ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

West Bengal Blection 2026: ʼಜಿರಳೆ ಮೀಸೆ ತಂತ್ರಗಾರಿಕೆʼ ಬಳಸದೆ ಬಿಜೆಪಿ ಗೆದ್ದಿದ್ದು ಬಂಗಾಳದಲ್ಲಿ ಮಾತ್ರ!

BJP's election strategy: ಬಂಗಾಳದಲ್ಲಿ ನಿರಂತರ 34 ವರ್ಷ ಅಧಿಕಾರದಲ್ಲಿದ್ದ ಕಮ್ಯುನಿಸ್ಟ್‌ ಪಕ್ಷ ಮತ್ತು ಅದಕ್ಕೂ ಮೊದಲು 30 ವರ್ಷ ಆಡಳಿತ ನಡೆಸಿದ್ದ ಕಾಂಗ್ರೆಸ್‌ ಪಕ್ಷಗಳನ್ನೂ ಬದಿಗೆ ಸರಿಸಿ ಬಿಜೆಪಿ ರನ್ನರ್‌ ಅಪ್‌ ಆಗಿದ್ದು, ಈಗ ಚಾಂಪಿಯನ್‌ ಆಗಿದ್ದು ಸ್ವಂತ ಬಲದಿಂದ. 42 ಲೋಕಸಭೆ ಕ್ಷೇತ್ರಗಳನ್ನು ಹೊಂದಿರುವ ಪಶ್ಚಿಮ ಬಂಗಾಳದ ವಿಜಯ 2029ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಬಹು ದೊಡ್ಡ ಕೊಡುಗೆ ನೀಡಲಿದೆ. ಇದಕ್ಕಿಂತ ಮೊದಲು ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ, ಗುಜರಾತ್‌, ಉತ್ತರಾಖಂಡ್, ಪಂಜಾಬ್, ಗೋವಾ, ಹಿಮಾಚಲ ಪ್ರದೇಶ ಮತ್ತು ಮಣಿಪುರ ವಿಧಾನಸಭೆ ಚುನಾವಣೆಗೂ ಶಕ್ತಿ ತುಂಬಲಿದೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಪಶ್ಚಿಮ ಬಂಗಾಳದ ನೂತನ ಸಿಎಂ ಸುವೇಂದು ಅಧಿಕಾರಿ.


| ವಿಶ್ಲೇಷಣೆ: ರಮೇಶ್‌ ಕುಮಾರ್‌ ನಾಯಕ್‌
ಅಟಲ್ ಬಿಹಾರಿ ವಾಜಪೇಯಿ ಅವರು ಆಗಾಗ ವಿಷಾದದ ಒಂದು ಮಾತನ್ನು ಹೇಳುತ್ತಿದ್ದರು: ನಮ್ಮ ಪಕ್ಷದ ಸಂಸ್ಥಾಪಕರ ತವರು ರಾಜ್ಯದಲ್ಲೇ ನಮಗೆ ಈವರೆಗೆ ಒಂದೇ ಒಂದು ಸೀಟು ಗೆಲ್ಲಲಾಗಲಿಲ್ಲ!

1951ರಲ್ಲಿ ಬಿಜೆಪಿಯ ಮೂಲ ಪಕ್ಷ ಜನ ಸಂಘ ಸ್ಥಾಪಿಸಿದ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಹುಟ್ಟೂರು ಪಶ್ಚಿಮ ಬಂಗಾಳ. ಅಲ್ಲಿ ಖಾತೆ ತೆರೆಯಲು ಬಿಜೆಪಿ ಭರ್ತಿ 63 ವರ್ಷ ಕಾಯಬೇಕಾಯಿತು. 2014ರಲ್ಲಿ ಮೋದಿ ನೇತೃತ್ವದಲ್ಲಿ ಬಿಜೆಪಿ ಲೋಕಸಭೆ ಚುನಾವಣೆಗೆ ಧುಮುಕಿದಾಗ ಮೊದಲ ಬಾರಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಶೇ.17ರಷ್ಟು ಮತ ಗಳಿಕೆಯೊಂದಿಗೆ 2 ಸೀಟು ಗೆದ್ದಿತು. 2016ರ ವಿಧಾನಸಭೆಯಲ್ಲಿ ಮೂರೇ ಮೂರು ಸೀಟುಗಳೊಂದಿಗೆ ವಿಧಾಸಭೆಯೊಳಗೆ ಕಾಲಿಟ್ಟಿತು. ಎರಡನೇ ಬಾರಿ ಮೋದಿ ಪ್ರಧಾನಿಯಾಗಿ ಮುಂದುವರಿಯಬೇಕೆಂದರೆ, 42 ಸ್ಥಾನ ಬಲದ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸೈಕಲ್‌ ಹೊಡೆಯಲೇಬೇಕಿತ್ತು. ಆಗ ಅಮಿತ್‌ ಶಾ ಬಂಗಾಳದ ಹೊಣೆ ಒಪ್ಪಿಸಿದ್ದು ಅಂದಿನ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್‌ ವಿಜಯವರ್ಗೀಯ ಅವರಿಗೆ.

