ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ವಿರಾಟ್‌ ಕೊಹ್ಲಿ vs ಹಾಶಿಮ್‌ ಆಮ್ಲಾ ನಡುವೆ ಕಠಿಣ ಬ್ಯಾಟ್ಸ್‌ಮನ್‌ ಹೆಸರಿಸಿದ ಶಾಹೀನ್‌ ಅಫ್ರಿದಿ!

ಪಾಕಿಸ್ತಾನ ತಂಡದ ವೇಗದ ಬೌಲರ್‌ ಶಾಹೀನ್‌ ಶಾ ಅಫ್ರಿದಿ ತಮ್ಮ ವೃತ್ತಿ ಜೀವನದಲ್ಲಿ ವಿರಾಟ್‌ ಕೊಹ್ಲಿ, ಎಬಿ ಡಿ ವಿಲಿಯರ್ಸ್‌ ಸೇರಿದಂತೆ ವಿಶ್ವದ ಸಾಕಷ್ಟು ಘಟಾನುಘಟಿ ಬ್ಯಾಟ್ಸ್‌ಮನ್‌ಗಳಿಗೆ ಬೌಲ್‌ ಮಾಡಿದ್ದಾರೆ. ಆದರೆ, ಅವರು ತಮ್ಮ ವೃತ್ತಿ ಜೀವನದಲ್ಲಿ ಎದುರಾದ ಅತ್ಯಂತ ಕಠಿಣ ಬ್ಯಾಟ್ಸ್‌ಮನ್‌ ಅನ್ನು ಆರಿಸಿದ್ದಾರೆ.

ತಾನು ಎದುರಿಸಿದ ಅತ್ಯಂತ ಕಠಿಣ ಬ್ಯಾಟ್ಸ್‌ಮನ್‌ ಅನ್ನು ಆರಿಸಿದ ಶಾಹೀನ್‌ ಅಫ್ರಿದಿ.

ನವದೆಹಲಿ: ಪ್ರಸ್ತುತ ವಿಶ್ವದ ಅತ್ಯುತ್ತಮ ವೇಗದ ಬೌಲರ್‌ಗಳ ಪೈಕಿ ಪಾಕಿಸ್ತಾನದ ವೇಗಿ ಶಾಹೀನ್‌ ಶಾ ಅಫ್ರಿದಿ (Shaheen Afridi) ಕೂಡ ಒಬ್ಬರು. ಅವರು ವಿರಾಟ್‌ ಕೊಹ್ಲಿ (Virat Kohli), ರೋಹಿತ್‌ ಶರ್ಮಾ, ಎಬಿ ಡಿ ವಿಲಿಯರ್ಸ್‌ ಸೇರಿದಂತೆ ವಿಶ್ವದ ಘಟಾನುಘಟಿ ಬ್ಯಾಟ್ಸ್‌ಮನ್‌ಗಳಿಗೆ ಬೌಲ್‌ ಮಾಡಿದ್ದಾರೆ. ಇದೀಗ ಅವರು ತನಗೆ ಎದುರಾಗಿದ್ದ ಅತ್ಯಂತ ಕಠಿಣ ಬ್ಯಾಟ್ಸ್‌ಮನ್‌ ಯಾರೆಂದು ಬಹಿರಂಗಪಡಿಸಿದ್ದಾರೆ. ಅವರು ವಿರಾಟ್‌ ಕೊಹ್ಲಿ ಸೇರಿದಂತೆ ಪ್ರಸ್ತುತ ಸಕ್ರಿಯರಾಗಿರುವ ಆಟಗಾರರನ್ನು ಕಡೆಗಣಿಸಿ ದಕ್ಷಿಣ ಆಫ್ರಿಕಾ ತಂಡದ ಮಾಜಿ ನಾಯಕ ಹಾಶಿಮ್‌ ಆಮ್ಲಾ ಅವರನ್ನು ಆಯ್ಕೆ ಮಾಡಿದ್ದಾರೆ.

ಹಾಸಿಮ್‌ ಆಮ್ಲಾಗೆ ಶಾಹೀನ್‌ ಶಾ ಅಫ್ರಿದಿ ಬೌಲ್‌ ಮಾಡಿರುವುದು ಅತ್ಯಂತ ಕಡಿಮೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಹಾಶಿಮ್‌ ಆಮ್ಲಾ ಅವರನ್ನು ಔಟ್‌ ಮಾಡುವಲ್ಲಿ ವಿಫಲರಾಗಿರುವ ಅಫ್ರಿದಿ, 31 ರನ್‌ ನೀಡಿದ್ದರು. ಇನ್ನು ಏಕದಿನ ಕ್ರಿಕೆಟ್‌ನಲ್ಲಿ ಹಾಶಿಮ್‌ ಆಮ್ಲಾ ಅವರನ್ನು ಎರಡು ಬಾರಿ ಔಟ್‌ ಮಾಡಿದ್ದು, 40 ರನ್‌ಗಳನ್ನು ನೀಡಿದ್ದಾರೆ. ಹಾಶಿಮ್‌ ಆಮ್ಲಾ ಎಲ್ಲಾ ಸ್ವರೂಪದ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಅವರು ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್‌ ವೃತ್ತಿ ಜೀವನದಲ್ಲಿ 55 ಶತಕಗಳು ಹಾಗೂ 80 ಅರ್ಧಶತಕಗಳನ್ನು ಸೇರಿ 18672 ರನ್‌ಗಳನ್ನು ಕಲೆ ಹಾಕಿದ್ದಾರೆ.

