ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಯತೀಂದ್ರ ಅವರ ಮಾತೇ ನಮಗೆ ವೇದವಾಕ್ಯ ಎಂದ ಡಿ.ಕೆ. ಸುರೇಶ್!

DK Suresh: ನಾಯಕತ್ವ ಬದಲಾವಣೆ ಚರ್ಚೆ ವೇಳೆ ಬಜೆಟ್‌ಗೂ ಮುನ್ನ ಕೆಲವು ಶಾಸಕರು ವಿದೇಶ ಪ್ರವಾಸಕ್ಕೆ ಮುಂದಾಗಿದ್ದಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್, ʼವಿದೇಶ ಪ್ರವಾಸಕ್ಕೆ ಹೋಗುತ್ತಿರುವವರು ಯಾರು? ಕರೆದುಕೊಂಡು ಹೋಗುವವರು ಯಾರು? ಯಾರೋ ಹೇಳಿದ್ದನ್ನು ಶಿವಕುಮಾರ್ ಅವರ ಮೇಲೆ ಯಾಕೆ ಹೇಳುತ್ತೀರಿ. ಡಿ.ಕೆ. ಶಿವಕುಮಾರ್ ಅವರಿಗೂ ಶಾಸಕರ ಪ್ರವಾಸಕ್ಕೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.

ಡಿ.ಕೆ. ಸುರೇಶ್‌ (ಸಂಗ್ರಹ ಚಿತ್ರ)

ಬೆಂಗಳೂರು, ಫೆ.11: ಕಾಂಗ್ರೆಸ್ ಪಕ್ಷವು (Congress Party)‌ ಸರ್ವ ಧರ್ಮ, ಸರ್ವ ಪಕ್ಷಗಳ ನಾಯಕರನ್ನು ಒಳಗೊಂಡಿದೆ. ಇಲ್ಲಿ ಬಿಜೆಪಿ, ಜನತಾ ದಳ, ಬಿಎಸ್‌ಪಿ ಸೇರಿದಂತೆ ಎಲ್ಲರೂ ಇದ್ದಾರೆ. ನಮ್ಮಲ್ಲಿ ಮೊದಲ ಆದ್ಯತೆ ಅವರಿಗೆ. ಹೊರಗಿನಿಂದ ಬಂದವರಿಗೆ ಮೊದಲ ಆದ್ಯತೆ, ಆಮೇಲೆ ಕಾಂಗ್ರೆಸ್ಸಿಗರಿಗೆ ಆದ್ಯತೆ. ಅತಿಥಿಗಳನ್ನು ಗೌರವಿಸುವುದೇ ಕಾಂಗ್ರೆಸ್ ಪಕ್ಷದ ಗುರಿ ಎಂದು ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ (DK Suresh) ತಿಳಿಸಿದರು. ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.

ರಾಜ್ಯ ಸರ್ಕಾರ ಬಿಜೆಪಿ ಮುಖಂಡನಿಗೆ ಸಚಿವ ಸ್ಥಾನಮಾನ ನೀಡಿದೆ ಎಂದು ಕೇಳಿದಾಗ, ʼಕಾಂಗ್ರೆಸ್ ಎಲ್ಲರನ್ನು ಗೌರವಿಸುತ್ತದೆ. ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗಬೇಕು ಎಂಬ ಭಾವನೆ ಮುಖ್ಯಮಂತ್ರಿಗಳಿಗೆ ಇರುವುದರಿಂದ ಮಾಡಿರಬಹುದು. ಇದರಲ್ಲಿ ತಪ್ಪೇನಿಲ್ಲʼ ಎಂದರು.