West Bengal Blection 2026  (2)

ಅಷ್ಟು ಹೊತ್ತಿಗಾಗಲೇ ಬಂಗಾಳದಲ್ಲಿ ಪಂಚಾಯಿತಿ ಚುನಾವಣೆ ನಿಗದಿಯಾಗಿತ್ತು. ತಳ ಮಟ್ಟದಲ್ಲಿ ಪಕ್ಷದ ನೆಲೆ ವಿಸ್ತರಿಸಲು ಬಿಜೆಪಿ ಈ ಚುನಾವಣೆಯನ್ನು ಸಮರ್ಥವಾಗಿ ಬಳಸಿಕೊಂಡಿತು. 2018ರಲ್ಲಿ 5779 ಗ್ರಾ.ಪಂ, 769 ಪಂಚಾಯತ್ ಸಮಿತಿ ಮತ್ತು 22 ಜಿಲ್ಲಾ ಪರಿಷತ್‌ ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ, ಅಲ್ಲಿಯವರೆಗೆ ಬಿಜೆಪಿಯನ್ನು ಹಗುರವಾಗಿ ಪರಿಗಣಿಸಿದ್ದ ಮಮತಾ ಬ್ಯಾನರ್ಜಿಯವರನ್ನು ಬೆಚ್ಚಿ ಬೀಳಿಸಿತು. 2019ರ ಲೋಕಸಭೆ ಚುನಾವಣೆಯಲ್ಲಿ ಮಮತಾಗೆ ಭಾರೀ ಆಘಾತ ಕಾದಿತ್ತು. ಶೇ. 40.06 ಮತ ಗಳಿಕೆಯೊಂದಿಗೆ 18 ಲೋಕಸಭೆ ಕ್ಷೇತ್ರಗಳನ್ನು ಬಿಜೆಪಿ ಬಾಚಿಕೊಂಡಿತು. ಇನ್ನೊಂಚೂರು ಎಫರ್ಟ್‌ ಹಾಕಿದರೆ ಪಶ್ಚಿಮ ಬಂಗಾಳದಲ್ಲಿ ಸರಕಾರವನ್ನೇ ರಚಿಸಬಹುದು ಎಂಬ ಧೈರ್ಯ ಬಂತು ಬಿಜೆಪಿ ವರಿಷ್ಠರಿಗೆ. ಟಿಎಂಸಿ-ಬಿಜೆಪಿ ನಡುವೆ ಅಸಲಿ ಸಂಘರ್ಷ ಶುರುವಾಗಿದ್ದೇ ಆಗ.

ಅಸ್ಸಾಂ ಮುಖ್ಯಮಂತ್ರಿಯಾಗಿ ಎರಡನೇ ಬಾರಿಗೆ ಹಿಮಂತ ಬಿಸ್ವಾ ಶರ್ಮಾ ಪ್ರಮಾಣ ವಚನ ಸ್ವೀಕಾರ; ಪ್ರಧಾನಿ ಸೇರಿ ಹಲವರು ಭಾಗಿ

