ತನ್ನ ವಿರುದ್ಧ ಕೈಗೊಂಡ ಕುಕೃತ್ಯಗಳ ಕುರಿತು ಭಾರತ ಹೇಳಿಕೆ ನೀಡಿದಾಗ ‘ನಾನವನಲ್ಲ, ನಾನವ ನಲ್ಲ’ ಎನ್ನುವುದು ಮತ್ತು ಅಂಥ ವಿಧ್ವಂಸಕ ಕೃತ್ಯಗಳಿಗೆ ಸಂಬಂಧಿಸಿದ ಸಾಕ್ಷ್ಯ-ಪುರಾವೆಗಳನ್ನು ಬಿಡುಗಡೆ ಮಾಡಿದಾಗ ವಿಧಿಯಿಲ್ಲದೆ ಒಪ್ಪಿಕೊಳ್ಳುವುದು ಇವು ಪಾಕಿಸ್ತಾನದ ಆಳುಗರ, ಸೇನಾ ನಾಯಕರ ಮತ್ತು ಪಾಕ್-ಪ್ರಚೋದಿತ ಉಗ್ರರ ಚಾಳಿಯೇ ಆಗಿಬಿಟ್ಟಿದೆ. ಇದಕ್ಕೆ ಇತ್ತೀಚಿನ ಸೇರ್ಪಡೆ ತಹಾವುರ್ ಹುಸೇನ್ ರಾಣಾ.
ತಾನು ಪಾಕ್ ಸೇನೆಯ ನಂಬಿಕಸ್ಥ ಏಜೆಂಟ್ ಆಗಿದ್ದುದನ್ನು, 2008ರಲ್ಲಿ ಮುಂಬೈನ ವಿವಿಧೆಡೆಗಳಲ್ಲಿ ಪಾಕ್-ಪ್ರೇರಿತ ಉಗ್ರರು ದಾಳಿ ನಡೆಸಿ ಹಲವು ಸಾವು-ನೋವುಗಳಿಗೆ, ಸ್ವತ್ತು ನಷ್ಟಗಳಿಗೆ ಕಾರಣ ರಾದಾಗ ತಾನು ಮುಂಬೈ ನಗರದಲ್ಲೇ ಇದ್ದುದನ್ನು ಮುಂಬೈ ದಾಳಿಯ ಈ ಸಂಚುಕೋರ ಹಾಗೂ ಪಾಕ್ ಮೂಲದ ಭಯೋತ್ಪಾದಕ ಒಪ್ಪಿಕೊಂಡಿರುವ ಸುದ್ದಿಯನ್ನು ನೀವು ಈಗಾಗಲೇ ಓದಿದ್ದೀರಿ.
ಇದನ್ನೂ ಓದಿ: Vishwavani Editorial: ಮತ್ತೆ ಕೈಕುಲುಕಿದ ಕುಡಿಗಳು
ಪಾಕಿಸ್ತಾನದ ಆಳುಗರು, ಸೇನಾನಾಯಕರು ಈಗ ಈ ಮಾತಿಗೆ ಏನೆನ್ನುತ್ತಾರೆ ಎಂಬುದನ್ನು ಕೇಳಿಸಿ ಕೊಳ್ಳಲು ಭಾರತ ತವಕಿಸುತ್ತಿದೆ. ಏಕೆಂದರೆ, ಪೊಲೀಸರ ವಿಚಾರಣೆಯ ವೇಳೆ ರಾಣಾ ಹೊರ ಹಾಕಿರುವ ಸೋಟಕ ಮಾಹಿತಿಗಳನ್ನು ಅವಲೋಕಿಸಿದರೆ 2008ರ ಮುಂಬೈ ದಾಳಿಗೆ ಪಾಕಿಸ್ತಾನದ ಚಿತಾವಣೆ ಇದ್ದುದು ಸ್ಪಷ್ಟವಾಗಿ ಎದ್ದು ಕಾಣುತ್ತದೆ. ಆದರೆ, ತನ್ನ ತಪ್ಪುಗಳನ್ನು ಒಪ್ಪಿಕೊಳ್ಳುವ ಜಾಯಮಾನ ಪಾಕಿಸ್ತಾನದ್ದಲ್ಲ ಎಂಬುದು ಭಾರತಕ್ಕೂ ಗೊತ್ತಿದೆ.
ಏಕೆಂದರೆ, ಪಹಲ್ಗಾಮ್‌ನಲ್ಲಿ ಉಗ್ರರು ನಡೆಸಿದ ಮಾರಣಹೋಮಕ್ಕೆ ಪಾಕಿಸ್ತಾನದ ಕುಮ್ಮಕ್ಕು ಇದ್ದುದು ಈಗಾಗಲೇ ಜಗಜ್ಜಾಹೀರಾಗಿದ್ದರೂ, ಅಲ್ಲಿನ ‘ಸೇನಾ ದುರಂಧರ’ರೊಬ್ಬರು, ‘ಪಹಲ್ಗಾಮ್ ನಲ್ಲಿ ನಡೆದಿದ್ದು ಕಾಶ್ಮೀರ ಪರ ಹೋರಾಟ’ ಎಂದು ಇತ್ತೀಚೆಗೆ ತಿಪ್ಪೆ ಸಾರಿಸಿದರು. ಈ ಗೋಸುಂಬೆ ಬುದ್ಧಿಗೆ ಏನನ್ನುವುದು? ಒಂದಂತೂ ನಿಜ. ಮೂಗನ್ನು ಭದ್ರವಾಗಿ ಹಿಡಿದಾಗ ಮಾತ್ರವೇ ‘ಕದನ ವಿರಾಮ’ಕ್ಕೆ ಮೊರೆಯಿಡುವ, ಶರಣಾಗತಿಯ ಚಿಹ್ನೆ ತೋರುವ ಪಾಕಿಸ್ತಾನ, ಆ ಇಕ್ಕಳದಿಂದ ಬಿಡಿಸಿ ಕೊಂಡ ತರುವಾಯದಲ್ಲೇ ತನ್ನ ನರಿಬುದ್ಧಿಯನ್ನು ತೋರಿಸುತ್ತದೆ ಎಂಬುದಕ್ಕೆ ಇತಿಹಾಸವೇ ಸಾಕ್ಷಿ.
ಭಾರತ ಮಾತ್ರವಲ್ಲದೆ ಜಗತ್ತಿನ ಮಿಕ್ಕ ರಾಷ್ಟ್ರಗಳೂ ಪಾಕಿಸ್ತಾನದ ವಿಷಯದಲ್ಲಿ ಹುಷಾರಾಗಿರಬೇಕು ಎಂಬುದನ್ನು ಇದು ಒತ್ತಿ ಹೇಳುತ್ತದೆ.