ಏಷ್ಯಾ ಕಪ್ ಹಾಕಿ; ಪಾಕ್ ಪಾಲ್ಗೊಳ್ಳದಿದ್ದರೆ ಬಾಂಗ್ಲಾಕ್ಕೆ ಅವಕಾಶ
Hockey Asia Cup 2025: ಎಂಟು ತಂಡಗಳ ಟೂರ್ನಮೆಂಟ್‌ನಲ್ಲಿ ಪಾಕಿಸ್ತಾನದ ಸ್ಥಾನವನ್ನು ತುಂಬಲು ಆಯೋಜಕರು ಈಗಾಗಲೇ ಬಾಂಗ್ಲಾದೇಶವನ್ನು ಸಂಪರ್ಕಿಸಿದ್ದಾರೆ, ಆದರೆ ಮುಂದಿನ 48 ಗಂಟೆಗಳಲ್ಲಿ ನಿಖರವಾದ ಸನ್ನಿವೇಶವು ಸ್ಪಷ್ಟವಾಗಲಿದೆ ಎಂದು ಹಾಕಿ ಇಂಡಿಯಾ ಹೇಳಿದೆ.


ನವದೆಹಲಿ: ಆಗಸ್ಟ್ 29 ರಿಂದ ಬಿಹಾರದ ರಾಜ್‌ಗಿರ್‌ನಲ್ಲಿ ನಡೆಯಲಿರುವ ಪುರುಷರ ಏಷ್ಯಾ ಕಪ್ ಹಾಕಿ(Asia Cup hockey) ಪಂದ್ಯಾವಳಿಯಲ್ಲಿ ಪಾಕಿಸ್ತಾನ(Pakistan) ಮುಂದಿನ ಎರಡು ದಿನಗಳಲ್ಲಿ ಭಾಗವಹಿಸುವಿಕೆಯನ್ನು ದೃಢೀಕರಿಸದಿದ್ದರೆ ಬದಲಿ ತಂಡವಾಗಿ ಬಾಂಗ್ಲಾದೇಶ(Bangladesh) ಆಯ್ಕೆಯಾಗುವ ಸಾಧ್ಯತೆಯಿದೆ ಎಂದು ಹಾಕಿ ಇಂಡಿಯಾದ ಉನ್ನತ ಅಧಿಕಾರಿಯೊಬ್ಬರು ಸೋಮವಾರ ಪಿಟಿಐಗೆ ತಿಳಿಸಿದ್ದಾರೆ. ಏಷ್ಯಾ ಕಪ್‌ಗಾಗಿ ಪಾಕಿಸ್ತಾನಿ ಆಟಗಾರರಿಗೆ ವೀಸಾ ನೀಡುವುದಾಗಿ ಭಾರತ ಸರ್ಕಾರ ಈಗಾಗಲೇ ಹೇಳಿತ್ತು, ಆದರೆ ಭದ್ರತಾ ಕಾಳಜಿಯನ್ನು ಉಲ್ಲೇಖಿಸಿ ಪಾಕಿಸ್ತಾನ ಹಾಕಿ ಫೆಡರೇಶನ್ (ಪಿಎಚ್‌ಎಫ್) ಪ್ರಯಾಣಿಸಲು ನಿರಾಕರಿಸಿದೆ. ಆದರೂ ಕೂಡ ಪಾಕ್‌ಗೆ ಮತ್ತೊಂದು ಅಂತಿಮ ಗಡುವನ್ನು ನೀಡಲಾಗಿದೆ.
ಎಂಟು ತಂಡಗಳ ಟೂರ್ನಮೆಂಟ್‌ನಲ್ಲಿ ಪಾಕಿಸ್ತಾನದ ಸ್ಥಾನವನ್ನು ತುಂಬಲು ಆಯೋಜಕರು ಈಗಾಗಲೇ ಬಾಂಗ್ಲಾದೇಶವನ್ನು ಸಂಪರ್ಕಿಸಿದ್ದಾರೆ, ಆದರೆ ಮುಂದಿನ 48 ಗಂಟೆಗಳಲ್ಲಿ ನಿಖರವಾದ ಸನ್ನಿವೇಶವು ಸ್ಪಷ್ಟವಾಗಲಿದೆ ಎಂದು ಹಾಕಿ ಇಂಡಿಯಾ ಹೇಳಿದೆ.
ಇದನ್ನೂ ಓದಿ Hockey Asia Cup 2025: ಹಾಕಿ ಏಷ್ಯಾಕಪ್‌ನಿಂದ ಹಿಂದೆ ಸರಿದ ಪಾಕ್
"ಪಾಕಿಸ್ತಾನಿ ಆಟಗಾರರಿಗೆ ವೀಸಾ ನೀಡಲು ಸಿದ್ಧ ಎಂದು ಭಾರತ ಸರ್ಕಾರ ಈಗಾಗಲೇ ಹೇಳಿದೆ ಆದರೆ ಅವರು ಭಾರತಕ್ಕೆ ಬರಲು ಬಯಸದಿದ್ದರೆ, ಅದು ನಮ್ಮ ಸಮಸ್ಯೆಯಲ್ಲ. ಪಾಕಿಸ್ತಾನ ಬರದಿದ್ದರೆ ಬಾಂಗ್ಲಾದೇಶವನ್ನು ಭಾಗವಹಿಸಲು ಈಗಾಗಲೇ ಆಹ್ವಾನಿಸಲಾಗಿದೆ ಆದರೆ ದೃಢೀಕರಣವನ್ನು ಪಡೆಯಲು ನಾವು ಇನ್ನೂ ಎರಡು ದಿನಗಳವರೆಗೆ ಕಾಯಬೇಕಾಗುತ್ತದೆ" ಎಂದು ಪರಿಸ್ಥಿತಿಯ ಬಗ್ಗೆ ಪ್ರಶ್ನಿಸಿದಾಗ ಹಾಕಿ ಇಂಡಿಯಾ ಅಧಿಕಾರಿ ಹೇಳಿದರು. "ಪಾಕಿಸ್ತಾನ ಅಥವಾ ಬಾಂಗ್ಲಾದೇಶ ಇಲ್ಲಿಯವರೆಗೆ ನಮಗೆ ಏನನ್ನೂ ದೃಢಪಡಿಸಿಲ್ಲ. ಆದರೆ ಬಾಂಗ್ಲಾದೇಶ ಪಾಕಿಸ್ತಾನಕ್ಕೆ ಬದಲಿಯಾಗುವ ಸಾಧ್ಯತೆಯಿದೆ" ಎಂದು ಅವರು ಹೇಳಿದರು.
ಆತಿಥೇಯ ಭಾರತದ ಜತೆಗೆ, ಏಷ್ಯಾ ಕಪ್‌ನಲ್ಲಿ ಭಾಗವಹಿಸುವ ಇತರ ತಂಡಗಳೆಂದರೆ ಚೀನಾ, ಜಪಾನ್, ಮಲೇಷ್ಯಾ, ದಕ್ಷಿಣ ಕೊರಿಯಾ, ಓಮನ್ ಮತ್ತು ಚೈನೀಸ್ ತೈಪೆ. ಹಾಕಿ ಏಷ್ಯಾಕಪ್‌ನಲ್ಲಿ ವಿಜೇತರಾದ ತಂಡ ಮುಂದಿನ ವರ್ಷದ ಹಾಕಿ ವಿಶ್ವಕಪ್‌ಗೆ ನೇರ ಪ್ರವೇಶ ಪಡೆಯಲಿದೆ.