ʼʼಅನುಮಾನವೇ ಬೇಡ, 2021ರಲ್ಲಿ ಬಿಜೆಪಿ ಗೆಲುವು ಖಚಿತʼʼ ಎಂದು ಬಿಜೆಪಿ ಮುಖ್ಯಸ್ಥರು ಅಬ್ಬರಿಸತೊಡಗಿದರು. ನಾನಾ ಆಮಿಷ ತೋರಿಸಿ ಮಮತಾ ಪರಮಾಪ್ತರೂ ಸೇರಿದಂತೆ ಟಿಎಂಸಿಯಿಂದ ಘಟಾನುಘಟಿ ನಾಯಕರನ್ನು ಹೈಜಾಕ್‌ ಮಾಡಲಾಯಿತು. ಈ ಬಾರಿ ಗೆದ್ದೇ ಗೆಲ್ಲಬೇಕು ಎಂಬ ಹಟಕ್ಕೆ ಬಿದ್ದ ಬಿಜೆಪಿ ಸರ್ವಪ್ರಯೋಗ ಮಾಡಿತು, ತನ್ನೆಲ್ಲ ಬಲ ಪ್ರಯೋಗಿಸಿತು. ಏಳು ಹಂತಗಳ ಮತದಾನ ಮತ್ತು ಮ್ಯಾರಥಾನ್‌ ಪ್ರಚಾರದಿಂದ ತಮಗೆ ಅನುಕೂಲವಾಗುತ್ತದೆ ಎಂದುಕೊಂಡಿತ್ತು ಮೋದಿ ಆ್ಯಂಡ್ ಟೀಮ್.‌ ಮೊದಲ ಮೂರು ಹಂತದ ಮತದಾನ ಮುಗಿಯುತ್ತಿದ್ದಂತೆ, ʼʼನಾವು ಈಗಾಗಲೇ ಗೆದ್ದು ಬಿಟ್ಟಿದ್ದೀವಿ. ಮುಂದಿನ ಹಂತ ಏನಿದ್ದರೂ ಬೋನಸ್‌ ಸೀಟುಗಳು ಅಷ್ಟೇʼʼ ಎಂದು ಮೋದಿ ಮತ್ತು ಅಮಿತ್‌ ಶಾ ಗಟ್ಟಿ ದನಿಯಲ್ಲಿ ಪ್ರಚಾರ ಮಾಡತೊಡಗಿದರು. ಕೊನೆಗೆ ಇದೇ ಮುಳುವಾಯಿತು. ಅಲರ್ಟ್‌ ಆದ ಮಮತಾ ಕಾಲಿಗೆ ಬ್ಯಾಂಡೇಜ್‌ ಕಟ್ಟಿಕೊಂಡು ವ್ಹೀಲ್‌ಚೇರ್‌ ಮೇಲೆ ಪ್ರಚಾರ ಶುರು ಮಾಡಿದರು! ಟಿಎಂಸಿ ಕಾರ್ಯಕರ್ತರನ್ನು ಹಿಂಸಾಚಾರಕ್ಕಿಳಿಸಿದರು. ಬಿಜೆಪಿ ಪರ ಸಹಾನುಭೂತಿ ಉಳ್ಳವರನ್ನು ಮತದಾನದ ದಿನ ಮನೆಯಿಂದ ಹೊರ ಬರದಂತೆ ತಡೆಯಲಾಯಿತು. ಅಂತಿಮವಾಗಿ ಈ ಚುನಾವಣೆಯಲ್ಲಿ ಬಿಜೆಪಿ 77 ಸೀಟುಗಳನ್ನು ಗೆಲ್ಲಲಷ್ಟೇ ಸಾಧ್ಯವಾಯಿತು. ಬಿಜೆಪಿಯ ಎಲ್ಲ ತಂತ್ರಗಳನ್ನು ಮಮತಾರ ಪ್ರತಿತಂತ್ರ ಹಣಿದು ಹಾಕಿತು.

West Bengal Blection 2026  (3)

2021ರ ಚುನಾವಣೆಗೆ ಮೊದಲು ಟಿಎಂಸಿ ಸಂಸ್ಥಾಪಕರಲ್ಲಿ ಒಬ್ಬರಾದ ಮುಕುಲ್‌ರಾಯ್‌, ಮಮತಾ ಬ್ಯಾನರ್ಜಿಯ ಯುವ ಶಕ್ತಿ ಎನ್ನಲಾಗಿದ್ದ ಸುವೇಂದು ಅಧಿಕಾರಿ, ರಜಿಬ್ ಬ್ಯಾನರ್ಜಿ, ಜಿತೇಂದ್ರ ತಿವಾರಿ, ಸಭ್ಯಸಾಚಿ ದತ್ತ, ತನ್ಮಯ್ ಘೋಷ್, ಬಿಸ್ವಜಿತ್ ದಾಸ್, ಮಿಥುನ್‌ಚಕ್ರವರ್ತಿ ಮತ್ತಿತರರು ಬಿಜೆಪಿ ಪಾಳಯ ಸೇರಿದ್ದರು. ಮತ್ತೆ ಮಮತಾ ಸರ್ಕಾರ ಬರುತ್ತಿದ್ದಂತೆ ಇವರಲ್ಲಿ ಬಹುತೇಕ ನಾಯಕರು ಎದ್ದುಬಿದ್ದು ಟಿಎಂಸಿಗೆ ವಾಪಸಾದರು. ಮುಕುಲ್‌ರಾಯ್‌ ಅಂತೂ, ಬಿಜೆಪಿಯಿಂದ ಗೆದ್ದು ಶಾಸಕರಾದರೂ ಪಕ್ಷ ತೊರೆದು ಹೋದರು. ಬಿಜೆಪಿಯಲ್ಲೇ ಗಟ್ಟಿಯಾಗಿ ಉಳಿದವರೆಂದರೆ, ಸುವೇಂದು ಅಧಿಕಾರಿ ಮತ್ತು ಮಿಥುನ್‌ ಚಕ್ರವರ್ತಿ ಮಾತ್ರ!

