ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG: ಜೈಸ್ವಾಲ್‌, ಸುದರ್ಶನ್‌ ಅರ್ಧಶತಕ, ಭಾರತ ತಂಡಕ್ಕೆ ಉತ್ತಮ ಆರಂಭ!

IND vs ENG 4th Test Day 1 Highlights: ಮ್ಯಾಂಚೆಸ್ಟರ್‌ನ ಓಲ್ಡ್‌ ಟ್ರಾಫರ್ಡ್‌ ಕ್ರೀಡಾಂಗಣದಲ್ಲಿ ಬುಧವಾರ ಆರಂಭವಾದ ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ಭಾರತ ಹಾಗೂ ಇಂಗ್ಲೆಂಡ್‌ ತಂಡಗಳು ಕಾದಾಟ ನಡೆಸುತ್ತಿವೆ. ಈ ಪಂದ್ಯದ ಮೊದಲನೇ ದಿನ ಭಾರತ ತಂಡ ಉತ್ತಮ ಆರಂಭ ಪಡೆದಿದೆ. ಮೊದಲನೇ ದಿನದಾಟದ ಅಂತ್ಯಕ್ಕೆ ಟೀಮ್‌ ಇಂಡಿಯಾ 83 ಓವರ್‌ಗಳಿಗೆ 4 ವಿಕೆಟ್‌ ನಷ್ಟಕ್ಕೆ 264 ರನ್‌ಗಳನ್ನು ಕಲೆ ಹಾಕಿದೆ.

ಜೈಸ್ವಾಲ್‌, ಸುದರ್ಶನ್‌ ಅರ್ಧಶತಕ, ಭಾರತಕ್ಕೆ ಉತ್ತಮ ಆರಂಭ!

ಮ್ಯಾಂಚೆಸ್ಟರ್‌ ಟೆಸ್ಟ್‌ ಪಂದ್ಯದ ಮೊದಲನೇ ದಿನ ಭಾರತ ತಂಡಕ್ಕೆ ಉತ್ತಮ ಆರಂಭ ಲಭಿಸಿದೆ.

Profile Ramesh Kote Jul 23, 2025 11:42 PM

ಮ್ಯಾಂಚೆಸ್ಟರ್‌: ಯಶಸ್ವಿ ಜೈಸ್ವಾಲ್‌ (58 ರನ್‌) ಹಾಗೂ ಸಾಯಿ ಸುದರ್ಶನ್‌ (61) ಅವರ ಅರ್ಧಶತಕಗಳ ಬಲದಿಂದ ಭಾರತ ತಂಡ (India), ಎದುರಾಳಿ ಇಂಗ್ಲೆಂಡ್‌ (England) ವಿರುದ್ಧ ನಾಲ್ಕನೇ ಟೆಸ್ಟ್‌ ಪಂದ್ಯದ (IND vs ENG) ಮೊದಲನೇ ದಿನ ಉತ್ತಮ ಆರಂಭ ಪಡೆದಿದೆ. ಮೊದಲನೇ ದಿನದಾಟದ ಅಂತ್ಯಕ್ಕೆ ಟೀಮ್‌ ಇಂಡಿಯಾ 83 ಓವರ್‌ಗಳಿಗೆ 4 ವಿಕೆಟ್‌ಗಳ ನಷ್ಟಕ್ಕೆ 264 ರನ್‌ಗಳನ್ನು ಕಲೆ ಹಾಕಿದೆ. ಆ ಮೂಲಕ ಮೊದಲನೇ ದಿನ ಪ್ರವಾಸಿ ಭಾರತ ತಂಡ ಶುಭಾರಂಭ ಕಂಡಿದೆ. ರವೀಂದ್ರ ಜಡೇಜಾ ಹಾಗೂ ಶಾರ್ದುಲ್‌ ಠಾಕೂರ್‌ ಎರಡನೇ ದಿನದಾಟಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

ಬುಧವಾರ ಇಲ್ಲಿನ ಓಲ್ಡ್‌ ಟ್ರಾಫರ್ಡ್‌ನಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಭಾರತ ತಂಡದ ಪರ ಇನಿಂಗ್ಸ್‌ ಆರಂಭಿಸಿದ ಯಶಸ್ವಿ ಜೈಸ್ವಾಲ್‌ ಹಾಗೂ ಕೆಎಲ್‌ ರಾಹುಲ್‌ ಮುರಿಯದ ಮೊದಲನೇ ವಿಕೆಟ್‌ಗೆ 94 ರನ್‌ಗಳ ಜೊತೆಯಾಟವನ್ನು ಆಡಿದರು. ಆ ಮೂಲಕ ಪ್ರವಾಸಿ ಟೀಮ್‌ ಇಂಡಿಯಾಗೆ ಭರ್ಜರಿ ಆರಂಭ ತಂದುಕೊಟ್ಟಿದ್ದರು. ಅತ್ಯುತ್ತಮವಾಗಿ ಬ್ಯಾಟ್‌ ಮಾಡಿದ ಕೆಎಲ್‌ ರಾಹುಲ್‌ 98 ಎಸೆತಗಳಲ್ಲಿ 46 ರನ್‌ ಗಳಿಸಿ ಉತ್ತಮ ಆರಂಭ ಪಡೆದಿದ್ದರು. ಆದರೆ, ಕ್ರಿಸ್‌ ವೋಕ್ಸ್‌ ಎಸೆತದಲ್ಲಿ ಸ್ಲಿಪ್‌ನಲ್ಲಿ ಕ್ಯಾಚ್‌ ಕೊಟ್ಟು ಅರ್ಧಶತಕದಂಚಿನಲ್ಲಿ ವಿಕೆಟ್‌ ಒಪ್ಪಿಸಿದರು.

IND vs ENG: ಮ್ಯಾಂಚೆಸ್ಟರ್‌ನಲ್ಲಿ ಅರ್ಧಶತಕ ಸಿಡಿಸಿ ಅಪರೂಪದ ದಾಖಲೆ ಬರೆದ ಯಶಸ್ವಿ ಜೈಸ್ವಾಲ್‌!

ಯಶಸ್ವಿ ಜೈಸ್ವಾಲ್‌ ಅರ್ಧಶತಕ

ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್‌ ಮಾಡಿದ ಯಶಸ್ವಿ ಜೈಸ್ವಾಲ್‌, ಇಂಗ್ಲೆಂಡ್‌ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು. ಅವರು ಆಡಿದ 107 ಎಸೆತಗಳಲ್ಲಿ ಒಂದು ಸಿಕ್ಸರ್‌ ಹಾಗೂ 10 ಬೌಂಡರಿಗಳೊಂದಿಗೆ 58 ರನ್‌ಗಳನ್ನು ಕಲೆ ಹಾಕಿದರು. ಆ ಮೂಲಕ 50 ವರ್ಷಗಳ ಬಳಿಕ ಮ್ಯಾಂಚೆಸ್ಟರ್‌ನಲ್ಲಿ 50ಕ್ಕೂ ಅಧಿಕ ರನ್‌ ಗಳಿಸಿ ಮೊದಲ ಭಾರತೀಯ ಆರಂಭಿಕ ಬ್ಯಾಟ್ಸ್‌ಮನ್‌ ಎನಿಸಿಕೊಂಡರು. ಅಂತಿಮವಾಗಿ ಅವರು ಲಿಯಾಮ್‌ ಡಾಸನ್‌ಗೆ ಔಟ್‌ ಆದರು.



ಚೊಚ್ಚಲ ಅರ್ಧಶತಕ ಬಾರಿಸಿದ ಸಾಯಿ ಸುದರ್ಶನ್‌

ಲೀಡ್ಸ್‌ ಟೆಸ್ಟ್‌ನಲ್ಲಿ ವಿಫಲವಾಗಿದ್ದ ಸಾಯಿ ಸುದರ್ಶನ್‌, ಮ್ಯಾಂಚೆಸ್ಟರ್‌ ಟೆಸ್ಟ್‌ನಲ್ಲಿ ಸಿಕ್ಕ ಅವಕಾಶವನ್ನು ಸಂಪೂರ್ಣವಾಗಿ ಸದುಪಯೋಗಪಡಿಸಿಕೊಂಡರು. ಅವರು ಇಂಗ್ಲೆಂಡ್‌ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು. 151 ಎಸೆತಗಳನ್ನು ಆಡಿದ ಅವರು, 7 ಬೌಂಡರಿಗಳೊಂದಿಗೆ 61 ರನ್‌ಗಳನ್ನು ಕಲೆ ಹಾಕಿದರು. ಆ ಮೂಲಕ ತಮ್ಮ ಟೆಸ್ಟ್‌ ವೃತ್ತಿ ಜೀವನದ ಮೊದಲ ಅರ್ಧಶತಕ ಗಳಿಸಿ ಬೆನ್‌ ಸ್ಟೋಕ್ಸ್‌ಗೆ ವಿಕೆಟ್‌ ಒಪ್ಪಿಸಿದರು.



ರಿಷಭ್‌ ಪಂತ್‌ಗೆ ಗಂಭೀರ ಗಾಯ

ನಾಯಕ ಶುಭಮನ್‌ ಗಿಲ್‌ ವಿಕೆಟ್‌ ಒಪ್ಪಿಸಿದ ಬಳಿಕ ಕ್ರೀಸ್‌ಗೆ ಬಂದಿದ್ದ ಉಪ ನಾಯಕ ರಿಷಭ್‌ ಪಂತ್‌ ಎಂದಿನಂತೆ ತಮ್ಮ ಶೈಲಿಯಲ್ಲಿ ಬ್ಯಾಟ್‌ ಬೀಸಿದರು. ಅದರಂತೆ ಅವರು ಆಡಿದ 48 ಎಸೆತಗಳಲ್ಲಿ 37 ರನ್‌ ಗಳಿಸಿ ಉತ್ತಮ ಆರಂಭ ಪಡೆದಿದರು. ಆ ಮೂಲಕ ದೊಡ್ಡ ಇನಿಂಗ್ಸ್‌ ಆಡುವ ಭರವಸೆಯನ್ನು ಮೂಡಿಸಿದ್ದರು. ಆದರೆ, 68ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಕ್ರಿಸ್‌ ವೋಕ್ಸ್‌ಗೆ ರಿವರ್ಸ್‌ ಸ್ವೀಪ್‌ ಮಾಡಲು ಹೋಗಿ ಪಾದದ ಗಾಯಕ್ಕೆ ತುತ್ತಾದರು ಹಾಗೂ ಬ್ಯಾಟಿಂಗ್‌ ಮುಂದುವರಿಸದೆ ಮೈದಾನವನ್ನು ತೊರೆದರು.



ನಂತರ ಕ್ರೀಸ್‌ನಲ್ಲಿ ಜೊತೆಯಾದ ರವೀಂದ್ರ ಜಡೇಜಾ ಹಾಗೂ ಶಾರ್ದುಲ್‌ ಠಾಕೂರ್‌ ತಲಾ 19 ರನ್‌ಗಳನ್ನು ಗಳಿಸಿದ್ದು, ಎರಡನೇ ದಿನದಾಟಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಇಂಗ್ಲೆಂಡ್‌ ಪರ ಬೆನ್‌ ಸ್ಟೋಕ್ಸ್‌ ಎರಡು ವಿಕೆಟ್‌ ಕಿತ್ತರೆ, ಕ್ರಿಸ್‌ ವೋಕ್ಸ್‌ ಹಾಗೂ ಲಿಯಾಂ ಡಾಸನ್‌ ತಲಾ ಒಂದೊಂದು ವಿಕೆಟ್‌ ಪಡೆದಿದ್ದಾರೆ.