ಪ್ರಯಾ (ಕೇಪ್ ವರ್ಡೆ): ಕೇವಲ 5.25 ಲಕ್ಷ ಜನಸಂಖ್ಯೆಯ ದ್ವೀಪರಾಷ್ಟ್ರ ಕೇಪ್ ವರ್ಡೆ(CAPE VERDE) ಮೊಟ್ಟಮೊದಲ ಬಾರಿಗೆ ಫಿಫಾ ವಿಶ್ವಕಪ್(FIFA World Cup 2026) ಟೂರ್ನಿಗೆ ಅರ್ಹತೆ ಸಂಪಾದಿಸಿ ಇತಿಹಾಸ ನಿರ್ಮಿಸಿದೆ. 2026ರ ವಿಶ್ವಕಪ್ ಫುಟ್ಬಾಲ್ ಅರ್ಹತಾ ಪಂದ್ಯದಲ್ಲಿ ಎಸ್ವತಿನಿ ತಂಡವನ್ನು 3-0 ಗೋಲುಗಳಿಂದ ಮಣಿಸಿ ಕೇಪ್ ವರ್ಡೆ ಈ ಸಾಧನೆ ಮಾಡಿದೆ.
ಕೇಪ್ ವರ್ಡೆ ಫಿಫಾ ವಿಶ್ವಕಪ್ ಅರ್ಹತೆ ಪಡೆದ 2ನೇ ಅತಿಸಣ್ಣ ದೇಶವೆನಿಸಿದೆ. 2018ರಲ್ಲಿ 3.5 ಲಕ್ಷ ಜನಸಂಖ್ಯೆಯ ಐಸ್ಲ್ಯಾಂಡ್ ವಿಶ್ವಕಪ್ ಅರ್ಹತೆ ಪಡೆದ ಪುಟ್ಟದೇಶ ಎನಿಸಿತ್ತು. ಪಶ್ಚಿಮ ಆಫ್ರಿಕಾದಲ್ಲಿರುವ ಕೇಪ್ ವರ್ಡೆ, 50 ವರ್ಷಗಳ ಹಿಂದೆ ಪೋರ್ಚುಗಲ್ನಿಂದ ಸ್ವಾತಂತ್ರ್ಯ ಪಡೆದುಕೊಂಡಿತ್ತು.
ಫಿಫಾ ಶ್ರೇಯಾಂಕದಲ್ಲಿ 70ನೇ ಸ್ಥಾನದಲ್ಲಿರುವ ಕೇಪ್ ವರ್ಡೆ, 2026ರ ಫಿಫಾ ವಿಶ್ವಕಪ್‌ನಲ್ಲಿ ಆಡಲಿರುವ 48 ದೇಶಗಳ ಪೈಕಿ ಈಗಾಗಲೆ ಅರ್ಹತೆ ಖಚಿತಪಡಿಸಿಕೊಂಡಿರುವ 22ನೇ ತಂಡವೆನಿಸಿದೆ. ಕೇಪ್ ವರ್ಡೆ ಅಕ್ಟೋಬರ್ ಆರಂಭದಲ್ಲಿ ಲಿಬಿಯಾ ವಿರುದ್ಧದ 3-3 ಅಂತರದಲ್ಲಿ ಪಂದ್ಯವನ್ನು ಡ್ರಾ ಮಾಡಿಕೊಳ್ಳುವ ಮೂಲಕ ವಿಶ್ವಕಪ್‌ಗೆ ಮತ್ತಷ್ಟು ಹತ್ತಿರವಾಗಿತ್ತು.
ಕೇಪ್ ವರ್ಡೆ ತಂಡದ ಆಟಗಾರರ ಸಂಭ್ರಮಾಚರಣೆ
2026ರ ಫಿಫಾ ವಿಶ್ವಕಪ್‌ನಲ್ಲಿ ದಾಖಲೆಯ 48 ತಂಡಗಳು ಭಾಗವಹಿಸಲಿದ್ದು, ಯುನೈಟೆಡ್ ಸ್ಟೇಟ್ಸ್, ಕೆನಡಾ ಮತ್ತು ಮೆಕ್ಸಿಕೊ ಜಂಟಿ ಆತಿಥ್ಯವಹಿಸಲಿದೆ. 43 ತಂಡಗಳು ಕಾಂಟಿನೆಂಟಲ್ ಪ್ಲೇ-ಆಫ್‌ಗಳ ಮೂಲಕ ನೇರವಾಗಿ ಅರ್ಹತೆ ಪಡೆಯಲಿದ್ದು, ಜತೆಗೆ ಆತಿಥೇಯ ತಂಡಗಳು ಸಹ ನೇರವಾಗಿ ಅರ್ಹತೆ ಪಡೆಯುತ್ತವೆ. ಉಳಿದ ಎರಡು ತಂಡಗಳು ಇಂಟರ್‌ಕಾಂಟಿನೆಂಟಲ್ ಪ್ಲೇ-ಆಫ್‌ಗಳ ಮೂಲಕ ಅರ್ಹತೆ ಪಡೆಯುತ್ತವೆ. ಇಂಟರ್‌ಕಾಂಟಿನೆಂಟಲ್ ಪ್ಲೇ-ಆಫ್‌ಗಳು ಆರು ತಂಡಗಳನ್ನು ಒಳಗೊಂಡಿರುತ್ತವೆ.
ಇದನ್ನೂ ಓದಿ FIFA Rankings; 134ನೇ ಸ್ಥಾನಕ್ಕೆ ಕುಸಿದ ಭಾರತ; ಸ್ಪೇನ್ ನಂ.1
ವಿಶ್ವಕಪ್‌ಗೆ ಅರ್ಹತೆ ಪಡೆದ ತಂಡಗಳು
ಅಮೆರಿಕ, ಮೆಕ್ಸಿಕೊ, ಕೆನಡಾ (ಆತಿಥೇಯ ರಾಷ್ಟ್ರವಾಗಿ ನೇರ ಅರ್ಹತೆ).
ಆಫ್ರಿಕಾ ಖಂಡ: ಅಲ್ಜೀರಿಯಾ, ಕೇಪ್ ವರ್ಡೆ, ಈಜಿಪ್ಟ್, ಘಾನಾ, ಮೊರಾಕೊ, ಟುನೀಶಿಯಾ.
ಏಷ್ಯಾ ಖಂಡ: ಆಸ್ಟ್ರೇಲಿಯಾ, ಇರಾನ್, ಜಪಾನ್, ಜೋರ್ಡಾನ್, ದಕ್ಷಿಣ ಕೊರಿಯಾ, ಉಜ್ಬೇಕಿಸ್ತಾನ್.
ಓಷಿಯಾನಿಯಾ: ನ್ಯೂಜಿಲೆಂಡ್.
ದಕ್ಷಿಣ ಅಮೆರಿಕಾ: ಅರ್ಜೆಂಟೀನಾ, ಬ್ರೆಜಿಲ್, ಕೊಲಂಬಿಯಾ, ಈಕ್ವೆಡಾರ್, ಪರಾಗ್ವೆ, ಉರುಗ್ವೆ.