ʻಪಾಕಿಸ್ತಾನ ತಂಡದ ಆಟಗಾರರಿಗೆ ಕಳಪೆ ಕಿಟ್ʼ: ಪಿಸಿಬಿ ವಿರುದ್ಧ ಭ್ರಷ್ಟಚಾರದ ಆರೋಪ!
ಪ್ರಸ್ತುತ ನಡೆಯುತ್ತಿರುವ ಏಷ್ಯಾ ಕಪ್ ಟೂರ್ನಿಯಲ್ಲಿ ಹ್ಯಾಂಡ್ ಶೇಕ್ ವಿವಾದಿಂದ ಭಾರಿ ಮುಜುಗರ ಅನುಭವಿಸಿರುವ ಪಾಕಿಸ್ತಾನ ಕ್ರಿಕೆಟ್ ತಂಡದ ವಿರುದ್ಧ ಇದೀಗ ಭ್ರಷ್ಟಚಾರದ ಆರೋಪ ಕೇಳಿ ಬಂದಿದೆ. ಪಾಕ್ ಮಾಜಿ ಆಟಗಾರ ಅತಿಕ್ ಉಝ್ ಝಮಾನ್ ಅವರು ಪಾಕಿಸ್ತಾನ ಕ್ರಿಕೆಟ್ ಮಂಡಳಿ ವಿರುದ್ಧ ಭ್ರಷ್ಟಚಾರದ ಆರೋಪ ಮಾಡಿದ್ದಾರೆ.

ಪಾಕಿಸ್ತಾನ ಕ್ರಿಕೆಟ್ ಮಂಡಳಿ ವಿರುದ್ಧ ಭ್ರಷ್ಟಚಾರದ ಆರೋಪ. -

ನವದೆಹಲಿ: ಪ್ರಸ್ತುತ ನಡೆಯುತ್ತಿರುವ ಏಷ್ಯಾ ಕಪ್ (Asia Cup 2025) ಟೂರ್ನಿಯಲ್ಲಿ ಹ್ಯಾಂಡ್‌ಶೇಕ್ ವಿವಾದದಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರಿ ಮುಜುಗರ ಅನುಭವಿಸಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ (PCB) ಇದೀಗ ಮತ್ತೊಂದು ಹಿನ್ನಡೆಯಾಗಿದೆ. ಪಾಕಿಸ್ತಾನ ತಂಡದ ಆಟಗಾರರಿಗೆ ನೀಡಿರುವ ಕ್ರಿಕೆಟ್ ಕಿಟ್ ಕಳಪೆಯಿಂದ ಕೂಡಿದೆ ಎಂದು ಮಾಜಿ ಕ್ರಿಕೆಟಿಗ ಅತಿಕ್ ಉಝ್ ಝಮಾನ್ (Atiq-uz-Zaman) ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ ಪಾಕಿಸ್ತಾನ ತಂಡದ ಕಿಟ್ ಟೆಂಡರ್ ಅನ್ನು ಸ್ನೇಹಿತರೊಬ್ಬರಿಗೆ ನೀಡಲಾಗಿದೆ ಎಂದು ಕೂಡ ಅವರು ಟೀಕಿಸಿದ್ದಾರೆ. ಪಾಕ್ ಆಟಗಾರರು ಧರಿಸಿರುವ ಜೆರ್ಸಿ ಉತ್ತಮ ಗುಣಮಟ್ಟವನ್ನು ಹೊಂದಿಲ್ಲ ಎಂದು ದೂರಿದ್ದಾರೆ.
