ನವದೆಹಲಿ: ಭಾರತ ತಂಡದ ಮಾಜಿ ವೇಗಿ ಇಶಾಂತ್ ಶರ್ಮಾ (Ishanth Sharma) ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ತಮ್ಮ ವೃತ್ತಿ ಜೀವನದ ಬಗೆಗಿನ ಹಲವು ಪ್ರಮುಖ ಅಂಶಗಳನ್ನು ಬಹಿರಂಗಪಡಿಸಿದ್ದಾರೆ. ದೆಹಲಿ ಪರ ಇಶಾಂತ್ ರಣಜಿ ಟ್ರೋಫಿ ಆಡುವಾಗ ಗೌತಮ್ ಗಂಭೀರ್ (Gautam Gambhir) ಅತ್ಯಂತ ಬೆಂಬಲ ನೀಡಿದ್ದರು. ಈ ವೇಳೆ ಹಲವು ಹಿರಿಯ ಆಟಗಾರರು ನನಗೆ ತುಂಬಾ ಸಹಾಯ ಮಾಡಿದ್ದರು. ಇನ್ನು ವೀರೆಂದ್ರ ಸೆಹ್ವಾಗ್ (Virender Sehwag) ಕೂಡ ನನ್ನ ಕ್ರಿಕೆಟ್ ವೃತ್ತಿ ಬದುಕಿನ ವಿವಿಧ ಹಂತಗಳಲ್ಲಿ ಸಹಾಯ ಮಾಡಿದ್ದಾರೆ. ಭಾರತ ತಂಡದಲ್ಲಿ ವೀರೇಂದ್ರ ಸೆಹ್ವಾಗ್ ಕೂಡ ತಮಗೆ ನೆರವು ನೀಡಿದ್ದರು ಹಾಗೂ ಯುವ ಆಟಗಾರರಿಗೆ ಪ್ರೇರಣೆ ನೀಡಿದ್ದರು ಎಂಬ ಮಹತ್ವದ ಮಾಹಿತಿಯನ್ನು ಇಶಾಂತ್ ಶರ್ಮಾ ಹಂಚಿಕೊಂಡಿದ್ದಾರೆ.
ಈ ಬಗ್ಗೆ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಸುದೀರ್ಘವಾಗಿ ಮಾತನಾಡಿದ ಇಶಾಂತ್ ಶರ್ಮಾ, " ವಿವಿಧ ಹಂತಗಳಲ್ಲಿ ವಿಭಿನ್ನ ಆಟಗಾರರಿದ್ದರು. ನಾನು ರಣಜಿ ಟ್ರೋಫಿ ಆಡುವಾಗ ಗೌತಮ್ ಗಂಭೀರ್ ನನಗೆ ಹೆಚ್ಚು ಬೆಂಬಲ ನೀಡಿದ್ದರು. ನಂತರ ವೀರೇಂದ್ರ ಸೆಹ್ವಾಗ್. ನಾನು ಭಾರತಕ್ಕಾಗಿ ಆಡಿದಾಗ ಡ್ರೆಸ್ಸಿಂಗ್ ರೂಂನಲ್ಲಿ ಅನೇಕ ದೊಡ್ಡ ಹೆಸರುಗಳಿದ್ದವು, ಯಾರೊಂದಿಗೆ ಮಾತನಾಡಬೇಕೆಂದು ನನಗೆ ಗೊತ್ತಾಗುತ್ತಿರಲಿಲ್ಲ. ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ಪ್ರವಾಸಗಳಿಗೆ ಹೋದಾಗ ಅಲ್ಲಿ ಊಟ ಮಾಡುವಾಗ ಹಾಗೂ ಮಾತನಾಡಲು ಯಾರಾದರೂ ನಿಮ್ಮ ಜೊತೆ ಇರಬೇಕೆಂದು ಅನಿಸುತ್ತಿತ್ತು," ಎಂದು ತಿಳಿಸಿದ್ದಾರೆ.
ವಿದೇಶಿ ನೆಲದಲ್ಲಿ ಶುಭಮನ್ ಗಿಲ್ ಆಡಲ್ಲ ಅಂದಿದ್ರಿ, ಈಗ ಏನು ಹೇಳುತ್ತೀರಿ? ಯುವರಾಜ್ ಸಿಂಗ್ ಪ್ರಶ್ನೆ!
"ನಾನು ಸೆಹ್ವಾಗ್ ಅವರನ್ನು ಸಂಪರ್ಕಿಸಿದೆ ಮತ್ತು ಅವರು, ʻನೀವು ಯಾವುದರ ಬಗ್ಗೆ ಗಲಿಬಿಲಿಯಾಗಿದ್ದೀರಿ? ಹೋಗೋಣ' ಎಂದು ಹೇಳಿದ್ದರು. ಸೆಹ್ವಾಗ್ ತುಂಬಾ ವಿಶೇಷ ವ್ಯಕ್ತಿ ಏಕೆಂದರೆ ಅವರು ಯುವ ಆಟಗಾರರಿಗೆ ಸಾಕಷ್ಟು ಬೆಂಬಲ ನೀಡುತ್ತಾರೆ. ಅವರು ಒಬ್ಬ ಆಟಗಾರನಲ್ಲಿ ಪ್ರತಿಭೆಯನ್ನು ನೋಡಿದರೆ, ಆ ಆಟಗಾರ ಆಡಲು ಅವಕಾಶ ನೀಡುವುದರ ಕುರತು ಯೋಚಿಸುತ್ತಾರೆ. ಜಹೀರ್ ಖಾನ್ ಅವರಿಂದ ನಾನು ಭಾರತ ತಂಡದಲ್ಲಿ ಆರಾಮದಾಯಕ ಭಾವನೆ ಉಂಟಾಗಿತ್ತು ಮತ್ತು ಎಂಎಸ್ ಧೋನಿಯವರಿಂದ ಬಹಳಷ್ಟು ಕಲಿತಿದ್ದೇನೆ," ಎಂದು ಮಾಜಿ ವೇಗಿ ಹೇಳಿದ್ದಾರೆ.
