ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Duleep Trophy 2025: 184 ರನ್‌ ಬಾರಿಸಿ ಬಿಸಿಸಿಐಗೆ ಋತುರಾಜ್‌ ಗಾಯಕ್ವಾಡ್‌ ಸಂದೇಶ!

2025ರ ದುಲೀಪ್‌ ಟ್ರೋಫಿ ಟೂರ್ನಿಯ ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ಪಶ್ಚಿಮ ವಲಯ ಮತ್ತು ಕೇಂದ್ರ ವಲಯ ತಂಡಗಳು ಕಾದಾಟ ನೆಡೆಸುತ್ತಿವೆ. ಪಂದ್ಯದ ಮೊದಲ ದಿನದಲ್ಲಿ ಋತುರಾಜ್ ಗಾಯಕ್ವಾಡ್ ಅದ್ಭುತವಾದ ಇನಿಂಗ್ಸ್‌ ಆಡಿ 184 ರನ್‌ಗಳನ್ನು ಕಲೆ ಹಾಕಿದ್ದಾರೆ. ಆ ಮೂಲಕ ರೆಡ್‌ ಬಾಲ್‌ ಕ್ರಿಕೆಟ್‌ನಲ್ಲಿ ತಮ್ಮ ಸಾಮಾರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

ಋತುರಾಜ್‌ ಗಾಯಕ್ವಾಡ್‌ ದುಲೀಪ್‌ ಟ್ರೋಫಿ ಸೆಮಿಫೈನಲ್‌ನಲ್ಲಿ ಶತಕವನ್ನು ಬಾರಿಸಿದ್ದಾರೆ.

ಮುಂಬೈ: ಪ್ರಸ್ತುತ ನಡೆಯುತ್ತಿರುವ ದುಲೀಪ್‌ ಟ್ರೋಫಿ (Duleep Trophy 2025) ಟೂರ್ನಿಯ ಎರಡನೇ ಸೆಮಿಫೈನಲ್‌ ಪಂದ್ಯ ಗುರುವಾರದಂದು ಆರಂಭವಾಗಿದೆ. ಈ ಪಂದ್ಯದಲ್ಲಿ ಪಶ್ಚಿಮ ವಲಯ ಹಾಗೂ ಕೇಂದ್ರ ವಲಯ ತಂಡಗಳು ಸೆಣೆಸಾಟ ನಡೆಸುತ್ತಿವೆ. ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾದ ಪಶ್ಚಿಮ ವಲಯದ (West Zone) ಪರ ಋತುರಾಜ್‌ ಗಾಯಕ್ವಾಡ್‌ (Ruturaj Gaikwad) ಅದ್ಭುತ ಇನಿಂಗ್ಸ್‌ ಆಡಿ ತಮ್ಮ ರೆಡ್‌ ಬಾಲ್‌ ಕ್ರಿಕೆಟ್‌ನ ಸಾಮಾರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ತಂಡದ ಅಗ್ರ ಕ್ರಮಾಂಕದ ಪ್ರಮುಖ ಬ್ಯಾಟರ್‌ಗಳು ವಿಕೆಟ್‌ ಒಪ್ಪಿಸಿ ಪೆವಿಲಿಯನ್‌ ಕಡೆ ನಡೆದಾಗ ತಂಡ ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಬ್ಯಾಟ್‌ ಹಿಡಿದು ಮೈದಾನಕ್ಕೆ ಬಂದ ಗಾಯಕ್ವಾಡ್‌, ಏಕಾಂಗಿಯಾಗಿ ನಿಂತು 184 ರನ್‌ಗಳ ಅಮೋಘ ಇನಿಂಗ್ಸ್‌ ಆಡಿ ತಂಡಕ್ಕೆ ನೆರವಾದರು.

