ಪ್ರಯಾಗರಾಜ (ಉತ್ತರಪ್ರದೇಶ): ಉತ್ತರ ಪ್ರದೇಶದ ಪ್ರಯಾಗರಾಜ ತ್ರಿವೇಣಿಸಂಗಮ ಕ್ಷೇತ್ರದ ಗಂಗಾ ನದಿಯ ದಡದಲ್ಲಿ ಕಾಶಿ ಜ್ಞಾನ ಪೀಠದ ಶ್ರೀ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರ ಮಂಗಲ ಸಾನ್ನಿಧ್ಯದಲ್ಲಿ ಮೊದಲ ಬಾರಿಗೆ ಜರುಗಿದ ‘ಶ್ರೀಸಿದ್ಧಾಂತ ಶಿಖಾಮಣಿ’ (Sri Siddhanta Shikhamani) ಧರ್ಮಗ್ರಂಥದ ಪಾರಾಯಣದಲ್ಲಿ ಬೆಂಗಳೂರು, ಮೈಸೂರು, ತುಮಕೂರು ಜತೆಗೆ ಮಹಾರಾಷ್ಟ್ರದ ಪುಣೆ ಮತ್ತು ಬಾರಾಮತಿ ನಗರಗಳ ನೂರಾರು ಜನ ತಾಯಂದಿರು ಪಾಲ್ಗೊಂಡಿದ್ದರು.
ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾದ ಕಾಶಿ ಜ್ಞಾನ ಪೀಠದ ಶ್ರೀ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರ ಮಂಗಲ ಸಾನ್ನಿಧ್ಯದಲ್ಲಿ ಬೆಂಗಳೂರು, ಮೈಸೂರು, ತುಮಕೂರು ಜತೆಗೆ ಮಹಾರಾಷ್ಟ್ರದ ಪುಣೆ ಮತ್ತು ಬಾರಾಮತಿ ನಗರಗಳ ನೂರಾರು ಜನ ತಾಯಂದಿರು ಇದೇ ಮೊದಲ ಬಾರಿಗೆ ಉತ್ತರಪ್ರದೇಶದ ಪ್ರಯಾಗರಾಜ ಪವಿತ್ರ ತ್ರಿವೇಣಿಸಂಗಮ ಕ್ಷೇತ್ರದ ಗಂಗಾ ನದಿಯ ದಡದಲ್ಲಿ ‘ಶ್ರೀಸಿದ್ಧಾಂತ ಶಿಖಾಮಣಿʼ ಧರ್ಮಗ್ರಂಥದ ಪಾರಾಯಣ ಮಾಡುವ ಮೂಲಕ ಹೊಸ ದಾಖಲೆಗೆ ಪ್ರಯಾಗರಾಜ ಕ್ಷೇತ್ರ ಸಾಕ್ಷಿಯಾಯಿತು.
ಕಾಶಿ ಪೀಠದ ಹಿರಿಯ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಚಾಲನೆ ನೀಡಿ ಮಾತನಾಡಿ, ಬೆಂಗಳೂರಿನ ಸದ್ಭಕ್ತರಾದ ಟಿ.ಎಸ್. ಇಂದುಕಲಾ ಅವರು ಕಳೆದ ಅನೇಕ ವರ್ಷಗಳಿಂದ ‘ಶ್ರೀಸಿದ್ಧಾಂತ ಶಿಖಾಮಣಿʼಯ ಪಾರಾಯಣವನ್ನು ಆನ್‌ಲೈನ್ ಮೂಲಕ ಎಲ್ಲ ಪ್ರದೇಶಗಳ ಸಹಸ್ರ ಸಹಸ್ರ ಸಹೋದರಿಯರಿಗೆ ನಿಖರವಾಗಿ ಬೋಧಿಸಿ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಒಂದು ವಾರಕಾಲ ಪಾರಾಯಣ ಮಾಡಿ ಮುಗಿಸುವ ಈ ಗ್ರಂಥವನ್ನೀಗ ಒಂದೇ ದಿನದಲ್ಲಿ ಐದು ಬಾರಿ ಪಾರಾಯಣ ಮಾಡುವ ಅಭ್ಯಾಸ ಮಾಡಿಕೊಂಡಿದ್ದು, ಇದು ಸನಾತನ ವೀರಶೈವ ಧರ್ಮದ ಮಹಿಳೆಯರ ಹೊಸ ದಾಖಲೆಯಾಗಿದೆ. ಜತೆಗೆ ಪ್ರಯಾಗರಾಜ ಧರ್ಮಕ್ಷೇತ್ರದ ತ್ರಿವೇಣಿ ಸಂಗಮದ ಗಂಗಾ ನದಿಯ ದಡದಲ್ಲಿ ಶ್ರೀಸಿದ್ಧಾಂತ ಶಿಖಾಮಣಿಯ ಪಾರಾಯಣ ಮಾಡಿರುವುದೂ ಸಹ ಹೊಸ ದಾಖಲೆಯಾಗಿ ಎಲ್ಲರ ನೆನಪಿನಾಳದಲ್ಲಿ ಸದಾ ಹಸಿರಾಗಿ ಉಳಿಯುತ್ತದೆ ಎಂದು ತಿಳಿಸಿದರು.
ಈ ಸುದ್ದಿಯನ್ನೂ ಓದಿ | IPPB Recruitment 2025: ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್‌ನಲ್ಲಿದೆ 348 ಹುದ್ದೆ; ಹೀಗೆ ಅಪ್ಲೈ ಮಾಡಿ
ಪ್ರಮಾಣಪತ್ರ ಪ್ರದಾನ
ಪಾರಾಯಣ ತಂಡಕ್ಕೆ ತರಬೇತಿ ನೀಡಿದ ಬೆಂಗಳೂರಿನ ಟಿ.ಎಸ್. ಇಂದುಕಲಾ ಅವರಿಗೆ ಗುರುರಕ್ಷೆಯ ಗೌರವ ನೀಡಿದ ಕಾಶಿ ಪೀಠದ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಪಾಲ್ಗೊಂಡ ಎಲ್ಲ ಮಾತೆಯರಿಗೆ ಪ್ರಮಾಣಪತ್ರ ಪ್ರದಾನ ಮಾಡಿ ಆಶೀರ್ವದಿಸಿದರು. ಶ್ರೀಜಗದ್ಗುರು ವಿಶ್ವರಾಧ್ಯ ಗುರುಕುಲದ ವಿದ್ಯಾರ್ಥಿ ತುಮಕೂರಿನ ಅಖಿಲೇಶ್ ದೇವರು ಇದ್ದರು. ಅಭೂತಪೂರ್ವವಾಗಿ ನಡೆದ ‘ಶ್ರೀಸಿದ್ಧಾಂತ ಶಿಖಾಮಣಿʼಯ ಪಾರಾಯಣವನ್ನು ವೀಕ್ಷಿಸಿದ ಪ್ರಯಾಗರಾಜ ದಾರಾಗಂಜ ಪರಿಸರದ ಅನೇಕ ತಾಯಂದಿರು ‘ಶ್ರೀಸಿದ್ಧಾಂತ ಶಿಖಾಮಣಿ ಪಾರಾಯಣ’ ಕಲಿಕೆಗೆ ಹೆಸರು ನೋಂದಾಯಿಸಿಕೊಂಡರು.