ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ ನಸೀರ್ ಅಹ್ಮದ್ ವಜಾ; ಡಿಸಿಎಂ ಡಿಕೆಶಿ ಹೇಳಿದ್ದೇನು?

DK Shivakumar: ಯಾವುದೇ ಪಕ್ಷವಾದರೂ ಶಿಸ್ತು ಬಹಳ ಮುಖ್ಯ. ಎಲ್ಲರನ್ನು ವಿಶ್ವಾಸಕ್ಕೆ ಪಡೆದುಕೊಂಡೇ ಅಭ್ಯರ್ಥಿ ಆಯ್ಕೆ ಮಾಡಿದ್ದೆವು. ನಂತರ ನಾವು ಎಲ್ಲಾ ನಾಯಕರೊಂದಿಗೆ ನಿತ್ಯ ಸಂಪರ್ಕದಲ್ಲಿದ್ದೆವು. ನಮ್ಮ ನಾಯಕರ ವರದಿಗಳ ಆಧಾರದ ಮೇಲೆ ಮುಖ್ಯಮಂತ್ರಿಗಳು ತೀರ್ಮಾನ ತೆಗೆದುಕೊಂಡಿದ್ದಾರೆ’ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಎಂಎಲ್‌ಸಿ ನಸೀರ್‌ ಅಹ್ಮದ್‌ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್

ಬೆಂಗಳೂರು, ಏ.14: ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ವಿಧಾನ ಪರಿಷತ್ ಸದಸ್ಯ ನಸೀ‌ರ್ ಅಹ್ಮದ್ (Naseer Ahmed) ಅವರನ್ನು ವಜಾ ಮಾಡಲಾಗಿದೆ. ತಕ್ಷಣದಿಂದ ಜಾರಿಗೆ ಬರುವಂತೆ ಅವರನ್ನು ಹುದ್ದೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಸಿಬ್ಬಂದಿ ಮತ್ತು ಆಡಳಿ ಸುಧಾರಣಾ ಇಲಾಖೆ ಅಧಿಸೂಚನೆ ಹೊರಡಿಸಿದೆ. ಈ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್‌ (DK Shivakumar) ಅವರು ಪ್ರತಿಕ್ರಿಯಿಸಿದ್ದು, ಮುಖ್ಯಮಂತ್ರಿಗಳು ತಮ್ಮದೇ ಆದ ವಿವಿಧ ಮೂಲಗಳಿಂದ ಮಾಹಿತಿ ಪಡೆದು, ಪಕ್ಷದ ಹಿತದೃಷ್ಟಿಯಿಂದ ನಸೀರ್ ಅಹ್ಮದ್ ವಿಚಾರದಲ್ಲಿ ತೀರ್ಮಾನ ತೆಗೆದುಕೊಂಡಿರುತ್ತಾರೆ ಎಂದು ತಿಳಿಸಿದ್ದಾರೆ.

ಸದಾಶಿವನಗರದ ತಮ್ಮ ನಿವಾಸ ಹಾಗೂ ಕೆಪಿಸಿಸಿ ಕಚೇರಿ ಆವರಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಡಿ.ಕೆ.ಶಿವಕುಮಾರ್ ಮಂಗಳವಾರ ಪ್ರತಿಕ್ರಿಯೆ ನೀಡಿದ್ದಾರೆ. ಸಿಎಂ ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ ನಸೀರ್ ಅಹ್ಮದ್ ಬಿಡುಗಡೆ ಮಾಡಿ ಮುಖ್ಯಮಂತ್ರಿಗಳು ಆದೇಶ ಹೊರಡಿಸಿರುವ ಬಗ್ಗೆ ಕೇಳಿದಾಗ, ‘ನಜೀರ್ ಅವರಿಗೆ ದಾವಣಗೆರೆ ದಕ್ಷಿಣ ವಿಧಾನಸಭೆ ಕ್ಷೇತ್ರಕ್ಕೆ ಹೋಗಿ ಬಂಡಾಯ ಅಭ್ಯರ್ಥಿ ಹಿಂದೆ ಸರಿಯುವಂತೆ ಮಾಡಲು ಪಕ್ಷ ಸೂಚಿಸಿತ್ತು. ಅವರು ಈ ಜವಾಬ್ದಾರಿ ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ. ಅಲ್ಲಿ ಏನಾಗಿದೆ ಎಂದು ನನಗೆ ಇನ್ನು ವರದಿ ಬರಬೇಕಿದೆ’ ಎಂದರು.

