ಗೋಕರ್ಣ, ಸೆ. 11: ಧರ್ಮಶಾಸ್ತ್ರದಲ್ಲಿ ನೀರಿನ ಶುದ್ಧತೆಗೆ ವಿಶೇಷ ಒತ್ತನ್ನು ನೀಡಲಾಗಿದ್ದು, ನೀರಿಗೆ ಉಗುಳಬಾರದು ಎಂದು ಶಾಸ್ತ್ರ ಸೂಚಿಸುತ್ತದೆ. ಗಂಗೆಯಲ್ಲಿ ಆಚಮನ ಮಾಡಬಾರದು ಎಂಬ ನಿಯಮವೂ ಇದೆ. ನೀರನ್ನು ಮಲಿನ ಮಾಡುವವರಿಗೆ ನರಕಗಳನ್ನು ಹೇಳಲಾಗಿದೆ. ಧರ್ಮಶಾಸ್ತ್ರದ ಪಾಲನೆಯನ್ನು ದೇಶವು ಬಿಟ್ಟಿರುವುದರಿಂದ ದೇಶದ ಹಾಗೂ ನೀರಿನ ಪರಿಸ್ಥಿತಿ ದುಃಸ್ಥಿತಿಯನ್ನು ತಲುಪಿದೆ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ (Sri Raghaveshwara Bharathi Swamiji) ಹೇಳಿದರು.
ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ 'ಅನ್ನಬ್ರಹ್ಮ ಚಾತುರ್ಮಾಸ್ಯ'ದ ಧರ್ಮಸಭೆಯಲ್ಲಿ ಶುಕ್ರವಾರ 'ಅನ್ನಂ ಬ್ರಹ್ಮ' ಮಾಲಿಕೆಯಲ್ಲಿ ನೀರಿನ ಕುರಿತಾಗಿ ಪ್ರವಚನ ಅನುಗ್ರಹಿಸಿದ ಶ್ರೀಗಳು, ಭರತನು 'ನಾನು ರಾಮನಿಗೆ ವಂಚನೆ ಮಾಡಿದ್ದರೆ ನೀರನ್ನು ಮಲಿನ ಮಾಡಿದರೆ ಸಿಗುವ ನರಕವು ಸಿಗಲಿ' ಎಂದು ರಾಮಾಯಣದಲ್ಲಿ ಶಪಥವನ್ನು ಮಾಡುತ್ತಾನೆ. ಇದು ಜಲ ಮೂಲಗಳ ಕುರಿತಾಗಿ ನಮ್ಮ ಪೂರ್ವಜರಿಗಿದ್ದ ಗೌರವವನ್ನು ಸೂಚಿಸುತ್ತದೆ ಎಂದು ಪ್ರಾಚೀನ ಭಾರತದಲ್ಲಿ ನೀರಿಗೆ ನೀಡಿದ್ದ ಮಹತ್ವವನ್ನು ವಿವರಿಸಿದರು.
ಆಯುರ್ವೇದದಲ್ಲಿ ಚಂದ್ರಕಾಂತ ಮಣಿಯ ನೀರು ಬಳಕೆಗೆ ಒಳ್ಳೆಯದು ಎನ್ನಲಾಗಿದೆ. ಆದರೆ ಇಂದು ಚಂದ್ರಕಾಂತ ಮಣಿಯ ಲಭ್ಯತೆಯೇ ಕಷ್ಟವಾಗಿದೆ. ನಮ್ಮ ಶಾಸ್ತ್ರಗಳಲ್ಲಿ ಸೂಚಿಸಿರುವ ಎಲ್ಲ ಸುವಸ್ತುಗಳು ಇಂದು ಕಣ್ಮರೆಯಾಗುತ್ತಿವೆ. ಸುವಸ್ತುಗಳನ್ನು ನಾವು ಬಳಸದೇ ಇದ್ದರೆ ಅವು ಕಣ್ಮರೆಯಾಗುತ್ತದೆ ಎಂದು ಪರಂಪರೆ ಹೇಳುತ್ತದೆ. ಹಾಗಾಗಿ ನಮ್ಮ ಪಾರಂಪರಿಕ ಗ್ರಂಥಗಳಲ್ಲಿ ಹೆಸರಿಸಿರುವ ಅನೇಕ ಸುವಸ್ತುಗಳು ಇಂದು ನಮಗೆ ಕಾಣಸಿಗುವುದಿಲ್ಲ. ಹಾಗೆಯೆ ಇನ್ನು ಕೆಲವನ್ನು ನಾವೇನಾವಾಗಿ ಅಭಿವೃದ್ಧಿಯ ಹೆಸರಿನಲ್ಲಿ ದುರಾಕ್ರಮಣಗಳ ಮೂಲಕ ಹಾಳು ಮಾಡುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
