ಅಬುದಾಬಿ: ನುವಾನ್ ತುಷಾರ (18ಕ್ಕೆ 4) ಮಾರಕ ಬೌಲಿಂಗ್ ಹಾಗೂ ಕುಸಾಲ್ ಮೆಂಡಿಸ್ (74 ರನ್) ಅವರ ಅರ್ಧಶತಕದ ಬಲದಿಂದ ಶ್ರೀಲಂಕಾ ತಂಡ, ಲೀಗ್ ಹಂತದ ಕೊನೆಯ ಪಂದ್ಯದಲ್ಲಿ (AFG vs SL) ಅಫ್ಘಾನಿಸ್ತಾನ ವಿರುದ್ದ 6 ವಿಕೆಟ್ ಗೆಲುವು ಪಡೆಯಿತು. ಆ ಮೂಲಕ 2025ರ ಏಷ್ಯಾ ಕಪ್ ಟೂರ್ನಿಯ ಸೂಪರ್-4ಕ್ಕೆ ಅರ್ಹತೆ ಪಡೆಯಿತು. ಆಫ್ಘನ್ ಸೋಲಿನಿಂದ ಬಾಂಗ್ಲಾದೇಶ (Bangladesh) ತಂಡ ಬಿ ಗುಂಪಿನಿಂದ ಸೂಪರ್ 4ಕ್ಕೆ ಅರ್ಹತೆ ಪಡೆದ ಎರಡನೇ ತಂಡ ಎನಿಸಿಕೊಂಡಿತು. ಈ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಕುಸಾಲ್ ಮೆಂಡಿಸ್ (Kusal Mendis) ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಗುರುವಾರ ಇಲ್ಲಿನ ಶೇಖ್ ಝಾಹೆದ್ ಕ್ರೀಡಾಂಗಣದಲ್ಲಿ ಅಫ್ಘಾನಿಸ್ತಾನ ನೀಡಿದ್ದ 170 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಶ್ರೀಲಂಕಾ ತಂಡ, ಕುಸಾಲ್ ಮೆಂಡಿಸ್ ಅರ್ಧಶತಕದ ಬಲದಿಂದ 18.4 ಓವರ್‌ಗಳಿಗೆ 4 ವಿಕೆಟ್ ನಷ್ಟಕ್ಕೆ 171 ರನ್‌ಗಳನ್ನು ಕಲೆ ಹಾಕಿ ಗೆಲುವಿನ ನಗೆ ಬೀರಿತು. ಅಫ್ಘಾನಿಸ್ತಾನ ತಂಡದ ಪರ ಮೊಹಮ್ಮದ್ ನಬಿ ಹಾಗೂ ರಶೀದ್ ಖಾನ್ ಬೌಲಿಂಗ್‌ನಲ್ಲಿ ಸ್ವಲ್ಪ ಮಿಂಚಿದರು. ಬಿಟ್ಟರೆ ಇನ್ನುಳಿದ ಬೌಲರ್‌ಗಳು ದುಬಾರಿಯಾದರು. ಈ ಕಾರಣದಿಂದಲೇ ಶ್ರೀಲಂಕಾ ತಂಡವನ್ನು ಕಟ್ಟಿ ಹಾಕಲು ಸಾಧ್ಯವಾಗಲಿಲ್ಲ. ಈ ಸೋಲಿನ ಮೂಲಕ ಆಪ್ಘನ್‌ನ ಏಷ್ಯಾ ಕಪ್ ಗೆಲ್ಲುವ ಕನಸು ಮತ್ತೊಮ್ಮೆ ಭಗ್ನವಾಯಿತು.
Asia Cup 2025: ಶ್ರೀಲಂಕಾ ವಿರುದ್ಧ ಸತತ 5 ಸಿಕ್ಸರ್ ಬಾರಿಸಿದ ಮೊಹಮ್ಮದ್ ನಬಿ! ವಿಡಿಯೊ
ಕುಸಾಲ್ ಮೆಂಡಿಸ್ ಅಬ್ಬರ
ಶ್ರೀಲಂಕಾ ತಂಡದ ಚೇಸಿಂಗ್‌ನಲ್ಲಿ ಕುಸಾಲ್ ಮೆಂಡಿಸ್ ಅಬ್ಬರಿಸಿದರು. ಪತುಮ್ ನಿಸಾಂಕ ಜೊತೆ ಇನಿಂಗ್ಸ್ ಆರಂಭಿಸಿದ ಕುಸಾಲ್ ಮೆಂಡಿಸ್, ಕೊನೆಯವರೆಗೂ ಕ್ರೀಸ್‌ನಲ್ಲಿ ಉಳಿದು ತಂಡವನ್ನು ಗೆಲ್ಲಿಸಿದರು. ಅವರು ಆಡಿದ 52 ಎಸೆತಗಳಲ್ಲಿ 10 ಬೌಂಡರಿಗಳೊಂದಿಗೆ ಅಜೇಯ 74 ರನ್ ಗಳಿಸಿದರು. ಆ ಮೂಲಕ ಶ್ರೀಲಂಕಾ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು. ಕುಸಾಲ್ ಪೆರೆರಾ 28 ರನ್ ಹಾಗೂ ಕಮಿಂದು ಮೆಂಡಿಸ್ ಅಜೇಯ 26 ರನ್ ಗಳಿಸಿದರು.