ಪಾಡ್‌ಕಾಸ್ಟ್‌ವೊಂದರಲ್ಲಿ ಮಾತನಾಡಿದ ಶಾಹೀನ್‌ ಶಾ ಅಫ್ರಿದಿಗೆ ನೀವು ಎದುರಿಸಿದ ಅತ್ಯಂತ ಕಠಿಣ ಬ್ಯಾಟ್ಸ್‌ಮನ್‌ ಯಾರೆಂದು ಕೇಳಲಾಯಿತು. ಈ ವೇಳೆ ಹಾಶಿಮ್‌ ಆಮ್ಲಾ ಅವರ ಹೆಸರನ್ನು ಹೇಳಲು ಯಾವುದೇ ಸಂಕೋಚ ಪಡಲಿಲ್ಲ.

ಏಕದಿನ ವಿಶ್ವಕಪ್‌ ನಿಮಿತ್ತ ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾಗೆ ಎಚ್ಚರಿಕೆ ನೀಡಿದ ದೀಪ್‌ ದಾಸ್‌ಗುಪ್ತಾ!

"ಹಾಶಿಮ್‌ ಆಮ್ಲಾ. ಅವರು ವಿರುದ್ದ ನಾನು ಟೆಸ್ಟ್‌ ಹಾಗೂ ಏಕದಿನ ಕ್ರಿಕೆಟ್‌ನಲ್ಲಿ ಆಡಿದ್ದೇನೆ ಹಾಗೂ ಅವರ ನಿಜಕ್ಕೂ ಅತ್ಯಂತ ಕಠಿಣ ಸ್ಪರ್ಧಿಯಾಗಿದ್ದಾರೆ. ಇಂಗ್ಲೆಂಡ್‌ನಲ್ಲಿ ವಿಟಾಲಿಟಿ ಬ್ಲಾಸ್ಟ್‌ ಟಿ20 ಟೂರ್ನಿಯಲ್ಲಿ ನಾನು ಅವರ ವಿರುದ್ಧ ಆಡಿದ್ದೇನೆ. ಅವರು ಅತ್ಯುತ್ತಮ ಬ್ಯಾಟ್ಸ್‌ಮನ್‌ ಎಂಬ ಭಾವನೆ ನನಗೆ ಮೂಡಿತ್ತು. ಅವರು ಏನು ಮಾಡುತ್ತಾರೆ, ಅದರಲ್ಲಿ ಅವರು ಅತ್ಯುತ್ತಮವಾಗಿದ್ದಾರೆ," ಎಂದು ಶಾಹೀನ್‌ ಶಾ ಅಫ್ರಿದಿ ತಿಳಿಸಿದ್ದಾರೆ.

ವಿರಾಟ್‌ ಕೊಹ್ಲಿ ವಿಭಿನ್ನ ಆಟಗಾರ, ಹಾಶಿಮ್‌ ಆಮ್ಲಾ ಕಠಿಣ ಬ್ಯಾಟ್ಸ್‌ಮನ್‌: ಶಾಹೀನ್‌ ಅಫ್ರಿದಿ

ಶಾಹೀನ್‌ ಶಾ ಅಫ್ರಿದಿ ತಮ್ಮ ವೃತ್ತಿ ಜೀವನದ ಅತ್ಯುತ್ತಮ ಹಂತದಲ್ಲಿದ್ದಾಗ ವಿರಾಟ್‌ ಕೊಹ್ಲಿ ಅವರೊಂದಿಗಿನ ಪೈಪೋಟಿ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದವು. ಆದರೆ, ಪಾಕ್‌ ವೇಗಿ ತಾವು ಎದುರಿಸಿದ ಕಠಿಣ ಬ್ಯಾಟ್ಸ್‌ಮನ್‌ ಆಗಿ ಹಾಶಿಮ್‌ ಆಮ್ಲಾ ಅವರನ್ನು ಆಯ್ಕೆ ಮಾಡಿದ್ದಾರೆ. ವಿರಾಟ್‌ ಕೊಹ್ಲಿಗಿಂತ ಹಾಶಿಮ್‌ ಆಮ್ಲಾ ಅತ್ಯುತ್ತಮ ಬ್ಯಾಟ್ಸ್‌ಮನ್‌ ಎಂದು ಪಾಕ್‌ ವೇಗಿಗೆ ಕೇಳಲಾಯಿತು. ಇದಕ್ಕೆ ಅವರು ವಿರಾಟ್‌ ಕೊಹ್ಲಿ ವಿಭಿನ್ನ ಆಟಗಾರ, ಆದರೆ ಹಾಶಿಮ್‌ ಆಮ್ಲಾ ಅತ್ಯಂತ ಕಠಿಣ ಬ್ಯಾಟ್ಸ್‌ಮನ್‌ ಎಂದು ಹೇಳಿದ್ದಾರೆ.

"ವಿರಾಟ್‌ ಕೊಹ್ಲಿ ತುಂಬಾ ವಿಭಿನ್ನ ಆಟಗಾರ, ಆದರೆ ಹಾಶಿಮ್‌ ಭಾಯ್‌ ತುಂಬಾ ಕಠಿಣ ಬ್ಯಾಟ್ಸ್‌ಮನ್‌. ಅವರು ಅತ್ಯಂತ ಕಠಿಣ ಬ್ಯಾಟ್ಸ್‌ಮನ್‌," ಎಂದು ಶಾಹೀನ್‌ ಶಾ ಅಫ್ರಿದಿ ತಿಳಿಸಿದ್ದಾರೆ.