ಋತುಗಳಿಗೂ ನೀರಿಗೆ ಸಂಬಂಧವಿದ್ದು, ಹೇಮಂತ ಋತುವಿನ ನೀರು ಬಲವನ್ನು ಕೊಡುತ್ತದೆ. ಆದರೆ ಅದು ಜೀರ್ಣಕ್ಕೆ ಕಷ್ಟ. ಶಿಶಿರ ಕಾಲದ ನೀರು ಜೀರ್ಣಕ್ಕೆ ಸ್ವಲ್ಪ ಲಘು ಮತ್ತು ಕಫ ಹಾಗೂ ವಾತಗಳನ್ನು ಕಡಿಮೆ ಮಾಡುತ್ತದೆ. ವಸಂತ ಋತುವಿನ ನೀರು ಸ್ವಲ್ಪ ಸಿಹಿ ಸ್ವಲ್ಪ ಒಗರು ಹಾಗೂ ಗ್ರೀಷ್ಮ ಕಾಲದ ನೀರು ತುಂಬಾ ಒಳ್ಳೆಯದು ಎಂದು ಆಯುರ್ವೇದ ಸೂಚಿಸಿದೆ. ಹಾರೀತ ಸಂಹಿತೆಯು ನೀರನ್ನು ನಾಲ್ಕು ವಿಧವಾಗಿ ವಿಂಗಡಿಸಿದ್ದು, ಪಾಪೋದಕ, ರೋಗೋದಕ, ಅಂಶೋಧಕ ಹಾಗೂ ಆರೋಗ್ಯೋದಕ ಎಂಬುದಾಗಿ ಸೂಚಿಸಿದೆ. ಪಾತ್ರೆಯಲ್ಲಿ ಕಾಲು ಭಾಗಕ್ಕೆ ಆಗುವಷ್ಟು ಕುದಿಸಿದ ನೀರು ಆರೋಗ್ಯೋದಕವಾಗಿದ್ದು, ಇದು ವಾತ ದೋಷದ ನಿವಾರಣೆಯ ಜತೆಗೆ ಅನೇಕ ರೋಗಗಳನ್ನು ನಿವಾರಿಸುತ್ತದೆ ಹಾಗೂ ಜೀರ್ಣಾಗ್ನಿಯ ಜ್ವಲಕ್ಕೆ ಕಾರಣವಾಗುತ್ತದೆ ಎಂದು ನೀರಿನ ಅನೇಕ ವಿಭಾಗಗಳ ಕುರಿತಾಗಿ ವಿವರಿಸಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರಾದ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ದಂಪತಿ, ಉದ್ಯಮಿ ಆನಂದ್, ಹೈದರಾಬಾದಿನ ರಾಘವಲು, ಧಾರವಾಡದ ಸಿದ್ಧ ಸಮಾಧಿ ಯೋಗ ಸಮಾಜದ ಸದಸ್ಯರು ಶ್ರೀಗಳ ಆಶೀರ್ವಾದ ಪಡೆದರು. ಶೇಷಗಿರಿ ಹೆಬ್ಬಾರ್ ಕುಟುಂಬದವರು ಗುರುಭಿಕ್ಷಾ ಸೇವೆ ಸಮರ್ಪಿಸಿದರು. ದಿನಪ್ರಧಾನರಾಗಿ ಗುರುಪ್ರಕಾಶ ಹೆಗಡೆ ಕೂಜಳ್ಳಿ ದಂಪತಿಗಳು ಉಪಸ್ಥಿತರಿದ್ದರು.
ಹಣವಂತರಿಗಿಂತ ಶುದ್ಧ ನೀರು ಕುಡಿಯುವವನೇ ನಿಜವಾದ ಯೋಗವಂತ: ರಾಘವೇಶ್ವರ ಭಾರತೀ ಶ್ರೀ
ಸಿದ್ಧಿ ಸಮಾಜದಿಂದ ಸ್ವರ್ಣಪಾದುಕಾ ಪೂಜೆ
ಶ್ರೀರಾಮಚಂದ್ರಾಪುರ ಮಠಕ್ಕೆ ಪಾರಂಪರಿಕವಾಗಿ ನಡೆದುಕೊಳ್ಳುವ ಸಿದ್ದಿ ಸಮಾಜದಿಂದ ಸ್ವರ್ಣಪಾದುಕಾ ಪೂಜೆ ನಡೆಸಿದರು. ಪಾದುಕಾ ಪೂಜೆಯನ್ನು ಸ್ವೀಕರಿಸಿ ಮಾತನಾಡಿದ ಶ್ರೀಗಳು, ಸಿದ್ದಿ ಸಮಾಜದ ಜತೆಗೆ ಶ್ರೀಮಠ ಇರಲಿದ್ದು, ಗುರು ಪರಂಪರೆಯ ಅನುಗ್ರಹದಿಂದ ಸಮಾಜದ ಕಷ್ಟಗಳು ಕರಗಲಿ ಎಂದು ಆಶೀರ್ವದಿಸಿದರು. ಶಿವಾನಂದ ಸಿದ್ದಿ, ನರಸಿಂಹ ಸಿದ್ದಿ, ಕೃಷ್ಣ ಸಿದ್ದಿ, ನಾರಾಯಣ ಸಿದ್ದಿ ಮತ್ತಿತರರು ಉಪಸ್ಥಿತರಿದ್ದರು.
![]()
ಜೀವನದಲ್ಲಿ ನಾವು ಸುಲುಭದ ದಾರಿ ಹುಡುಕಬಾರದು. ಸರಿಯಾದ ದಾರಿಯನ್ನೇ ಆರಿಸಿಕೊಳ್ಳಬೇಕು. ಶಾಸ್ತ್ರಗಳು ಬೋಧಿಸಿರುವುದನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಬೇಕು. ಪ್ರಯತ್ನಪೂರ್ವಕವಾಗಿ ನಾವು ಜೀವನ ಪದ್ಧತಿಗಳನ್ನು ಸರಿಪಡಿಸಿಕೊಳ್ಳಬೇಕು.
- ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ.