ನವದೆಹಲಿ: 2026ರ ಟಿ20 ವಿಶ್ವಕಪ್(2026 Men's T20 World Cup) ಫೆ.7 ರಿಂದ ಮಾರ್ಚ್ 8ರ ತನಕ ನಡೆಯುವ ಸಾಧ್ಯತೆಯಿದ್ದು, 20 ತಂಡಗಳು ಟೂರ್ನಿಯಲ್ಲಿ ಭಾಗವಹಿಸಲಿವೆ. ಪಂದ್ಯಗಳು ಭಾರತದ 5 ನಗರ ಮತ್ತು ಶ್ರೀಲಂಕಾದ 2 ಕ್ರೀಡಾಂಗಣಗಳಲ್ಲಿ ನಡೆಯಲಿವೆ. ಪಂದ್ಯಾವಳಿ ಭಾರತ ಮತ್ತು ಶ್ರೀಲಂಕಾದ ಜಂಟಿ ಆತಿಥ್ಯದಲ್ಲಿ ನಡೆಯಲಿದೆ.
ಐಸಿಸಿ ಇನ್ನು ವೇಳಾಪಟ್ಟಿ ಅಂತಿಮಗೊಳಿಸಿಲ್ಲ. ಇದಕ್ಕೂ ಮುನ್ನವೇ ಮೂಲಗಳ ಮಾಹಿತಿ ಪ್ರಕಾರ ಫೈನಲ್ ಪಂದ್ಯ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುವ ಸಾಧ್ಯತೆಯಿದೆ. ಆದರೆ ಒಂದು ವೇಳೆ ಪಾಕಿಸ್ತಾನ ಫೈನಲ್‌ಗೇರಿದರೆ ಆ ಪಂದ್ಯ ಕೊಲಂಬೊದಲ್ಲಿ ನಡೆಯಲಿದೆ. ಈಗಾಗಲೇ ಭಾರತ ಸೇರಿ 15 ತಂಡಗಳು ವಿಶ್ವಕಪ್ ಅರ್ಹತೆ ಪಡೆದಿದ್ದು, ಇನ್ನೂ 5 ತಂಡಗಳು ಯಾವುವೆಂದು ನಿರ್ಧಾರವಾಗಬೇಕಿದೆ. 2024ರ ಮಾದರಿಯಲ್ಲೇ ಮುಂದಿನ ವಿಶ್ವಕಪ್ ಸಹ ನಡೆಯಲಿದೆ.
ಕಳೆದ ವರ್ಷ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ಬಾರ್ಬಡೋಸ್‌ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ ಎರಡನೇ ಬಾರಿಗೆ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದ ಸಾಧನೆ ಮಾಡಿತ್ತು.
ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಭಾರತ ತಂಡ ವಿರಾಟ್ ಕೊಹ್ಲಿ ಅವರ ಸಮಯೋಚಿತ 76 ರನ್ ನೆರವಿನಿಂದ 176 ರನ್ ಕಲೆಹಾಕಿತ್ತು. ಈ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ 20 ಓವರ್ ಅಂತ್ಯಕ್ಕೆ 8 ವಿಕೆಟ್ ಕಳೆದುಕೊಂಡು 169 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಚೊಚ್ಚಲ ಟಿ-20 ವಿಶ್ವಕಪ್ ಗೆಲ್ಲುವ ಅವಕಾಶ ಕಳೆದುಕೊಂಡಿತ್ತು. ಭಾರತ ಗೆಲುವಿನ ಬಳಿಕ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮ ಮತ್ತು ರವೀಂದ್ರ ಜಡೇಜಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು.
ಇದನ್ನೂ ಓದಿ Lionel Messi: 2026ರ ವಿಶ್ವಕಪ್‌ನಲ್ಲಿ ಮೆಸ್ಸಿ ಆಡುವುದು ಅನುಮಾನ!