Hockey Asia Cup 2025: ಹಾಕಿ ಏಷ್ಯಾಕಪ್‌ನಿಂದ ಹಿಂದೆ ಸರಿದ ಪಾಕ್
Asia Cup Hockey: ಹಾಕಿ ಏಷ್ಯಾಕಪ್‌ನಲ್ಲಿ ವಿಜೇತರಾದ ತಂಡ ಮುಂದಿನ ವರ್ಷದ ಹಾಕಿ ವಿಶ್ವಕಪ್‌ಗೆ ನೇರ ಪ್ರವೇಶ ಪಡೆಯಲಿದೆ. ಆತಿಥೇಯ ಭಾರತ, ಜಪಾನ್, ಕೊರಿಯಾ, ಚೀನಾ, ಮಲೇಷ್ಯಾ, ಓಮನ್ ಮತ್ತು ಚೈನೀಸ್ ತೈಪೆ ತಂಡಗಳು ಟೂರ್ನಿಯಲ್ಲಿ ಪಾಲ್ಗೊಳ್ಳಲಿದೆ.


ನವದೆಹಲಿ: ಆಗಸ್ಟ್ 29 ರಿಂದ ಸೆಪ್ಟೆಂಬರ್ 7 ರವರೆಗೆ ಬಿಹಾರದ ರಾಜ್‌ಗಿರ್‌ನಲ್ಲಿ ನಡೆಯಲಿರುವ ಹಾಕಿ ಏಷ್ಯಾಕಪ್‌ನಲ್ಲಿ(Hockey Asia Cup 2025) ಪಾಕಿಸ್ತಾನ ಪುರುಷರ ಹಾಕಿ ತಂಡ(Pakistan hockey team) ಭದ್ರತಾ ಕಾರಣಗಳಿಂದಾಗಿ ಭಾಗವಹಿಸುವುದಿಲ್ಲ ಎಂದು ಹಾಕಿ ಇಂಡಿಯಾ( Hockey India) ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಳೆದ ತಿಂಗಳೇ ಪಾಕಿಸ್ತಾನ ಹಾಕಿ ಫೆಡರೇಶನ್ ತಮ್ಮ ತಂಡವನ್ನು ಭಾರತಕ್ಕೆ ಕಳುಹಿಸುವುದು ಕಷ್ಟ ಎಂದು ಹೇಳಿದ್ದರು. ಇದೀಗ ಹಾಕಿ ಇಂಡಿಯಾ ಕೂಡ ಪಾಕ್ ಅಲಭ್ಯತೆಯನ್ನು ಖಚಿತಪಡಿಸಿದೆ.
ಸ್ಪೋರ್ಟ್ಸ್‌ಸ್ಟಾರ್ ಜತೆ ಮಾತನಾಡಿದ ಹಾಕಿ ಇಂಡಿಯಾದ ಅಧಿಕಾರಿಯೊಬ್ಬರು, ಭಾರತ ಸರ್ಕಾರ ಪಾಕಿಸ್ತಾನಕ್ಕೆ ವೀಸಾ ನೀಡಲು ಸಿದ್ಧವಿದ್ದರೂ, ಭದ್ರತಾ ಕಾರಣಗಳನ್ನು ಉಲ್ಲೇಖಿಸಿ ಪಾಕಿಸ್ತಾನ ಹಾಕಿ ಫೆಡರೇಶನ್ (ಪಿಎಚ್‌ಎಫ್) ನಿರಾಕರಿಸಿದೆ ಎಂದು ಹೇಳಿದರು.
"ಪಾಕಿಸ್ತಾನ ಹಾಕಿ ಫೆಡರೇಶನ್ ಬುಧವಾರ ಏಷ್ಯನ್ ಹಾಕಿ ಫೆಡರೇಶನ್‌ಗೆ ಪತ್ರ ಬರೆದಿದ್ದು, ಭದ್ರತಾ ಕಾರಣಗಳಿಂದಾಗಿ ಏಷ್ಯಾ ಕಪ್‌ನಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದೆ. ಹೀಗಾಗಿ ನಾವು ಈಗ ಬಾಂಗ್ಲಾದೇಶವನ್ನು ಆಹ್ವಾನಿಸಿದ್ದೇವೆ" ಎಂದು ಹಾಕಿ ಇಂಡಿಯಾ ಮೂಲಗಳು ತಿಳಿಸಿವೆ.