ʼದ್ರೌಪದಿʼಯ ಸೇಡಿನ ಹೋರಾಟ

ಬಿಜೆಪಿ ಚಾಣಕ್ಯರ ಹಿಕಮತ್ತುಗಳೇನೇ ಇರಲಿ, ಬಂಗಾಳದ ಬಿಜೆಪಿ ಗೆಲುವಿನ ಹಿಂದೆ ಹಲವು ಕಾರ್ಯಕರ್ತರ ಶ್ರಮ ಇದೆ. ಅವರಲ್ಲಿ ಮಹಾಭಾರತದ ದ್ರೌಪದಿ ಖ್ಯಾತಿಯ ರೂಪಾ ಗಂಗೂಲಿ ಒಬ್ಬರು. 2015ರಲ್ಲಿ ಬಿಜೆಪಿ ಸೇರಿದ್ದ ಇವರು ಪಕ್ಷದಲ್ಲಿ ಕೇವಲ ʼಚಿಯರ್‌ಗರ್ಲ್‌ʼ ಆಗಿ ಕಾಲ ಕಳೆಯಲಿಲ್ಲ. ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆಯಾಗಿ ರಾಜ್ಯದುದ್ದಕ್ಕೂ ಸುತ್ತಾಡಿ ಸುಂಟರಗಾಳಿ ಎಬ್ಬಿಸಿದರು. ಏಟು ತಿಂದ ಪಕ್ಷದ ಕಾರ್ಯಕರ್ತರ ಜತೆ ಹೋಗಿ ನಿಂತರು. 2016ರಲ್ಲಿ ಟಿಎಂಸಿ ಗೂಂಡಾಗಳು ಇವರನ್ನು ಕಾರಿನಿಂದ ಹೊರಗೆಳೆದು ನೆಲಕ್ಕೆ ಕೆಡವಿ, ಸೀರೆ ಹರಿದು, ಮುಖಕ್ಕೆ ಗುದ್ದಿ ಗಾಯಗೊಳಿಸಿದ್ದರು. ರೂಪಾ ಗಂಗೂಲಿ ಕೊನೆಯವವರೆಗೂ ದ್ರೌಪದಿಯ ಸೇಡಿನಂತೆ ಬುಸುಗುಡುತ್ತಲೇ ಟಿಎಂಸಿ ವಿರುದ್ಧ ಹೋರಾಡಿದರು. 2022ರಲ್ಲಿ ಬೀರ್‌ಭೂಮ್‌ನಲ್ಲಿ ಹತ್ತಕ್ಕೂ ಹೆಚ್ಚು ಬಿಜೆಪಿ ಬೆಂಬಲಿಗರನ್ನು ಬೆಂಕಿ ಹಚ್ಚಿ ಕೊಂದಾಗ, ಆ ಘಟನೆಯನ್ನು ರಾಜ್ಯ ಸಭೆಯಲ್ಲಿ ಕಣ್ಣೀರುಡುತ್ತ ಪ್ರಸ್ತಾಪಿಸಿ ದೇಶದ ಗಮನ ಸೆಳೆದಿದ್ದರು. ಕಳೆದ ಎರಡು ವಿಧಾನಸಭೆ ಚುನಾವಣೆಗಳಲ್ಲಿ ಸೋಲು ಕಂಡರೂ ಈ ಬಾರಿ ಸೋನಾರ್‌ಪುರ ದಕ್ಷಿಣ ಕ್ಷೇತ್ರದಲ್ಲಿ ಇವರು ಗೆದ್ದಿದ್ದಾರೆ.

West Bengal Blection 2026  (1)

ವಿಜಯವರ್ಗೀಯಗೆ ಕಾಲಿಡಲೂ ಬಿಡಲಿಲ್ಲ!

ಬಂಗಾಳದಲ್ಲಿ ಈ ಬಾರಿ ಬಿಜೆಪಿಯ ರಣತಂತ್ರ ಭಿನ್ನವಾಗಿತ್ತು. 2015ರಿಂದ ಆ ರಾಜ್ಯದ ಚುನಾವಣೆ ಉಸ್ತುವಾರಿಯಾಗಿದ್ದ ಕೈಲಾಶ್‌ ವಿಜಯವರ್ಗೀಯ ಅವರನ್ನು ಈ ಸಲ ಬಂಗಾಳಕ್ಕೆ ಕಾಲಿಡಲೂ ಬಿಡಲಿಲ್ಲ. ಮಮತಾ ಬ್ಯಾನರ್ಜಿಯನ್ನು ಎದುರು ಹಾಕಿಕೊಂಡು 38 ಕೇಸುಗಳನ್ನು ಮೈಮೇಲೆ ಎಳೆದುಕೊಂಡಿದ್ದರು ಮಧ್ಯಪ್ರದೇಶದಲ್ಲಿ ಈಗ ಸಚಿವರಾಗಿರುವ ವಿಜಯವರ್ಗೀಯ. ಬಂಗಾಳದಲ್ಲಿ ಪಕ್ಷದ ಬಲ ವರ್ಧನೆಯಲ್ಲಿ ಇವರ ಪಾಲು ದೊಡ್ಡದು. ಆದರೆ ಕಳೆದ ಬಾರಿಯ ಸೋಲಿಗೆ ಇವರನ್ನು ಬಿಜೆಪಿ ವರಿಷ್ಠರು ಹೊಣೆ ಮಾಡಿ ದೂರ ಇಟ್ಟಿದ್ದರು!

ಈ ಬಾರಿ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್‌ಗೆ ಚುನಾವಣೆ ಪ್ರಚಾರ ಕಾರ್ಯತಂತ್ರದ ಸಂಪೂರ್ಣ ಹೊಣೆ‌ ನೀಡಲಾಗಿತ್ತು. ಕೇಂದ್ರ ಮತ್ತು ರಾಜ್ಯ ನಾಯಕರ ನಡುವೆ ಸಮನ್ವಯ ಸಾಧಿಸುವುದು ಇವರ ಜವಾಬ್ದಾರಿಯಾಗಿತ್ತು. ಬಿಹಾರ ಚುನಾವಣೆಯ ಅನುಭವ ಹೊಂದಿದ್ದ ಮತ್ತೊಬ್ಬ ಕೇಂದ್ರ ಸಚಿವ ಭೂಪೇಂದ್ರ ಯಾದವ್‌ಗೆ ಬೂತ್ ಮಟ್ಟದಲ್ಲಿ ಕಾರ್ಯಕರ್ತರ ಕ್ರೋಡೀಕರಣದ ಟಾಸ್ಕ್‌ ನೀಡಲಾಗಿತ್ತು. ಉತ್ತರ ಪ್ರದೇಶದ ಪನ್ನಾ ಪ್ರಮುಖ್‌ ಕಾರ್ಯತಂತ್ರದ ಅನುಭವ ಹೊಂದಿದ್ದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸುನಿಲ್ ಬನ್ಸಲ್‌ಗೆ ಕೇಡರ್ ಮಟ್ಟದಲ್ಲಿ ಟಿಎಂಸಿಗೆ ಸಡ್ಡು ಹೊಡೆಯುವ ಕೆಲಸ ಒಪ್ಪಿಸಲಾಗಿತ್ತು. ತ್ರಿಪುರದಲ್ಲಿ ಕಮ್ಯುನಿಸ್ಟರನ್ನು ಮಣಿಸಿದ ಅನುಭವ ಹೊಂದಿದ್ದ ಅಲ್ಲಿಯ ಮಾಜಿ ಮುಖ್ಯಮಂತ್ರಿ ಬಿಪಲ್ಬ್ ದೇವ್ ಆಕ್ರಮಣಕಾರಿ ಪ್ರಚಾರ ತಂತ್ರ ರೂಪಿಸಿದ್ದರು.