ಇಶಾಂತ್ ಶರ್ಮಾ ಮತ್ತು ಗೌತಮ್ ಗಂಭೀರ್ ಹಲವಾರು ಸ್ಮರಣೀಯ ಟೆಸ್ಟ್ ಪಂದ್ಯಗಳನ್ನು ಜೊತೆಯಾಗಿ ಗೆದುಕೊಟ್ಟಿದ್ದಾರೆ ಹಾಗೂ ವಿಶೇಷವಾಗಿ ವಿದೇಶಗಳಲ್ಲಿ. ಈ ಇಬ್ಬರೂ 2009ರಲ್ಲಿ ಹ್ಯಾಮಿಲ್ಟನ್‌ನಲ್ಲಿ ನ್ಯೂಜಿಲೆಂಡ್ ಅನ್ನು 10 ವಿಕೆಟ್‌ಗಳಿಂದ ಸೋಲಿಸಿದ ತಂಡದ ಭಾಗವಾಗಿದ್ದರು. 1968ರ ನಂತರ ಕಿವೀಸ್‌ನಲ್ಲಿ ಭಾರತಕ್ಕೆ ಸಿಕ್ಕಿದ್ದ ಮೊದಲ ಗೆಲುವು ಇದಾಗಿತ್ತು. 2010-11ರ ಸಾಲಿನಲ್ಲಿ ಮೊದಲ ಬಾರಿ ದಕ್ಷಿಣ ಆಫ್ರಿಕಾದ ನೆಲದಲ್ಲಿ ಟೆಸ್ಟ್ ಸರಣಿಯನ್ನು ಡ್ರಾ ಮಾಡಿಕೊಳ್ಳುವಲ್ಲಿ ಭಾರತಕ್ಕೆ ಈ ಜೋಡಿ ನೆರವು ನೀಡಿತ್ತು.
ʻಗಾಯವಾಗಿದೆ ಎಂದರೂ ಎಂಎಸ್ ಧೋನಿ ಬಿಟ್ಟಿರಲಿಲ್ಲʼ: ಅಚ್ಚರಿ ಹೇಳಿಕೆ ನೀಡಿದ ಇಶಾಂತ್ ಶರ್ಮಾ!
ರವಿಶಾಸ್ತ್ರಿ ಬಗ್ಗೆ ಇಶಾಂತ್ ಮಹತ್ವದ ಹೇಳಿಕೆ
"ಒಮ್ಮೆ ನನ್ನನ್ನು ಟೆಸ್ಟ್ ಪಂದ್ಯದಿಂದ ಅಮಾನತುಗೊಳಿಸಲಾಗಿತ್ತು. ಶ್ರೀಲಂಕಾದಲ್ಲಿ ನನಗೆ ನಿಷೇಧ ಹೇರಲಾದ ಟೆಸ್ಟ್ ಪಂದ್ಯದ ಸಮಯದಲ್ಲಿ ಅಲ್ಲಿನ ಪರಿಸ್ಥಿತಿ ಉದ್ವಿಗ್ನವಾಗಿತ್ತು. 2015 ರಲ್ಲಿ ರವಿಶಾಸ್ತ್ರಿ ನಮ್ಮ ತರಬೇತುದಾರರಾಗಿದ್ದರು. ಈ ವೇಳೆ ಎಲ್ಲವೂ ನಡೆಯಿತು, ಮತ್ತು ಮರುದಿನ ಬೆಳಿಗ್ಗೆ ನಾವು ಉಪಾಹಾರ ಸೇವಿಸುತ್ತಿರುವಾಗ, ಅವರು ನನ್ನ ಬಳಿಗೆ ಬಂದು, ಶರ್ಮ್ ನೀವು ಇನ್ನೂ ಕೋಪಗೊಂಡಿದ್ದೀರಾ?' ಎಂದು ಕೇಳಿದರು. ನಾನು, ಇಲ್ಲ ರವಿ ಭಾಯ್ ಎಂದೆ. ಅದಕ್ಕೆ ಅವರು, ನೀವು ಕೋಪಗೊಳ್ಳಬೇಕು ಎಂದರು. ಅವರ ತರಬೇತಿಯಲ್ಲಿ ನನಗೆ ಅನಿಸಿದ ಒಂದು ವಿಷಯವೆಂದರೆ ಆಟಗಾರನನ್ನು ಪ್ರೇರೇಪಿಸಿ ಅವರಿಂದ ಹೇಗೆ ಪ್ರದರ್ಶನ ಹೊರತೆಗೆಯಬೇಕೆಂದು ಅವರಿಗೆ ತಿಳಿದಿತ್ತು. ನಾನು ಕೋಪಗೊಂಡಾಗ ಅಥವಾ ಆತಂಕಗೊಂಡಿದ್ದಾಗ, ಅವರು ನನ್ನನ್ನು ಹುರಿದುಂಬಿಸುತ್ತಿದ್ದರು," ಎಂದು ಇಶಾಂತ್ ಶರ್ಮಾ ತಿಳಿಸಿದ್ದಾರೆ.
ಬರಹ: ಕೆಎನ್ ರಂಗು, ಚಿತ್ರದುರ್ಗ