Vishwavani Editorial: ಮೆಟ್ರೋ; ಗಾಯದ ಮೇಲೆ ಬರೆ
ಬಸ್ ಪ್ರಯಾಣ ದರ ಹೆಚ್ಚಳಕ್ಕೆ ಪೆಟ್ರೋಲ್-ಡಿಸೇಲ್ ಬೆಲೆ ಏರಿಕೆ, ಸಾರಿಗೆ ಸಿಬ್ಬಂದಿಯ ವೇತನ, ಮಹಿಳೆಯರ ಉಚಿತ ಪ್ರಯಾಣ ಸೇರಿ ಮತ್ತಿತರ ಕಾರಣಗಳನ್ನು ಸಾರಿಗೆ ಇಲಾಖೆ ನೀಡಿತ್ತು. ಆದರೆ ನಮ್ಮ ಮೆಟ್ರೋಗೆ ಇಂತಹ ಯಾವುದೇ ವೆಚ್ಚದಾಯಕ ತಾಪತ್ರಯಗಳಿಲ್ಲದಿದ್ದರೂ ಪ್ರಯಾಣ ದರ ಏರಿಸಿದೆ
Source : Vishwavani Daily News Paper
ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ಸಾರಿಗೆ ನಿಗಮಗಳ ಬಸ್ ಪ್ರಯಾಣ ದರ ವನ್ನು ಸರಕಾರ ಹೆಚ್ಚಿಸಿದ ಬೆನ್ನಲ್ಲೆ ಶೇ.45ರಷ್ಟು ಮೆಟ್ರೋ ದರವನ್ನು ಹೆಚ್ಚಳ ಮಾಡಿದೆ. ಆ ಮೂಲಕ ಮಧ್ಯಮ ವರ್ಗದ ಜನರಿಗೆ ಗಾಯದ ಮೇಲೆ ಬರೆ ಎಳೆದಿದೆ.
ಬಸ್ ಪ್ರಯಾಣ ದರ ಹೆಚ್ಚಳಕ್ಕೆ ಪೆಟ್ರೋಲ್-ಡಿಸೇಲ್ ಬೆಲೆ ಏರಿಕೆ, ಸಾರಿಗೆ ಸಿಬ್ಬಂದಿಯ ವೇತನ, ಮಹಿಳೆಯರ ಉಚಿತ ಪ್ರಯಾಣ ಸೇರಿ ಮತ್ತಿತರ ಕಾರಣಗಳನ್ನು ಸಾರಿಗೆ ಇಲಾಖೆ ನೀಡಿತ್ತು. ಆದರೆ ನಮ್ಮ ಮೆಟ್ರೋಗೆ ಇಂತಹ ಯಾವುದೇ ವೆಚ್ಚದಾಯಕ ತಾಪತ್ರಯಗಳಿಲ್ಲ ದಿದ್ದರೂ ಪ್ರಯಾಣ ದರ ಏರಿಸಿದೆ.
ರಾಜಧಾನಿಯಲ್ಲಿ ಬಿಎಂಟಿಸಿ ಹೊರತುಪಡಿಸಿ ಅತಿ ಹೆಚ್ಚು ಜನರು ಮೆಟ್ರೋ ಸಾರಿಗೆ ಯನ್ನು ಅವಲಂಬಿಸಿದ್ದಾರೆ. ಕೋವಿಡ್ ಸಮಯದಲ್ಲಿ ನಷ್ಟ ಅನುಭವಿಸಿದ್ದ ಮೆಟ್ರೋ, ಆ ನಂತರದಲ್ಲಿ ಲಾಭದ ಹಳಿಗೆ ಮರಳಿದೆ. 2023-24ರ ಆರ್ಥಿಕ ವರ್ಷದಲ್ಲಿ 129.3 ಕೋಟಿ ರು. ಲಾಭ ಗಳಿಸಿದೆ.
ಆರು ಬೋಗಿಗಳ ಒಂದು ರೈಲಿನಲ್ಲಿ ಒಮ್ಮೆಗೆ 1626 ಪ್ರಯಾಣಿಕರು ಪ್ರಯಾಣಿಸಬಹುದು. ಪ್ರತಿಯೊಂದು ಕೋಚ್ 22 ಮೀಟರ್ ಉದ್ದ ಇವೆ. ಆರು ಬೋಗಿಗಳ ರೈಲಿನಲ್ಲಿ 286 ಜನರು ಕುಳಿತು ಹಾಗೂ 1340 ಮಂದಿ ನಿಂತು ಪ್ರಯಾಣ ಮಾಡಬಹುದು. ಆದರೆ, ದಟ್ಟಣೆ ಅವಧಿ ಯಲ್ಲಿ 2500ಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದಾರೆ. ರೈಲಿನ ನಿಗದಿತ ಸಾಮರ್ಥ್ಯ ಮೀರಿ ಹೆಚ್ಚಿನ ಮಂದಿ ಪ್ರಯಾಣಿಸುತ್ತಿರುವ ಸಂಗತಿ ಗೊತ್ತಿದ್ದರೂ ಬೋಗಿ ಸಂಖ್ಯೆ ಹೆಚ್ಚಳ ಮಾಡದ ಬಿಎಂಆರ್‌ಸಿಎಲ್, ಪ್ರಯಾಣ ದರ ಮಾಡಿರುವುದು ಸರಿಯಲ್ಲ. ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿರುವುದರಿಂದ ಸಹಜವಾಗಿಯೇ ಲಾಭದ ಪ್ರಮಾಣವೂ ಹೆಚ್ಚಿದೆ.
ಆದರೂ ದರ ಹೆಚ್ಚಳದ ಔಚಿತ್ಯವೇನು? ಸಾರ್ವಜನಿಕರ ಸಾರಿಗೆಯ ವೆಚ್ಚವು ಹೀಗೇ ಏರು ಗತಿಯಲ್ಲಿ ಹೋದರೆ, ಸಾರ್ವಜನಿಕರು ಖಾಸಗಿ ವಾಹನ ಮತ್ತು ಸಾರ್ವಜನಿಕ ವಾಹನ ಸಂಚಾರಗಳ ನಡುವಿನ ಖರ್ಚನ್ನು ತಾಳೆ ಹಾಕಿ ನೋಡುತ್ತಾರೆ. ಖಾಸಗಿ ವಾಹನಗಳ ಬಳಕೆ ಯೇ ಉತ್ತಮವೆಂದು ಕಾಣುವುದರಿಂದ ಅವುಗಳನ್ನೇ ಅವಲಂಬಿಸುವ ರೂಢಿ ಹೆಚ್ಚಾಗು ತ್ತದೆ.
ಇದರಿಂದ ರಸ್ತೆಗಳಲ್ಲಿ ವಾಹನ ದಟ್ಟಣೆ ಇನ್ನಷ್ಟು ಹೆಚ್ಚಾಗುತ್ತದೆ. ಪರಿಸರ ಮಾಲಿನ್ಯ, ವಾಹನ ದಟ್ಟಣೆ, ಶಬ್ದಮಾಲಿನ್ಯ ತಡೆಗಟ್ಟಲು ಕಡಿಮೆ ಖರ್ಚಿನ, ಸುಗಮ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಅತ್ಯವಶ್ಯ. ಹಾಗಾಗಿ ವಿನಾಕಾರಣ ದರ ಹೆಚ್ಚಳ ನಿರ್ಧಾರವನ್ನು ಕೈ ಬಿಡಬೇಕು.
ಇದನ್ನೂ ಓದಿ: Vishwavani Editorial: ಗುರುವಿನ ವೇಷದ ಗಿಡುಗನೇ?