ಸಂದೇಶ್ ಖಾಲಿ ಲೈಂಗಿಕ ದೌರ್ಜನ್ಯ ಪ್ರಕರಣದಿಂದ ಹಿಡಿದು ಆರ್ ಜಿ ಕರ್ ಮೆಡಿಕಲ್ ಕಾಲೇಜ್ ಅತ್ಯಾಚಾರ ಪ್ರಕರಣದವರೆಗೆ, ಮಮತಾ ಬ್ಯಾನರ್ಜಿ ಸರ್ಕಾರದ ಭ್ರಷ್ಟಾಚಾರದಿಂದ ಹಿಡಿದು ಟಿಎಂಸಿ ಕಾರ್ಯಕರ್ತರ ಗೂಂಡಾಗಿರಿಯವರೆಗೆ ಆಡಳಿತ ವಿರೋಧಿ ಅಲೆಯನ್ನು ಸಾಮಾಜಿಕ ಜಾಲತಾಣಗಳ ಮೂಲಕ ಜನಮಾನಸದಲ್ಲಿ ಉದ್ದೀಪಿಸಿದ್ದು ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ.

West Bengal Assembly Election

ಕೇಂದ್ರ ಅಧಿಕಾರದ ʼಸದುಪಯೋಗʼ!

ಈ ಬಾರಿಯ ಬಿಜೆಪಿ ಗೆಲುವಿನಲ್ಲಿ ಬಾಂಗ್ಲಾದೇಶದಲ್ಲಿನ ಹಿಂದೂಗಳ ಹತ್ಯಾಕಾಂಡದ ಎಫೆಕ್ಟ್‌ ಸಾಕಷ್ಟಿದೆ. ಬಂಗಾಳದಲ್ಲಿ ಸುಮಾರು 1 ಕೋಟಿ ಬಾಂಗ್ಲಾದೇಶಿ ಅಕ್ರಮ ಮತದಾರರಿದ್ದಾರೆ ಎಂದು ಬಿಜೆಪಿ ಪ್ರಚಾರ ಮಾಡಿದ್ದು ವರ್ಕ್‌ಔಟ್‌ ಆಗಿದೆ. SIR ಕಾರ್ಯಾಚರಣೆಯಲ್ಲಿ 91 ಲಕ್ಷ ಮತಗಳನ್ನು ಡಿಲಿಟ್‌ ಮಾಡಿದ್ದೂ ಪರಿಣಾಮ ಬೀರಿದೆ. ಉಳಿದದ್ದು ಎಂದಿನಂತೆ ಕೇಂದ್ರ ಸರಕಾರದ ಅಧಿಕಾರ ಪ್ರಯೋಗ. ಕೇಂದ್ರದಲ್ಲಿ ಕಾಂಗ್ರೆಸ್‌ ಸರಕಾರ ಇರಲಿ ಅಥವಾ ಬಿಜೆಪಿ ಸರಕಾರ ಇರಲಿ, ಚುನಾವಣೆ ಸಂದರ್ಭದಲ್ಲಿ ಅಧಿಕಾರದ ʼಸದ್ಬಳಕೆʼ ನಡೆದೇ ನಡೆಯುತ್ತದೆ. ಚುನಾವಣೆ ಆಯೋಗ ಸ್ವತಂತ್ರ ಎಂದರೂ, ಕೇಂದ್ರ ಸರಕಾರದ ಪ್ರಭಾವ ಇದ್ದೇ ಇರುತ್ತದೆ. ಸೇನಾಪಡೆ, ಅರೆ ಸೇನಾಪಡೆ ನಿಯೋಜಿಸುವ ವಿಷಯದಲ್ಲೂ ಅಷ್ಟೇ. ಇದು ಹೇಗೆಂದರೆ, ಆಸ್ಟ್ರೇಲಿಯಾ ಅಥವಾ ಸೌತ್‌ ಆಫ್ರಿಕಾ ಕ್ರಿಕೆಟ್‌ ತಂಡ ಭಾರತದಲ್ಲಿ ಆಡಲು ಬಂದಾಗ ಇಲ್ಲಿಯ ಸ್ಟೇಡಿಯಂಗಳಲ್ಲಿ ನಮ್ಮ ಟೀಮ್‌ಗೆ ಅನುಕೂಲವಾಗುವಂತೆ ಪಿಚ್‌ ನಿರ್ಮಿಸಿದಂತೆ!