ಡಿ.ಕೆ.ಶಿವಕುಮಾರ್‌ ಪ್ರತಿಕ್ರಿಯೆಯ ವಿಡಿಯೊ ಇಲ್ಲಿದೆ



ಪಕ್ಷದಲ್ಲಿ ಶಿಸ್ತು ಮುಖ್ಯ

ಪಕ್ಷ ವಿರೋಧಿ ಚಟುವಟಿಕೆ ಮಾಡುವವರಿಗೆ ಇದು ಸಂದೇಶವೇ ಎಂದು ಕೇಳಿದಾಗ, ‘ಯಾವುದೇ ಪಕ್ಷವಾದರೂ ಶಿಸ್ತು ಬಹಳ ಮುಖ್ಯ. ಎಲ್ಲರನ್ನು ವಿಶ್ವಾಸಕ್ಕೆ ಪಡೆದುಕೊಂಡೇ ಅಭ್ಯರ್ಥಿ ಆಯ್ಕೆ ಮಾಡಿದ್ದೆವು. ನಂತರ ನಾವು ಎಲ್ಲಾ ನಾಯಕರೊಂದಿಗೆ ನಿತ್ಯ ಸಂಪರ್ಕದಲ್ಲಿದ್ದೆವು. ನಮ್ಮ ನಾಯಕರ ವರದಿಗಳ ಆಧಾರದ ಮೇಲೆ ಮುಖ್ಯಮಂತ್ರಿಗಳು ತೀರ್ಮಾನ ತೆಗೆದುಕೊಂಡಿದ್ದಾರೆ’ ಎಂದು ಹೇಳಿದರು.

ಜಮೀರ್ ಅವರ ವಿರುದ್ಧವೂ ಶಿಸ್ತು ಕ್ರಮ ಜರುಗಿಸಲಾಗುವುದೇ ಎಂದು ಕೇಳಿದಾಗ, ʼಇದರ ಬಗ್ಗೆ ನನಗೆ ಮಾಹಿತಿ ಇಲ್ಲʼ ಎಂದರು.

ಚೆನ್ನೈಗೆ ಮತ್ತೆ ಪ್ರಯಾಣ ಮಾಡುತ್ತೀರಾ ಎಂದು ಕೇಳಿದಾಗ, ʼಇಂದು ರಾತ್ರಿ ಚೆನ್ನೈಗೆ ಪ್ರಯಾಣ ಮಾಡುತ್ತಿದ್ದು, ಬುಧವಾರ ಚುನಾವಣಾ ಪ್ರಚಾರ ಕಾರ್ಯಕ್ರಮವಿದೆʼ ಎಂದು ಅವರು ತಿಳಿಸಿದರು.

ಪಾಲಿಕೆ ಹಾಗೂ ಸ್ಥಳೀಯ ಸಂಸ್ಥೆ ಚುನಾವಣೆ ಬಗ್ಗೆ ಶಾಸಕರೊಂದಿಗೆ ಚರ್ಚೆ

ನೀವು ಶಾಸಕರನ್ನು ಒಬ್ಬೊಬ್ಬರನ್ನೇ ಕರೆದು ಚರ್ಚೆ ಮಾಡುತ್ತಿದ್ದೀರಿ ಎಂಬ ಚರ್ಚೆ ಬಗ್ಗೆ ಕೇಳಿದಾಗ, ʼರಾಜಕಾರಣ ಮಾಡುವಾಗ ನಾವು ನಮ್ಮ ಶಾಸಕರ ಜತೆ ಚರ್ಚೆ ಮಾಡಿ ಭವಿಷ್ಯ ರೂಪಿಸುವ ಬಗ್ಗೆ ಚರ್ಚೆ ಮಾಡಬೇಕಲ್ಲವೇ. ಯಾರಿಗೆ ಏನು ಹೇಳಬೇಕು, ಯಾರಿಗೆ ಯಾವ ಮಾರ್ಗದರ್ಶನ ನೀಡಬೇಕು ಮಾಡುತ್ತೇವೆ. ಪಾಲಿಕೆ ಚುನಾವಣೆ, ಸ್ಥಳೀಯ ಸಂಸ್ಥೆಗಳ ಚುನಾವಣೆ ಬಗ್ಗೆ ಚರ್ಚೆ ಮಾಡುವುದು ಪಕ್ಷದ ಅಧ್ಯಕ್ಷನಾಗಿ ನನ್ನ ಕರ್ತವ್ಯ. ಈ ಕೆಲಸ ನಾನು ಮಾಡದೇ ಬೇರೆ ಯಾರು ಮಾಡುತ್ತಾರೆ? ಇನ್ನು ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಉಪಚುನಾವಣೆಯಲ್ಲಿ ಏನಾಗಿದೆ ಎಂದು ಶಾಸಕರು ವರದಿ ನೀಡುತ್ತಿದ್ದಾರೆʼ ಎಂದು ತಿಳಿಸಿದರು.

