ನವದೆಹಲಿ: ದಕ್ಷಿಣ ಆಫ್ರಿಕಾ ವಿರುದ್ದ ಟೆಸ್ಟ್ ತಂಡದಿಂದ (IND vs SA) ಸ್ಥಾನ ಪಡೆಯುವಲ್ಲಿ ವಿಫಲರಾಗಿ ಬೇಸರದಲ್ಲಿರುವ ಭಾರತ ತಂಡದ ಹಿರಿಯ ವೇಗಿ ಮೊಹಮ್ಮದ್ ಶಮಿಗೆ (Mohammed Shami) ಇದೀಗ ತಮ್ಮ ಪತ್ನಿಯ ಕಡೆಯಿಂದ ಮತ್ತೊಂದು ಸಂಕಷ್ಟ ಎದುರಾಗಿದೆ. ಮಾಧ್ಯಮ ಸಂವಾದದಲ್ಲಿ ಮುಖ್ಯ ಕೋಚ್ ಅಜಿತ್ ಅಗರ್ಕರ್ ಮತ್ತು ಶಮಿ ಆಗಾಗ್ಗೆ ಪರಸ್ಪರ ವಾಗ್ವಾದ ನಡೆಸಿದ್ದಾರೆ. ಶಮಿ ರಣಜಿ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಇದರ ನಡುವೆ ಶಮಿ ಮತ್ತು ಅವರ ಪತ್ನಿ ಹಸಿನ್ ಜಹಾನ್ (Hasin Jahan) ಅವರ ಪ್ರಕರಣ ಮತ್ತೊಮ್ಮೆ ಬೆಳಕಿಗೆ ಬಂದಿದೆ. ವಿಚ್ಛೇದಿತ ಪತ್ನಿ ಹಸಿನ್ ಜಹಾನ್ ಸಲ್ಲಿಸಿದ ಅರ್ಜಿಯ ಮೇರೆಗೆ ಸುಪ್ರೀಂ ಕೋರ್ಟ್ ಮೊಹಮ್ಮದ್ ಶಮಿಗೆ ನೋಟಿಸ್ ಜಾರಿ ಮಾಡಿದೆ. ಹಸಿನ್ ಜಹಾನ್ ತನಗೆ ಮತ್ತು ತಮ್ಮ ಅಪ್ರಾಪ್ತ ಮಗಳಿಗೆ ಜೀವನಾಂಶ ಹೆಚ್ಚಿಸುವಂತೆ ಕೋರಿದ್ದಾರೆ. ಕಲ್ಕತ್ತಾ ಹೈಕೋರ್ಟ್‌ನ ಎರಡು ತೀರ್ಪುಗಳನ್ನು ಪ್ರಶ್ನಿಸಿ ಪತ್ನಿ ಸಲ್ಲಿಸಿರುವ ಅರ್ಜಿಗೆ ನಾಲ್ಕು ವಾರಗಳಲ್ಲಿ ಪ್ರತಿಕ್ರಿಯಿಸುವಂತೆ ನ್ಯಾಯಮೂರ್ತಿಗಳಾದ ಮನೋಜ್ ಮಿಶ್ರಾ ಮತ್ತು ಉಜ್ವಲ್ ಭುಯಾನ್ ಅವರ ಪೀಠವು ಶಮಿಗೆ ಸೂಚಿಸಿದೆ.
ಕಲ್ಕತ್ತಾ ಹೈಕೋರ್ಟ್ ಈ ಹಿಂದೆ ಹಸಿನ್ ಜಹಾನ್‌ಗೆ 1.5 ಲಕ್ಷ ರು ಮತ್ತು ಆಕೆಯ ಮಗಳಿಗೆ 2.5 ಲಕ್ಷ ರು ಮಾಸಿಕ ಜೀವನಾಂಶವನ್ನು ನಿಗದಿಪಡಿಸಿತ್ತು. ಉಳಿದ ಮೊತ್ತವನ್ನು ಎಂಟು ಮಾಸಿಕ ಕಂತುಗಳಲ್ಲಿ ಪಾವತಿಸಲು ಶಮಿಗೆ ಸೂಚಿಸಲಾಗಿತ್ತು. ಶಮಿ ಅವರ ಸಂಪತ್ತು ಮತ್ತು ಐಷಾರಾಮಿ ಜೀವನಶೈಲಿಯನ್ನು ಪರಿಗಣಿಸಿ ಈ ಮೊತ್ತವು ತುಂಬಾ ಕಡಿಮೆ ಎಂದು ಹಸಿನ್ ಜಹಾನ್ ಹೇಳಿಕೊಂಡಿದ್ದಾರೆ. ಆಕೆ ತನಗಾಗಿ 7 ಲಕ್ಷ ರು ಮತ್ತು ಮಗಳಿಗೆ 3 ರು ಲಕ್ಷ ಮಾಸಿಕ ಜೀವನಾಂಶ ಕೇಳುತ್ತಿದ್ದಾರೆ. ಅರ್ಜಿಯ ಪ್ರಕಾರ, ಶಮಿ ಅವರ 2021-22 ರ ಆದಾಯ ತೆರಿಗೆ ರಿಟರ್ನ್‌ನಲ್ಲಿ ಅವರ ವಾರ್ಷಿಕ ಆದಾಯ ಸುಮಾರು 48 ಕೋಟಿ ಎಂದು ತೋರಿಸಲಾಗಿದೆ. ಇದರ ನಡುವೆ ಹಸಿನ್ ಜಹಾನ್ ಅವರು ಶೋಚನೀಯ ಸ್ಥಿತಿಯಲ್ಲಿ ವಾಸಿಸುತ್ತಿದ್ದಾರೆ ಮತ್ತು ದೈನಂದಿನ ಖರ್ಚುಗಳನ್ನು ಪೂರೈಸಲು ಹೆಣಗಾಡುತ್ತಿದ್ದಾರೆ ಎಂದು ಅವರು ಹೇಳಿಕೊಂಡಿದ್ದಾರೆ.
IND vs SA: ಭಾರತ ಟೆಸ್ಟ್ ತಂಡದಿಂದ ಔಟ್! ಮೊಹಮ್ಮದ್ ಶಮಿ ವೃತ್ತಿ ಜೀವನ ಅಂತ್ಯ?
ಶಮಿ ಹೊಂದಿದ್ದ ರೇಂಜ್ ರೋವರ್, ಜಾಗ್ವಾರ್, ಮರ್ಸಿಡಿಸ್ ಮತ್ತು ಟೊಯೋಟಾ ಫಾರ್ಚೂನರ್ ಸೇರಿದಂತೆ ಐಷಾರಾಮಿ ವಾಹನಗಳ ಸಂಗ್ರಹದ ಬಗ್ಗೆಯೂ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಶಮಿ ಮತ್ತು ಹಸಿನ್ ಜಹಾನ್ 2014ರ ಏಪ್ರಿಲ್‌ನಲ್ಲಿ ವಿವಾಹವಾಗಿದ್ದರು. 2018 ರಲ್ಲಿ ಹಸಿನ್ ಜಹಾನ್ ಕೋಲ್ಕತ್ತಾದ ಜಾದವ್‌ಪುರ ಪೊಲೀಸ್ ಠಾಣೆಯಲ್ಲಿ ಕೌಟುಂಬಿಕ ಹಿಂಸಾಚಾರ ಪ್ರಕರಣ ದಾಖಲಿಸಿದ್ದರು, ನಂತರ ಶಮಿ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲಾಯಿತು. ನಂತರ ಹಸಿನ್ ಜಹಾನ್ ಕೌಟುಂಬಿಕ ಹಿಂಸಾಚಾರದಿಂದ ಮಹಿಳೆಯರ ರಕ್ಷಣೆ ಕಾಯ್ದೆಯಡಿ ಮಧ್ಯಂತರ ಜೀವನಾಂಶಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದರು.
ಆರಂಭದಲ್ಲಿ ವಿಚಾರಣಾ ನ್ಯಾಯಾಲಯವು ತಮ್ಮ ಮಗಳಿಗೆ ಮಾಸಿಕ 80,000 ಜೀವನಾಂಶವನ್ನು ನೀಡಿತು, ಆದರೆ ಶಮಿ ಅವರ ಪತ್ನಿಗೆ ಯಾವುದೇ ಜೀವನಾಂಶವನ್ನು ನೀಡಲಿಲ್ಲ. ತರುವಾಯ, 2023ರಲ್ಲಿ ಸೆಷನ್ಸ್ ನ್ಯಾಯಾಲಯವು ಹಸಿನ್ ಜಹಾನ್‌ಗೆ 50,000 ಮತ್ತು ಅವರ ಮಗಳಿಗೆ 80,000 ಜೀವನಾಂಶವನ್ನು ನೀಡಿತು. ಜುಲೈ 1 ರಂದು ಕಲ್ಕತ್ತಾ ಹೈಕೋರ್ಟ್ ತನ್ನ ಆದೇಶದಲ್ಲಿ ಮೊತ್ತವನ್ನು ರೂ.1.5 ಲಕ್ಷ ಮತ್ತು ರೂ.2.5 ಲಕ್ಷಕ್ಕೆ ಹೆಚ್ಚಿಸಿತ್ತು.