ಮಮತಾ ಪಕ್ಷದ ಪರ ಚುನಾವಣಾ ಕಾರ್ಯತಂತ್ರ ರೂಪಿಸುತ್ತಿದ್ದ IPAC ಸಂಸ್ಥೆಯ ಮೇಲೆ, ಮತದಾನದ ಮೊದಲ ಹಂತಕ್ಕೆ ಕೆಲವೇ ದಿನಗಳಿರುವಾಗ ED ದಾಳಿ ನಡೆಸಿ ಅದರ ಪ್ರಮುಖರನ್ನು ಬಂಧಿಸಲಾಯಿತು. 483 ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಮೂಲಕ ಆಡಳಿತ ಜಾಲವನ್ನೇ ಚುನಾವಣೆ ಆಯೋಗ ಬುಡಮೇಲು ಮಾಡಿತು. ಲಕ್ಷಕ್ಕೂ ಹೆಚ್ಚು ಸೇನಾ ಸಿಬ್ಬಂದಿಯ ನಿಯೋಜನೆಯಿಂದಾಗಿ, ಬಿಜೆಪಿ ಪರ ಇರುವುವವರು ಟಿಎಂಸಿ ಬೆಂಬಲಿಗರ ಬೆದರಿಕೆಗೆ ಮಣಿಯದೆ ಹೆಚ್ಚಿನ ಸಂಖ್ಯೆಯಲ್ಲಿ ಮತ ಹಾಕುವಂತಾಯಿತು.

West Bengal Election (5)

ಈ ಕಾರಣಕ್ಕಾಗಿ ಈ ಗೆಲುವು ಭಿನ್ನ!

ಇಷ್ಟೆಲ್ಲದರ ಮಧ್ಯೆ ಒಂದು ವಿಶೇಷ ಏನೆಂದರೆ, ಬಂಗಾಳ ಚುನಾವಣೆಯನ್ನು ಬಿಜೆಪಿ ಯಾವ ಪಕ್ಷದ ನೆರವಿಲ್ಲದೆ ಸ್ವಂತ ಬಲದಿಂದ ಗೆದ್ದಿರುವುದು! ತೀರಾ ಹಿಂದಿನ ಗುಜರಾತ್‌, ರಾಜಸ್ಥಾನ, ಮಧ್ಯಪ್ರದೇಶ ಬಿಟ್ಟರೆ ಇತ್ತೀಚಿನ ವರ್ಷಗಳಲ್ಲಿ ಬಿಜೆಪಿ ಬಹುತೇಕ ರಾಜ್ಯಗಳಲ್ಲಿ ಗೆದ್ದಿರುವುದು ʼಜಿರಳೆ ಮೀಸೆ ತಂತ್ರಗಾರಿಕೆʼಯಿಂದ! ಅಂದರೆ ಒಂದು ರಾಜ್ಯದಲ್ಲಿ ಯಾವುದೋ ಒಂದು ಪಕ್ಷದ ಜತೆ ಮೈತ್ರಿ ಮಾಡಿಕೊಂಡು ಮೊದಲು ನುಸುಳುವುದು. ಆ ಬಳಿಕ ನಿಧಾನವಾಗಿ ಆವರಿಸಿಕೊಳ್ಳುವುದು. ಜಿರಳೆ ಮೊದಲು ಸಂದಿಗೊಂದಿಗಳಲ್ಲಿ ತನ್ನ ಮೀಸೆಯನ್ನಷ್ಟೇ ತೂರಿಸಿ ಸನ್ನಿವೇಶವನ್ನು ಸೂಕ್ಷ್ಮವಾಗಿ ಗ್ರಹಿಸುತ್ತದೆ. ಬಳಿಕ ನಿಧಾನವಾಗಿ ತನ್ನ ಇಡೀ ದೇಹವನ್ನು ತೂರಿಸಿ ಅಟಾಟೋಪ ಶುರು ಮಾಡುತ್ತದೆಯಲ್ಲ ಹಾಗೆ!