Nazeer Ahmed: ಹೈಕಮಾಂಡ್‌ ಕಠಿಣ ನಿಲುವು, ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಗೆ ನಜೀರ್ ಅಹ್ಮದ್ ರಾಜೀನಾಮೆ

ಎಚ್ಚರವಾಗಿರಲು ಶಾಸಕರಿಗೆ ಸಲಹೆ

ಶಾಸಕರಿಗೆ ನೇರವಾಗಿ ಎಚ್ಚರಿಕೆ ನೀಡಿರುವ ಬಗ್ಗೆ ಕೇಳಿದಾಗ, ʼಶಾಸಕರು ದೆಹಲಿಗೆ ಹೋಗಿರುವುದು, ಮಂತ್ರಿ ಸ್ಥಾನ ಕೇಳುವುದರಲ್ಲಿ ತಪ್ಪಿಲ್ಲ. ಅವರು ತಮ್ಮ ಬೇಡಿಕೆ ಕೇಳಲಿ. ಆದರೆ ಪಕ್ಷಕ್ಕೆ ಶಿಸ್ತಿನಿಂದ ಇರಬೇಕು ಅಷ್ಟೇ. ಅವರೆಲ್ಲರೂ ನಮ್ಮ ಸಹೋದ್ಯೋಗಿಗಳು. ಹೀಗಾಗಿ ಅವರಿಗೆ ಶಿಸ್ತು ಕಾಪಾಡುವಂತೆ ಮನವಿ ಮಾಡಿದ್ದೇನೆ. ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡುವಾಗ ಎಚ್ಚರಿಕೆಯಿಂದ ಇರಿ ಎಂದು ಸಲಹೆ ನೀಡಿದ್ದೇನೆʼ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಹೇಳಿದರು.

ನಸೀರ್‌ ಅಹ್ಮದ್‌ ರಾಜೀನಾಮೆ ಯಾಕೆ?

ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಗೆ ಎಂಎಲ್‌ಸಿ ನಜೀರ್ ಅಹ್ಮದ್ ಅವರು ಇಂದು ಅಧಿಕೃತವಾಗಿ ರಾಜೀನಾಮೆ ನೀಡಿದ್ದಾರೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ನೀಡಿದ್ದ ಕಟ್ಟುನಿಟ್ಟಿನ ಸೂಚನೆ ಹಾಗೂ ಗಡುವಿನ ಬೆನ್ನಲ್ಲೇ ನಜೀರ್ ಅಹ್ಮದ್ ಈ ನಿರ್ಧಾರ ಕೈಗೊಂಡಿದ್ದಾರೆ.

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ನೀಡಲಿಲ್ಲವೆಂಬ ಕಾರಣಕ್ಕೆ ಪಕ್ಷದ ಅಭ್ಯರ್ಥಿ ಸಮರ್ಥ್ ಪರ ಪ್ರಚಾರದಿಂದ ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾ‌ರ್ ಮತ್ತು ನಸೀರ್ ದೂರ ಉಳಿದಿದ್ದರು. ನಂತರದ ನಡೆದ ರಾಜಕೀಯ ಬೆಳವಣಿಗೆಗಳ ಕಾರಣ ಜಬ್ಬಾರ್ ಅವರು ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ನಸೀರ್ ಅವರೂ ರಾಜೀನಾಮೆ ನೀಡಬೇಕೆಂದು ಕಾಂಗ್ರೆಸ್ ಹೈಕಮಾಂಡ್ ತಾಕೀತು ಮಾಡಿತ್ತು.

ಈ ಬಗ್ಗೆ ಭಾನುವಾರ ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ನಜೀರ್ ಅವರೂ ರಾಜೀನಾಮೆ ನೀಡಬಹುದೆಂದು ಅಂದುಕೊಂಡಿದ್ದೇನೆ ಎಂದಿದ್ದರು. ಇದರ ಬೆನ್ನಲ್ಲೇ ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್‌ ಅಹ್ಮದ್‌ರನ್ನು ವಜಾ ಮಾಡಲಾಗಿದೆ.