ಪಶ್ಚಿಮ ವಲಯ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್‌ ಮತ್ತು ಹಾರ್ವಿಕ್‌ ದೇಸಾಯಿಯವರು ಕೇಂದ್ರ ವಲಯದ ಖಲೀಲ್‌ ಅಹಮ್ಮದ್‌ ಮತ್ತು ದೀಪಕ್‌ ಚಹರ್‌ ಅವರ ಮಾರಕ ಬೌಲಿಂಗ್‌ ದಾಳಿಗೆ ಬಲಿಯಾದರು. ಈ ವೈಫಲ್ಯದ ಕಾರಣ ನಾಲ್ಕು ಓವರ್‌ಗೆ ಕೇವಲ ಹತ್ತು ರನ್‌ ಕಲೆಹಾಕಿ 2 ವಿಕೆಟ್‌ ಪತನಗೊಂಡಾಗ ಋತುರಾಜ್‌ ನಾಲ್ಕನೇ ಕ್ರಮಾಂಕದಲ್ಲಿ ಬಹುಬೇಗನೆ ಮೈದಾನಕ್ಕಿಳಿಯುವ ಅನಿವಾರ್ಯತೆ ಎದುರಾಯಿತು. ನಿಧಾನಗತಿಯಲ್ಲಿ ಇನಿಂಗ್ಸ್‌ ಆರಂಭಿಸಿದ ಗಾಯಕ್ವಾಡ್‌ 13 ಬೌಂಡರಿಗಳ ಸಹಾಯದಿಂದ 70 ಕ್ಕಿಂತ ಅಧಿಕ ಸ್ಟ್ರೈಕ್‌ ರೇಟ್‌ನಲ್ಲಿ ಶತಕ ಸಿಡಿಸಿದರು. ಈ ಸಮಯದಲ್ಲಿ ಶ್ರೇಯಸ್‌ ಅಯ್ಯರ್‌ ಕೂಡ ಗಾಯಕ್ವಾಡ್‌ ಜೊತೆ ಅಲ್ಪ ಜೊತೆಯಾಟವನ್ನು ಆಡಿದರು.

2025ರ ದುಲೀಪ್‌ ಟ್ರೋಫಿ ಟೂರ್ನಿಯಿಂದ ತಿಲಕ್‌ ವರ್ಮಾ ಔಟ್‌! ಇದಕ್ಕೆ ಕಾರಣ ಇಲ್ಲಿದೆ..

ತಂಡದ ಪರ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಗಾಯಕ್ವಾಡ್‌ ಮೊದಲು 13 ಬೌಂಡರಿಗಳ ಸಹಾಯದಿಂದ ಶತಕ ಪೂರೈಸಿದರು. ಶತಕ ಸಿಡಿಸಿದ ನಂತರ ತಮ್ಮ ಆಟದ ವೇಗವನ್ನು ಹೆಚ್ಚಿಸಿದ ಗಾಯಕ್ವಾಡ್‌, ಕೇಂದ್ರ ವಲಯದ ಬೌಲರ್‌ಗಳ ವಿರುದ್ದ ಬಿರುಸಾಗಿ ಬ್ಯಾಟ್‌ ಬೀಸಲು ಮುಂದಾದರು. ಇನ್ನು ಕೆಳಕ್ರಮಾಂಕದಲ್ಲಿ ತನುಶ್‌ ಕೋಟ್ಯಾನ್‌ ಕೂಡ ಗಾಯಕ್ವಾಡ್‌ ಜತೆ ಉತ್ತಮ ಜೊತೆಯಾಟ ನೀಡಿದರು. ಆದ ಕಾರಣ 150 ರನ್‌ಗಳನ್ನು ಪೂರೈಸಿ ದ್ವಿಶತಕದತ್ತ ಸಾಗುತ್ತಿದ್ದ ಗಾಯಕ್ವಾಡ್ 206 ಎಸೆತಗಳಲ್ಲಿ 24 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 184 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಈ ಹೊತ್ತಿಗೆ ತಂಡ 327 ರನ್‌ ಕಲೆಹಾಕಿ ಚೇತರಿಕೆ ಕಂಡಿತ್ತು.

