IND vs WI: ಜೈಸ್ವಾಲ್-ರಾಹುಲ್ ಓಪನರ್ಸ್! ಮೊದಲನೇ ಟೆಸ್ಟ್‌ಗೆ ಭಾರತದ ಸಂಭಾವ್ಯ ಪ್ಲೇಯಿಂಗ್ XI ವಿವರ
India's Playing XI for 1st test against WI: ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳ ನಡುವಣ ಮೊದಲನೇ ಟೆಸ್ಟ್ ಪಂದ್ಯ ಅಕ್ಟೋಬರ್ 2 ರಂದು ಆರಂಭವಾಗಲಿದೆ. ಈ ಪಂದ್ಯಕ್ಕೆ ಭಾರತ ತಂಡದ ಸಂಭಾವ್ಯ ಪ್ಲೇಯಿಂಗ್ XI ಬಗ್ಗೆ ಇಲ್ಲಿ ವಿವರಿಸಲಾಗಿದೆ.

ವಿಂಡೀಸ್ ಎದುರು ಮೊದಲನೇ ಟೆಸ್ಟ್‌ಗೆ ಭಾರತದ ಸಂಭಾವ್ಯ ಪ್ಲೇಯಿಂಗ್ XI -

ಅಹಮದಾಬಾದ್: ಏಷ್ಯಾ ಕಪ್ (Asia Cup 2025) ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದ ಕೇವಲ ಮೂರು ದಿನಗಳ ಅಂತರದಲ್ಲಿ ಭಾರತ ತಂಡ, ವೆಸ್ಟ್ ಇಂಡೀಸ್ ವಿರುದ್ದ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು (IND vs WI) ಆಡಲಿದೆ. ಅಕ್ಟೋಬರ್ 2 ರಂದು ಮೊದಲನೇ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಈ ಪಂದ್ಯದ ಮೂಲಕ ಭಾರತ ತಂಡಕ್ಕೆ ನಾಲ್ಕನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಆವೃತ್ತಿಯ (WTC 2025-27) ಎರಡನೇ ಸರಣಿ ಇದಾಗಿದೆ. ಉಭಯ ತಂಡಗಳ ನಡುವಣ ಮೊದಲನೇ ಟೆಸ್ಟ್ ಪಂದ್ಯಕ್ಕೆ ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ವೇದಿಕೆ ಸಿದ್ದವಾಗಿದೆ. ತನ್ನ ಮೊದಲನೇ ಸರಣಿಯನ್ನು ಡ್ರಾ ಮಾಡಿಕೊಂಡಿದ್ದ ಟೀಮ್ ಇಂಡಿಯಾ, ಇದೀಗ ವಿಂಡೀಸ್ ಎದುರು ಸರಣಿಯನ್ನು ಗೆಲ್ಲಲು ಎದುರು ನೋಡುತ್ತಿದೆ.
ಜಸ್‌ಪ್ರೀತ್ ಬುಮ್ರಾ ಅವರು ಭಾರತ ತಂಡದ ವೇಗದ ಬೌಲಿಂಗ್ ವಿಭಾಗವನ್ನು ಮುನ್ನಡೆಸಲಿದ್ದು, ಇವರಿಗೆ ಮತ್ತೊಂದು ತುದಿಯಲ್ಲಿ ಮೊಹಮ್ಮದ್ ಸಿರಾಜ್ ಸಾಥ್ ನೀಡಲಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸಿರಾಜ್ 23 ವಿಕೆಟ್‌ಗಳನ್ನು ಕಬಳಿಸಿದ್ದರು. ಇದೀಗ ವಿಂಡೀಸ್ ವಿರುದ್ಧವೂ ಅವರು ಅದೇ ಲಯವನ್ನು ಮುಂದುವರಿಸಲು ಎದುರು ನೋಡುತ್ತಿದ್ದಾರೆ. ಭಾರತದ ಪಿಚ್‌ಗಳು ಸ್ಪಿನ್ ಸ್ನೇಹಿಯಾಗಿರುವ ಕಾರಣ ಭಾರತ ತಂಡ ಇಬ್ಬರು ಪೂರ್ಣ ಪ್ರಮಾಣದ ವೇಗಿಗಳನ್ನು ಆಡಿಸುವ ಸಾಧ್ಯತೆ ಇದೆ. ನಿತೀಶ್ ಕುಮಾರ್ ರೆಡ್ಡಿ ಅವರು ಮೊದಲನೇ ಟೆಸ್ಟ್‌ನಲ್ಲಿ ಆಡುವ ಸಾಧ್ಯತೆ ಇದೆ. ಇವರು ಮಧ್ಯಮ ವೇಗಿಯಾಗಿ ಫುಲ್ ಟೈಮ್ ವೇಗಿಗಳ ಮೇಲಿನ ಕಾರ್ಯಭಾರವನ್ನು ತಗ್ಗಿಸಲಿದ್ದಾರೆ.
IND vs WI: ಮೊದಲನೇ ಟೆಸ್ಟ್‌ಗೂ ಮುನ್ನ ಗಾಯಕ್ಕೆ ತುತ್ತಾದ ವಾಷಿಂಗ್ಟನ್ ಸುಂದರ್?
2025ರ ಏಷ್ಯಾ ಕಪ್ ಟೂರ್ನಿಯಲ್ಲಿ 17 ವಿಕೆಟ್ ಕಿತ್ತಿದ್ದ ಕುಲ್ದೀಪ್ ಯಾದವ್ ಅವರು ಕೂಡ ಟೆಸ್ಟ್ ತಂಡದಲ್ಲಿದ್ದಾರೆ. ಅವರು ಇಂಗ್ಲೆಂಡ್ ವಿರುದ್ಧ ಕಳೆದ ಟೆಸ್ಟ್ ಸರಣಿಯಲ್ಲಿ ಬೆಂಚ್ ಕಾದಿದ್ದರು. ಆದರೆ, ಈ ಸರಣಿಯಲ್ಲಿ ಅವರು ಆಡುವ ಸಾಧ್ಯತೆ ದಟ್ಟವಾಗಿದೆ. ಆದರೆ, ವಾಷಿಂಗ್ಟನ್ ಸುಂದರ್ ಹಾಗೂ ರವೀಂದ್ರ ಜಡೇಜಾ ಅವರು ಕುಲ್ದೀಪ್ ಅವರಿಗಿಂತ ಮುಂಚೂಣಿಯಲ್ಲಿದ್ದಾರೆ. ಮತ್ತೊಂದೆಡೆ ಅಕ್ಷರ್ ಪಟೇಲ್ ಅವರು ಕೂಡ ಸ್ಪಿನ್ ಹಾಗೂ ಬ್ಯಾಟಿಂಗ್ ವಿಭಾಗಕ್ಕೆ ಡೆಪ್ತ್ ತಂದುಕೊಡಲಿದ್ದಾರೆ.
ಕೆಎಲ್ ರಾಹುಲ್-ಯಶಸ್ವಿ ಜೈಸ್ವಾಲ್ ಓಪನರ್ಸ್
ಇನ್ನು ಬ್ಯಾಟಿಂಗ್ ವಿಭಾಗದಲ್ಲಿ ಕೆಎಲ್ ರಾಹುಲ್ ಹಾಗೂ ಯಶಸ್ವಿ ಜೈಸ್ವಾಲ್ ಅವರು ಇನಿಂಗ್ಸ್ ಆರಂಭಿಸಲಿದ್ದಾರೆ. ಕಳೆದ ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಈ ಜೋಡಿ 400ಕ್ಕೂ ಹೆಚ್ಚಿನ ರನ್‌ಗಳನ್ನು ಕಲೆ ಹಾಕಿತ್ತು. ತಮಿಳುನಾಡಿನ ಸಾಯಿ ಸುದರ್ಶನ್‌ಗೆ ಮೂರನೇ ಕ್ರಮಾಂಕ ಹಾಗೂ ನಾಯಕ ಶುಭಮನ್ ಗಿಲ್ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲಿದ್ದಾರೆ. ಗಿಲ್ ಕಳೆದ ಸರಣಿಯಲ್ಲಿ 754 ರನ್‌ಗಳನ್ನು ಕಲೆ ಹಾಕಿದ್ದರು. ಇದೀಗ ಅವರು ತವರು ಅಭಿಮಾನಿಗಳನ್ನು ರಂಜಿಸಲು ಎದುರು ನೋಡುತ್ತಿದ್ದಾರೆ.
IND vs WI: ವಿಂಡೀಸ್‌ಗೆ ಮತ್ತೊಂದು ಹಿನ್ನಡೆ, ಭಾರತ ವಿರುದ್ದದ ಟೆಸ್ಟ್ ಸರಣಿಯಿಂದ ಅಲ್ಝಾರಿ ಜೋಸೆಫ್ ಔಟ್!
ಧ್ರುವ್ ಜುರೆಲ್ ವಿಕೆಟ್ ಕೀಪರ್
ಗಾಯದಿಂದ ಚೇತರಿಸಿಕೊಳ್ಳುತ್ತಿರುವ ರಿಷಭ್ ಪಂತ್ ಅವರು ಈ ಟೆಸ್ಟ್ ಸರಣಿಗೆ ಅಲಭ್ಯರಾಗಿದ್ದಾರೆ. ಹಾಗಾಗಿ ಧ್ರುವ್ ಜುರೆಲ್ ಅವರು ಮೊದಲ ಆಯ್ಕೆಯ ವಿಕೆಟ್ ಕೀಪರ್ ಆಗಿ ಆಡಲಿದ್ದಾರೆ. ಇವರು ಪ್ರಸ್ತುತ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಅವರು ಆಸ್ಟ್ರೇಲಿಯಾ ಎ ವಿರುದ್ದ ಮೊದಲನೇ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಶತಕವನ್ನು ಬಾರಿಸಿದ್ದರು. ನಂತರ ಎರಡನೇ ಪಂದ್ಯದ ದ್ವಿತೀಯ ಇನಿಂಗ್ಸ್‌ನಲ್ಲಿ 56 ರನ್‌ಗಳನ್ನು ಬಾರಿಸಿದ್ದರು.
ವಿಶ್ವದ ನಂ.1 ಆಲ್‌ರೌಂಡರ್ ರವೀಂದ್ರ ಜಡೇಜಾ ಅವರು ಈ ಸರಣಿಯಲ್ಲಿ ಉಪ ನಾಯಕನ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ ಹಾಗೂ ವಾಷಿಂಗ್ಟನ್ ಸುಂದರ್ ಅವರು ಕೆಳ ಮಧ್ಯಮ ಕ್ರಮಾಂಕದಲ್ಲಿ ಆಡಲಿದ್ದಾರೆ. ಇವರು ಬೌಲಿಂಗ್ ಜತೆಗೆ ಬ್ಯಾಟಿಂಗ್ ವಿಭಾಗಕ್ಕೆ ಡೆಪ್ತ್ ತಂದುಕೊಡಲಿದ್ದಾರೆ.
ಮೊದಲನೇ ಟೆಸ್ಟ್‌ಗೆ ಭಾರತದ ಸಂಭಾವ್ಯ ಪ್ಲೇಯಿಂಗ್ XI: ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಬಿ ಸಾಯಿ ಸುದರ್ಶನ್, ಶುಭಮನ್ ಗಿಲ್ (ನಾಕ), ಧ್ರುವ್ ಜುರೆಲ್ (ವಿ.ಕೇ), ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ನಿತೀಶ್ ಕುಮಾರ್ ರೆಡ್ಡಿ, ಜಸ್‌ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್