ಉಭಯ ದೇಶಗಳ ನಡುವಿನ ಹಾಲಿ ಸನ್ನಿವೇಶದಲ್ಲಿ ನಮ್ಮ ತಂಡಕ್ಕೆ ಭಾರತದಲ್ಲಿ ಆಡಲು ಭದ್ರತಾ ಅಪಾಯ ಎದುರಾಗಿದೆ. ಜತೆಗೆ ಆಟಗಾರರು ಕೂಡ ಭಾರತಕ್ಕೆ ಪ್ರಯಾಣಿಸಲು ಸಿದ್ಧವಿಲ್ಲ. ಹೀಗಾಗಿ ಟೂರ್ನಿಯನ್ನು ತಟಸ್ಥ ತಾಣದಲ್ಲಿ ನಡೆಸುವಂತೆ ಪಿಎಚ್‌ಎಫ್ ಮುಖ್ಯಸ್ಥ ರಾರಿಕ್ ಬುಗ್ತಿ ಮನವಿ ಮಾಡಿದ್ದರು. ಆದರೆ ಇದಕ್ಕೆ ಹಾಕಿ ಇಂಡಿಯಾ ಒಪ್ಪಿರಲಿಲ್ಲ. ಅಂತಿಮವಾಗಿ ಪಾಕ್ ಟೂರ್ನಿಯಿಂದ ಹಿಂದೆ ಸರಿಯಿತು.
ಈ ನಿರ್ಧಾರವು ನವೆಂಬರ್-ಡಿಸೆಂಬರ್‌ನಲ್ಲಿ ಚೆನ್ನೈ ಮತ್ತು ಮಧುರೈನಲ್ಲಿ ನಡೆಯಲಿರುವ ಜೂನಿಯರ್ ವಿಶ್ವಕಪ್‌ನಲ್ಲಿ ಪಾಕಿಸ್ತಾನ ಭಾಗವಹಿಸುವಿಕೆಯ ಮೇಲೆ ಕರಿನೆರಳು ಬೀಳುವಂತೆ ಮಾಡಿದೆ. ಚೆನ್ನೈನಲ್ಲಿ ನಡೆದ 2023 ರ ಏಷ್ಯನ್ ಚಾಂಪಿಯನ್ಸ್ ಟ್ರೋಫಿಗಾಗಿ ಪಾಕಿಸ್ತಾನ ಕೊನೆಯ ಬಾರಿಗೆ ಭಾರತಕ್ಕೆ ಪ್ರಯಾಣ ಬೆಳೆಸಿತ್ತು. ಆರು ತಂಡಗಳ ಸ್ಪರ್ಧೆಯಲ್ಲಿ ಐದನೇ ಸ್ಥಾನ ಪಡೆದಿತ್ತು.
ಇದನ್ನೂ ಓದಿ Asia Cup 2025: ದುಬೈನಲ್ಲಿ ಭಾರತ-ಪಾಕ್ ಏಷ್ಯಾಕಪ್ ಫೈಟ್
ಹಾಕಿ ಏಷ್ಯಾಕಪ್‌ನಲ್ಲಿ ವಿಜೇತರಾದ ತಂಡ ಮುಂದಿನ ವರ್ಷದ ಹಾಕಿ ವಿಶ್ವಕಪ್‌ಗೆ ನೇರ ಪ್ರವೇಶ ಪಡೆಯಲಿದೆ. ಆತಿಥೇಯ ಭಾರತ, ಜಪಾನ್, ಕೊರಿಯಾ, ಚೀನಾ, ಮಲೇಷ್ಯಾ, ಓಮನ್ ಮತ್ತು ಚೈನೀಸ್ ತೈಪೆ ತಂಡಗಳು ಟೂರ್ನಿಯಲ್ಲಿ ಪಾಲ್ಗೊಳ್ಳಲಿದೆ.