ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಬೆಂಗಳೂರಿನಲ್ಲಿ ಅ.11ರಿಂದ 21ವರೆಗೆ ರಾಘವೇಶ್ವರ ಶ್ರೀಗಳ ನೇತೃತ್ವದಲ್ಲಿ 'ನವರಾತ್ರ ನಮಸ್ಯಾ' ಮಹೋತ್ಸವ

ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ನವರಾತ್ರಿ ವ್ರತವು 'ನವರಾತ್ರ ನಮಸ್ಯಾ' ಎಂಬ ಹೆಸರಿನೊಂದಿಗೆ ಅಕ್ಟೋಬರ್ 11 ರಿಂದ 21ವರೆಗೆ ಬೆಂಗಳೂರಿನ ಗಿರಿನಗರದಲ್ಲಿರುವ ಶ್ರೀಮಠದ ಶಾಖೆಯಲ್ಲಿ ನಡೆಯಲಿದೆ. ಈ ಕುರಿತ ವಿವರ ಇಲ್ಲಿದೆ.

ಬೆಂಗಳೂರು, ಅ.06: ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ (Sri Raghaveshwara Bharathi Mahaswamiji) ನವರಾತ್ರಿ ವ್ರತವು 'ನವರಾತ್ರ ನಮಸ್ಯಾ' ಎಂಬ ಹೆಸರಿನೊಂದಿಗೆ ಅಕ್ಟೋಬರ್ 11 ರಿಂದ 21ವರೆಗೆ ಬೆಂಗಳೂರಿನ ಗಿರಿನಗರದಲ್ಲಿರುವ ಶ್ರೀಮಠದ ಶಾಖೆಯಲ್ಲಿ ನಡೆಯಲಿದ್ದು, ವ್ರತ - ಜಪ - ಪಾರಾಯಣ - ಯಜ್ಞ - ದಾನ - ಹಾಗೂ ಜ್ಞಾನ ಪ್ರಸಾರದ ಮೂಲಕ ಜಗನ್ಮಾತೆಯ ಆರಾಧನೆ ವೈಭವದಿಂದ ಸಂಪನ್ನವಾಗಲಿದೆ.

'ಮಹಾನಗರದಲ್ಲಿ ಮಹಾದೇವಿಯ ಮಹಾರಾಧನೆ' ಎಂಬ ಶೀರ್ಷಿಕೆಯೊಂದಿಗೆ ವೈವಿಧ್ಯಮಯ ಕಾರ್ಯಕ್ರಮಗಳ ಜತೆಗೆ ರಾಜರಾಜೇಶ್ವರಿಯ ಉಪಾಸನೆ ನಡೆಯಲಿದ್ದು, ಒಂಬತ್ತು ದಿನಗಳ ಕಾಲ ಉಪವಾಸ ವ್ರತದೊಂದಿಗೆ ಶ್ರೀಗಳವರು ರಾಜರಾಜೇಶ್ವರಿಗೆ ವಿಶೇಷ ಪೂಜೆಯನ್ನು ಸಮರ್ಪಿಸಲಿದ್ದು, ಶ್ರೀಗಳಿಂದ ಪ್ರತಿದಿನ ವಿಶಿಷ್ಟವಾದ ಲಲಿತೋಪಾಖ್ಯಾನ ಪ್ರವಚನ ನಡೆಯಲಿದೆ. ವಿಶೇಷವಾಗಿ ಶ್ರೀದುರ್ಗಾ ಮಂಟಪದಲ್ಲಿ ಮೃಣ್ಮಯ ಶ್ರೀರಾಜರಾಜೇಶ್ವರಿಯ ಮಹಾಪೂಜೆ ನಡೆಯಲಿದ್ದು, ವಿಶೇಷ ಉಪಾಸನೆಯಾಗಿ ಪ್ರತಿದಿನ ನೂರರಂತೆ 1000 ಸಪ್ತಶತೀ ಪಾರಾಯಣ ನಡೆಯಲಿದೆ.