ಬುಧವಾರ ಯುಎಇ ವಿರುದ್ದದ ಪಂದ್ಯದ ಗೆಲುವಿನ ಬಳಿಕ ಪಾಕಿಸ್ತಾನ ತಂಡ ಏಷ್ಯಾ ಕಪ್ ಟೂರ್ನಿಯ ಸೂಪರ್ 4 ರ ಹಂತಕ್ಕೆ ಅರ್ಹತೆ ಪಡೆದಿದೆ. ಅಂದ ಹಾಗೆ ಯುಎಇ ವಿರುದ್ಧದ ಪಂದ್ಯದ ವೇಳೆ ಪಾಕಿಸ್ತಾನ ತಂಡದ ಆಟಗಾರರು ಬೆವರುತ್ತಿದ್ದರು ಹಾಗೂ ಜೆರ್ಸಿ ಒದ್ದೆಯಾಗುತ್ತಿತ್ತು ಮತ್ತು ಬೇಗ ಒಣಗುತ್ತಿರಲಿಲ್ಲ. ಆದರೆ, ಎದುರಾಳಿ ಆಟಗಾರರ ಜೆರ್ಸಿ ಬೆವರು ಬಹುಬೇಗ ಒಣಗುತ್ತಿತ್ತು. ಪಾಕಿಸ್ತಾನ ತಂಡದ ಕಿಟ್ ತಯಾರು ಮಾಡುವ ಟೆಂಡರ್ ಅನ್ನು ವೃತ್ತಿಪರ ಸಂಸ್ಥೆಗೆ ನೀಡದೆ, ಸ್ನೇಹಿತರೊಬ್ಬರಿಗೆ ನೀಡಲಾಗಿದೆ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಅತಿಕ್ ಉಝ್ ಝಮಾನ್ ಆರೋಪ ಮಾಡಿದ್ದಾರೆ.
Asia Cup 2025: ಪಾಕಿಸ್ತಾನದ ಬಳಿ ಕ್ಷಮೆಯಾಚಿಸಿದ ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್!
"ಕಳಪೆ ಗುಣಮಟ್ಟದ ಕಿಟ್‌ನಿಂದಾಗಿ ಪಾಕಿಸ್ತಾನ ಆಟಗಾರರು ಬೆವರುತ್ತಿದ್ದರು ಆದರೆ, ಎದುರಾಳಿ ತಂಡಗಳ ಆಟಗಾರರು ಉತ್ತಮ ಗುಣಮಟ್ಟದ ಜೆರ್ಸಿಗಳನ್ನು ಧರಿಸಿದ್ದರು ಹಾಗೂ ಇದು ಬಹುಬೇಗ ಒಣಗುತ್ತದೆ. ವೃತ್ತಿಪರ ಕಿಟ್ ತಯಾರು ಮಾಡುವವರಿಗೆ ಟೆಂಡರ್ ನೀಡದೆ, ಸ್ನೇಹಿತರಿಗೆ ಟೆಂಡರ್ ನೀಡದರೆ ಈ ರೀತಿಯ ಸಮಸ್ಯೆಗಳು ಎದುರಾಗುತ್ತವೆ. ಬೆವರಿಗಿಂತ ಭ್ರಷ್ಟಾಚಾರವೇ ಹೆಚ್ಚು ತೊಟ್ಟಿಕ್ಕುತ್ತಿದೆ," ಎಂದು ಝಮಾನ್ ಎಕ್ಸ್ ಖಾತೆಯಲ್ಲಿ ಗಂಭೀರ ಆರೋಪ ಮಾಡಿದ್ದಾರೆ.
ಝಮಾನ್ ಅವರ ಟ್ವೀಟ್‌ಗೆ ಅನೇಕ ಅಭಿಮಾನಿಗಳು ಕೂಡ ಪ್ರತಿಕ್ರಿಯೆ ನೀಡಿದ್ದಾರೆ ಹಾಗೂ ಅಭಿಮಾನಿಗಳು ಕೂಡ ಇದೇ ರೀತಿ ದೂರಿದ್ದಾರೆ. ರಾಷ್ಟ್ರೀಯ ತಂಡಕ್ಕೆ ಕಿಟ್ ಪ್ರಾಯೋಜಕರು ಯಾರೆಂದು ಪಿಸಿಬಿ ವೆಬ್‌ಸೈಟ್‌ನಲ್ಲಿ ಉಲ್ಲೇಖ ಮಾಡಿಲ್ಲ. ಆದರೆ, ಇನ್ನುಳಿದ ಪ್ರಾಯೋಜಕರಾದ ಪೆಪ್ಸಿ, ಟಿಸಿಎಲ್ ಹಾಗೂ ಪಾರ್ಕ್‌ವ್ಯೂವ್ ಸಿಟಿಯನ್ನು ಉಲ್ಲೇಖಿಸಲಾಗಿದೆ. ಭಾರತ ಕ್ರಿಕೆಟ್ ತಂಡಕ್ಕೆ ಜರ್ಮನ್ ದೈತ್ಯ ಸಂಸ್ಥೆಯಾದ ಅಡಿಡಾಸ್ ಪ್ರಾಯೋಜಕತ್ವವನ್ನು ಹೊಂದಿದೆ.
Pakistan players sweating through low-quality kits while others wear proper dry-fits. This is what happens when tenders go to friends, not professionals. Corruption dripping more than the sweat. #PAKvsUAE
— Atiq-uz-Zaman (@Atiq160Test) September 17, 2025
ಯುಎಇ ವಿರುದ್ದದ ಪಂದ್ಯಕ್ಕೂ ಮುನ್ನ ಪಾಕಿಸ್ತಾನ ತಂಡದಲ್ಲಿ ಸಾಕಷ್ಟು ಹೈಡ್ರಾಮಾ ನಡೆದಿತ್ತು. ಭಾರತ ವಿರುದ್ದದ ಪಂದ್ಯದಲ್ಲಿ ಟೀಮ್ ಇಂಡಿಯಾ ಆಟಗಾರರು ಹ್ಯಾಂಡ್‌ಶೇಕ್ ಮಾಡದ ಬಗ್ಗೆ ಪಾಕಿಸ್ತಾನ ಆಟಗಾರರು ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಇದು ವಿವಾದವಾಗಿತ್ತು. ಅಲ್ಲದೆ ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್ ಅವರು ಹಸ್ತಲಾಘವ ನೀಡಲು ನೆರವು ನೀಡಿರಲಿಲ್ಲ ಎಂದು ಪಿಸಿಬಿ ಆರೋಪ ಮಾಡಿತ್ತು. ಅಲ್ಲದೆ, ಯುಎಇ ಪಂದ್ಯಕ್ಕೆ ಆಂಡಿ ಪೈಕ್ರಾಫ್ಟ್ ಅವರನ್ನು ಕೈ ಬಿಡಬೇಕು ಎಂದು ಪಾಕ್ ಆಟಗಾರರು ಪಟ್ಟು ಹಿಡಿದಿದ್ದರು.
Asia Cup 2025: ಅಂಪೈರ್ ತಲೆಗೆ ಚೆಂಡೆಸೆದು ಗಾಯಗೊಳಿಸಿದ ಪಾಕ್ ಆಟಗಾರ; ವಿಡಿಯೊ ವೈರಲ್
ಈ ಹಿನ್ನೆಲೆಯಲ್ಲಿ ಬುಧವಾರ ನಡೆದಿದ್ದ ಪಂದ್ಯ ಒಂದು ಗಂಟೆ ತಡವಾಗಿ ನಡೆದಿತ್ತು. ಪಂದ್ಯಕ್ಕೂ ಮುನ್ನ ಆಂಡಿ ಪೈಕ್ರಾಫ್ಟ್ ಅವರು ಸಾರ್ವಜನಿಕವಾಗಿ ಪಾಕ್ ಆಟಗಾರರ ಎದುರು ಕ್ಷಮೆ ಕೇಳಿದ್ದರು. ನಂತರ ಪಾಕಿಸ್ತಾನ ತಂಡ ದುಬೈ ಇಂಟರ್‌ನ್ಯಾಷನಲ್ ಕ್ರೀಡಾಂಗಣಕ್ಕೆ ಬಂದಿತ್ತು. ಈ ಪಂದ್ಯದಲ್ಲಿ ಪಾಕಿಸ್ತಾನ ತಂಡ ಸುಲಭ ಗೆಲುವು ಪಡೆಯಿತು ಹಾಗೂ ಸೂಪರ್-4ರ ಹಂತಕ್ಕೆ ಪ್ರವೇಶ ಮಾಡಿತ್ತು. ಇದೀಗ ಪಾಕಿಸ್ತಾನ ತಂಡ, ಸಾಂಪ್ರದಾಯಿಕ ಎದುರಾಳಿ ಭಾರತದ ವಿರುದ್ಧ ಮತ್ತೊಂದು ಪಂದ್ಯವನ್ನು ಆಡಲಿದೆ.