ದೆಹಲಿ ಪ್ರವಾಸ ಶಿವಕುಮಾರ್ ಅವರಿಗೆ ಹೊಸತಲ್ಲ

ನಿಮ್ಮ ಸಹೋದರ ಅವರು ದೆಹಲಿಯಲ್ಲಿದ್ದಾರೆ ಎಂದು ಕೇಳಿದಾಗ, ʼಅವರು ದೆಹಲಿ ಪ್ರವಾಸಕ್ಕೆ ಹೋಗುವಾಗ ಚುನಾವಣೆ ವಿಚಾರವಾಗಿ ಸಭೆ ಮಾಡಲು ಕರೆದಿದ್ದಾರೆ ಎಂದು ನಿಮಗೆ ಮಾಹಿತಿ ನೀಡಿದ್ದಾರೆ. ಡಿ.ಕೆ. ಶಿವಕುಮಾರ್ ಅವರು ಉಪಮುಖ್ಯಮಂತ್ರಿ ಆದಾಗ ಮಾತ್ರ ದೆಹಲಿಗೆ ಹೋಗುತ್ತಿಲ್ಲ. ಕಳೆದ 40 ವರ್ಷಗಳಿಂದ ನಿರಂತರವಾಗಿ ದೆಹಲಿಗೆ ಹೋಗುತ್ತಿದ್ದಾರೆ. ತಿಂಗಳಿಗೆ ಒಂದು ಅಥವಾ ಎರಡು ಬಾರಿ ಹೋಗುತ್ತಾರೆ. ಈಗ ಅವರು ಪಕ್ಷದ ಅಧ್ಯಕ್ಷರು ಹಾಗೂ ಉಪಮುಖ್ಯಮಂತ್ರಿಗಳು ಸರ್ಕಾರದ ಕೆಲಸಗಳು ಇರುತ್ತವೆ. ಇನ್ನು ದೆಹಲಿಗೆ ಹೋದಾಗ, ರಾಜಕೀಯವಾಗಿ ಅಲ್ಲದಿದ್ದರೂ ಕುಶಲೋಪರಿ ಚರ್ಚೆಗೆ ಭೇಟಿ ಮಾಡುತ್ತಾರೆ. ಸಂಸತ್ ಅಧಿವೇಶನ ನಡೆಯುತ್ತಿರುವಾಗ ಇಲಾಖೆಗಳಿಗೆ ಸಂಬಂಧಿಸಿದ ಚರ್ಚೆ ಮಾಡಲು ಮಂತ್ರಿಗಳನ್ನು ಭೇಟಿ ಮಾಡಲಾಗುವುದು. ಭದ್ರಾ ಮೇಲ್ದಂಡೆ ಯೋಜನೆ, ಬೆಂಗಳೂರಿನ ವಿಚಾರವಾಗಿ ಚರ್ಚೆ ಮಾಡುತ್ತಾರೆ. ಹೀಗಾಗಿ ದೆಹಲಿ ಪ್ರವಾಸ ಶಿವಕುಮಾರ್ ಅವರಿಗೆ ಹೊಸತಲ್ಲʼ ಎಂದು ತಿಳಿಸಿದರು.

ಕೇಂದ್ರ ಸರ್ಕಾರ ರಾಜ್ಯಕ್ಕೆ ಕೊಟ್ಟ ಖಾಲಿ ಟ್ರಂಕ್ ಹಿಡಿದಿರುವ ತೇಜಸ್ವಿ ಸೂರ್ಯ: ಡಿ.ಕೆ. ಸುರೇಶ್ ವ್ಯಂಗ್ಯ

ಯತೀಂದ್ರ ಅವರ ಮಾತೇ ನಮಗೆ ವೇದವಾಕ್ಯ

ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆ ಬಗ್ಗೆ ಕೇಳಿದಾಗ, ʼಈ ವಿಚಾರವಾಗಿ ಡಿಸಿಎಂ ಅವರು ಈಗಾಗಲೇ ಹೇಳಿದ್ದಾರೆ. ಅವರಷ್ಟು ತಿಳುವಳಿಕೆ ಇಲ್ಲ. ಅವರಷ್ಟು ದೊಡ್ಡವರು ನಾವಲ್ಲ. ಅವರು ಏನು ಹೇಳುತ್ತಾರೋ ಅದೇ ವೇದವಾಕ್ಯʼ ಎಂದರು.

ನಮಗೆ ಸಿಗುವ ನೋಟೀಸ್ ಯತೀಂದ್ರ ಅವರಿಗೆ ಏಕಿಲ್ಲ ಎಂಬ ಶಾಸಕ ಇಕ್ಬಾಲ್ ಹುಸೇನ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, ʼಅವರು ಹೇಳಿರುವುದರಲ್ಲಿ ತಪ್ಪೇನಿಲ್ಲ. ಎಲ್ಲರಿಗೂ ಒಂದೇ ನೀತಿ ಇರಬೇಕು. ಅವರೇ ಹೈಕಮಾಂಡ್ ಆಗಿರುವುದರಿಂದ ಏನೂ ಸಮಸ್ಯೆ ಇಲ್ಲʼ ಎಂದ ಹೇಳಿದರು.

ನಾನು ಕೆಎಂಎಫ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ

ಕೆಎಂಎಫ್ ಚುನಾವಣೆಯಲ್ಲಿ ನಿಮ್ಮ ಜತೆಗೆ ಇನ್ನಿಬ್ಬರು ಶಾಸಕರು ಸ್ಪರ್ಧಿಸಲು ಆಕಾಂಕ್ಷಿಗಳಿದ್ದಾರೆ ಎಂದು ಕೇಳಿದಾಗ, ʼನಾನು ಕೆಎಂಎಫ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಅಲ್ಲ. ಪಕ್ಷ ಹಾಗೂ ಸರ್ಕಾರದ ತೀರ್ಮಾನದಂತೆ ಆಗುತ್ತದೆ. ಇದರಲ್ಲಿ ಲಾಭಿ ಮಾಡಿ ಗಿಟ್ಟಿಸಿಕೊಳ್ಳುವಂತಹದ್ದು ಏನೂ ಇಲ್ಲ. ಇದು ರಾಜ್ಯದ ರೈತರ ಜವಾಬ್ದಾರಿಯುತ ಸಂಸ್ಥೆ. ರೈತರ ಹಿತ ಕಾಯುವುದು ಮುಖ್ಯ. ಅದನ್ನು ಗಮನದಲ್ಲಿಟ್ಟುಕೊಂಡು ಪಕ್ಷ ಹಾಗೂ ಸರ್ಕಾರ ಕೈಗೊಳ್ಳುವ ತೀರ್ಮಾನಕ್ಕೆ ಎಲ್ಲರೂ ಬದ್ಧ. ನಾನು ಯಾರಿಗೂ ಈ ಜವಾಬ್ದಾರಿ ಬೇಕು ಎಂದು ಕೇಳುವುದಿಲ್ಲ, ಅದರ ಅಗತ್ಯವಿಲ್ಲ. ಸಂಸದನಾಗಿ ನಾನು ಕೆಲಸ ಮಾಡಿದ್ದೇನೆ, ನನಗೆ ನನ್ನದೇ ಆದ ಜವಾಬ್ದಾರಿ ಇತಿ ಮಿತಿಗಳಿವೆ. ನಾನು ಯಾವುದನ್ನು ಆಸೆಪಟ್ಟು ಕೇಳುವುದಿಲ್ಲ, ಅದರ ಹಿಂದೆ ಹೋಗುವವನೂ ಅಲ್ಲʼ ಎಂದರು.

ನಿಮಗೆ ಜವಾಬ್ದಾರಿ ಕೊಟ್ಟರೆ ನಿಭಾಯಿಸುತ್ತೀರಾ, ಆಸೆ, ಆಕಾಂಕ್ಷೆ ಇದೆಯೇ ಎಂದು ಕೇಳಿದಾಗ, ʼನನಗೆ ಯಾವ ಆಸೆ, ಆಕಾಂಕ್ಷೆ ಇಲ್ಲ. ಇರುವ ಜವಾಬ್ದಾರಿ ನಿಭಾಯಿಸುವುದೇ ಕಷ್ಟ. ನನಗೆ ಈಗಾಗಲೇ ಅನೇಕ ಜವಾಬ್ದಾರಿಗಳಿವೆ. ನನಗೆ ವಿಶ್ರಾಂತಿ ಬೇಕು ಎಂದು ಕೇಳಿದವನು ನಾನು. ಜವಾಬ್ದಾರಿ ಬಂದಾಗ ಅದನ್ನು ನಿಭಾಯಿಸುವ ದೃಷ್ಟಿಕೋನ ಬಹಳ ಮುಖ್ಯ. ರೈತರ ಹಿತ, ನಂದಿನ ಬ್ರ್ಯಾಂಡ್ ರಾಷ್ಟ್ರ ಮಟ್ಟಕ್ಕೆ ಕೊಂಡೊಯ್ಯುವುದು ಬಹಳ ಮುಖ್ಯ. ಯಾವುದೋ ಖುಷಿಗಾಗಿ ಹೋಗಿ ಕೂರುವ ಸ್ಥಾನ ಅದಲ್ಲʼ ಎಂದು ತಿಳಿಸಿದರು.

