ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಯಾರಿಂದಲೂ ಸಾಧ್ಯವಾಗದೇ ಇರುವುದನ್ನು ಡೆವಾಲ್ಡ್‌ ಬ್ರೆವಿಸ್‌ ಮಾಡಬಲ್ಲರು: ಅಲಾನ್‌ ಡೊನಾಲ್ಡ್‌!

ದಕ್ಷಿಣ ಆಫ್ರಿಕಾ ತಂಡದ ಯುವ ಬ್ಯಾಟ್ಸ್‌ಮನ್‌ ಡೆವಾಲ್ಡ್‌ ಬ್ರೆವಿಸ್‌ ಅವರನ್ನು ಹರಿಣ ಪಡೆಯ ಮಾಜಿ ವೇಗಿ ಅಲಾನ್‌ ಡೊನಾಲ್ಡ್‌ ಶ್ಲಾಘಿಸಿದ್ದಾರೆ. ಬೇಬಿ ಎಬಿಡಿ ಅವರು ತಮ್ಮದೇ ಬ್ಯಾಟಿಂಗ್‌ ಶೈಲಿಯಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತನ್ನದೇ ಆದ ಹೆಸರನ್ನು ಮಾಡಿದ್ದಾರೆ. ಎಬಿಡಿಯ ಪ್ರತಿಬಿಂಬ ಡೆವಾಲ್ಡ್‌ ಬ್ರೆವಿಸ್‌ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಡೆವಾಲ್ಡ್‌ ಬ್ರೆವಿಸ್‌ ಬಗ್ಗೆ ದೊಡ್ಡ ಭವಿಷ್ಯ ನುಡಿದ ಅಲಾನ್‌ ಡೊನಾಲ್ಡ್‌.

ನವದೆಹಲಿ: ಕಳೆದ ತಿಂಗಳು ಆಸ್ಟ್ರೇಲಿಯಾ ವಿರುದ್ಧ ಕೇವಲ 56 ಎಸೆತಗಳಲ್ಲಿ 125 ರನ್‌ಗಳನ್ನು ಸಿಡಿಸಿದ್ದ ದಕ್ಷಿಣ ಆಫ್ರಿಕಾ ತಂಡದ ಯುವ ಬ್ಯಾಟ್ಸ್‌ಮನ್‌ ಡೆವಾಲ್ಡ್‌ ಬ್ರೆವಿಸ್‌ (Dewald Brevis) ಅವರನ್ನು ಮಾಜಿ ವೇಗದ ಬೌಲರ್‌ ಅಲಾನ್‌ ಡೊನಾಲ್ಡ್‌ (Allan Donald) ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಡೆವಾಲ್ಡ್‌ ಬ್ರೆವಿಸ್‌ ಅವರು ತಮ್ಮದೇ ಶೈಲಿಯ ಬ್ಯಾಟಿಂಗ್‌ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾರೆ. ಡೆವಾಲ್ಡ್‌ ಬ್ರೆವಿಸ್‌ ಅವರು ದಿಗ್ಗಜ ಎಬಿ ಡಿ ವಿಲಿಯರ್ಸ್‌ (Ab De Villiers) ಅವರ ಪ್ರತಿಬಿಂಬ ಎಂದು ಡೊನಾಲ್ಡ್‌ ಹೇಳಿದ್ದಾರೆ. ತಮ್ಮ ಸ್ಪೋಟಕ ಬ್ಯಾಟಿಂಗ್‌ ಮೂಲಕ ಡೆವಾಲ್ಡ್‌ ಬ್ರೆವಿಸ್‌ ಅವರು ಬೇಬಿ ಎಬಿಡಿ ಎಂದೇ ಖ್ಯಾತಿಯನ್ನು ಗಳಿಸಿದ್ದಾರೆ.

ಡೆವಾಲ್ಡ್‌ ಬ್ರೆವಿಸ್‌ ಭಯ ಮುಕ್ತವಾಗಿ ಬ್ಯಾಟ್‌ ಬೀಸಬಲ್ಲ ಸಾಮರ್ಥ್ಯವನ್ನು ಹೊಂದಿದ್ದು, ಏಕಾಂಗಿಯಾಗಿ ತಂಡವನ್ನು ಗೆಲ್ಲಿಸಬಲ್ಲ ಪ್ರತಿಭೆಯನ್ನು ಹೊಂದಿದ್ದಾರೆ. ಪ್ರಸ್ತುತ ದಕ್ಷಿಣ ಆಫ್ರಿಕಾ ತಂಡದಲ್ಲಿ ಬೆಳೆಯುತ್ತಿರುವ ಪ್ರತಿಭಾವಂತ ಆಟಗಾರರಲ್ಲಿ ಡೆವಾಲ್ಡ್‌ ಬ್ರೆವಿಸ್‌ ಕೂಡ ಒಬ್ಬರಾಗಿದ್ದಾರೆ.

"ಡೆವಾಲ್ಡ್‌ ಬ್ರೆವಿಸ್‌ ಅವರು ಎಬಿ ಡಿ ವಿಲಿಯರ್ಸ್‌ ಅವರಿಗೆ ತುಂಬಾ ಸನಿಹದಲ್ಲಿದ್ದಾರೆ. ಯುವ ಬ್ಯಾಟ್ಸ್‌ಮನ್‌ಗಳಿಗೆ ಎಬಿಡಿ ಕೋಚಿಂಗ್‌ ಕೊಟ್ಟಿದ್ದಾರೆ. ಹಾಗಾಗಿ ಎಬಿಡಿ ಹಾಗೂ ಬ್ರೆವಿಸ್‌ ತುಂಬಾ ಸನಿಹದಲ್ಲಿದ್ದಾರೆ. ಆದರೆ, ಕೆಲ ಮಾಜಿ ಆಟಗಾರರು, ಡೆವಾಲ್ಡ್‌ ಬ್ರೆವಿಸ್‌ ಅವರನ್ನು ಎಬಿ ಡಿ ವಿಲಿಯರ್ಸ್‌ಗೆ ಹೋಲಿಕೆ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ. ಹೌದು ನಿಜ. ಏಕೆಂದರೆ ಎಬಿಡಿ ಸಾಧಿಸಿರುವುದನ್ನು ಬೇರೆ ಯಾರೂ ಮಾಡಲು ಆಗುವುದಿಲ್ಲ. ಆದರೆ, ಈ ಹುಡುಗ ತಂಡವನ್ನು ಏಕಾಂಗಿಯಾಗಿ ಗೆಲ್ಲಿಸಬಲ್ಲ ಸಾಮರ್ಥ್ಯವನ್ನು ಹೊಂದಿದ್ದಾರೆ," ಎಂದು ಅಲಾನ್‌ ಡೊನಾಲ್ಡ್‌ ತಿಳಿಸಿದ್ದಾರೆ.

SA20 Auction: 16.5 ಮಿಲಿಯನ್‌ ದಾಖಲೆ ಮೊತ್ತ ಜೇಬಿಗಿಳಿಸಿಕೊಂಡ ಡೆವಾಲ್ಡ್‌ ಬ್ರೆವಿಸ್‌!

"ಅವರು ಈಗಾಗಲೇ ತಮ್ಮ ಸಾಮರ್ಥ್ಯವನ್ನು ದೇಶಿ ಕ್ರಿಕೆಟ್‌ನಲ್ಲಿ ಸಾಬೀತುಪಡಿಸಿದ್ದಾರೆ. ಇದೀಗ ಆಸ್ಟ್ರೇಲಿಯಾ ದಂತಹ ವಿಶ್ವದ ಅಗ್ರ ತಂಡದ ವಿರುದ್ದದ ಪಂದ್ಯದಲ್ಲಿಯೂ ದೊಡ್ಡ ಇನಿಂಗ್ಸ್‌ ಅನ್ನು ಆಡಿದ್ದಾರೆ. ಅವರ ಪ್ರತಿಭೆ ನಿಜಕ್ಕೂ ಅಸಾಧಾರಣವಾಗಿದೆ," ಎಂದು ಇಂಡಿಯಾ ಟುಡೇ ಜೊತೆಗಿನ ಸಂಭಾಷಣೆಯಲ್ಲಿ ಮಾಜಿ ವೇಗಿ ಹೇಳಿದ್ದಾರೆ.

ಡೆವಾಲ್ಡ್‌ ಬ್ರೆವಿಸ್‌ ಭವಿಷ್ಯದ ಸೂಪರ್‌ ಸ್ಟಾರ್‌

ಈ ತಿಂಗಳ ಆರಂಭದಲ್ಲಿ ನಡೆದಿದ್ದ ದಕ್ಷಿಣ ಆಫ್ರಿಕಾ20 ಟೂರ್ನಿಯ ಹರಾಜಿನಲ್ಲಿ ಡೆವಾಲ್ಡ್‌ ಬ್ರೆವಿಸ್‌ ಅವರು ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿದ್ದರು. ಪ್ರಿಟೋರಿಯಾ ಕ್ಯಾಪಿಟಲ್ಸ್‌ ತಂಡ 16.5 ಮಿಲಿಯನ್‌ ನೀಡುವ ಮೂಲಕ ಯುವ ಬ್ಯಾಟ್ಸ್‌ಮನ್‌ ಅನ್ನು ಖರೀದಿಸಿತ್ತು. ಆ ಮೂಲಕ ಬ್ರೆವಿಸ್‌, ಏಡೆನ್‌ ಮಾರ್ಕ್ರಮ್‌ ಅವರನ್ನು ಹಿಂದಿಕ್ಕಿದ್ದರು. ಮಾರ್ಕ್ರಮ್‌ ಕಳೆದ ಆವೃತ್ತಿಯ ಹರಾಜಿನಲ್ಲಿ 14 ಮಿಲಿಯನ್‌ ಮೊತ್ತವನ್ನು ಪಡೆದಿದ್ದರು.

IPL 2025: ಎಂಎಸ್‌ ಧೋನಿಯ ನಿಜ ಸ್ವರೂಪವನ್ನು ರಿವೀಲ್‌ ಮಾಡಿದ ಡೆವಾಲ್ಡ್‌ ಬ್ರೆವಿಸ್‌!

"ಖಂಡಿತ, ಒಬ್ಬರೇ ಎಬಿ ಇರುತ್ತಾರೆ. ಆದರೆ ಬ್ರೆವಿಸ್ ತನ್ನ ನಡವಳಿಕೆಯನ್ನು ಎಷ್ಟು ಹತ್ತಿರದಿಂದ ಪ್ರತಿಬಿಂಬಿಸುತ್ತಾನೆಂದರೆ ಅದು ಕ್ಲೋನ್ ನೋಡುವಂತೆ ಭಾಸವಾಗುತ್ತದೆ. ನಿಮ್ಮನ್ನು ಪ್ರೇರೇಪಿಸಲು ಎಬಿಯಂತಹ ನಾಯಕ ಏಕೆ ಇರಬಾರದು? ಹೆಚ್ಚಿನ ಬ್ಯಾಟ್ಸ್‌ಮನ್‌ಗಳು ಮಾಡಲಾಗದ ಕೆಲಸಗಳನ್ನು ಬ್ರೆವಿಸ್ ಮಾಡಬಹುದು. ಅವರು ಆ ರೀತಿಯ ಆಟಗಾರ," ಎಂದು ಡೊನಾಲ್ಡ್ ಹೇಳಿದ್ದಾರೆ.

"ವರ್ಷಗಳು ಕಳೆದಂತೆ, ಅವರು ಎಲ್ಲಾ ಸ್ವರೂಪಗಳಲ್ಲಿ ಹೇಗೆ ಅಭಿವೃದ್ಧಿ ಹೊಂದುತ್ತಾರೆ ಎಂಬುದನ್ನು ನಾವು ನೋಡುತ್ತೇವೆ. ಅವರು ಟೆಸ್ಟ್ ಕ್ರಿಕೆಟ್ ಆಡಲು ಉತ್ಸುಕರಾಗಿದ್ದಾರೆ, ಆದರೆ ಚುಟುಕು ಸ್ವರೂಪಗಳಲ್ಲಿ, ವಿಶೇಷವಾಗಿ ವೈಟ್‌ಬಾಲ್‌ ಕ್ರಿಕೆಟ್‌ನಲ್ಲಿ, ಅವರು ಸಂಪೂರ್ಣ ಸೂಪರ್‌ಸ್ಟಾರ್ ಆಗುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಅದರ ಬಗ್ಗೆ ಯಾವುದೇ ಸಂದೇಹವಿಲ್ಲ," ಮಾಜಿ ವೇಗಿ ಭವಿಷ್ಯ ನುಡಿದಿದ್ದಾರೆ.