ನವದೆಹಲಿ: ಆಸ್ಟ್ರೇಲಿಯಾ ವಿರುದ್ದ ಮಹಿಳೆಯರ ಏಕದಿನ ಸರಣಿಯ ಮೂರನೇ ಪಂದ್ಯದಲ್ಲಿ(INDW vs AUSW) ಭಾರತ ತಂಡದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನಾ (Smriti Mandhana) ಅವರು ಸ್ಪೋಟಕ ಶತಕವನ್ನು ಬಾರಿಸಿದ್ದಾರೆ. ಅವರು ಕೇವಲ 50 ಎಸೆತಗಳಲ್ಲಿ ಶತಕವನ್ನು ಬಾರಿಸುವ ಮೂಲಕ ಭಾರತದ (India women Team) ಪರ ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ದೊಡ್ಡ ದಾಖಲೆಯನ್ನು ಬರೆದಿದ್ದಾರೆ. ಆ ಮೂಲಕ ತಮ್ಮದೇ ದಾಖಲೆಯನ್ನು ಮುರಿದಿದ್ದಾರೆ. ಇವರು ತಮ್ಮ ಏಕದಿನ ಕ್ರಿಕೆಟ್ ವೃತ್ತಿ ಜೀವನದಲ್ಲಿ13ನೇ ಶತಕವನ್ನು ಪೂರ್ಣಗೊಳಿಸಿದ್ದಾರೆ. ಅಂದ ಹಾಗೆ ಎರಡನೇ ಏಕದಿನ ಪಂದ್ಯದಲ್ಲಿಯೂ ಅವರು ಮೂರಂಕಿ ವೈಯಕ್ತಿಕ ಮೊತ್ತವನ್ನು ದಾಖಲಿಸಿದ್ದರು.
ಶನಿವಾರ ಇಲ್ಲಿನ ಅರುಣ್ ಜೆಟ್ಲಿ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ನೀಡಿದ್ದ 413 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಭಾರತ ತಂಡದ ಪರ ಇನಿಂಗ್ಸ್ ಆರಂಭಿಸಿದ ಸ್ಮೃತಿ ಮಂಧಾನಾ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದರು. ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್ ಮಾಡಿದ ಸ್ಮೃತಿ ಮಂಧಾನಾ ಅವರಿಗೆ ಮತ್ತೊಂದು ತುದಿಯಲ್ಲಿ ನಾಯಕಿ ಹರ್ಮನ್‌ಪ್ರೀತ್ ಕೌರ್ ಸ್ವಲ್ಪ ಸಮಯ ಸಾಥ್ ನೀಡಿದ್ದು, ಬಿಟ್ಟರೆ ಇನ್ನುಳಿದ ಆಟಗಾರ್ತಿಯರು ವಿಫಲರಾಗಿದ್ದರು. ಆದರೆ, ಮಂಧಾನಾ ಎರಡನೇ ಪಂದ್ಯದ ಲಯವನ್ನು ಮೂರನೇ ಪಂದ್ಯದಲ್ಲಿಯೂ ಮುಂದುವರಿಸಿದರು.
INDW vs AUSW: ಸ್ಮೃತಿ ಮಂಧಾನಾ ಭರ್ಜರಿ ಶತಕ, ಆಸ್ಟ್ರೇಲಿಯಾ ವನಿತೆಯರಿಗೆ ಶಾಕ್ ಕೊಟ್ಟ ಭಾರತ!
