಾಲರ ಭಾಷಣದಲ್ಲಿ ಆಯೋಗದ ಕುರಿತು ಪ್ರಸ್ತಾಪವೇ ಇರಲಲ್ಲ. ಹೊರಗಡೆ ಮಾತ್ರ ಅಹಿಂದ, ಒಬಿಸಿ ಎಂದು ಮಾತನಾಡುತ್ತಾರೆ ಬಜೆಟ್‍ನಲ್ಲಿ ಒಂದು ಸಾಲು ಸೇರಿಸಲಿಲ್ಲ ಎಂದು ಆರೋಪಿಸಿದರು.
ಘೋಷಣೆ ಮಾತ್ರ, ಪೋಷಣೆ ಇಲ್ಲ
ಸರ್ಕಾರದ ಬಳಿ ರಾಜ್ಯದ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ದತ್ತಾಂಶವೇ ಇಲ್ಲದಿದ್ದರೆ ಬಜೆಟ್ ಕಾರ್ಯಕ್ರಮಗಳನ್ನು ಹೇಗೆ ಮಾಡಲು ಸಾಧ್ಯ. ಸೌಲಭ್ಯಗಳನ್ನು ಹೇಗೆ ಕೊಡಲು ಸಾಧ್ಯ. ಈ ಸರ್ಕಾರ ಯಾವುದನ್ನು ಘೋಷಣೆ ಮಾಡುತ್ತದೊ ಅದನ್ನು ಪೋಷಣೆ ಮಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿದರು.
ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತರಾತುರಿಯಲ್ಲಿ ಮಧುಸೂದನ್ ನಾಯಕ್ ವರದಿಯನ್ನು ಸ್ವೀಕಾರ ಮಾಡಿದರು. ಕಾಂತರಾಜು ವರದಿಯನ್ನೂ ಹಿಂದಿನ ಸಿಎಂ ತೆಗೆದುಕೊಳ್ಳಲೇ ಇಲ್ಲ. ಅದಾದ ನಂತರ ಜಯಪ್ರಕಾಶ್ ಹೆಗ್ಡೆ ವರದಿಯನ್ನು ಸಂಪುಟದ ಮುಂದೆ ತಂದರೂ ಸಹೋದ್ಯೋಗಿಗಳು ವಿರೋಧ ಮಾಡಿದರು ಎಂದು ಚರ್ಚೆ ಮಾಡಿ ಸಾರ್ವಜನಿಕವಾಗಿ ಬಿಡುಗಡೆ ಮಾಡಲು ಹಿಂದೇಟು ಹಾಕಿದರು. ರಾಹುಲ್ ಗಾಂಧಿ ಸೂಚನೆ ಮೇರೆಗೆ ಹೆಗ್ಡೆ ವರದಿಯನ್ನು ಕಸದ ಬುಟ್ಟಿಗೆ ಹಾಕಿದರು. ಈಗ ಮಧುಸೂದನ್ ನಾಯಕ್ ವರದಿಯನ್ನೂ ಸಹ ಈ ಸರ್ಕಾರ ಕಸದ ಬುಟ್ಟಿಗೆ ಹಾಕಲಿದೆ. ಡಿ.ಕೆ. ಶಿವಕುಮಾರ್ ಅವರ ಸರ್ಕಾರ ನಾಯಕ್ ವರದಿಯನ್ನು ಘನತ್ಯಾಜ್ಯ ವಿಲೇವಾರಿ ಮಾಡಲಿದೆ ಎಂದು ವ್ಯಂಗ್ಯವಾಡಿದರು.
ಚುನಾವಣೆ ವೇಳೆ ಒಬಿಸಿ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದ ಕಾಂಗ್ರೆಸ್ ನಂತರ ಅವರ ಕಡೆ ನೋಡುವುದಿಲ್ಲ. ಹಿಂದುಳಿದ ವರ್ಗಕ್ಕೆ ಕಾಂಗ್ರೆಸ್ ಸರ್ಕಾರ ಅನ್ಯಾಯ ಮಾಡುತ್ತಿದೆ. ಮಧುಸೂದನ್ ನಾಯಕ್ ಆಯೋಗದ ವರದಿಯ ಬಗ್ಗೆ ರಾಜ್ಯ ಸರ್ಕಾರ ಜನತೆಯನ್ನು ಕತ್ತಲೆಯಲ್ಲಿ ಇಟ್ಟಿದೆ. ವರದಿಯನ್ನು ತರಾತುರಿಯಲ್ಲೇ ಮಾಡಬೇಕು ಎಂದು 2025ರ ಸೆಪ್ಟೆಂಬರ್‌ನಲ್ಲಿ ಸಿಎಂ ಹೇಳಿದ್ದರು. ಆಗ ಬಿಜೆಪಿ ವಿರೋಧ ಮಾಡಿತ್ತು. ಮೂರು ತಿಂಗಳ ಒಳಗೆ ವರದಿ ಕೊಡ್ತೇವೆ ಅಂತ ಸಿಎಂ ಹೇಳಿದ್ರು. ಈಗ ಜುಲೈ ಬಂದರೂ ವರದಿ ಕುರಿತು ಏನೂ ಇಲ್ಲ. ಆದ್ದರಿಂದ ಈಗಿನ ಸಿಎಂ ವರದಿ ಬಗ್ಗೆ ತಮ್ಮ ನಿಲುವು ತಿಳಿಸಲಿ ಎಂದು ಆಗ್ರಹಿಸಿದರು.
ಮೂರು ವರ್ಷದಲ್ಲಿ ರಚಿಸಿದ ಆಯೋಗಗಳ ಬಗ್ಗೆ ಸರ್ಕಾರಕ್ಕೆ ಸ್ಪಷ್ಟತೆ ಇಲ್ಲ. ಕೆಂಪಣ್ಣ ವರದಿ, ಸದಾಶಿವ ಆಯೋಗದ ವರದಿ, ಕಾಂತರಾಜು ವರದಿ, ಜಯಪ್ರಕಾಶ್ ಹೆಗ್ಡೆ ವರದಿ, ನಾಗಮೋಹನ್ ದಾಸ್ ಆಯೋಗದ ವರದಿ ಬಗ್ಗೆ ಸ್ಪಷ್ಟತೆ ಇಲ್ಲ. ಆಪತ್ತು ಬಂದಾಗ ಆಯೋಗ ರಚಿಸೋದು ನಂತರ ವರದಿಯನ್ನು ಕಸದ ಬಟ್ಟಿಗೆ ಹಾಕೋದು ನಿರಂತರವಾಗಿ ಮಾಡ್ತಾ ಬಂದಿದೆ ಈ ಸರ್ಕಾರ ಎಂದು ದೂರಿದ ಅವರು, ಈಗ ಮಧುಸೂದನ್ ಆಯೋಗದ ವರದಿ ಕೋಲ್ಡ್ ಸ್ಟೋರೇಜ್‍ಗೆ ಹೋಗುವ ಮೊದಲು ಡಿ.ಕೆ. ಶಿವಕುಮಾರ್ ಅವರು ಅದರ ಬಗ್ಗೆ ಸ್ಪಷ್ಟನೆ ನೀಡಲಿ ಎಂದು ಒತ್ತಾಯಿಸಿದರು.
ಆಗಸ್ಟ್‌ನಲ್ಲಿ ಮಳೆಗಾಲದ ಅಧಿವೇಶನ ನಡೆಯಬೇಕಿದೆ. ಆಗಲಾದರೂ ಈ ಮಧುಸೂದನ್ ವರದಿ ಬಗ್ಗೆ ಸರ್ಕಾರ ತನ್ನ ನಿಲುವು ತಿಳಿಸಬೇಕು. ಸಿದ್ದರಾಮಯ್ಯ ರಾಜೀನಾಮೆ ನಿರ್ಧಾರದ ಅವಸರದಲ್ಲಿ ಇದ್ದಾಗ ವರದಿ ಸ್ವೀಕರಿಸುವ ಕಾರಣ ಏನು? ವರದಿ ಬಗ್ಗೆ ಏನೂ ತಿಳಿಸದ ಸರ್ಕಾರ ತರಾತುರಿಯಲ್ಲಿ ಸ್ವೀಕಾರ ಮಾಡಿದ್ದು ಏಕೆ. ಹಾಗಾದರೆ ವರದಿಯನ್ನು ಆಯೋಗ ರಚಿಸುತ್ತದೋ ಇಲ್ಲವೇ ಕೃಷ್ಣ ಕಚೇರಿ ರಚಿಸಿದೆಯೇ ಎಂದು ಪ್ರಶ್ನಿಸಿದರು.
SIR ತಾತ್ಕಾಲಿಕ ತಡೆಗೆ ಎನ್‌ಡಿಎ ಪಟ್ಟು; ಕೇಂದ್ರ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು
ವರದಿ ಬಗ್ಗೆ ಕೇಳುವ ಹಕ್ಕು ರಾಜ್ಯದ ಜನರಿಗೆ ಇದೆ
ವರದಿ ಬಗ್ಗೆ ಕೇಳುವ ಹಕ್ಕು ರಾಜ್ಯದ ಜನರಿಗೆ ಇದೆ. ವರದಿ ಬಹಿರಂಗ ಆದರೆ ಬಿಜೆಪಿಗೆ ಆತಂಕ ಇಲ್ಲ. ಭಾಷಣದಲ್ಲಿ ಮಾತ್ರ ಅಹಿಂದ ಬಗ್ಗೆ ಸರ್ಕಾರ ಮಾತನಾಡಬಾರದು. ವರದಿಯಲ್ಲಿ ಜಾತಿ ಎಷ್ಟಿದೆ ಎಂದು ತಿಳಿಯುವುದು ನಮ್ಮ ಉದ್ದೇಶವಲ್ಲ. ಆರ್ಥಿಕ, ಸಾಮಾಜಿ , ಶೈಕ್ಷಣಿಕ ಸ್ಥಿತಿಗತಿ ಏನಿದೆ ಎಂದು ನೋಡುವುದು ಉದ್ದೇಶ ಎಂದು ಹೇಳಿದರು. ಈ ಸಂದರ್ಭದಲ್ಲಿ ಸಂಸದ ಪಿ.ಸಿ. ಮೋಹನ್, ರಾಜ್ಯ ಉಪಾಧ್ಯಕ್ಷರು ಮತ್ತು ಶಾಸಕ ಬಿ.ಎ. ಬಸವರಾಜ, ಒಬಿಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸೋಮಶೇಖರ್, ರಾಜ್ಯ ಒಬಿಸಿ ಖಜಾಂಚಿ ಎ.ಎಚ್. ಬಸವರಾಜು ಹಾಜರಿದ್ದರು.