169 ರನ್ ಕಲೆ ಹಾಕಿದ್ದ ಅಫ್ಘಾನಿಸ್ತಾನ
ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಅಫ್ಘಾನಿಸ್ತಾನ ತಂಡ, ನುವಾನ್ ತುಷಾರ ಅವರ ಮಾರಕ ಬೌಲಿಂಗ್ ದಾಳಿಯ ಹೊರತಾಗಿಯೂ ಮೊಹಮ್ಮದ್ ನಬಿ ಅವರ ಸ್ಪೋಟಕ ಅರ್ಧಶತಕದ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 8 ವಿಕೆಟ್‌ಗಳ ನಷ್ಟಕ್ಕೆ 169 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ಶ್ರೀಲಂಕಾ ತಂಡಕ್ಕೆ 170 ರನ್‌ಗಳ ಕಠಿಣ ಗುರಿಯನ್ನು ನೀಡಿದೆ.\
Asia Cup 2025: ಈ ಬಾರಿ ಪ್ರಶಸ್ತಿ ಗೆಲ್ಲುವ ತಮ್ಮ ನೆಚ್ಚಿನ ತಂಡವನ್ನು ಆರಿಸಿದ ಜೋನಾಥನ್ ಟ್ರಾಟ್!
ಅಗ್ರ-ಮಧ್ಯಮ ಕ್ರಮಾಂಕದ ವೈಫಲ್ಯ
ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ ತಂಡಕ್ಕೆ ನುವಾನ್ ತುಷಾರ ಹೊಸ ಚೆಂಡಿನಲ್ಲಿ ಆಘಾತ ನೀಡಿದರು. ತುಷಾರ ಅವರು ತಮ್ಮ ಮಾರಕ ದಾಳಿಯಿಂದ ರೆಹಮಾನುಲ್ಲಾ ಗುರ್ಬಾಜ್ (14), ಕರಿಮ್ ಜನತ್ (1) ಹಾಗೂ ಸೆಡಿಕುಲ್ಲಾ ಅಟಲ್ (18) ಅವರನ್ನು ಪವರ್‌ಪ್ಲೇನಲ್ಲಿ ಔಟ್ ಮಾಡಿದರು. ಆ ಮೂಲಕ ಆಫ್ಘನ್ ಕೇವಲ 40 ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು. ಮಧ್ಯಮ ಕ್ರಮಾಂಕದಲ್ಲಿ ಇಬ್ರಾಹಿಂ ಝರ್ಡಾನ್ 24 ರನ್ ಗಳಿಸಿ ಉತ್ತಮ ಆರಂಭ ಪಡೆದರೂ ದೊಡ್ಡ ಮೊತ್ತವನ್ನು ಕಲೆ ಹಾಕಲು ಸಾಧ್ಯವಾಗಲಿಲ್ಲ. ದಾರ್ವಿಷ್ ರಸೂಲಿ ಮತ್ತು ಅಝಮತ್‌ವುಲ್ಹಾ ಒಮರ್ಜಾಯ್ ನಿರಾಶೆ ಮೂಡಿಸಿದರು. ಆ ಮೂಲಕ ಕೇವಲ 79 ರನ್‌ಗಳಿಗೆ ಅಫ್ಘಾನಿಸ್ತಾನ ತಂಡ 6 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.
ಆಫ್ಘನ್‌ಗೆ ಮೊಹಮ್ಮದ್ ನಬಿಯ ಅರ್ಧಶತಕದ ಆಸರೆ
ಶ್ರೀಲಂಕಾ ತಂಡದ ಬೌಲರ್‌ಗಳ ಶಸ್ತಿನ ದಾಳಿಯಿಂದ 17ನೇ ಓವರ್‌ವರೆಗೂ ಪಂದ್ಯ ಸಿಂಹಳೀಯರ ಕೈಯಲ್ಲಿತ್ತು. ಏಕೆಂದರೆ 17.1 ಓವರ್‌ಗಳಿಗೆ ಅಫ್ಘಾನಿಸ್ತಾನ ತಂಡ 114 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡಿತ್ತು. ಹಾಗಾಗಿ ಆಫ್ಘನ್ ಕೊನೆಯ 17 ಎಸೆತಗಳು ಮಾತ್ರ ಬಾಕಿ ಇದ್ದವು. ಆದರೆ, ಏಳನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಮೊಹಮ್ಮದ್ ನಬಿ ಸ್ಪೋಟಕ ಬ್ಯಾಟಿಂಗ್ ಮೂಲಕ ಪಂದ್ಯದ ದಿಕ್ಕನ್ನು ಬದಲಿಸಿದರು. ಅವರು ಆಡಿದ ಕೇವಲ 22 ಎಸೆತಗಳಲ್ಲಿ 6 ಸಿಕ್ಸರ್ ಹಾಗೂ 3 ಬೌಂಡರಿಯೊಂದಿಗೆ 60 ರನ್ ಚಚ್ಚಿದರು. ಅಲ್ಲದೆ 272.73ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ್ದು ನೆರೆದಿದ್ದ ಅಭಿಮಾನಿಗಳಿಗೆ ಭರ್ಜರಿ ರಸದೌತಣ ಲಭಿಸಿತು. ಕೊನೆಯಲ್ಲಿ ರಶೀದ್ ಖಾನ್ 24 ರನ್ ಗಳಿಸಿದರೂ ನಬಿಯ ಸ್ಪೋಟಕ ಇನಿಂಗ್ಸ್‌ನಿಂದ ಆಫ್ಘನ್ ತಂಡ ಅಪಾಯದಿಂದ ಪಾರಾಗಲು ಸಾಧ್ಯವಾಯಿತು.
ಶ್ರೀಲಂಕಾ ತಂಡದ ಪರ ನುವಾನ್ ತುಷಾರ 18 ರನ್ ನೀಡಿ 4 ವಿಕೆಟ್ ಕಿತ್ತರೆ, ದುಷ್ಮಾಂತ ಚಮೀರ, ದುನಿತ್ ವೆಲ್ಲಾಳಗೆ ಹಾಗೂ ಶನಕ ತಲಾ ಒಂದೊಂದು ವಿಕೆಟ್ ಕಿತ್ತರು.