ವಿದೇಶಿ ನೆಲದಲ್ಲಿ ಶುಭಮನ್ ಗಿಲ್ ಆಡಲ್ಲ ಅಂದಿದ್ರಿ, ಈಗ ಏನು ಹೇಳುತ್ತೀರಿ? ಯುವರಾಜ್ ಸಿಂಗ್ ಪ್ರಶ್ನೆ!
ಭಾರತ ಹಾಗೂ ಇಂಗ್ಲೆಂಡ್ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ್ದ ಟೀಮ್ ಇಂಡಿಯಾ ನಾಯಕ ಶುಭಮನ್ ಗಿಲ್ ಅವರನ್ನು ಮಾಜಿ ಆಲ್‌ರೌಂಡರ್ ಹಾಗೂ ದಿಗ್ಗಜ ಯುವರಾಜ್ ಸಿಂಗ್ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ.

ಶುಭಮನ್ ಗಿಲ್‌ಗೆ ಯುವರಾಜ್ ಸಿಂಗ್ ಮೆಚ್ಚುಗೆ.

ನವದೆಹಲಿ: ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ(IND vs ENG) ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ್ದ ಟೀಮ್ ಇಂಡಿಯಾ ನಾಯಕ ಶುಭಮನ್ ಗಿಲ್ (Shubman Gill) ಅವರನ್ನು ಭಾರತ ತಂಡದ ಮಾಜಿ ಆಲ್‌ರೌಂಡರ್ ಹಾಗೂ ದಿಗ್ಗಜ ಯುವರಾಜ್ ಸಿಂಗ್ (yuvraj Singh) ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಈ ಹಿಂದೆ ಶುಭಮನ್ ಗಿಲ್ ಅವರ ವಿದೇಶಿ ಟೆಸ್ಟ್ ಕ್ರಿಕೆಟ್ ಪ್ರದರ್ಶನದ ಬಗ್ಗೆ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ದರು. ಆದರೆ, ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ರನ್‌ಗಳನ್ನು ದಾಖಲಿಸುವ ಮೂಲಕ ಟೀಕೆಗಳಿಗೆ ತಿರುಗೇಟು ನೀಡಿದ್ದಾರೆ.
ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಇಬ್ಬರೂ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ ಶುಭಮನ್ ಗಿಲ್‌ಗೆ ಭಾರತ ತಂಡದ ನಾಯಕತ್ವವನ್ನು ನೀಡಲಾಗಿತ್ತು. ಅದರಂತೆ ಗಿಲ್ ತಮ್ಮ ನಾಯಕತ್ವದ ಮೊದಲ ಇಂಗ್ಲೆಂಡ್ ಪ್ರವಾಸದಲ್ಲಿ ನಾಯಕನಾಗಿ ಹಾಗೂ ಬ್ಯಾಟ್ಸ್‌ಮನ್ ಆಗಿ ಯಶಸ್ವಿಯಾಗಿದ್ದರು. ಅವರು 754 ರನ್‌ಗಳನ್ನು ಕಲೆ ಹಾಕುವ ಮೂಲಕ ಈ ಸರಣಿಯಲ್ಲಿ ಅತಿ ಹೆಚ್ಚು ರನ್‌ಗಳನ್ನು ಕಲೆ ಹಾಕಿದ್ದರು ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.
ಐಸಿಸಿ ಜೊತೆ ಇತ್ತೀಚೆಗೆ ಮಾತನಾಡಿದ್ದ ಯುವರಾಜ್ ಸಿಂಗ್, ಶುಭಮನ್ ಗಿಲ್ ಅವರು ಇಂಗ್ಲೆಂಡ್‌ನಲ್ಲಿ ಪರಿಸ್ಥಿತಿಗಳನ್ನು ಚೆನ್ನಾಗಿ ಹೊಂದಿಕೊಂಡಿದ್ದಾರೆ. ಅಲ್ಲದೆ ಬ್ಯಾಟ್ಸ್‌ಮನ್ ಆಗಿ ಹಾಗೂ ನಾಯಕನಾಗಿ ಅವರು ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ ಎಂದು ಗುಣಗಾನ ಮಾಡಿದ್ದಾರೆ.
IND vs ENG: ಅರ್ಷದೀಪ್ ಸಿಂಗ್ ಬದಲು ಅನ್ಶುಲ್ ಕಾಂಬೋಜ್‌ಗೆ ಸ್ಥಾನ ನೀಡಿದ್ದೇಕೆ? ಅರುಣ್ ಲಾಲ್ ಪ್ರಶ್ನೆ!
"ಶುಭಮನ್ ಗಿಲ್ ಅವರ ವಿದೇಶಿ ಅಂಕಿಅಂಶಗಳ ಬಗ್ಗೆ ಸಾಕಷ್ಟು ಪ್ರಶ್ನೆಗಳು ಎದ್ದಿದವು. ಆದರೆ, ಅವರೇ ಭಾರತ ತಂಡದ ನಾಯಕನಾಗಿ ನಾಲ್ಕು ಶತಕಗಳನ್ನು ಬಾರಿಸಿದ್ದಾರೆ. ನಿಮಗೆ ಜವಾಬ್ದಾರಿಯನ್ನು ನೀಡಿದ ಬಳಿಕ, ಅದನ್ನು ನೀವು ಹೇಗೆ ತೆಗೆದುಕೊಂಡಿದ್ದೀರಿ ಎಂಬುದು ನಿಜಕ್ಕೂ ಅಸಾಧಾರಣವಾಗಿದೆ. ಇದರ ಬಗ್ಗೆ ತುಂಬಾ ಹೆಮ್ಮೆ ಅನಿಸುತ್ತಿದೆ. ನಾವು ಗೆಲ್ಲುತ್ತೇವೆಂದು ಭಾವಿಸಿದ್ದೆ, ಆದರೆ, ಡ್ರಾನಲ್ಲಿ ಅಂತ್ಯವಾಯಿತು. ಏಕೆಂದರೆ ನಮ್ಮದು ಇನ್ನೂ ಯುವ ತಂಡ. ಅದರಲ್ಲಿಯೂ ಇಂಗ್ಲೆಂಡ್‌ನಲ್ಲಿ ಆಡುವುದು ಅಷ್ಟೊಂದು ಸುಲಭವಲ್ಲ," ಎಂದು ಯುವರಾಜ್ ಸಿಂಗ್ ತಿಳಿಸಿದ್ದಾರೆ.
ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಶುಭಮನ್ ಗಿಲ್ ಅವರು ಐದು ಪಂದ್ಯಗಳಿಂದ 75.4ರ ಸರಾಸರಿ ಹಾಗೂ ನಾಲ್ಕು ಶತಕಗಳ ಮೂಲಕ 754 ರನ್‌ಗಳನ್ನು ಕಲೆ ಹಾಕಿದ್ದರು. ಆ ಮೂಲಕ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಇದೇ ವೇಳೆ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರನ್ನು ಕೂಡ ಯುವರಾಜ್ ಸಿಂಗ್ ಶ್ಲಾಘಿಸಿದ್ದಾರೆ.
ಬೆನ್ ಸ್ಟೋಕ್ಸ್ ಹಿಂದಿಕ್ಕಿ ನಾಲ್ಕನೇ ಬಾರಿ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ ಗೆದ್ದ ಶುಭಮನ್ ಗಿಲ್!
"ಭಾರತ ತಂಡ ಟೆಸ್ಟ್ ಸರಣಿಯನ್ನು ಡ್ರಾ ಮಾಡಿಕೊಂಡ ಕ್ಷಣ ಅದು. ಬಹಳ ಸಮಯದಿಂದ ವಾಷಿಂಗ್ಟನ್ ಮತ್ತು ಜಡೇಜಾ ಶತಕಗಳನ್ನು ಗಳಿಸಿ ಟೆಸ್ಟ್ ಪಂದ್ಯವನ್ನು ಡ್ರಾ ಮಾಡಿಕೊಂಡಿದ್ದನ್ನು ನಾನು ಎಂದಿಗೂ ನೋಡಿಲ್ಲ. ಅದು ಬಹಳಷ್ಟು ಹೇಳುತ್ತದೆ. ಸ್ಪಷ್ಟವಾಗಿ ಜಡೇಜಾ ಬಹಳ ಸಮಯದಿಂದ ಇದ್ದಾರೆ. ಆದರೆ ವಾಷಿಂಗ್ಟನ್ ಸುಂದರ್ ತಂಡಕ್ಕೆ ಬರುತ್ತಿದ್ದಾರೆ ಹಾಗೂ ಅವರು ಮಾಡಿದ್ದು ನಿಜಕ್ಕೂ ಅಸಾಧಾರಣವಾಗಿದೆ," ಎಂದು ಅವರು ಶ್ಲಾಘಿಸಿದ್ದಾರೆ.