ಮಹಾರಾಷ್ಟ್ರದಲ್ಲಿ ಶಿವಸೇನೆ ಜತೆ ಮೈತ್ರಿ ಮಾಡಿಕೊಂಡು ನೀನೇ ಇಲ್ಲಿ ದೊಡ್ಡಣ್ಣ ಎಂದು ಪೂಸಿ ಹೊಡೆಯಿತು. ಕೊನೆಗೆ ಆ ಪಕ್ಷವನ್ನೇ ಒಡೆದು ಚೂರು ಮಾಡಿ ಅಧಿಕಾರ ಹಿಡಿಯಿತು. ಒರಿಸ್ಸಾದಲ್ಲಿ ದಶಕಗಳ ಕಾಲ ನವೀನ್‌ ಪಟ್ನಾಯಕ್‌ ಅವರ ಬಿಜೆಡಿ ಜತೆ ದೋಸ್ತಿ ಮಾಡಿಕೊಂಡಿತು. ಈಗ ಅದೇ ಪಕ್ಷವನ್ನು ಸೋಲಿಸಿ ಅಧಿಕಾರ ಚಲಾಯಿಸುತ್ತಿದೆ. ನಿತೀಶ್‌ಕುಮಾರ್‌ ಅವರ ಜೆಡಿಯು ಜತೆ ಅಧಿಕಾರ ಹಂಚಿಕೊಂಡು ಬಿಹಾರದಲ್ಲಿ ಬಾಲ ಬಿಚ್ಚಿತು. ಈಗ ನಿತೀಶ್‌ಕುಮಾರ್‌ ಅವರಿಗೇ ಮಕ್ಕರ್‌ ಮಾಡಿ ಸಿಎಂ ಹುದ್ದೆಯಿಂದ ಇಳಿಸಿ ತಾನು ಅಧಿಕಾರ ನಡೆಸುತ್ತಿದೆ. ಈಶಾನ್ಯ ರಾಜ್ಯಗಳಲ್ಲಂತೂ ಒಂದು ಚುನಾವಣೆಯಲ್ಲಿ ಚೋಟಾಮೋಟಾ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು, ಮುಂದಿನ ಚುನಾವಣೆ ಹೊತ್ತಿಗೆ ಪಾಪ ಆ ಪಕ್ಷಗಳನ್ನೆಲ್ಲ ನುರಿದು ನುಂಗಿ ಲೈಮ್‌ ಸೋಡಾ ಕುಡಿದಿದೆ. ಗೋವಾದಲ್ಲೂ ಹೀಗೇ ಮಾಡಿ ಕೇಕೆ ಹಾಕಿದೆ! ಕರ್ನಾಟಕದಲ್ಲೂ ಬಿಜೆಪಿ ಕಾಲಕಾಲಕ್ಕೆ ಜನತಾ ಪಕ್ಷ, ಕ್ರಾಂತಿರಂಗ, ಜೆಡಿಯು, ಜೆಡಿಎಸ್‌ ಜತೆ ಹೊಂದಾಣಿಕೆ ಮಾಡಿಕೊಳ್ಳುತ್ತ ಮುನ್ನಡೆದಿದೆ. ಆದರೆ ಬಂಗಾಳದಲ್ಲಿ ಮಾತ್ರ ಬಿಜೆಪಿ, ನಿರಂತರ 34 ವರ್ಷ ಅಧಿಕಾರದಲ್ಲಿದ್ದ ಕಮ್ಯುನಿಸ್ಟ್‌ ಪಕ್ಷ ಮತ್ತು ಅದಕ್ಕೂ ಮೊದಲು 30 ವರ್ಷ ಆಡಳಿತ ನಡೆಸಿದ್ದ ಕಾಂಗ್ರೆಸ್‌ ಪಕ್ಷಗಳನ್ನೂ ಬದಿಗೆ ಸರಿಸಿ ರನ್ನರ್‌ ಅಪ್‌ ಆಗಿದ್ದು, ಈಗ ಚಾಂಪಿಯನ್‌ ಆಗಿದ್ದು ಸ್ವಂತ ಬಲದಿಂದ.

ಪಶ್ಚಿಮ ಬಂಗಾಳ ಸಿಎಂ ಸುವೇಂದು ಅಧಿಕಾರಿ ಸಹಾಯಕನ ಕೊಲೆ ಪ್ರಕರಣ ಸಿಬಿಐಗೆ ಹಸ್ತಾಂತರ

42 ಲೋಕಸಭೆ ಕ್ಷೇತ್ರಗಳನ್ನು ಹೊಂದಿರುವ ಪಶ್ಚಿಮ ಬಂಗಾಳದ ವಿಜಯ 2029ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಬಹು ದೊಡ್ಡ ಕೊಡುಗೆ ನೀಡಲಿದೆ. ಇದಕ್ಕಿಂತ ಮೊದಲು ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ, ಗುಜರಾತ್‌, ಉತ್ತರಾಖಂಡ್, ಪಂಜಾಬ್, ಗೋವಾ, ಹಿಮಾಚಲ ಪ್ರದೇಶ ಮತ್ತು ಮಣಿಪುರ ವಿಧಾನಸಭೆ ಚುನಾವಣೆಗೂ ಶಕ್ತಿ ತುಂಬಲಿದೆ.