ಇನ್ನು ಮೊದಲ ದಿನದಾಟದಂತ್ಯಕ್ಕೆ ತನುಶ್ ಅಜೇಯ 65 ರನ್ ಬಾರಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದರೆ, ನಾಯಕ ಶಾರ್ದುಲ್ ಠಾಕೂರ್ 24 ರನ್ ಬಾರಿಸಿ ಅಜೇಯರಾಗಿ ಉಳಿದಿದ್ದಾರೆ. ಈ ಮೂಲಕ ಪಶ್ಚಿಮ ವಲಯ ತಂಡ 6 ವಿಕೆಟ್ ಕಳೆದುಕೊಂಡು 363 ರನ್ ಕಲೆಹಾಕಿ ಸುಭದ್ರ ಸ್ಥಿತಿಯಲ್ಲಿದೆ.



ಗಾಯಕ್ವಾಡ್‌ ಭಾರತ ತಂಡಕ್ಕೆ ಯಾವಾಗ?

ಗಾಯಕ್ವಾಡ್‌ ಅವರ ಈ ಇನಿಂಗ್ಸ್‌ ಭಾರತ ತಂಡಕ್ಕೆ ಪುನಃ ಮರಳುವಿಕೆಯಲ್ಲಿ ಮಹತ್ವದ್ದಾಗಿದೆ. ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಪರ ನಿರೀಕ್ಷಿತ ಪ್ರದರ್ಶನ ತೋರಿದ ಹೊರತಾಗಿಯೂ, ಭಾರತ ತಂಡದಲ್ಲಿ ಅವರಿಗೆ ಅಷ್ಟಾಗಿ ಅವಕಾಶಗಳು ದೊರಕಿರಲಿಲ್ಲ. ಅವರು ಕೊನೆಯ ಬಾರಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 2024 ರಲ್ಲಿ ಹರಾರೆ ಮೈದಾನದಲ್ಲಿ ಜಿಂಬಾಂಬ್ವೆ ವಿರುದ್ಧದ ಪಂದ್ಯದಲ್ಲಿ ಕಾಣಿಸಿಕೊಂಡಿದ್ದರು. ಇದಾದ ಬಳಿಕ ವೈಟ್‌ ಬಾಲ್‌ ಕ್ರಿಕೆಟ್‌ಗೆ ಹೆಚ್ಚು ಹೆಸರು ವಾಸಿಯಾದ ಗಾಯಕ್ವಾಡ್‌ ಅವರನ್ನು ರೆಡ್‌ ಬಾಲ್‌ ಕ್ರಿಕೆಟ್‌ಗೆ ಕಡೆಗಣಿಸಲಾಗುತ್ತಿದೆ.

ಇದರ ನಡುವೆ ದೇಶಿ ರೆಡ್‌ ಬಾಲ್‌ ಕ್ರಿಕೆಟ್‌ ಟೂರ್ನಿಗಳಲ್ಲಿ ಗಾಯಕ್ವಾಡ್‌ ಸ್ಥಿರ ಪ್ರದರ್ಶನ ತೋರುತ್ತಿದ್ದಾರೆ. ಅವರ ಈ ಇನಿಂಗ್ಸ್‌ ಆಯ್ಕೆ ಸಮಿತಿಗೆ ನೀಡಿದ ಸಂದೇಶ ಎನ್ನಬಹುದು. ಹಾಗಾಗಿ 28ರ ವರ್ಷದ ಗಾಯಕ್ವಾಡ್‌ ತಂಡದಲ್ಲಿ ಸ್ಥಾನ ಪಡೆದು ಆಡಲು ಇನ್ನು ಸಮಯವಿದೆ. ಆಯ್ಕೆ ಸಮಿತಿ ಅವರಿಗೆ ಮುಂಬರುವ ದಿನಳಲ್ಲಿ ಮಣೆ ಹಾಕುವ ನಿರೀಕ್ಷೆ ಇದೆ.