ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ (IND vs AUS) ವಿರಾಟ್ ಕೊಹ್ಲಿ ಔಟ್ (Virat Kohli) ಆದ ರೀತಿಯ ಬಗ್ಗೆ ಭಾರತದ ಸ್ಪಿನ್ ದಿಗ್ಗಜ ರವಿಚಂದ್ರನ್ ಅಶ್ವಿನ್ (R Ashwin) ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕ್ಸೇವಿಯರ್ ಬಾರ್ಟ್ಲೆಟ್ ಅವರ ಎಸೆತ ಅತ್ಯುತ್ತಮವಾಗಿದ್ದರೂ, ಕೊಹ್ಲಿ ಚೆಂಡಿನ ಲೈನ್ ಅನ್ನು ತಪ್ಪಿಸಿದರು ಎಂದು ಅಶ್ವಿನ್ ನಂಬಿದ್ದಾರೆ. ಕ್ರಿಕೆಟ್‌ನಿಂದ ನಾಲ್ಕು ತಿಂಗಳು ದೂರವಿದ್ದ ವಿರಾಟ್ ಕೊಹ್ಲಿ, ತಮ್ಮ ಲಯವನ್ನು ಮರಳಿ ಪಡೆಯಲು ಮೈದಾನದಲ್ಲಿ ಹೆಚ್ಚಿನ ಸಮಯ ಬೇಕಾಗುತ್ತದೆ ಎಂದು ಮಾಜಿ ಸ್ಪಿನ್ನರ್ ತಿಳಿಸಿದ್ದಾರೆ. ಆರಂಭಿಕ ಎರಡೂ ಪಂದ್ಯಗಳನ್ನು ಸೋಲುವ ಮೂಲಕ ಭಾರತ ತಂಡ ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ ಏಕದಿನ ಸರಣಿಯನ್ನು 0-2 ಅಂತರದಲ್ಲಿ ಕಳೆದುಕೊಂಡಿದೆ.
ನಾಯಕ ಶುಭಮನ್ ಗಿಲ್ ಔಟ್ ಆದ ನಂತರ ವಿರಾಟ್ ಕೊಹ್ಲಿ ಏಳನೇ ಓವರ್‌ನಲ್ಲಿ ಕ್ರೀಸ್‌ಗೆ ಬಂದಿದ್ದರು. ಆಸ್ಟ್ರೇಲಿಯಾದ ಬೌಲರ್ ಕ್ಸೇವಿಯರ್ ಬಾರ್ಟ್ಲೆಟ್, ವಿರಾಟ್ ಕೊಹ್ಲಿಗೆ ನಿರಂತರವಾಗಿ ಔಟ್‌ಸ್ವಿಂಗರ್‌ಗಳನ್ನು ಹಾಕಿದ್ದರು. ಆ ಮೂಲಕ ಆಫ್ ಸ್ಟಂಪ್‌ನ ಹೊರಗೆ ಅವರ ದೌರ್ಬಲ್ಯವನ್ನು ಬಳಸಿಕೊಳ್ಳುತ್ತಿದ್ದರು. ಓವರ್‌ನ ಕೊನೆಯ ಎಸೆತದಲ್ಲಿ ಬಾರ್ಟ್ಲೆಟ್ ಇದ್ದಕ್ಕಿದ್ದಂತೆ ಬೌಲ್ ಮಾಡಿದ ನೇರ ಎಸೆತವು ಕೊಹ್ಲಿಯ ಪ್ಯಾಡ್‌ಗೆ ಬಡಿಯಿತು, ಇದರ ಪರಿಣಾಮವಾಗಿ ಅವರಿಗೆ ಎಲ್‌ಬಿಡಬ್ಲ್ಯುಗೆ ಮನವಿ ಮಾಡಿದರು ಹಾಗೂ ಅಂಪೈರ್ ಔಟ್ ಕೊಟ್ಟರು. ಕೊಹ್ಲಿ ರಿವ್ಯೂ ತೆಗೆದುಕೊಂಡಿದ್ದರೂ ಸಹ, ಚೆಂಡು ಮಧ್ಯದ ಸ್ಟಂಪ್‌ಗೆ ಬಡಿಯುತ್ತಿತ್ತು ಎಂದು ರೀಪ್ಲೆ ಮೂಲಕ ತಿಳಿಯಿತು.