Navratri Vrata

ಒಂಬತ್ತು ದಿನ ಒಂಭತ್ತು ವಿಶೇಷ ಹವನಗಳು ನಡೆಯಲಿದ್ದು, ವಿಜಯದಶಮಿಯ ದಿನ ಶತಚಂಡಿಕಾ ಮಹಾಯಾಗ ಸಂಪನ್ನವಾಗಲಿದೆ. ಪ್ರತಿದಿನ ಅನ್ನಪೂರ್ಣೇಶ್ವರೀ ದೇವಿಗೆ ವಿಶೇಷ ಪೂಜೆ ನಡೆಯಲಿದ್ದು, ಪ್ರತಿದಿನ ಸಂಜೆ ದುರ್ಗಾದೀಪ ನಮಸ್ಕಾರ, ಮಾತೆಯರಿಂದ ಕುಂಕುಮಾರ್ಚನೆ, ಉಡಿಸೇವೆ ನಡೆಯಲಿದೆ. ಭಜನಾ ತಂಡಗಳಿಂದ ಭಜನೆಗಳು ನಡೆಯಲಿದ್ದು, ಕಲೋಪಾಸನೆಯ ಮೂಲಕ ದೇವಿಯ ಆರಾಧನೆ ಇರಲಿದೆ.

ಶ್ರೀಗಳವರು ಚಾತುರ್ಮಾಸ್ಯದ 'ಅನ್ನಂ ಬ್ರಹ್ಮ' ಪ್ರವಚನದಲ್ಲಿ ಸೂಚಿಸಿದಂತೆ ಭೋಜನವು ಭಗವಂತನ ಪೂಜೆಯಾಗಿದ್ದು, ಭೋಜನ ಕಾಲದಲ್ಲಿ ಭಗವಂತನ ಸ್ಮರಣೆಗೆ ಅನುಕೂಲವಾಗುವಂತೆ ‘ಅನ್ನಬ್ರಹ್ಮ ಸಂಕೀರ್ತನಮ್ʼ ಎಂಬ ವಿಭಿನ್ನ ಕಾರ್ಯಕ್ರಮ ಇರಲಿದ್ದು, ಭೋಜನದ ಜತೆಗೆ ಭಕ್ತಿ ರಸದ ಸಿಹಿಯೂ ಜತೆಯಾಗಲಿದೆ.

ಅಕ್ಟೋಬರ್ 21ರಂದು ಬುಧವಾರ ವಿದ್ಯಾದಶಮಿಯಂದು 'ನವರಾತ್ರ ನಮಸ್ಯಾ' ದ ಮಹಾಸಮಾರೋಪ ನಡೆಯಲಿದ್ದು, ಶ್ರೀಗಳವರಿಂದ ಆಶೀರ್ವಚನ, ಸಾರ್ವಜನಿಕ ಮಂತ್ರಾಕ್ಷತೆ ಇರಲಿದೆ. ನವರಾತ್ರಿಯ ಪರ್ವಕಾಲದಲ್ಲಿ ವಿವಿಧ ಆಯಾಮಗಳಲ್ಲಿ ರಾಜರಾಜೇಶ್ವರಿಯ ಉಪಾಸನೆ ನಡೆಯಲಿದ್ದು, ಆಸ್ತಿಕ ಬಂಧುಗಳು ಕಾರ್ಯಕ್ರಮದಲ್ಲಿ ಭಾಗಿಗಳಾಗಿ ದೇವಿಯ ಕೃಪೆಗೆ ಭಾಜನರಾಗುವಂತೆ ನವರಾತ್ರ ನಮಸ್ಯಾ ಸಮಿತಿಯು ಕರೆ ನೀಡಿದೆ.

ನವರಾತ್ರ ನಮಸ್ಯಾ ಕಾರ್ಯಾಲಯ ಉದ್ಘಾಟನೆ

ಕಾರ್ಯಕ್ರಮದ ಕಾರ್ಯಾಲಯವನ್ನು ಬಸವನಗುಡಿಯ ಶಾಸಕ ಎಲ್.ಎ. ರವಿ ಸುಬ್ರಹ್ಮಣ್ಯ ಉದ್ಘಾಟಿಸಿ, ನವರಾತ್ರ ಪರ್ವದ ದೇವಿಯ ಆರಾಧನೆಯು ಈ ಬಾರಿ ಬೆಂಗಳೂರಿನಲ್ಲಿ ನಡೆಯುತ್ತಿರುವುದು ವಿಶೇಷವಾಗಿದ್ದು, ಕಾರ್ಯಕ್ರಮಕ್ಕೆ ತಮ್ಮ ಸಂಪೂರ್ಣ ಸಹಕಾರವಿದ್ದು, ಬೆಂಗಳೂರಿನ ಮಹಾಜನತೆ ಈ ಅಪೂರ್ವ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕರೆ ನೀಡಿದರು.