ಕಾನ್ಪುರ: ಭಾರತ ಎ ಮತ್ತು ಆಸ್ಟ್ರೇಲಿಯಾ ಎ (INDA vs AUSA) ನಡುವಿನ ಮೊದಲ ಅನಧಿಕೃತ ಏಕದಿನ ಪಂದ್ಯ ಬುಧವಾರ ಇಲ್ಲಿನ ಗ್ರೀನ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆಯಿತು. ಭಾರತ ಎ ಪರ ಪದಾರ್ಪಣೆ ಮಾಡಿದ ಪಂಜಾಬ್ ಕಿಂಗ್ಸ್ ಓಪನರ್ ಪ್ರಿಯಾಂಶ್ ಆರ್ಯ (Priyansh Arya) ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿ ಭರ್ಜರಿ ಶತಕವನ್ನು ಬಾರಿಸಿದರು. ಕೇವಲ 82 ಎಸೆತಗಳಲ್ಲಿ ಅವರು ಮೂರಂಕಿ ವೈಯಕ್ತಿಕ ಮೊತ್ತವನ್ನು ತಲುಪಿದರು. ತಮ್ಮ ಬ್ಯಾಟಿಂಗ್ ಮೂಲಕ ಕಾಂಗರೂ ಬೌಲರ್‌ಗಳನ್ನು ಸಂಕಷ್ಟಕ್ಕೆ ಸಿಲುಕಿಸಿದರು. ದೆಹಲಿ ಪರ ಆಡುವ ಪ್ರಿಯಾಂಶ್ ಆರ್ಯ, 2025ರ ಐಪಿಎಲ್ (IPL 2025) ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ಪರ ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ದೊಡ್ಡ ಹಸರು ಮಾಡಿದ್ದರು. ತಮ್ಮ ಚೊಚ್ಚಲ ಋತುವಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 39 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಇದರ ನಂತರ, ಅವರು ತಮ್ಮ ಭಾರತ ಎ ಚೊಚ್ಚಲ ಪಂದ್ಯದಲ್ಲೂ ಮಿಂಚಿದ್ದಾರೆ.
ಆಸ್ಟ್ರೇಲಿಯಾ ಎ ವಿರುದ್ಧ ಇನಿಂಗ್ಸ್ ಆರಂಭಿಸಿದ 24ರ ವಯಸ್ಸಿನ ಪ್ರಿಯಾಂಶ್ ಆರ್ಯ 84 ಎಸೆತಗಳಲ್ಲಿ 101 ರನ್ ಗಳಿಸಿದರು. ಅವರು 120.23 ಸ್ಟ್ರೈಕ್ ರೇಟ್‌ನಲ್ಲಿ 11 ಬೌಂಡರಿಗಳು ಮತ್ತು 5 ಸಿಕ್ಸರ್‌ಗಳನ್ನು ಬಾರಿಸಿದರು. ಪ್ರಿಯಾಂಶ್ ಆರ್ಯ ತಮ್ಮ ಬ್ಯಾಟಿಂಗ್‌ನಿಂದ ಪ್ರಭಾವ ಬೀರುತ್ತಲೇ ಇದ್ದಾರೆ. ವೈಭವ್ ಸೂರ್ಯವಂಶಿಯಂತೆ ಅವರು ಕೂಡ ಸಾಕಷ್ಟು ಖ್ಯಾತಿಯನ್ನು ಗಳಿಸುತ್ತಿದ್ದಾರೆ. ಈ ಇಬ್ಬರು ಯುವ ಆಟಗಾರರು ಇದೇ ರೀತಿ ಆಟ ಮುಂದುವರಿಸಿದರೆ, ಅವರಿಗೆ ಶೀಘ್ರದಲ್ಲೇ ಭಾರತ ಹಿರಿಯದ ತಂಡದಲ್ಲಿ ಆಡುವ ಅವಕಾಶ ಸಿಗಬಹುದು. ತಮ್ಮ ಮೊದಲ ಐಪಿಎಲ್ ಋತುವಿನಲ್ಲಿ ಪ್ರಿಯಾಂಶ್ ಆರ್ಯ 17 ಪಂದ್ಯಗಳಲ್ಲಿ ಒಂದು ಶತಕ ಮತ್ತು ಎರಡು ಅರ್ಧಶತಕ ಸೇರಿದಂತೆ 475 ರನ್ ಗಳಿಸಿದ್ದರು. ಅವರು179.2ರ ಸ್ಟ್ರೈಕ್ ರೇಟ್‌ನಲ್ಲಿ ರನ್ ಸಿಡಿಸಿದ್ದರು.
IND vs WI: ಮೊದಲನೇ ಟೆಸ್ಟ್‌ಗೂ ಮುನ್ನ ಗಾಯಕ್ಕೆ ತುತ್ತಾದ ವಾಷಿಂಗ್ಟನ್ ಸುಂದರ್?
ಆಸ್ಟ್ರೇಲಿಯಾ ಎ ವಿರುದ್ಧದ ಮೊದಲ ಅನಧಿಕೃತ ಏಕದಿನ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾದ ಭಾರತ ಎ ತಂಡ, ತನ್ನ ಪಾಲಿನ 50 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 413 ರನ್ ಕಲೆ ಹಾಕಿತು. ಪ್ರಿಯಾಂಶ್ ಆರ್ಯ ಜೊತೆಗೆ ನಾಯಕ ಶ್ರೇಯಸ್ ಅಯ್ಯರ್ ಕೂಡ ಶತಕ ಗಳಿಸಿದರು. ಅವರು 83 ಎಸೆತಗಳಲ್ಲಿ 12 ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳ ಸಹಾಯದಿಂದ 110 ರನ್ ಗಳಿಸಿದರು. ರಿಯಾನ್ ಪರಾಗ್ (67), ಪ್ರಭ್‌ಸಿಮ್ರಾನ್ ಸಿಂಗ್ (56) ಮತ್ತು ಆಯುಷ್ ಬದೋನಿ (50) ಕೂಡ ಅರ್ಧಶತಕಗಳನ್ನು ಕಲೆ ಹಾಕಿದರು.
IND vs WI: ಜೈಸ್ವಾಲ್-ರಾಹುಲ್ ಓಪನರ್ಸ್! ಮೊದಲನೇ ಟೆಸ್ಟ್‌ಗೆ ಭಾರತದ ಸಂಭಾವ್ಯ ಪ್ಲೇಯಿಂಗ್ XI ವಿವರ
ಆಸ್ಟ್ರೇಲಿಯಾ ಎ ತಂಡಕ್ಕೆ 242 ರನ್ ಆಲ್‌ಔಟ್
ಬಳಿಕ 414 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಆಸ್ಟ್ರೇಲಿಯಾ ತಂಡ, ಉತ್ತಮ ಆರಂಭ ಪಡದರೂ ನಿಶಾಂತ್ ಸಿಂಧು (50ಕ್ಕೆ 4) ಅವರ ಸ್ಪಿನ್ ಮೋಡಿಗೆ ನಲುಗಿ 33.1 ಓವರ್‌ಗಳಿಗೆ 242 ರನ್‌ಗಳಿಗೆ ಆಲ್‌ಔಟ್ ಆಯಿತು. ಆ ಮೂಲಕ ದೊಡ್ಡ ಅಂತರದಲ್ಲಿ ಸೋಲು ಅನುಭವಿಸಿತು. ಆಸ್ಟ್ರೇಲಿಯಾ ತಂಡದ ಪರ ನಾಯಕ ವಿಲ್ ಸೌಥರ್ಲೆಂಡ್ (50), ಮೆಕೆಂಜಿ ಹಾರ್ವಿ (68) ಹಾಗೂ ಲ್ಯಾಚ್ಲನ್ ಶಾ (45) ಅವರು ಉತ್ತಮ ಪ್ರದರ್ಶನ ತೋರಿದರು. ಆದರೆ, ಇವರು ಉತ್ತಮ ಆರಂಭ ಪಡೆದರೂ ತಂಡವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ.