ಬೆಂಗಳೂರು: ವಾಲ್ಮೀಕಿ ನಿಗಮ ಹಗರಣದಲ್ಲಿ ಸಚಿವ ಬಿ. ನಾಗೇಂದ್ರ (B Nagendra) ಅವರಿಗೆ ಹೈಕೋರ್ಟ್‌ನಿಂದ ತುಸು ರಿಲೀಫ್ ಸಿಕ್ಕಿದೆ. ರಾಜ್ಯ ಬಿಟ್ಟು ತೆರಳದಂತೆ ಇದ್ದ ಷರತ್ತನ್ನು ಉಚ್ಚ ನ್ಯಾಯಾಲಯ ರದ್ದುಗೊಳಿಸಿದ್ದು, ವಿಚಾರಣಾ ನ್ಯಾಯಾಲಯದ ಅನುಮತಿ ಪಡೆಯದೆ ವಿದೇಶಕ್ಕೆ ಹೋಗುವಂತಿಲ್ಲ ಎಂದು ಆದೇಶಿಸಿದೆ.
ವಿಚಾರಣಾ ನ್ಯಾಯಾಲಯ ಜಾಮೀನು ಮಂಜೂರು ಮಾಡುವ ಸಂದರ್ಭದಲ್ಲಿ ನ್ಯಾಯಾಲಯದ ಅನುಮತಿ ಇಲ್ಲದೆ ರಾಜ್ಯ ಬಿಟ್ಟು ಹೊರ ಹೋಗಬಾರದೆಂದು ವಿಧಿಸಿದ್ದ ಷರತ್ತು ಸಡಿಲಿಸಬೇಕು ಎಂದು ಕೋರಿ ಬಿ.ನಾಗೇಂದ್ರ ಸಲ್ಲಿಸಿದ್ದ ಮಧ್ಯಂತರ ಅರ್ಜಿಗೆ ಇಡಿ ಪರ ವಕೀಲರು, ಆಕ್ಷೇಪಣೆ ಸಲ್ಲಿಸಿ, ಈ ಹಿಂದೆ ವಿಧಿಸಿದ್ದ ಷರತ್ತುಗಳನ್ನು ಸಡಿಲಿಸಬಾರದು ಎಂದು ಕೋರಿದರು.
ವಾದ ಆಲಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ರಾಜ್ಯಾದ್ಯಂತ ಸಂಚರಿಸಲು ಅವಕಾಶ ನೀಡಿದ್ದು, ದೇಶ ಬಿಟ್ಟು ಹೋಗಬೇಕಾದರೆ ವಿಚಾರಣಾ ನ್ಯಾಯಾಲಯದ ಅನುಮತಿ ಕಡ್ಡಾಯ ಎಂದು ಆದೇಶಿಸಿದೆ.
ಅರ್ಜಿಯ ಸಂಬಂಧ ಈ ಹಿಂದೆ ನಡೆದಿದ್ದ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಅರ್ಜಿದಾರರು ಸಚಿವ ಸಂಪುಟಕ್ಕೆ ನೂತನವಾಗಿ ಸೇರ್ಪಡೆಯಾಗಿದ್ದಾರೆ. ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ರಾಜ್ಯದ ಅಧಿಕೃತ ಕೆಲಸ ಕಾರ್ಯಗಳ ನಿಮಿತ್ತ ಅವರು ರಾಜ್ಯದ ಹೊರಗೆ ತೆರಳಬೇಕಾದ ಅನಿವಾರ್ಯತೆ ಇರುವುದರಿಂದ ಜಾಮೀನು ಷರತ್ತುಗಳನ್ನು ಸಡಿಲಿಸಬೇಕು ಎಂದು ಕೋರಿದರು.
ಅಲ್ಲದೆ, ಅರ್ಜಿದಾರರು ಹಿಂದೆ ಯಾವುದೇ ಸಚಿವ ಸ್ಥಾನದಲ್ಲಿರಲಿಲ್ಲ. ಆ ಸಂದರ್ಭದಲ್ಲಿ ಈ ಜಾಮೀನು ಷರತ್ತನ್ನು ವಿಧಿಸಲಾಗಿತ್ತು. ಆದರೆ ಪ್ರಸ್ತುತ ಅರ್ಜಿದಾರರು ಸಚಿವ ಸಂಪುಟದ ಸಚಿವರಾಗಿ ಅಧಿಕಾರ ವಹಿಸಿಕೊಂಡಿರುವುದರಿಂದ, ತಮ್ಮ ಸಾಂವಿಧಾನಿಕ ಮತ್ತು ಅಧಿಕೃತ ಕರ್ತವ್ಯಗಳ ನಿರ್ವಹಣೆಗಾಗಿ ರಾಜ್ಯದ ಹೊರಗಡೆ ಸಂಚರಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ, ಹಳೆಯ ಜಾಮೀನು ಷರತ್ತು ಮುಂದುವರಿದರೆ ಅದು ಅವರ ಅಧಿಕೃತ ಕರ್ತವ್ಯ ನಿರ್ವಹಣೆಗೆ ಮತ್ತು ರಾಜಕೀಯ ಸ್ಥಾನಮಾನಕ್ಕೆ ಗಂಭೀರ ಅಡ್ಡಿಯಾಗಲಿದೆ ಎಂದು ಹಿರಿಯ ವಕೀಲರು ವಾದ ಮಂಡಿಸಿದರು.