ದೆಹಲಿ ಪ್ರಯಾಣದ ಬಗ್ಗೆ ಕೇಳಿದಾಗ, ʼದೆಹಲಿಯಲ್ಲಿ ಡೈರಿಗೆ ಸಂಬಂಧಿಸಿದಂತೆ ವಸ್ತುಪ್ರದರ್ಶನ ನಡೆಯುತ್ತಿದ್ದು, ಅಧಿಕಾರಿಗಳು, ಆಡಳಿತ ಮಂಡಳಿ ಸೇರಿ 20 ಜನರನ್ನು ಕರೆದುಕೊಂಡು ಹೋಗುತ್ತಿದ್ದೇನೆ. ರಾಜ್ಯದ ನಂದಿನಿಯನ್ನು ಭವಿಷ್ಯದಲ್ಲಿ ಪ್ರಗತಿಯ ಹಾದಿಯಲ್ಲಿ ಮುನ್ನಡೆಸಲು ಹೋಗುತ್ತಿದ್ದೇವೆʼ ಎಂದರು.

ಶಾಸಕರ ಪ್ರವಾಸಕ್ಕೂ ಶಿವಕುಮಾರ್ ಅವರಿಗೂ ಸಂಬಂಧವಿಲ್ಲ

ನಾಯಕತ್ವ ಬದಲಾವಣೆ ಚರ್ಚೆ ವೇಳೆ ಬಜೆಟ್‌ಗೂ ಮುನ್ನ ಕೆಲವು ಶಾಸಕರು ವಿದೇಶ ಪ್ರವಾಸಕ್ಕೆ ಮುಂದಾಗಿದ್ದಾರೆ ಎಂಬ ಪ್ರಶ್ನೆಗೆ, ʼವಿದೇಶ ಪ್ರವಾಸಕ್ಕೆ ಹೋಗುತ್ತಿರುವವರು ಯಾರು? ಕರೆದುಕೊಂಡು ಹೋಗುವವರು ಯಾರು? ಯಾರೋ ಹೇಳಿದ್ದನ್ನು ಶಿವಕುಮಾರ್ ಅವರ ಮೇಲೆ ಯಾಕೆ ಹೇಳುತ್ತೀರಿ. ಡಿ.ಕೆ. ಶಿವಕುಮಾರ್ ಅವರಿಗೂ ಶಾಸಕರ ಪ್ರವಾಸಕ್ಕೆ ಯಾವುದೇ ಸಂಬಂಧವಿಲ್ಲ. ಈ ವಿಚಾರವಾಗಿ ಬಹಳ ಸ್ಪಷ್ಟವಾಗಿ ಹೇಳುತ್ತೇನೆ. ಶಾಸಕರ ಪ್ರವಾಸ ವೈಯಕ್ತಿಕವಾಗಿಯೂ ಇರಬಹುದು, ಬೇರೆಯವರ ಪ್ರಯೋಜಕತ್ವವೂ ಇರಬಹುದು. ಕೆಪಿಸಿಸಿ ಅಧ್ಯಕ್ಷರು ಹಾಗೂ ಡಿಸಿಎಂಗೂ ಈ ಪ್ರವಾಸಕ್ಕೂ ಸಂಬಂಧವಿಲ್ಲ. ಈ ರೀತಿ ಏನಾದರೂ ಹುಟ್ಟಾಕುತ್ತಿದ್ದರೆ, ಅದು ರಾಜಕೀಯ ದುರುದ್ದೇಶದಿಂದ ಮಾತ್ರ. ಶಿವಕುಮಾರ್ ಅವರಿಗೆ ಕೆಟ್ಟ ಹೆಸರು ತರಲು ನಮ್ಮ ಪಕ್ಷದ ಕೆಲವರು ಮಾಡುತ್ತಿರಬಹುದು. ನಮ್ಮ ಪಕ್ಷದವರು ಮಾಡುತ್ತಿದ್ದಾರೋ, ವಿರೋಧ ಪಕ್ಷದವರು ಮಾಡುತ್ತಿದ್ದಾರೋ ಗೊತ್ತಿಲ್ಲ. ಆದರೆ ಇದರಲ್ಲಿ ಶಿವಕುಮಾರ್ ಅವರು ಪಾಲುದಾರರಲ್ಲʼ ಎಂದು ಸ್ಪಷ್ಟಪಡಿಸಿದರು.