ಭಾರತದ ಪರ ವೇಗದ ಒಡಿಐ ಶತಕ ಬಾರಿಸಿದ ಸ್ಮೃತಿ ಮಂಧಾನಾ
ಸ್ಪೋಟಕ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ ಸ್ಮೃತಿ ಮಂಧಾನಾ, ಕೇವಲ 50 ಎಸೆತಗಳಲ್ಲಿ ಶತಕವನ್ನು ಪೂರ್ಣಗೊಳಿಸಿದರು. ಆ ಮೂಲಕ ಭಾರತದ ಪರ ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ಅತ್ಯಂತ ವೇಗದ ಶತಕ ಸಿಡಿಸಿದ ಮೊದಲ ಆಟಗಾರ್ತಿ ಎಂಬ ದಾಖಲೆಯನ್ನು ಸ್ಮೃತಿ ಮಂಧಾನಾ ಬರೆದಿದ್ದಾರೆ. ಅಲ್ಲದೆ ತಮ್ಮ 13ನೇ ಏಕದಿನ ಶತಕವನ್ನು ಕೂಡ ಬಾರಿಸಿದ್ದಾರೆ. 18ನೇ ಓವರ್‌ನ ಎರಡನೇ ಎಸೆತದಲ್ಲಿ ಅಲಾನಾ ಕಿಂಗ್‌ಗೆ ಸಿಕ್ಸರ್ ಬಾರಿಸುವ ಮೂಲಕ ಮಂಧಾನಾ ಈ ದಾಖಲೆಯನ್ನು ಬರೆದಿದ್ದಾರೆ. ಈ ವರ್ಷದ ಆರಂಭದಲ್ಲಿ ಸ್ಮೃತಿ ಮಂಧಾನಾ ಅವರು 70 ಎಸೆತಗಳಲ್ಲಿ ಶತಕವನ್ನು ಬಾರಿಸಿದ್ದರು. ಇದೀಗ 50 ಎಸೆತಗಳಲ್ಲಿ ಬಾರಿಸುವ ಮೂಲಕ ತಮ್ಮದೇ ದಾಖಲೆಯನ್ನು ಮುರಿದಿದ್ದಾರೆ.
ಈ ಹಿಂದೆ ಐರ್ಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಸ್ಮೃತಿ ಮಂಧಾನಾ ಅವರ ಶತಕದ ಬಲದಿಂದ ಭಾರತ ತಂಡ 50 ಓವರ್‌ಗಳಿಗೆ 5 ವಿಕೆಟ್‌ಗಳ ನಷ್ಟಕ್ಕೆ 435 ರನ್‌ಗಳನ್ನು ಕಲೆ ಹಾಕಿತ್ತು. ಇದೀಗ ಸ್ಮೃತಿ ಮಂಧಾನಾ ಅವರು ಆಸ್ಟ್ರೇಲಿಯಾ ವಿರುದ್ಧ ಮೂರನೇ ಏಕದಿನ ಪಂದ್ಯದಲ್ಲಿಯೇ ಈ ದಾಖಲೆಯನ್ನು ಬರೆದಿದ್ದಾರೆ. ಆರಂಭಿಕ ಎರಡು ಪಂದ್ಯಗಳ ಅಂತ್ಯಕ್ಕೆ ಉಭಯ ತಂಡಗಳು 1-1 ಸಮಬಮ ಸಾಧಿಸಿದ್ದವು. ಇದೀಗ ಮೂರನೇ ಪಂದ್ಯವನ್ನು ಗೆದ್ದು ಏಕದಿನ ಸರಣಿಯನ್ನು ಮುಡಿಗೇರಿಸಿಕೊಳ್ಳಲು ಉಭಯ ತಂಡಗಳು ಹೋರಾಟ ನಡೆಸುತ್ತಿವೆ.
INDW vs AUSW: ಎರಡನೇ ವೇಗದ ಶತಕ ಬಾರಿಸಿ ಇತಿಹಾಸ ಬರೆದ ಸ್ಮೃತಿ ಮಂಧಾನಾ!
125 ರನ್ ಗಳಿಸಿ ವಿಕೆಟ್ ಒಪ್ಪಿಸಿದ ಮಂಧಾನಾ
ಒಟ್ಟಾರೆ ಈ ಇನಿಂಗ್ಸ್‌ನಲ್ಲಿ ಸ್ಮೃತಿ ಮಂಧಾನಾ ಅವರು ಆಡಿದ 63 ಎಸೆತಗಳಲ್ಲಿ ಬರೋಬ್ಬರಿ 5 ಸಿಕ್ಸರ್ ಹಾಗೂ17 ಮನಮೋಹಕ ಬೌಂಡರಿಗಳೊಂದಿಗೆ 125 ರನ್‌ಗಳನ್ನು ದಾಖಲಿಸಿದರು. ಅವರು 198.41ರ ಸ್ಟ್ರೈಕ್ ರೇಟ್‌ನಲ್ಲಿ ರನ್ ಗಳಿಸಿದ್ದು ವಿಶೇಷವಾಗಿತ್ತು. ಇದರ ನಡುವೆ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರ ಜೊತೆಗೆ ಸ್ಮೃತಿ ಮಂಧಾನಾ ಅವರು ಮೂರನೇ ವಿಕೆಟ್‌ಗೆ 121 ರನ್‌ಗಳನ್ನು ಕಲೆ ಹಾಕಿದ್ದರು.