ದಾವಣಗೆರೆ, ಮಾ.5: ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಗೆಲ್ಲಲೇ ಬೇಕೆಂಬ ಪಣ ತೊಟ್ಟು ನಾವೆಲ್ಲ ಹೊರಟಿದ್ದೇವೆ. ಈ ಕ್ಷೇತ್ರದಲ್ಲಿ ಬಿಜೆಪಿ ಗೆಲುವಿಗೆ ಪ್ರಯತ್ನವನ್ನು ನಾವು ನಿಶ್ಚಿತವಾಗಿ ಮಾಡಲಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ (BY Vijayendra) ತಿಳಿಸಿದ್ದಾರೆ. ದಾವಣಗೆರೆಯಲ್ಲಿ ಗುರುವಾರ ಮಾಧ್ಯಮಗಳ ಜತೆ ಅವರು ಮಾತನಾಡಿದರು.
ಏನೇ ವ್ಯತ್ಯಾಸಗಳಿದ್ದರೂ ಅದನ್ನು ಸರಿಪಡಿಸುವ ಶಕ್ತಿ ನಮ್ಮೆಲ್ಲರಲ್ಲೂ ಇದೆ. ಹಾಗಾಗಿ ನಾನು ಇಲ್ಲಿಗೆ ಬಂದಿದ್ದೇನೆ. ನಮ್ಮ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯದ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್ವಾಲ್ ಅವರೂ ಬಂದಿದ್ದಾರೆ. ಎಲ್ಲರೂ ಕುಳಿತು ಸಮಸ್ಯೆ ಬಗೆಹರಿಸುತ್ತೇವೆ. ಇದನ್ನು ಮುಂದುವರಿಯಲು ಬಿಡುವುದಿಲ್ಲ ಎಂದು ಹೇಳಿದರು.
ಅಭ್ಯರ್ಥಿ ಆಕಾಂಕ್ಷಿಗಳನ್ನು ಇವತ್ತು ಕೂಡ ಭೇಟಿ ಮಾಡಿದ್ದೇವೆ. ಅವರ ವಿಚಾರಗಳನ್ನು ತಿಳಿದುಕೊಂಡಿದ್ದೇವೆ. ಇವತ್ತು ಬಂದಿರುವ ಉದ್ದೇಶವೇ ಅದು. ಸಣ್ಣಪುಟ್ಟ ಸಮಸ್ಯೆಗಳನ್ನು ಸರಿಪಡಿಸಲಿದ್ದೇವೆ ಎಂದರು. 8-10 ಜನ ಆಕಾಂಕ್ಷಿಗಳಿದ್ದಾರೆ. ನಾಲ್ಕೈದು ಜನರನ್ನು ಭೇಟಿ ಮಾಡಿದ್ದೇವೆ. ಮಾಜಿ ಸಂಸದ ಸಿದ್ದೇಶ್ವರ್ ಅವರನ್ನೂ ಭೇಟಿ ಮಾಡುತ್ತೇವೆ ಎಂದು ಹೇಳಿದರು. ಅಲ್ಲಿ ಕೂಡ ಮೂರ್ನಾಲ್ಕು ಜನ ಆಕಾಂಕ್ಷಿಗಳಿದ್ದು ಅವರನ್ನು ಮಾತನಾಡಿಸುತ್ತೇವೆ ಎಂದರು.
ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಕಳೆದ ಒಂದು ವಾರದಿಂದ ಸಂಘಟನೆ ಕೆಲಸ ನಡೆಯುತ್ತಿದೆ. ದಾವಣಗೆರೆ ಜಿಲ್ಲೆ ಮತ್ತು ಅಕ್ಕಪಕ್ಕದ ಜಿಲ್ಲೆಯ 150ಕ್ಕೂ ಹೆಚ್ಚು ಕಾರ್ಯಕರ್ತರು ಬಂದು ‘ವಿಸ್ತಾರಕ್ ಯೋಜನೆʼ ನಡೆಸುತ್ತಿದ್ದಾರೆ. ಪ್ರತಿ ಬೂತ್‍ನಲ್ಲಿ ಒಂದು ವಾರ ಇದ್ದು, ಬೂತ್‌ನಲ್ಲಿರುವ ವಿಚಾರಗಳನ್ನು ಅರ್ಥ ಮಾಡಿಕೊಳ್ಳುವುದು, ಕಾರ್ಯಕರ್ತರಿಗೆ ಧೈರ್ಯ ತುಂಬುವುದು, ಸಂಘಟನಾತ್ಮಕವಾಗಿ ಏನೇನು ಕೆಲಸ ಮಾಡಬೇಕೋ ಅವೆಲ್ಲವನ್ನೂ ಮಾಡಿದ್ದಾರೆ. ಎಲ್ಲವೂ ಸರಿಯಾಗುವ ಸಂಪೂರ್ಣ ವಿಶ್ವಾಸ ನಮಗಿದೆ ಎಂದು ಹೇಳಿದರು.
SC Internal Reservation: ಒಳ ಮೀಸಲಾತಿಯಡಿ ಹುದ್ದೆಗಳ ಭರ್ತಿ ಮಾಡಿ: ಬಿ.ವೈ. ವಿಜಯೇಂದ್ರ ಆಗ್ರಹ
ಕ್ಷೇತ್ರದಲ್ಲಿ ಕಾರ್ಯಕರ್ತರಿಗೆ ರಣೋತ್ಸಾಹ ಇದೆ. ಆದರೆ, ಮುಖಂಡರಿಗೆ ಸ್ವಲ್ಪ ಗೊಂದಲ ಇರುವುದು ಸತ್ಯ. ಇದೆಲ್ಲವನ್ನೂ ಸರಿಪಡಿಸುವ ಜವಾಬ್ದಾರಿ ಅಧ್ಯಕ್ಷನಾಗಿ ನನ್ನ ಮೇಲಿದೆ. ಹಾಗಾಗಿ ಸಮಸ್ಯೆ ಸರಿಪಡಿಸುವ ನಿಟ್ಟಿನಲ್ಲಿ ನಾವೆಲ್ಲರೂ ಬಂದಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.