ವಿರಾಟ್ ಕೊಹ್ಲಿ ಲೈನ್ ತಪ್ಪಿ ಆಡಿದ್ದಾರೆ: ಅಶ್ವಿನ್
ಅಶ್ವಿನ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ವಿರಾಟ್ ಕೊಹ್ಲಿ ಔಟಾದ ಬಗ್ಗೆ ಮಾತನಾಡುತ್ತಾ, "ಕ್ಸೇವಿಯರ್ ಬಾರ್ಟ್ಲೆಟ್ ಎರಡು ಔಟ್‌ಸ್ವಿಂಗರ್‌ಗಳನ್ನು ಎಸೆದು ವಿರಾಟ್ ಕೊಹ್ಲಿಯನ್ನು ಎಲ್ಬಿಡಬ್ಲ್ಯು ಆಗಿ ಔಟ್ ಮಾಡಲು ಲೈನ್ ಅನ್ನು ಬದಲಿಸಿದರು. ಇದು ರೋಹಿತ್ ಶರ್ಮಾ ಔಟ್ ಆಗುವ ಸಾಮಾನ್ಯ ಮಾರ್ಗವಾಗಿದೆ ಮತ್ತು ನಾವು ಇದನ್ನು ಆಗಾಗ್ಗೆ ನೋಡುತ್ತೇವೆ. ವಿರಾಟ್ ಕೊಹ್ಲಿ ಔಟ್ ಆದ ರೀತಿಯನ್ನು ನೋಡಿದರೆ, ಅವರು ಲೈನ್ ಅನ್ನು ಮಿಸ್ ಮಾಡಿಕೊಂಡಿದ್ದರು. ಇನಿಂಗ್ಸ್ ಬ್ರೇಕ್ ಸಮಯದಲ್ಲಿ ಅಭಿಷೇಕ್ ನಾಯರ್ ಇದು ಉತ್ತಮ ಚೆಂಡು ಎಂದು ಹೇಳುವುದನ್ನು ನಾನು ಕೇಳಿದೆ. ಅದು ನಿಜ, ಆದರೆ ವಿರಾಟ್ ನಿಜವಾಗಿಯೂ ಚೆಂಡಿನ ಲೈನ್ ಅನ್ನು ತಪ್ಪಿಸಿಕೊಂಡು ಆಡಿದ್ದರು," ಎಂದು ಹೇಳಿದ್ದಾರೆ.
"ಇನ್ನು ಮೊದಲನೇ ಏಕದಿನ ಪಂದ್ಯದಲ್ಲಿ ಅವರು ಮಿಚೆಲ್ ಸ್ಟಾರ್ಕ್ ಎಸೆತವನ್ನು ಚೇಸ್ ಮಾಡುವ ಮೂಲಕ ವಿಕೆಟ್ ಒಪ್ಪಿಸಿದ್ದರು. ಅವರ ದೇಹ ಸ್ವಲ್ಪ ದೂರವಿತ್ತು ಹಾಗೂ ದೇಹದ ತೂಕ ಕೂಡ ಚೆಂಡಿನ ಮೇಲೆ ಬಿದ್ದಿರಲಿಲ್ಲ. ದಕ್ಷಿಣ ಆಫ್ರಿಕಾ ವಿರುದ್ಧ ಕಗಿಸೊ ರಬಾಡ ಹಾಗೂ ಆಸ್ಟ್ರೇಲಿಯಾದಲ್ಲಿ ಪ್ಯಾಟ್ ಕಮಿನ್ಸ್‌ಗೆ ರೋಹಿತ್ ಶರ್ಮಾ ಈ ರೀತಿ ಔಟ್ ಆಗುತ್ತಾರೆ. ಅಂದ ಹಾಗೆ ವಿರಾಟ್ ಕೊಹ್ಲಿ ಈ ರೀತಿ ಔಟ್ ಆಗಿರುವುದು ತುಂಬಾ ಕಮ್ಮಿ," ಎಂದು ತಿಳಿಸಿದ್ದಾರೆ.
IND vs AUS: ತಮ್ಮ ಬ್ಯಾಟಿಂಗ್ ಸ್ಟ್ಯಾನ್ಸ್ ಬದಲಿಸಿಕೊಳ್ಳಲು ಕಾರಣ ತಿಳಿಸಿದ ಶ್ರೇಯಸ್ ಅಯ್ಯರ್!
ವಿರಾಟ್ ಕೊಹ್ಲಿ ಫಾರ್ಮ್‌ಗೆ ಮರಳಲಿದ್ದಾರೆ: ಅಶ್ವಿನ್
"ಅವರು ಮತ್ತೆ ಬಂದು ಸಿಡ್ನಿಯಲ್ಲಿ ಸ್ಕೋರ್ ಗಳಿಸುತ್ತಾರೆ ಎಂದು ನಾನು ನಿಜವಾಗಿಯೂ ಭಾವಿಸುತ್ತೇನೆ. ಇಂದು (ಗುರುವಾರ) ರೋಹಿತ್ ಹೇಗೆ ಆಡಿದರು? ವಿರಾಟ್ ಕೊಹ್ಲಿ ಕೂಡ ಸಿಡ್ನಿಯಲ್ಲಿ ಇದೇ ಆಟದ ಅಗತ್ಯವಿದೆ ಏಕೆಂದರೆ, ಭಾರತದಲ್ಲಿ ನಾವು ಏಕೆ ಸೋತಿದ್ದೇವೆ ಎಂದು ಚರ್ಚಿಸುವುದಿಲ್ಲ; ಹೆಚ್ಚಾಗಿ, ನಾವು ಯಾರಿಂದ ಸೋತಿದ್ದೇವೆ ಎಂದು ಚರ್ಚಿಸುತ್ತೇವೆ. ಜನರು ಬೆರಳು ತೋರಿಸಲು ಪ್ರಾರಂಭಿಸುವುದಕ್ಕೂ ಮುನ್ನ ವಿರಾಟ್ ರನ್ ಗಳಿಸುತ್ತಾರೆ ಎಂದು ನಾನು ಭಾವಿಸುತ್ತೇನೆ," ಎಂದು ಆರ್ ಅಶ್ವಿನ್ ತಮ್ಮ ಯೂಟ್ಯೂಬ್ ಶೋನಲ್ಲಿ ಹೇಳಿದ್ದಾರೆ.