ಎಲ್ಲದಕ್ಕೂ ಕಾಲವೇ ಉತ್ತರ ನೀಡಲಿದೆ

ನೀವು ಹಾಗೂ ಶಿವಕುಮಾರ್ ಅವರು ತಾಳ್ಮೆ ಬಗ್ಗೆ ಮಾತನಾಡುತ್ತಿದ್ದಿರಿ ಎಂದು ಕೇಳಿದಾಗ, ‘ಎಲ್ಲದಕ್ಕೂ ಕಾಲವೇ ಉತ್ತರ ನೀಡಲಿದೆ’ ಎಂದರು. ಆ ಕಾಲ ಹತ್ತಿರಕ್ಕೆ ಬರುತ್ತಿದೆಯೇ ಎಂದು ಕೇಳಿದಾಗ, ‘ನಾನು ಹಾಗೆ ಭಾವಿಸಿದ್ದು, ನೀವುಗಳೂ ಹಾಗೇ ಭಾವಿಸಿಕೊಳ್ಳಿ’ ಎಂದು ಹೇಳಿದರು.

ಸಿಎಂ ಕೊಟ್ಟ ಮಾತಿನಂತೆ ನಡೆಯುತ್ತಾರೆ ಎಂದು ನೀವು ಹೇಳಿದ್ದಿರಿ ಎಂದು ಕೇಳಿದಾಗ, ʼಸಿದ್ದರಾಮಯ್ಯ ಅವರು ಕೊಟ್ಟ ಮಾತಿನಂತೆ ನಡೆಯುತ್ತಾರೆ ಎಂದು ಇವತ್ತಿಗೂ ನನಗೆ ಭರವಸೆ ಇದೆʼ ಎಂದು ತಿಳಿಸಿದರು.

February 12 Bharat Bandh: ನಾಳೆ ದೇಶಾದ್ಯಂತ ಬಂದ್‌ಗೆ ಕರೆ; ಶಾಲಾ ಕಾಲೇಜು, ಸಾರಿಗೆ ಏನೆಲ್ಲ ಇರಲ್ಲ? ಇಲ್ಲಿದೆ ಮಾಹಿತಿ

ಹಾಗಿದ್ದರೆ ನೀವು ಹೈಕಮಾಂಡ್ ನಾಯಕರನ್ನು ಭೇಟಿ ಮಾಡುವ ಅಗತ್ಯ ಇಲ್ಲವೇ ಎಂದು ಕೇಳಿದಾಗ, ʼನಾವು ದೆಹಲಿಗೆ ಹೋದಾಗ ಹೈಕಮಾಂಡ್ ನಾಯಕರು ಸಿಕ್ಕಾಗೆಲ್ಲ ಭೇಟಿ ಮಾಡುತ್ತಲೇ ಇರುತ್ತೇವೆ. ಕೆಲವು ವಿಚಾರ ಚರ್ಚೆ ಮಾಡುತ್ತಲೇ ಇರುತ್ತೇವೆ. ಅದು ನಮ್ಮ ಹಾಗೂ ಅವರ ಬಾಂಧವ್ಯದ ವಿಚಾರ. ಪಕ್ಷ, ಕ್ಷೇತ್ರ ಹಾಗೂ ಇತರೆ ವಿಚಾರ ಚರ್ಚೆ ಮಾಡುತ್ತೇವೆ. ಕೆಲವರು ನಿರ್ದಿಷ್ಟ ಕೆಲಸಕ್ಕಾಗಿ ದೆಹಲಿಗೆ ಹೋಗುತ್ತಾರೆ. ಶಿವಕುಮಾರ್ ಅವರು ಆ ವರ್ಗಕ್ಕೆ ಸೇರುವುದಿಲ್ಲʼ ಎಂದು ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ತಿಳಿಸಿದರು.